ಬರಗಾಲದ ಬಿಸಿಯೂಟ ಗದಗದಲ್ಲಿ ಯಶಸ್ವಿ: ನಿತ್ಯ 13 ಸಾವಿರ ಮಕ್ಕಳಿಗೆ ಊಟ
ಶಾಲಾ ಮಕ್ಕಳಿಗೆ ಮಧ್ಯಾಹ್ನ ನೀಡುವ ಬಿಸಿಯೂಟದ ಗುಣಮಟ್ಟದ ಬಗ್ಗೆ ಮೂಗು ಮುರಿಯುವವರೇ ಹೆಚ್ಚು. ಆದರೆ ಗದಗ ತಾಲೂಕಿನಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಪ್ರಾರಂಭಿಸಲಾಗಿರುವ ಬಿಸಿಯೂಟ ನಿತ್ಯವೂ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ.
ಶಿವಕುಮಾರ ಕುಷ್ಟಗಿ
ಗದಗ (ಮೇ.18): ಶಾಲಾ ಮಕ್ಕಳಿಗೆ ಮಧ್ಯಾಹ್ನ ನೀಡುವ ಬಿಸಿಯೂಟದ ಗುಣಮಟ್ಟದ ಬಗ್ಗೆ ಮೂಗು ಮುರಿಯುವವರೇ ಹೆಚ್ಚು. ಆದರೆ ಗದಗ ತಾಲೂಕಿನಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಪ್ರಾರಂಭಿಸಲಾಗಿರುವ ಬಿಸಿಯೂಟ ನಿತ್ಯವೂ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ.
ಕಳೆದ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸಂಪೂರ್ಣ ಮಳೆ ಕೊರತೆಯಿಂದ ಜಿಲ್ಲೆಯ 7 ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿ ಕಾರ್ಮಿಕರು ವಲಸೆ ಹೋಗದಂತೆ ಉದ್ಯೋಗ ಖಾತ್ರಿ ಯೋಜನೆ ಪ್ರಾರಂಭಿಸಿದೆ. ಪ್ರಸ್ತುತ ಶಾಲೆಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ಕಾರ್ಮಿಕರ ಮಕ್ಕಳಿಗೆ ಮಧ್ಯಾಹ್ನ ಊಟಕ್ಕೆ ತೊಂದರೆಯಾಗಬಾರದೆಂದು ಸರ್ಕಾರ ಬರಗಾಲದ ಬಿಸಿಯೂಟವನ್ನು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರಾರಂಭಿಸುವಂತೆ ಏ. 5 ರಂದು ಆದೇಶ ಹೊರಡಿಸಿತ್ತು.
Kodagu: ನಾಲ್ಕು ವರ್ಷ ಕಳೆದರೂ ಜಲಜೀವನ್ ಮಿಷನ್ ಕಾಮಗಾರಿ ಅಪೂರ್ಣ!
ಗದಗ ತಾಲೂಕಿನಲ್ಲಿ ಉತ್ತಮ ಕಾರ್ಯ: ಗದಗ ಶಹರ ವ್ಯಾಪ್ತಿಯ 36 ಕೇಂದ್ರಗಳಲ್ಲಿ 7093 ಹಾಗೂ ಗದಗ ಗ್ರಾಮೀಣ ವ್ಯಾಪ್ತಿಯ 79 ಕೇಂದ್ರಗಳಲ್ಲಿ 14668 ವಿದ್ಯಾರ್ಥಿಗಳು ಬಿಸಿಯೂಟಕ್ಕೆ ಹೆಸರು ನೋಂದಾಯಿಸಿಕೊಂಡಿದ್ದು, ಏ. 11 ರಿಂದ ಪ್ರಾರಂಭವಾಗಿರುವ ಈ ಯೋಜನೆ ಮೇ 28 ಕ್ಕೆ ಕೊನೆಗೊಳ್ಳಲಿದೆ. ಇದಕ್ಕಾಗಿ ಗದಗ ತಾಲೂಕು ಬಿಸಿಯೂಟದ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಅಡುಗೆಯವರು, ಶಿಕ್ಷಕರು ಸೇರಿದಂತೆ ಪ್ರತಿಯೊಬ್ಬರು ಅತ್ಯಂತ ಅಚ್ಚುಕಟ್ಟಾಗಿ ಕೈ ಜೋಡಿಸಿದ ಹಿನ್ನೆಲೆ ಬಿಸಿಯೂಟ ಸಾಕಾರಗೊಂಡಿದೆ.
ಗದಗ ತಾಲೂಕು ವ್ಯಾಪ್ತಿಯಲ್ಲಿ ನಿತ್ಯವೂ 13 ಸಾವಿರಕ್ಕಿಂತಲೂ ಹೆಚ್ಚಿನ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸವಿಯುತ್ತಿದ್ದಾರೆ. ಶಾಲೆಗೆ ಬರುತ್ತಿರುವ ಮಕ್ಕಳಿಗೆ ಗುಣಮಟ್ಟದ ಮತ್ತು ಪೊಷಕಾಂಶಯುಕ್ತ ಆಹಾರ ನೀಡಲಾಗುತ್ತಿದ್ದು. ಇದು ಶ್ರಮಿಕ ವರ್ಗದ ಜನರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಶಾಲಾ ಅವಧಿಯಲ್ಲಿ ನೀಡುವ ಬಿಸಿಯೂಟಕ್ಕಿಂತ ಕೊಂಚ ಭಿನ್ನವಾಗಿಯೇ ಊಟ ನೀಡಲಾಗುತ್ತಿದ್ದು, ಅನ್ನ, ತರಕಾರಿ ಸಾಂಬಾರು, ಉಪ್ಪಿಟ್ಟು, ಇಡ್ಲಿ, ಚಪಾತಿ ಸೇರಿದಂತೆ ಮಕ್ಕಳಿಗೆ ಆಗಾಗ್ಗೆ ಸಿಹಿ ತಿನಿಸುಗಳನ್ನು ಕೂಡಾ ಬಿಸಿಯೂಟದವರು ವ್ಯವಸ್ಥೆ ಮಾಡಿದ್ದು, ಇದರಿಂದ ಶಾಲೆಗಳು ಪ್ರಾರಂಭವಾಗುವ ಪೂರ್ವದಲ್ಲಿಯೇ ಮಕ್ಕಳ ಹಾಜರಾತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಪೂರಕ ಪರೀಕ್ಷೆಗಳಿಗೆ ತರಬೇತಿ: ಗದಗ ತಾಲೂಕಿನ ಹುಲಕೋಟಿ, ಲಕ್ಕುಂಡಿ ಸೇರಿದಂತೆ ಕೆಲವಾರು ಶಾಲೆಗಳಲ್ಲಿ ಮಕ್ಕಳಿಗೆ ಕೇವಲ ಬರಗಾಲದ ಬಿಸಿಯೂಟ ಮಾತ್ರ ನೀಡುತ್ತಿಲ್ಲ, ಬದಲಾಗಿ ಗ್ರಾಮದ ಯುವಕರು, ನಿವೃತ್ತರು, ಆಸಕ್ತರಿಂದ ಶಾಲಾ ಆವರಣವನ್ನು ನಿರಂತರ ಚಟುವಟಿಕೆಯ ತಾಣಗಳನ್ನಾಗಿ ಮಾಡಲಾಗಿದೆ. ಕೆಲವೆಡೆ, ಹಾಡು, ಕುಣಿತ, ಮಕ್ಕಳಿಗೆ ಕಥೆ ಹೇಳುವುದು, ಆಯಾ ಶಾಲೆಗಳ ಹಳೆಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಯಾವುದೇ ಖರ್ಚು ವೆಚ್ಚಗಳಿಲ್ಲದೇ ತರಗತಿಗಳನ್ನು ಕೂಡಾ ನಡೆಸಲಾಗುತ್ತಿದೆ.
ಭೂ ಸುರಕ್ಷಾ ವೆಬ್‌ಸೈಟ್‌ಗೆ ರೆಕಾರ್ಡ್ ರೂಂ ದಾಖಲೆ ಪತ್ರ: ಮಂಗಳೂರು ತಾಲೂಕೇ ಯಾಕೆ?
ಇನ್ನು ಇತ್ತೀಚೆಗೆ ಪ್ರಕಟಗೊಂಡ ಎಸ್ಸೆಸ್ಸೆಎಲ್ಸಿ ಪರೀಕ್ಷೆಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗೆ,ಈ ಬಿಸಿಯೂಟದೊಂದಿಗೆ ವಿಶೇಷ ತರಗತಿಗಳನ್ನು ಕೂಡಾ ನಡೆಸುವ ಮೂಲಕ ಅವರ ಮುಂದಿನ ಪೂರಕ ಪರೀಕ್ಷೆಗಳಿಗೆ ಕೂಡಾ ಗದಗ ತಾಲೂಕಿನಲ್ಲಿ ತರಬೇತಿ ನೀಡಲಾಗುತ್ತಿದೆ. ಗದಗ ತಾಲೂಕಿನಲ್ಲಿ ನಿತ್ಯವೂ 13ಸಾವಿರಕ್ಕೂ ಹೆಚ್ಚಿನ ಮಕ್ಕಳು ಬಿಸಿಯೂಟ ಸವಿಯುತ್ತಿದ್ದಾರೆ. ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು, ಅಡುಗೆಯವರು, ಗ್ರಾಮಸ್ಥರು, ಎಸ್ಡಿಎಂಸಿ ಅಧ್ಯಕ್ಷ, ಸದಸ್ಯರ ಸಹಕಾರದಿಂದ ಇದು ಸಾಧ್ಯವಾಗಿದೆ. ಬಿಸಿಯೂಟದೊಂದಿಗೆ ಮಕ್ಕಳಿಗೆ ವಿಶೇಷ ತರಗತಿಗಳು ಕೂಡಾ ಆಯಾ ಶಾಲಾ ಹಂತಗಳಲ್ಲಿ ನಡೆಯುತ್ತಿವೆ ಎಂದು ಗದಗ ತಾಲೂಕು ಅಕ್ಷರದಾಸೋಹ ಅಧಿಕಾರಿ ಕೊಟ್ರೇಶ ವಿಭೂತಿ ಹೇಳಿದರು.