ಬೆಂಗಳೂರು ಉಪನಗರ ಸಾರಿಗೆ ಯೋಜನೆಯ 'ಕಾರಿಡಾರ್ 4' (ಕನಕ ಲೈನ್) ವ್ಯಾಪ್ತಿಯಲ್ಲಿ, ಹುಸ್ಕೂರು ರೈಲ್ವೆ ನಿಲ್ದಾಣದ ಬಳಿ ಮೊದಲ 'ಟಿ-ಗಿರ್ಡರ್' ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಇದು ಯೋಜನೆಯ ಪ್ರಮುಖ ಮೈಲಿಗಲ್ಲಾಗಿದೆ.

ಬೆಂಗಳೂರು (ಆ.3): ಬಹುನಿರೀಕ್ಷಿತ ಬೆಂಗಳೂರು ಉಪನಗರ ಸಾರಿಗೆ ಯೋಜನೆ (BSTP) ಪ್ರಮುಖ ಮೈಲಿಗಲ್ಲೊಂದನ್ನು ಸಾಧಿಸಿದೆ. ಯೋಜನೆಯ 'ಕಾರಿಡಾರ್ 4' ವ್ಯಾಪ್ತಿಯ ಹುಸ್ಕೂರು ರೈಲ್ವೆ ನಿಲ್ದಾಣದ ಬಳಿ ಪ್ರಥಮ 'ಟಿ-ಗಿರ್ಡರ್' (T-girder) ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಜುಲೈ 31ರಂದು ಅಳವಡಿಸಲಾದ ಈ ಟಿ-ಗಿರ್ಡರ್ 15.45 ಮೀಟರ್ ಉದ್ದವಿದೆ. ಕಾಮಗಾರಿಯನ್ನು ಅತ್ಯಂತ ವೇಗವಾಗಿ, ಉತ್ತಮ ಗುಣಮಟ್ಟ ಹಾಗೂ ಸುರಕ್ಷತೆಯೊಂದಿಗೆ ಪೂರ್ಣಗೊಳಿಸಲು ಈ ಗಿರ್ಡರ್‌ಗಳನ್ನು ಮೊದಲೇ ಸಿದ್ಧಪಡಿಸಲಾಗಿತ್ತು (Precast) ಎಂದು ಯೋಜನೆಯ ಜಾರಿ ಸಂಸ್ಥೆಯಾದ 'ಕೆ-ರೈಡ್' (K-RIDE - ರೈಲ್ ಮೂಲಸೌಕರ್ಯ ಅಭಿವೃದ್ಧಿ ಕಂಪನಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ರತಿಯೊಂದು 'ಟಿ-ಗಿರ್ಡರ್' ನಿರ್ಮಾಣಕ್ಕೆ 17 ಕ್ಯೂಬಿಕ್ ಮೀಟರ್‌ನಷ್ಟು 'M50 ಗ್ರೇಡ್ ಕಾಂಕ್ರೀಟ್‌' ಬಳಸಲಾಗಿದ್ದು, ಇದು ಸುಮಾರು 47 ಟನ್ ತೂಕ ಹೊಂದಿದೆ. ಯೋಜನೆ ಗುತ್ತಿಗೆದಾರರಾದ 'ಆರ್‌ವಿಎನ್‌ಎಲ್-ರಿತ್ವಿಕ್' (RPPL), ಕೆ-ರೈಡ್ ಹಾಗೂ ಜನರಲ್ ಕನ್ಸಲ್ಟೆಂಟ್ ಉಸ್ತುವಾರಿಯಲ್ಲಿ ಈ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಕುರಿತು ಮಾತನಾಡಿದ ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್, "ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಲು ಯೋಜನೆ ವ್ಯಾಪ್ತಿಯಲ್ಲಿ ಆಧುನಿಕ ತಂತ್ರಜ್ಞಾನಗಳು, ಪ್ರಿಕಾಸ್ಟ್ ಇಂಜಿನಿಯರಿಂಗ್ ಪರಿಹಾರಗಳು ಹಾಗೂ ವಿನೂತನ ಮಾದರಿಯ ತಂತ್ರಗಳನ್ನು ಬಳಸಲಾಗುತ್ತಿದೆ" ಎಂದಿದ್ದಾರೆ.

ಏನಿದು ಕಾರಿಡಾರ್ 4 'ಕನಕ ಲೈನ್'?

ದಕ್ಷಿಣ ಬೆಂಗಳೂರಿನ ಹೀಲಲಿಗೆಯಿಂದ ಆರಂಭವಾಗಿ ಉತ್ತರ ತುದಿಯ ರಾಜಾನುಕುಂಟೆಯವರೆಗೆ ಒಟ್ಟು 46.88 ಕಿಲೋಮೀಟರ್ ಉದ್ದದ ಮಾರ್ಗವನ್ನು ಕಾರಿಡಾರ್ 4 ಎಂದು ಗುರುತಿಸಲಾಗಿದ್ದು, ಇದಕ್ಕೆ 'ಕನಕ ಲೈನ್' ಎಂದು ಹೆಸರಿಡಲಾಗಿದೆ. ಈ ಕಾರಿಡಾರ್ 4ರ 24.34 ಕಿ.ಮೀ. ಉದ್ದದ ಮಾರ್ಗದಲ್ಲಿ ವಯಾಡಕ್ಟ್ (ಮೇಲ್ಸೇತುವೆ) ಮತ್ತು ಹಳಿಗಳ ನಿರ್ಮಾಣಕ್ಕೆ ಕೆ-ರೈಡ್ ಇನ್ನೂ ಟೆಂಡರ್ ಕರೆಯಬೇಕಿದೆ. ಮೇ ತಿಂಗಳಲ್ಲಿ ಕರೆಯಲಾಗಿದ್ದ ಮತ್ತೊಂದು 22.54 ಕಿ.ಮೀ. ಮಾರ್ಗದ (ಹೀಲಲಿಗೆ-ಬೆಳ್ಳಂದೂರು ಮತ್ತು ಬೆನ್ನಿಗಾನಹಳ್ಳಿ-ಜಕ್ಕೂರು) ಟೆಂಡರ್‌ಗಳ ಮೌಲ್ಯಮಾಪನ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಾರಿಡಾರ್ 2 ಕಾಮಗಾರಿಗಳ ಸ್ಥಿತಿಗತಿ

ಕಾರಿಡಾರ್ 2 (ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ, 25.01 ಕಿ.ಮೀ.) ವ್ಯಾಪ್ತಿಯ ಎರಡು ಪ್ಯಾಕೇಜ್‌ಗಳ ಗುತ್ತಿಗೆಯನ್ನು 'ಪಿಜೆಬಿ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್' ಮತ್ತು 'ಪಿಜೆಬಿ-ಸಿವಿಸಿಸಿ' ಜಂಟಿ ಸಂಸ್ಥೆಗೆ ನೀಡಲಾಗಿದೆ.

ಇನ್ನು ಬೆನ್ನಿಗಾನಹಳ್ಳಿ ಮತ್ತು ಶೆಟ್ಟಿಹಳ್ಳಿ ನಡುವಿನ 7.795 ಕಿ.ಮೀ. ಉದ್ದದ ಎಲಿವೇಟೆಡ್ ಮಾರ್ಗ (ಇದರಲ್ಲಿ 1.11 ಕಿ.ಮೀ. ಡಬಲ್ ಡೆಕ್ಕರ್ ವಿಭಾಗವೂ ಸೇರಿದೆ) ಮೂರನೇ ಪ್ಯಾಕೇಜ್‌ಗೆ ಕೇವಲ 'ಎನ್‌ಸಿಸಿ ಲಿಮಿಟೆಡ್' ಸಂಸ್ಥೆ ಒಂದೇ ಬಿಡ್ ಸಲ್ಲಿಸಿದ್ದರಿಂದ ಆ ಟೆಂಡರ್ ಅನ್ನು ಮರು-ಆಹ್ವಾನಿಸಲಾಗಿದೆ.

ನಿಲ್ದಾಣಗಳು ಮತ್ತು ಗಡುವು ವಿವರ

ಕಾರಿಡಾರ್ 2 ಮತ್ತು 4ರ ರೈಲ್ವೆ ನಿಲ್ದಾಣಗಳ ನಿರ್ಮಾಣ ಕಾರ್ಯಕ್ಕೆ ಪ್ರತ್ಯೇಕ ಗುತ್ತಿಗೆ ನೀಡಲಾಗಿದೆ. ಕಾರಿಡಾರ್ 2ರಲ್ಲಿ 12 ನಿಲ್ದಾಣಗಳು ಹಾಗೂ ಕಾರಿಡಾರ್ 4ರಲ್ಲಿ 18 ನಿಲ್ದಾಣಗಳ ನಿರ್ಮಾಣಕ್ಕೆ ಕೆ-ರೈಡ್ ಈಗಾಗಲೇ ಗುತ್ತಿಗೆ ನೀಡಿದೆ. ಉಪನಗರ ರೈಲು ಯೋಜನೆಯ ಕಾರಿಡಾರ್ 2 ಅನ್ನು 2028ರ ಡಿಸೆಂಬರ್ ವೇಳೆಗೆ ಹಾಗೂ ಕಾರಿಡಾರ್ 4 ಅನ್ನು 2029ರ ಜೂನ್ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಗುರಿಯನ್ನು ಕೆ-ರೈಡ್ ಹೊಂದಿದೆ. ಇನ್ನು ಕಾರಿಡಾರ್ 1 (ಕೆಎಸ್ಆರ್ ಬೆಂಗಳೂರು-ದೇವನಹಳ್ಳಿ/ಏರ್‌ಪೋರ್ಟ್, 49.9 ಕಿ.ಮೀ) ಹಾಗೂ ಕಾರಿಡಾರ್ 3 (ಕೆಂಗೇರಿ-ವೈಟ್‌ಫೀಲ್ಡ್, 35.52 ಕಿ.ಮೀ) ಕಾಮಗಾರಿಗಳನ್ನು 2030ರ ಮಾರ್ಚ್ ವೇಳೆಗೆ ಪೂರ್ಣಗೊಳಿಸಲು ಗಡುವು ನಿಗದಿಪಡಿಸಲಾಗಿದೆ.