Asianet Suvarna News Asianet Suvarna News

CSK ಹೊರದಬ್ಬಿ ಪ್ಲೇ ಆಫ್‌ಗೆ ಆರ್‌ಸಿಬಿ ಲಗ್ಗೆ! ಈ ಸಲ‌‌ ಕಪ್ ನಮ್ದೇ..?

ಗೆಲ್ಲಲು 219 ಹಾಗೂ ಪ್ಲೇ ಆಫ್‌ಗೆ ಅರ್ಹತೆ ಪಡೆಯಲು 201 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ಓವರ್‌ನ ಮೊದಲ ಎಸೆತದಲ್ಲೇ ನಾಯಕ ಋತುರಾಜ್ ಗಾಯಕ್ವಾಡ್ ವಿಕೆಟ್ ಕಳೆದುಕೊಂಡಿತು. ಗ್ಲೆನ್ ಮ್ಯಾಕ್ಸ್‌ವೆಲ್ ಮೊದಲ ಎಸೆತದಲ್ಲೇ ಆರ್‌ಸಿಬಿಗೆ ಯಶಸ್ಸು ತಂದುಕೊಟ್ಟರು. ಇನ್ನು ಇದರ ಬೆನ್ನಲ್ಲೇ ಡ್ಯಾರೆಲ್ ಮಿಚೆಲ್ ಕೂಡಾ ಕೇವಲ 4 ರನ್ ಗಳಿಸಿ ಯಶ್ ದಯಾಳ್‌ಗೆ ವಿಕೆಟ್‌ ಒಪ್ಪಿಸಿದರು. ಆಗ ಚೆನ್ನೈ ಸ್ಕೋರ್ 2 ವಿಕೆಟ್ ನಷ್ಟಕ್ಕೆ 19 ರನ್.

RCB Thrash Chennai super Kings and Qualified for Playoffs kvn
Author
First Published May 19, 2024, 12:08 AM IST

ಬೆಂಗಳೂರು: ಬದ್ದ ಎದುರಾಳಿ ಚೆನ್ನೈ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 27 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 4ನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. 219 ರನ್ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ ಕಳೆದುಕೊಂಡು 191 ರನ್ ಗಳಿಸಲಷ್ಟೇ ಶಕ್ತವಾಗಿದೆ. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಅನುಭವಿಸಿದ್ದ ಸೋಲಿಗೆ ಇದೀಗ ಆರ್‌ಸಿಬಿ ತಂಡವು ತವರಿನಲ್ಲೇ ಸೇಡು ತೀರಿಸಿಕೊಳ್ಳುವುದರ ಜತೆಗೆ ಚೆನ್ನೈ ತಂಡವನ್ನು ಟೂರ್ನಿಯಿಂದಲೇ ಹೊರದಬ್ಬಿದೆ. ಮೊದಲ 8 ಪಂದ್ಯಗಳಲ್ಲಿ 7 ಸೋಲು ಕಂಡಿದ್ದ ಆರ್‌ಸಿಬಿ ಆ ಬಳಿಕ ಸತತ 6 ಪಂದ್ಯಗಳನ್ನು ಜಯಿಸಿ ಪ್ಲೇ ಆಫ್‌ಗೆ ಲಗ್ಗೆಯಿಡುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ.

ಗೆಲ್ಲಲು 219 ಹಾಗೂ ಪ್ಲೇ ಆಫ್‌ಗೆ ಅರ್ಹತೆ ಪಡೆಯಲು 201 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ಓವರ್‌ನ ಮೊದಲ ಎಸೆತದಲ್ಲೇ ನಾಯಕ ಋತುರಾಜ್ ಗಾಯಕ್ವಾಡ್ ವಿಕೆಟ್ ಕಳೆದುಕೊಂಡಿತು. ಗ್ಲೆನ್ ಮ್ಯಾಕ್ಸ್‌ವೆಲ್ ಮೊದಲ ಎಸೆತದಲ್ಲೇ ಆರ್‌ಸಿಬಿಗೆ ಯಶಸ್ಸು ತಂದುಕೊಟ್ಟರು. ಇನ್ನು ಇದರ ಬೆನ್ನಲ್ಲೇ ಡ್ಯಾರೆಲ್ ಮಿಚೆಲ್ ಕೂಡಾ ಕೇವಲ 4 ರನ್ ಗಳಿಸಿ ಯಶ್ ದಯಾಳ್‌ಗೆ ವಿಕೆಟ್‌ ಒಪ್ಪಿಸಿದರು. ಆಗ ಚೆನ್ನೈ ಸ್ಕೋರ್ 2 ವಿಕೆಟ್ ನಷ್ಟಕ್ಕೆ 19 ರನ್.

ರಹಾನೆ-ರಚಿನ್ ಅಸರೆ: ಆರಂಭದಲ್ಲೇ ಎರಡು ಪ್ರಮುಖ ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಸಿಎಸ್‌ಕೆ ತಂಡಕ್ಕೆ ಮೂರನೇ ವಿಕೆಟ್‌ಗೆ ರಚಿನ್ ರವೀಂದ್ರ ಹಾಗೂ ಅಜಿಂಕ್ಯ ರಹಾನೆ ಆಸರೆಯಾದರು. ಚುರುಕಿನ ಜತೆಯಾಟವಾಡಿದ ಈ ಜೋಡಿ ಮೂರನೇ ವಿಕೆಟ್‌ಗೆ 41 ಎಸೆತಗಳಲ್ಲಿ 66 ರನ್‌ಗಳ ಜತೆಯಾಟವಾಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಲಾಕಿ ಫರ್ಗ್ಯೂಸನ್ ಯಶಸ್ವಿಯಾದರು. ರಹಾನೆ 22 ಎಸೆತಗಳಲ್ಲಿ 33 ರನ್ ಬಾರಿಸಿ ಪೆವಿಲಿಯನ್ ಹಾದಿ ಹಿಡಿದರು. ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ರಚಿನ್ ರವೀಂದ್ರ 37 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 61 ರನ್ ಬಾರಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು.

IPL 2024 ಚೆನ್ನೈಗೆ ಕಠಿಣ ಗುರಿ ನೀಡಿದ ಆರ್‌ಸಿಬಿ..! ಪ್ಲೇ ಆಫ್‌ಗೇರುತ್ತಾ ಬೆಂಗಳೂರು?

ಇನ್ನು ರಚಿನ್ ವಿಕೆಟ್ ಪತನದ ಬಳಿಕ ಶಿವಂ ದುಬೆ(7) ಹಾಗೂ ಮಿಚೆಲ್ ಸ್ಯಾಂಟ್ನರ್(3) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ರವೀಂದ್ರ ಜಡೇಜಾ ಹಾಗೂ ಎಂ ಎಸ್ ಧೋನಿ 27 ಎಸೆತಗಳಲ್ಲಿ ಅಮೂಲ್ಯ 61 ರನ್‌ಗಳ ಜತೆಯಾಟವಾಡಿದರು. ಧೋನಿ 13 ಎಸೆತಗಳಲ್ಲಿ 25 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ರವೀಂದ್ರ ಜಡೇಜಾ 22 ಎಸೆತಗಳನ್ನು ಎದುರಿಸಿ ಅಜೇಯ 42 ರನ್ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ 78 ರನ್‌ಗಳ ಜತೆಯಾಟವಾಡಿದರು. ವಿರಾಟ್ ಕೊಹ್ಲಿ 47 ರನ್ ಸಿಡಿಸಿದರೆ, ನಾಯಕ ಫಾಫ್ ಡು ಪ್ಲೆಸಿಸ್ 54 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. 

ಇನ್ನು ರಜತ್ ಪಾಟೀದಾರ್ 41 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಕ್ಯಾಮರೋನ್ ಗ್ರೀನ್ ಕೇವಲ 17 ಎಸೆತಗಳಲ್ಲಿ ಅಜೇಯ 38 ರನ್ ಬಾರಿಸಿದರೆ, ದಿನೇಶ್ ಕಾರ್ತಿಕ್ 14 ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ 16 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಅಂತಿಮವಾಗಿ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಕಲೆಹಾಕಿತು. 

Latest Videos
Follow Us:
Download App:
  • android
  • ios