ನೈಋತ್ಯ ರೈಲ್ವೆಯು ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್‌ಗೆ ಆಧುನಿಕ ಎಲ್.ಎಚ್.ಬಿ ಬೋಗಿಗಳನ್ನು ಅಳವಡಿಸುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ ಮೈಸೂರು ವಿಭಾಗವು ಪ್ರಯಾಣಿಕ ಮತ್ತು ಸರಕು ಸಾಗಣೆಯಿಂದ ಕ್ರಮವಾಗಿ ₹449.13 ಕೋಟಿ ಹಾಗೂ ₹900.19 ಕೋಟಿ ಆದಾಯ ಗಳಿಸಿ ಉತ್ತಮ ಸಾಧನೆ ಮಾಡಿದೆ. ಮೈಸೂರಿನಲ್ಲಿ ವಂದೇ ಭಾರತ್ ಡಿಪೋ ನಿರ್ಮಾಣಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ.

ಮೈಸೂರು: ನೈಋತ್ಯ ರೈಲ್ವೆಯು ತಾಳಗುಪ್ಪ– ಮೈಸೂರು– ತಾಳಗುಪ್ಪ ಡೈಲಿ ಎಕ್ಸ್ ಪ್ರೆಸ್ರೈಲುಗಳ ಹಳೆಯ ಮಾದರಿಯ ಐಸಿಎಫ್ ಬೋಗಿಗಳನ್ನು ತೆಗೆದುಹಾಕಿ, ಅವುಗಳ ಬದಲಿಗೆ ಅತ್ಯಾಧುನಿಕ ಲಿಂಕ್ ಹಾಫ್ ಮನ್ ಬುಶ್ ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ. ಈ ಹೊಸ ಸುಧಾರಿತ ಬೋಗಿಗಳ ಸೇವೆ ಏ. 8 ರಿಂದ ತಾಳಗುಪ್ಪ ಮತ್ತು ಮೈಸೂರು ಎರಡೂ ನಿಲ್ದಾಣಗಳಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ.

ಈ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯ ನಂತರ ಈ ರೈಲು ಒಟ್ಟು 18 ಎಲ್.ಎಚ್.ಬಿ ಬೋಗಿಗಳೊಂದಿಗೆ ಸಂಚರಿಸಲಿದೆ. ಇದರಲ್ಲಿ ಒಂದು ಎಸಿ ಚೇರ್ ಕಾರ್, ಐದು ದ್ವಿತೀಯ ದರ್ಜೆ ಚೇರ್ ಕಾರ್ ಬೋಗಿಗಳು ಹಾಗೂ ಹತ್ತು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಇರಲಿವೆ. ಇದರೊಂದಿಗೆ ದಿವ್ಯಾಂಗ ಸ್ನೇಹಿ ಸೌಲಭ್ಯ ಹೊಂದಿರುವ ದ್ವಿತೀಯ ದರ್ಜೆ ಮತ್ತು ಲಗೇಜ್ ಬ್ರೇಕ್ ವ್ಯಾನ್ ಹಾಗೂ ಇನ್ನೊಂದು ಲಗೇಜ್- ಕಮ್- ಬ್ರೇಕ್ ವ್ಯಾನ್ ಈ ರೈಲಿನ ಸಂಯೋಜನೆಯಲ್ಲಿ ಇರಲಿವೆ.

ಮೈಸೂರು ವಿಭಾಗ 449.13 ಕೋಟಿ ಪ್ರಯಾಣಿಕ ಆದಾಯ 

ಕಳೆದ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆ ಮೈಸೂರು ವಿಭಾಗ ಸಮಗ್ರ ಬೆಳವಣಿಗೆ ಕಂಡಿದ್ದು, ಕಾರ್ಯಾಚರಣೆ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಮುದಿತ್ ಮಿತ್ತಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಭಾಗ 449.13 ಕೋಟಿ ಪ್ರಯಾಣಿಕ ಆದಾಯ ಗಳಿಸಿ ಶೇ. 1.49ರಷ್ಟು ಬೆಳವಣಿಗೆ ಕಂಡಿದೆ. ಕಳೆದ ಸಾಲಿನಲ್ಲಿ 419.89 ಕೋಟಿ ವರಮಾನ ಬಂದಿತ್ತು. ಟಿಕೆಟ್ ಪರಿಶೀಲನೆ ಕಾರ್ಯಕ್ಷಮತೆ ಅತ್ಯುತ್ತಮವಾಗಿ ಮುಂದುವರಿದಿದ್ದು, ಇದರಿಂದ 9.75 ಕೋಟಿ ರೂ. ಆದಾಯ ದೊರೆತಿದೆ ಎಂದರು.

ವಾಣಿಜ್ಯ ಜಾಹೀರಾತು ಮೂಲದಿಂದ 3.17 ಕೋಟಿ ರೂ. ದಾಖಲೆಯ ಆದಾಯ ಸಂಗ್ರಹವಾಗಿದ್ದು, ಪಾರ್ಕಿಂಗ್‌ ನಿಂದ 4.02 ಕೋಟಿ ರೂ., ಕೇಟರಿಂಗ್‌ ನಿಂದ 2.61 ಕೋಟಿ ಆದಾಯ ಬಂದಿದೆ. ಪಾರ್ಸೆಲ್ ಆದಾಯ 11.81 ಕೋಟಿಗೆ ತಲುಪಿದ್ದು, ಎಸ್‌ಎಲ್‌ಆರ್ ಹಾಗೂ ವಿಪಿಎಚ್ ಮೂಲಕ ಪಾರ್ಸೆಲ್ ವರಮಾನ 5.85 ಕೋಟಿ ರೂ. ಸಂಗ್ರಹವಾಗಿದೆ ಎಂದು ಅವರು ಹೇಳಿದರು.

2ನೇ ಅತ್ಯುನ್ನತ ಸಾಧನೆ

ಸರಕು ಸಾಗಣೆ ವಿಭಾಗದಲ್ಲೂ ಉತ್ತಮ ಸಾಧನೆಯಾಗಿದ್ದು, 900/19 ಕೋಟಿ ರೂ. ಆದಾಯ ಬಂದಿದೆ. ಇದು ರೈಲ್ವೆ ವಿಭಾಗದ 2ನೇ ಅತ್ಯುನ್ನತ ಸಾಧನೆಯಾಗಿದೆ. 10,586 ಮಿಲಿಯನ್ ಟನ್ ಸರಕು ಸಾಗಿಸಿದ್ದು, ಇದರಲ್ಲಿ 8,664 ಮಿಲಿಯನ್ ಟನ್ ಉಕ್ಕು ಸೇರಿದೆ. ಇದು ವಿಭಾಗದ ಇತಿಹಾಸದಲ್ಲಿ 2ನೇ ಹೆಚ್ಚಿನ ಲೋಡ್ ಆಗಿದೆ. 116 ಎನ್‌ಎಂಜಿ ರೇಕ್ (90 ದ್ವಿಚಕ್ರ ವಾಹನ, 26 ನಾಲ್ಕುಚಕ್ರದ ವಾಹನಗಳು)ಗಳ ಲೋಡಿಂಗ್‌ ನಿಂದ 23.94 ಕೋಟಿ ಆದಾಯ ಬಂದಿದೆ ಎಂದು ತಿಳಿಸಿದರು.

ವಂದೇ ಭಾರತ್ ರೈಲು ಡಿಪೊ

ಮೈಸೂರಿನಲ್ಲಿ ವಂದೇ ಭಾರತ್ ಡಿಪೊ ನಿರ್ಮಾಣಕ್ಕೆ ಯೋಜಿಸಲಾಗಿದ್ದು, ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಂದಾಜು 400 ಕೋಟಿ ರೂ. ಬೇಕಾಗಲಿದೆ. ಇದಕ್ಕೆ ಅನುಮತಿ ಸಿಕ್ಕಲ್ಲಿ ವಂದೇ ಭಾರತ್ ರೈಲುಗಳ ನಿರ್ವಹಣೆ ಇಲ್ಲಿಯೇ ನಡೆಯಲಿದೆ. ಇಲ್ಲಿಂದ ಹೆಚ್ಚಿನ ಸಂಖ್ಯೆಯ ವಂದೇ ಭಾರತ್ ರೈಲುಗಳ ಕಾರ್ಯಾಚರಣೆಯೂ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.

71 ರೈಲುಗಳ ವೇಗ ಹೆಚ್ಚಿಸಲಾಗಿದ್ದು (ಗಂಟೆಗೆ ಸರಾಸರಿ 110 ಕಿ.ಮೀ.), ಹೊಸದಾಗಿ 44 ರೈಲುಗಳನ್ನು ವಿದ್ಯುತ್ ಎಂಜಿನ್‌ ನಿಂದ ಓಡಿಸಲಾಗುತ್ತಿದೆ. ಇದರಿಂದಾಗಿ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದ ಉಂಟಾಗಿರುವ ಡೀಸೆಲ್ ಕೊರತೆ ನಮ್ಮಲ್ಲಿ ಬಾಧಿಸದಂತೆ ಕ್ರಮ ವಹಿಸಲಾಗಿದೆ. 28 ನಿಲ್ದಾಣಗಳಲ್ಲೂ ಅಡಿಟ್ ಪೂರ್ಣಗೊಂಡಿದೆ. ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದ ವಿದ್ಯುದ್ದೀಕರಣ ಕಾಮಗಾರಿ ಕೈಗೊಂಡಿರುವುದು ಮಹತ್ವದ ಸಾಧನೆಯಾಗಿದೆ ಎಂದು ಮಾಹಿತಿ ನೀಡಿದರು. ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ಇದ್ದರು.

ಮೈಸೂರು ಯಾರ್ಡ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಒಂದೂವರೆ ಎರಡು ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಇದೆ. ಇದು ಸಿದ್ದಗೊಂಡಲ್ಲಿ ಹೆಚ್ಚಿನ ರೈಲುಗಳ ಕಾರ್ಯಾಚರಣೆಯನ್ನು ಇಲ್ಲಿಂದ ನಡೆಸಬಹುದಾಗಿದೆ.

-ಮುದಿತ್ ಮಿತ್ತಲ್, ಡಿಆರ್‌ಎಂ

ಮೈಸೂರು- ಜೋಧಪುರ್ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಶ್ಲಾಘನೀಯ

ನಗರದ ಬೆಳವಣಿಗೆಗೆಗಾಗಿ ಹಾಗೂ ಹೆಚ್ಚುವರಿ ಪ್ರಯಾಣಿಕರ ಸಂಚಾರ ದಟ್ಟಣೆ ನಿಯಂತ್ರಿಸಲು, ನೈಋತ್ಯ ರೈಲ್ವೆ ಮೈಸೂರು ಮತ್ತು ಜೋಧಪುರ್ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಆರಂಭಿಸಲು ಕೈಗೊಂಡಿರುವ ನಿರ್ಧಾರಕ್ಕೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಬಿ. ಲಿಂಗರಾಜು ಧನ್ಯವಾದ ಸಲ್ಲಿಸಿದ್ದಾರೆ.

ಈ ಬಗ್ಗೆ ಸಂಸ್ಥೆಯ ಸದಸ್ಯರು ಹಲವಾರು ಬಾರಿ ವಿನಂತಿಸಿದ್ದರು, ಈ ವಿಷಯದ ಬಗ್ಗೆ ಜನರಲ್ ಮ್ಯಾನಜೇರ್ ಅವರಿಗೆ ಪ್ರತಿ ಬಾರಿ ಮನವಿ ಸಲ್ಲಿಸುತ್ತಿದ್ದರು, ಅವರ ಮನವಿಗೆ ಸ್ಪಂದಿಸಿದ ಜನರಲ್ ಮ್ಯಾನೇಜರ್ ಈ ಉತ್ತಮ ಬೆಳವಣಿಗೆಯ ನಿರ್ಧಾರಕ್ಕೆ ಶ್ರಮ ವಹಿಸಿರುವುದಕ್ಕೆ ಅವರಿಗೆ ಸಂಸ್ಥೆಯ ಪರವಾಗಿ ಗೂ ಅಭಿನಂದನೆ ಸಲ್ಲಿಸಿದ್ದಾರೆ.