ನೈಋತ್ಯ ರೈಲ್ವೆಯು ಜುಲೈ ತಿಂಗಳಲ್ಲಿ 4.69 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಈ ಅವಧಿಯಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕರ ಸೇವೆಯಿಂದ ಒಟ್ಟು ₹793.31 ಕೋಟಿ ಆದಾಯ ಗಳಿಸಿದೆ.
ಹುಬ್ಬಳ್ಳಿ: ನೈಋತ್ಯ ರೈಲ್ವೆ ಜುಲೈ ತಿಂಗಳಲ್ಲಿ ದಾಖಲೆಯ ಮಟ್ಟದ 4.69 ಮಿಲಿಯನ್ ಟನ್ (ಎಂಟಿ) ಸರಕು ಸಾಗಣೆ ಮಾಡುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಜುಲೈ ತಿಂಗಳ ಇತಿಹಾಸದಲ್ಲೇ ಇದು ಅತ್ಯಧಿಕ ಸರಕು ಸಾಗಣೆಯಾಗಿದ್ದು, 2026-27ನೇ ಹಣಕಾಸು ವರ್ಷದ ಜುಲೈ ಅಂತ್ಯದ ವರೆಗೆ ಒಟ್ಟು ಸರಕು ಸಾಗಣೆ 17.19 ಮಿಲಿಯನ್ ಟನ್‌ಗೆ ತಲುಪಿದೆ.
ಜುಲೈ ತಿಂಗಳಲ್ಲಿ ನೈಋತ್ಯ ರೈಲ್ವೆ ₹793.31 ಕೋಟಿ ಒಟ್ಟು ಆದಾಯ ಗಳಿಸಿದ್ದು, ಇದರಲ್ಲಿ ಸರಕು ಸಾಗಣೆಯಿಂದ ₹449.27 ಕೋಟಿ ಹಾಗೂ ಪ್ರಯಾಣಿಕರ ಸೇವೆಯಿಂದ ₹303.54 ಕೋಟಿ ಆದಾಯ ಲಭಿಸಿದೆ. ಇದೇ ಅವಧಿಯಲ್ಲಿ 1.47 ಕೋಟಿ (14.76 ಮಿಲಿಯನ್) ಪ್ರಯಾಣಿಕರು ರೈಲು ಸೇವೆ ಬಳಸಿದ್ದಾರೆ.
ಕಬ್ಬಿಣದ ಅದಿರು
ಸರಕು ಸಾಗಣೆಯಲ್ಲಿ ಕಬ್ಬಿಣದ ಅದಿರು 1.97 ಮಿಲಿಯನ್ ಟನ್‌ನೊಂದಿಗೆ ಶೇ. 22.4ರಷ್ಟು, ಉಕ್ಕು 1.05 ಮಿಲಿಯನ್ ಟನ್‌ನೊಂದಿಗೆ ಶೇ. 20.6ರಷ್ಟು ಹಾಗೂ ಖನಿಜ ತೈಲ ಮತ್ತು ಇತರೆ ಸರಕು ಸಾಗಣೆಯಲ್ಲಿಯೂ ಗಮನಾರ್ಹ ಬೆಳವಣಿಗೆ ದಾಖಲಾಗಿದೆ.
ಪ್ರಯಾಣಿಕರ ಸೇವೆಯಿಂದ ₹1,203.73 ಕೋಟಿ ಆದಾಯ
2026-27ನೇ ಹಣಕಾಸು ವರ್ಷದ ಜುಲೈವರೆಗೆ ಒಟ್ಟು ಆದಾಯ ₹3,031.84 ಕೋಟಿಗೆ ತಲುಪಿದ್ದು, ಇದರಲ್ಲಿ ಸರಕು ಸಾಗಣೆಯಿಂದ ₹1,650.32 ಕೋಟಿ ಹಾಗೂ ಪ್ರಯಾಣಿಕರ ಸೇವೆಯಿಂದ ₹1,203.73 ಕೋಟಿ ಆದಾಯ ಬಂದಿದೆ. ಇದೇ ಅವಧಿಯಲ್ಲಿ 6.15 ಕೋಟಿ (61.56 ಮಿಲಿಯನ್) ಪ್ರಯಾಣಿಕರು ನೈಋತ್ಯ ರೈಲ್ವೆ ಸೇವೆ ಬಳಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 4.18ರಷ್ಟು ಹೆಚ್ಚಳವಾಗಿದೆ.
ಸರಕು ಸಾಗಣೆಯಲ್ಲಿನ ದಾಖಲೆ ಸಾಧನೆ, ಆದಾಯದಲ್ಲಿ ಸ್ಥಿರ ಬೆಳವಣಿಗೆ ಹಾಗೂ ಪ್ರಯಾಣಿಕರ ಸಂಖ್ಯೆಯ ಏರಿಕೆ ಕಾರ್ಯಾಚರಣಾ ದಕ್ಷತೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಗ್ರಾಹಕ ಸ್ನೇಹಿ ಸೇವೆಗಳ ಫಲವಾಗಿದೆ. ಮುಂದಿನ ದಿನಗಳಲ್ಲೂ ಇದೇ ಸಾಧನೆಯನ್ನು ಮತ್ತಷ್ಟು ಉತ್ತಮಗೊಳಿಸಲು ರೈಲ್ವೆ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.


