ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ, ಭೀಮೇಶ್ ಎಂಬ ಬೈಕ್ ಸವಾರನೊಬ್ಬ ರಸ್ತೆಯಲ್ಲಿ ಕಂಡ 6 ಅಡಿ ಉದ್ದದ ಹಾವನ್ನು ಹಿಡಿದು ಹುಚ್ಚಾಟ ಮೆರೆದಿದ್ದಾನೆ. ಈ ಅಪಾಯಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸವಾರನ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಾಯಚೂರು (ಡಿ.5): ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ವಿಚಿತ್ರ ಹಾಗೂ ಆಘಾತಕಾರಿ ಘಟನೆಯೊಂದು ನಡೆದಿದ್ದು, ರಸ್ತೆಯ ಪಕ್ಕದಲ್ಲಿ ಸರಿದುಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರನೋರ್ವ ಎಳೆದಾಡಿ ಹುಚ್ಚಾಟ ನಡೆಸಿದ ವಿಡಿಯೋ ವೈರಲ್ ಆಗಿದೆ.
ಹಾವು ಹಿಡಿದು ಹೈಡ್ರಾಮಾ:
ಭೀಮೇಶ್ ಎಂಬ ಹೆಸರಿನ ಬೈಕ್ ಸವಾರನೇ 6 ಅಡಿ ಉದ್ದದ ಹಾವು ಹಿಡಿದು ಹೈಡ್ರಾಮಾ ಮಾಡಿದ್ದಾನೆ. ಸಿಂಧನೂರು ನಗರದ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಹಾವು ಹಾದುಹೋಗಿದೆ ಈ ವೇಳೆ ಹಾವನ್ನು ಹಿಡಿದಿದ್ದಾನೆ. ಗಾಡಿಯ ಮೇಲೆ ಕುಳಿತುಕೊಂಡೇ ಹಾವಿನ ಹೆಡೆ ಹಿಡಿದು ಎಳೆದಾಡಿದ್ದು, ಈ ಹುಚ್ಚಾಟವನ್ನು ಕಂಡ ಸ್ಥಳೀಯರು ಶಾಕ್ ಆಗಿದ್ದಾರೆ. ಮತ್ತೋರ್ವ ವ್ಯಕ್ತಿ ಈ ಘಟನೆಯ ಸಂಪೂರ್ಣ ವಿಡಿಯೋವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ.
ವಿಡಿಯೋ ವೈರಲ್
ಬೈಕ್ ಸವಾರನು ಯಾವುದೇ ಭಯವಿಲ್ಲದೆ ಹಾವು ಹಿಡಿದಿರುವ ದೃಶ್ಯ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಹಾವಿನೊಂದಿಗೆ ಹೈಡ್ರಾಮಾ ಮಾಡಿದ ನಂತರ, ಭೀಮೇಶ್ ಆ ಹಾವನ್ನು ಮತ್ತೆ ಬೇರೆಡೆಗೆ ಎಸೆದು ಹೋಗಿದ್ದಾನೆ. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಂತಹ ಅಪಾಯಕಾರಿ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


