ಶ್ರೀರಂಗಪಟ್ಟಣದಲ್ಲಿ ನಡೆಯಲಿರುವ ಹನುಮ ಮಾಲಾ ಸಂಕೀರ್ತನಾ ಯಾತ್ರೆಗೆ ಪಟ್ಟಣ ಸಜ್ಜಾಗಿದೆ. ಮೂಡಲಬಾಗಿಲು ಆಂಜನೇಯ ದೇಗುಲ ಪುನರ್ ಪ್ರತಿಷ್ಠಾಪನೆಗಾಗಿ ನಡೆಯುತ್ತಿರುವ ಈ ಯಾತ್ರೆಯ ಹಿನ್ನೆಲೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಪಟ್ಟಣದಾದ್ಯಂತ, ವಿಶೇಷವಾಗಿ ಜಾಮೀಯಾ ಮಸೀದಿ ಸುತ್ತಲೂ ಬಿಗಿ ಪೊಲೀಸ್ ಭದ್ರತೆ.

ಶ್ರೀರಂಗಪಟ್ಟಣ (ಡಿ.2): ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಾಳೆ (ಡಿ.3,ಬುಧವಾರ) ನಡೆಯಲಿರುವ ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾರೀ ಬಿಗಿ ಭದ್ರತೆ ಮತ್ತು ಹೈ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಹಲವೆಡೆಯಿಂದ ಸಾವಿರಾರು ಹನುಮ ಭಕ್ತರು ಈ ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಪುನರ್ ಪ್ರತಿಷ್ಠಾಪನೆ ಹೋರಾಟದ ಹಿನ್ನೆಲೆ

ಈ ಸಂಕೀರ್ತನಾ ಯಾತ್ರೆಯು ಹಲವು ವರ್ಷಗಳಿಂದ ನಡೆಯುತ್ತಿದ್ದು, ಮೂಡಲಬಾಗಿಲು ಆಂಜನೇಯ ದೇಗುಲದ ಪುನರ್ ಪ್ರತಿಷ್ಠಾಪನೆ ಮಾಡುವುದು ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ. ಟಿಪ್ಪುವಿನ ಕಾಲದಲ್ಲಿ ಈ ದೇವಾಲಯವನ್ನು ಕೆಡವಿ ಅದರ ಜಾಗದಲ್ಲಿ ಜಾಮೀಯಾ ಮಸೀದಿ ನಿರ್ಮಿಸಲಾಗಿದೆ ಎಂಬ ಆರೋಪವಿದ್ದು, ದೇವಾಲಯ ಪುನರ್ ನಿರ್ಮಾಣದ ಸಂಕಲ್ಪದೊಂದಿಗೆ ಭಕ್ತರು ಈ ಹೋರಾಟವನ್ನು ಮುಂದುವರಿಸಿದ್ದಾರೆ. ಈ ಯಾತ್ರೆಯ ಪ್ರಯುಕ್ತ ಪಟ್ಟಣದಾದ್ಯಂತ ಕೇಸರಿ ಬಂಟಿಂಗ್ಸ್‌, ಭಗವಾಧ್ವಜಗಳು ಮತ್ತು ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.

ಭದ್ರತೆಗಾಗಿ ಸಿಸಿಟಿವಿಗಳ 'ಹದ್ದಿನ ಕಣ್ಣು'

ಯಾತ್ರೆಯ ಹಿನ್ನೆಲೆಯಲ್ಲಿ ಹಿಂದಿನ ವರ್ಷಗಳಲ್ಲಿ ಆದಂತಹ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಈ ಬಾರಿ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸನ್ನದ್ಧರಾಗಿದ್ದಾರೆ. ಸಂಕೀರ್ತನಾ ಯಾತ್ರೆಯ ಮಾರ್ಗದುದ್ದಕ್ಕೂ ಬಿಗಿ ಭದ್ರತೆ ಇದ್ದು, ಗಂಜಾಂನ ನಿಮಿಷಾಂಭ ದೇಗುಲದಿಂದ ಹಿಡಿದು ರಂಗನಾಥ ದೇಗುಲದ ಮೈದಾನದವರೆಗೂ 100ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಜಾಮೀಯಾ ಮಸೀದಿ ಸುತ್ತ ಬ್ಯಾರಿಕೇಡ್:

ವಿವಾದಾತ್ಮಕ ಜಾಮೀಯಾ ಮಸೀದಿಗೆ ವಿಶೇಷ ಭದ್ರತೆ ಒದಗಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮಸೀದಿ ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಿ ನಿಯಂತ್ರಣ ಹೇರಲಾಗಿದೆ. ಹೆಚ್ಚುವರಿ ಪಡೆ ನಿಯೋಜನೆ: ಮಸೀದಿ ಬಳಿ ಡಿಆರ್ (DR) ತುಕಡಿಗಳನ್ನು ಬೀಡು ಬಿಡಲಾಗಿದ್ದು, ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಪಟ್ಟಣದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಈಗಾಗಲೇ ಎರಡು ಸಮುದಾಯದ ಮುಖಂಡರೊಂದಿಗೆ ಶಾಂತಿ ಸೌಹಾರ್ದ ಸಭೆ ನಡೆಸಿ, ಸಹಕಾರ ಕೋರಿದ್ದಾರೆ.