ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸಕಲೇಶಪುರ ಸಮೀಪದ ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿ, ಬದಲಿ ಮಾರ್ಗದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಪ್ರಯಾಣಿಕರು ವಿವಿಧ ನಿಲ್ದಾಣಗಳಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ರೈಲ್ವೆ ಇಲಾಖೆ ಹಳಿ ದುರಸ್ತಿ ಕಾರ್ಯ ಕೈಗೊಂಡಿದೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಬೆಟ್ಟಗಳ ಇಳಿಜಾರು ಭಾಗಗಳಲ್ಲಿ ಮಣ್ಣು ಸಡಿಲಗೊಂಡ ಪರಿಣಾಮ ಈ ಭೂಕುಸಿತ ಸಂಭವಿಸುತ್ತಿದೆ. ಸಕಲೇಶಪುರ ಸಮೀಪ ಮಂಗಳೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ-ಸಿರಿಬಾಗಿಲು ನಡುವೆ ಶನಿವಾರ ರಾತ್ರಿ ರಾತ್ರಿ 9 ಗಂಟೆಗೆ ಮಣ್ಣು ಕುಸಿದಿದ್ದು, ಪರಿಣಾಮ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾಝಿಕ್ಕೋಡ್- ಬೆಂಗಳೂರು ರೈಲನ್ನು ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣದಿಂದ ವಾಪಸ್ ಕಳುಹಿಸಲಾದರೆ, ಮಂಗಳೂರಿಗೆ ತೆರಳುತ್ತಿದ್ದ ಕಾರವಾರ ಎಕ್ಸ್‌ಪ್ರೆಸ್ ರೈಲನ್ನು ಹಾಸನ ರೈಲ್ವೆ ನಿಲ್ದಾಣದಿಂದ ಬದಲಿ ಮಾರ್ಗದಲ್ಲಿ ಕಳುಹಿಸಿಕೊಡಲಾಯಿತು. ಭೂಕುಸಿತದಿಂದ ಈ ಮಾರ್ಗದಲ್ಲಿ ಸಂಚರಿಸುವ ಏಳು ರೈಲುಗಳ ಸಂಚಾರವನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಇಲಾಖೆ ಅಧಿಕಾರಿಗಳು ಮೈಸೂರಿನಿಂದ ಇನ್ನೂರಕ್ಕೂ ಅಧಿಕ ಕಾರ್ಮಿಕರನ್ನು ಸ್ಥಳಕ್ಕೆ ಕರೆಸಿ ಮಧ್ಯರಾತ್ರಿಯಿಂದಲೆ ಕಾರ್ಯಾಚರಣೆ ಆರಂಭಿಸಲಾಗಿದೆ. ಆದರೆ ಘಟನಾ ಪ್ರದೇಶದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಸಮರೋಪಾಧಿ ಕಾರ್ಯಚರಣೆಗೆ ಅಡ್ಡಿಯಾಗಿದೆ.
ಸಂಚಾರ ಪುನರಾರಂಭಕ್ಕೆ ಸಮಯ ಬೇಕು:
ಹಳಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ತಾಂತ್ರಿಕ ತಂಡ ದೃಢಪಡಿಸಿದ ಬಳಿಕವೇ ರೈಲು ಸಂಚಾರ ಪುನರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಪ್ರಯಾಣಿಸಲು ಉದ್ದೇಶಿಸಿರುವ ಪ್ರಯಾಣಿಕರು ರೈಲುಗಳ ಸ್ಥಿತಿಗತಿ ಕುರಿತು ಅಧಿಕೃತ ಮಾಹಿತಿಯನ್ನು ಪರಿಶೀಲಿಸಿಕೊಂಡು ಪ್ರಯಾಣ ಕೈಗೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ. ಮಲೆನಾಡಿನಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆ ಪಶ್ಚಿಮ ಘಟ್ಟ ಪ್ರದೇಶದ ರೈಲ್ವೆ ಮಾರ್ಗಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದ್ದು, ಅಗತ್ಯವಿದ್ದಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ತಪ್ಪಿದ ಬಾರೀ ಅನಾಹುತ
ರೈಲು ಸಂಚಾರ ಆರಂಭಕ್ಕೂ ಮುನ್ನವೇ ಹಳಿ ಮೇಲೆ ಮಣ್ಣು ಕುಸಿದಿರುವುದು ಪತ್ತೆಯಾಗಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಸುರಕ್ಷತಾ ದೃಷ್ಟಿಯಿಂದ ರೈಲ್ವೆ ಅಧಿಕಾರಿಗಳು ತಕ್ಷಣವೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲುಗಳನ್ನು ವಿವಿಧ ನಿಲ್ದಾಣಗಳಲ್ಲಿ ತಡೆದು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿದರು. ಭೂಕುಸಿತದ ಪರಿಣಾಮ ಬೆಂಗಳೂರು- ಮುರುಡೇಶ್ವರ, ಬೆಂಗಳೂರು- ಕೋಝಿಕೋಡ್ ಹಾಗೂ ವಿಜಯಪುರ- ಮಂಗಳೂರು ರೈಲುಗಳನ್ನು ಹಾಸನ ರೈಲು ನಿಲ್ದಾಣದಲ್ಲೇ ನಿಲ್ಲಿಸಲಾಯಿತು. ಬೆಂಗಳೂರು- ಕಾರವಾರ ಎಕ್ಸ್‌ಪ್ರೆಸ್ ರೈಲು ಸಕಲೇಶಪುರದಲ್ಲಿ ಸ್ಥಗಿತಗೊಂಡರೆ, ಮುರುಡೇಶ್ವರ- ಬೆಂಗಳೂರು ಹಾಗೂ ಮಂಗಳೂರು- ವಿಜಯಪುರ ರೈಲುಗಳನ್ನು ಸುಬ್ರಹ್ಮಣ್ಯ ನಿಲ್ದಾಣದಲ್ಲಿ ತಡೆಹಿಡಿಯಲಾಯಿತು. ಕೋಝಿಕೋಡ್- ಬೆಂಗಳೂರು ರೈಲು ಪುತ್ತೂರು ನಿಲ್ದಾಣದಲ್ಲಿ ನಿಂತಿದ್ದು, ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಇತರೆ ರೈಲುಗಳ ಸಂಚಾರವೂ ಸ್ಥಗಿತಗೊಂಡಿದೆ.
ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಗೆ ಹೊರಟಿದ್ದವರಿಗೆ ಶಾಕ್
ರಾಜ್ಯದಲ್ಲಿ ಭಾನುವಾರ ನಡೆದ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಕರಾವಳಿ ಸೇರಿ ಪಶ್ಚಿಮ ಘಟ್ಟದ ಭಾಗಗಳಿಂದ ಪರೀಕ್ಷೆ ಬರೆಯಲು ಬರಬೇಕಿದ್ದ ಹಲವು ಮಂದಿ ಬರಲಾಗದೆ ನಿರಾಸೆಗೊಂಡರು. ಕಾರಣ ರೈಲು ಸಂಚಾರ ಸಡನ್ ಸ್ಥಗಿತಗೊಂಡಿತು. ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಲು ಮಂಗಳೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳುತ್ತಿದ್ದ ಅಭ್ಯರ್ಥಿಗಳ ರೈಲು ಸುಬ್ರಹ್ಮಣ್ಯ ರೋಡ್‌ನಲ್ಲಿ ರದ್ದುಗೊಂಡಿದ್ದು, ಅವರಿಗೆ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಿಲ್ಲ. ಮಾನವೀಯ ನೆಲೆಯಲ್ಲಿ ರೈಲು ರದ್ದತಿಯಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಎಲ್ಲ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೈರಲ್ ಆಗಿದೆ.
ನಿಲ್ದಾಣಗಳಲ್ಲಿ ಪ್ರಯಾಣಿಕರ ಪರದಾಟ:
ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಹಾಗೂ ಪುತ್ತೂರು ರೈಲು ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ರಾತ್ರಿ ಪೂರ್ತಿ ಸಿಲುಕಿಕೊಂಡರು. ಹಲವರು ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದರೆ, ವಿದ್ಯಾರ್ಥಿಗಳು, ಉದ್ಯೋಗಿಗಳು, ಹಿರಿಯ ನಾಗರಿಕರು ಹಾಗೂ ಪ್ರವಾಸಿಗರು ತೀವ್ರ ಸಂಕಷ್ಟ ಅನುಭವಿಸಿದರು. ನಡುರಾತ್ರಿ ವೇಳೆಯಲ್ಲೇ ಪ್ರಯಾಣ ಮುಂದುವರಿಸಲು ಟಿಕೆಟ್ ಹಣ ವಾಪಸ್ ಪಡೆದು ಬಸ್ ಸೇರಿದಂತೆ ಪರ್ಯಾಯ ಸಾರಿಗೆ ವ್ಯವಸ್ಥೆ ಹುಡುಕುತ್ತಾ ಪ್ರಯಾಣಿಕರು ಲಗೇಜ್ ಹೊತ್ತು ಬಸ್ ನಿಲ್ದಾಣಗಳತ್ತ ತೆರಳಿದ ದೃಶ್ಯಗಳು ಕಂಡುಬಂದವು.
ಪರ್ಯಾಯ ವ್ಯವಸ್ಥೆ ಬಗ್ಗೆ ಅಸಮಾಧಾನ
ರೈಲುಗಳ ರದ್ದತಿ ಕುರಿತು ರೈಲ್ವೆ ಇಲಾಖೆ ಮಾಹಿತಿ ನೀಡಿದರೂ, ತಕ್ಷಣದ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸದ ಹಿನ್ನೆಲೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಾಸನ ರೈಲು ನಿಲ್ದಾಣದಲ್ಲಿ ಟಿಕೆಟ್ ಹಣ ಮರುಪಾವತಿಗಾಗಿ ಉದ್ದ ಸಾಲುಗಳು ಕಂಡುಬಂದವು. ಹಲವು ಮಂದಿ ತಮ್ಮ ಪ್ರಯಾಣವನ್ನು ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವರು ಖಾಸಗಿ ವಾಹನ ಹಾಗೂ ಬಸ್‌ಗಳ ಮೊರೆ ಹೋಗಬೇಕಾಯಿತು. ಪ್ರಯಾಣಿಕರ ಅನುಕೂಲ್ಕಕಾಗಿ ಹಾಸನ, ಸುಬ್ರಹ್ಮಣ್ಯ ರೋಡ್ ಮತ್ತು ಬಂಟ್ವಾಳ ರೈಲು ನಿಲ್ದಾಣಗಳಲ್ಲಿ ಅಡುಗೆ ವ್ಯವಸ್ಥೆ ಮಾಡಲಾಯಿತು. ಭೂಕುಸಿತ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ವಿಜಯಪುರ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಉಪಹಾರಗಳನ್ನು ಸರಬರಾಜು ಮಾಡಲಾಯಿತು.
ಭಾನುವಾರ ರದ್ದಾದ ರೈಲು ಮತ್ತು ಬದಲಿ ಮಾರ್ಗ
- ಭಾನುವಾರದ ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ - ಯಶವಂತಪುರ ಎಕ್ಸ್‌ಪ್ರೆಸ್ ಪ್ರಯಾಣ, ರೈಲು ಸಂಖ್ಯೆ 16575 ಯಶವಂತಪುರ - ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ಪ್ರಯಾಣ ರದ್ದುಗೊಳಿಸಲಾಯಿತು.
- ರೈಲು ಸಂಖ್ಯೆ 17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್‌ನ್ನು ಬದಲಿ ಮಾರ್ಗವಾಗಿ ಎಸ್‌ಎಸ್‌ಎಸ್ ಹುಬ್ಬಳ್ಳಿ - ಲೋಂಡಾ - ಕ್ಯಾಸಲ್ ರಾಕ್ - ಮಡಗಾಂವ್ - ಕಾರವಾರ - ತೋಕೂರು ಮೂಲಕ ಮಂಗಳೂರು ಜಂಕ್ಷನ್‌ಗೆ ಸಂಚಾರಕ್ಕೆ, ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್ - ವಿಜಯಪುರ ಎಕ್ಸ್‌ಪ್ರೆಸ್‌ನ್ನು ಮಂಗಳೂರು ಜಂಕ್ಷನ್ - ತೋಕೂರು - ಕಾರವಾರ - ಮಡಗಾಂವ್ - ಕ್ಯಾಸಲ್ ರಾಕ್ - ಲೋಂಡಾ - ಎಸ್‌ಎಸ್‌ಎಸ್ ಹುಬ್ಬಳ್ಳಿ ಮೂಲಕ ಸಂಚಾರಕ್ಕೆ ಅನುವು ಮಾಡಿ ಕೊಡಲಾಯ್ತು.
- ರೈಲು ಸಂಖ್ಯೆ 16586 ಮುರ್ಡೇಶ್ವರ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ನ್ನು ಬದಲಿ ಮಾರ್ಗವಾಗಿ ಮುರ್ಡೇಶ್ವರ - ತೋಕೂರು - ಮಂಗಳೂರು ಸೆಂಟ್ರಲ್ - ಕಣ್ಣೂರು - ಶೋರನೂರು - ಪಾಲಕ್ಕಾಡ್ - ಪೋದನೂರು - ಜೋಲಾರ್‌ಪೆಟ್ಟೈ - ಎಸ್‌ಎಂವಿಟಿ ಬೆಂಗಳೂರಿಗೆ ಸಂಚಾರ ಅನುವು ಮಾಡಿ ಕೊಡಲಾಯ್ತು.
- ರೈಲು ಸಂಖ್ಯೆ 16512 ಕೋಝಿಕ್ಕೋಡ್ - ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ನ್ನು ಬದಲಿ ಮಾರ್ಗವಾಗಿ ಮಂಗಳೂರು ಸೆಂಟ್ರಲ್ - ಕಣ್ಣೂರು - ಶೋರನೂರು - ಪಾಲಕ್ಕಾಡ್ - ಪೊದನೂರು - ಜೋಲಾರ್ಪೆಟ್ಟೈ - ಎಸ್‌ಎಂವಿಟಿ ಬೆಂಗಳೂರಿಗೆ ಸಂಚಾರಕ್ಕೆ ಅನುವು ಮಾಡಿ ಕೊಡಲಾಯ್ತು.
- ರೈಲು ಸಂಖ್ಯೆ. 16511 ಕೆಎಸ್‌ಆರ್ ಬೆಂಗಳೂರು - ಕೋಝಿಕೋಡ್ ಎಕ್ಸ್‌ಪ್ರೆಸ್‌ನ್ನು ಬೆಂಗಳೂರು ಎಸ್‌ಎಂವಿಬಿನಲ್ಲಿ ಪ್ರಯಾಣ ಆರಂಭಿಸಿ ಎಸ್‌ಎಂವಿಟಿ ಬೆಂಗಳೂರು ಜೋಲಾರ್‌ಪೇಟ್ಟೈ ಜಂಕ್ಷನ್ - ಪೊದನೂರು ಜಂಕ್ಷನ್ - ಪಾಲಕ್ಕಾಡ್ ಜಂಕ್ಷನ್ - ಶೋರನೂರು ಜಂಕ್ಷನ್ - ಕೋಝಿಕ್ಕೋಡ್ - ಮಂಗಳೂರು ಸೆಂಟ್ರಲ್‌ಗೆ ಸಂಚಾರ ಅನುವು ಮಾಡಿ ಕೊಡಲಾಯ್ತು.
- ರೈಲು ಸಂಖ್ಯೆ 16585 ಎಸ್‌ಎಂವಿಟಿ ಬೆಂಗಳೂರು - ಮುರ್ಡೇಶ್ವರ ಎಕ್ಸ್‌ಪ್ರೆಸ್‌ನ್ನು ಎಸ್‌ಎಂವಿಟಿ ಬೆಂಗಳೂರು - ಓಮಲೂರು ಜಂಕ್ಷನ್ - ಪೋದನೂರು ಜಂಕ್ಷನ್ - ಪಾಲಕ್ಕಾಡ್ ಜಂಕ್ಷನ್ - ಶೋರನೂರು ಜಂಕ್ಷನ್ - ಕಣ್ಣೂರು - ತೋಕೂರು - ಮುರ್ಡೇಶ್ವರಕ್ಕೆ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ರದ್ದಾದ ರೈಲುಗಳು
- ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್- ವಿಜಯಪುರ ಎಕ್ಸ್‌ಪ್ರೆಸ್ ಸುಬ್ರಹ್ಮಣ್ಯ ನಿಲ್ದಾಣದಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ.
- ರೈಲು ಸಂಖ್ಯೆ 16586 ಮುರುಡೇಶ್ವರ - ಎಸ್‌ಎಂವಿಟಿ ಬೆಂಗಳುರು ಎಕ್ಸ್‌ಪ್ರೆಸ್ ನ್ನು ರಾತ್ರಿ ಸಿರಿಬಾಗಿಲು ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು.
- ರೈಲುಸಂಖ್ಯೆ 16512 ಕೋಝಿಕ್ಕೋಡ್-ಕೆಎಸ್ಆರ್ ಬೆಂಗಳೂರು ಕಬಕ ಪುತ್ತೂರಿನಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ
- ರೈಲು ಸಂಖ್ಯೆ 16596 ಕಾರವಾರ-ಕೆಎಸ್‌ಆರ್ ಬೆಂಗಳೂರಿಗೆ ರಾತ್ರಿ ಬಾರ್ಕೂರಿನಿಂದ ಹೊರಟು ಸಂಚಾರ ವ್ಯತ್ಯಯವಾಯಿತು. ಅದನ್ನು ಮಂಗಳೂರು ಜಂಕ್ಷನ್, ಶೊರನೂರು ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ಇರೊಡೆ ಜಂಕ್ಷನ್ ಮೂಲಕ ಕೆಎಸ್‌ಆರ್ ಬೆಂಗಳೂರಿಗೆ ಮಾರ್ಗ ಬದಲಿಸಲಾಯಿತು.
- ರೈಲುಸಂಖ್ಯೆ 16595 ಕೆಎಸ್‌ಆರ್ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್‌ನ್ನು ಹಾಸನ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು.
- ರೈಲುಸಂಖ್ಯೆ 16585 ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿ ಹಾಸನ ತಲುಪಿದ್ದು, ಹಾಸನ-ಮುರುಡೇಶ್ವರ ಪ್ರಯಾಣ ಭಾಗಶಃ ರದ್ದು ಮಾಡಲಾಯಿತು.
- ರೈಲುಸಂಖ್ಯೆ 16511 ಕೆಎಸ್‌ಆರ್ ಬೆಂಗಳೂರು-ಕೋಝಿಕೋ ಎಕ್ಸ್‌ಪ್ರೆಸ್ ರೈಲು ಕೆಎಸ್‌ಆರ್ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದ್ದು, ಹಾಸನದಲ್ಲಿ ಅಲ್ಪಾವಧಿಗೆ ಸಂಚಾರ ಕೊನೆಗೊಂಡಿತು.
- ರೈಲು ಸಂಖ್ಯೆ 17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಸಂಚಾರ ಹಾಸನದಲ್ಲಿ ಮುಕ್ತಾಯಗೊಂಡಿದೆ.
- ರೈಲು ಸಂಖ್ಯೆ 16586 ಮುರುಡೇಶ್ವರ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ.


