Asianet Suvarna News Asianet Suvarna News

2 ಪ್ರವಾಸಿ ಸರ್ಕಿಟ್‌ 2 ತಿಂಗಳಲ್ಲಿ ಶುರು: ಸಿಎಂ ಬೊಮ್ಮಾಯಿ

ಆಧುನಿಕ ತಂತ್ರಜ್ಞಾನ ಬಳಕೆಯಿಂದ ಪ್ರವಾಸೋದ್ಯಮದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ಕೆಲವೇ ತಿಂಗಳಲ್ಲಿ ಕರ್ನಾಟಕದ ಪ್ರವಾಸೋದ್ಯಮ ಅಂತಾರಾಷ್ಟ್ರೀಯ ನಕ್ಷೆಯಲ್ಲಿ ಸೇರ್ಪಡೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

soon karnataka will join international tourism map says basavaraj bommai gvd
Author
First Published Sep 29, 2022, 12:12 PM IST

ಬೆಂಗಳೂರು (ಸೆ.29): ಆಧುನಿಕ ತಂತ್ರಜ್ಞಾನ ಬಳಕೆಯಿಂದ ಪ್ರವಾಸೋದ್ಯಮದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ಕೆಲವೇ ತಿಂಗಳಲ್ಲಿ ಕರ್ನಾಟಕದ ಪ್ರವಾಸೋದ್ಯಮ ಅಂತಾರಾಷ್ಟ್ರೀಯ ನಕ್ಷೆಯಲ್ಲಿ ಸೇರ್ಪಡೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2022 ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೋಂದಣಿಯಾದ ರಾಜ್ಯದ ಪ್ರವಾಸಿ ಮಾರ್ಗದರ್ಶಿಗಳಿಗೆ ಪ್ರೋತ್ಸಾಹ ಧನ ವಿತರಣೆ ಹಾಗೂ ಪ್ರವಾಸೋದ್ಯಮ ನೀತಿ 2020-26ರ ಪರಿಷ್ಕೃತ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪ್ರತಿ ವರ್ಷ ರಾಜ್ಯಕ್ಕೆ 30 ಲಕ್ಷ ಪ್ರವಾಸಿಗರು ಆಗಮಿಸುತ್ತಿದ್ದು, ಮುಂದಿನ ಮೂರು ವರ್ಷದಲ್ಲಿ ಈ ಸಂಖ್ಯೆಯನ್ನು ಒಂದು ಕೋಟಿಗೆ ಮುಟ್ಟಿಸುವ ಕೆಲಸವನ್ನು ಒಗ್ಗೂಡಿ ಮಾಡಬೇಕು. ಪ್ರವಾಸೋದ್ಯಮಕ್ಕೆ ಸೂಕ್ತವಾಗಿರುವ ಹಲವು ಸ್ಥಳಗಳು ರಾಜ್ಯದಲ್ಲಿವೆ. ಆ ಸ್ಥಳಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಸುಧಾರಣೆ ಮಾಡಿದರೆ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಸಿಗಲಿದೆ ಎಂದರು. ಪ್ರವಾಸಿ ಮಾರ್ಗದರ್ಶಿಗಳು ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಸುಳ್ಳು ಹೇಳುವುದು, ಬಂದವರಿಗೆ ದಾರಿ ತಪ್ಪಿಸುವುದು ಮಾಡಬಾರದು. ಕರ್ನಾಟಕದ ಪ್ರವಾಸಿ ಮಾರ್ಗದರ್ಶಿಗಳು ಮೊದಲ ಸ್ಥಾನಕ್ಕೆ ಬರಬೇಕು. ವಿಶ್ವಾಸಪೂರ್ವಕವಾಗಿರಬೇಕು. ಅವರು ಸರಿಯಾಗಿ ಮಾರ್ಗದರ್ಶನ ಮಾಡುತ್ತಾರೆ ಎಂಬ ವಿಶ್ವಾಸ ಮೂಡಿಸುವ ರೀತಿಯಲ್ಲಿ ನಿಮ್ಮ ನಡೆ, ನುಡಿ ಇರಬೇಕು ಎಂದು ಕಿವಿಮಾತು ಹೇಳಿದರು.

ಸೋಲದೇವನಹಳ್ಳಿಯಲ್ಲಿ ಲೀಲಾವತಿ ನಿರ್ಮಾಣದ ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ಚಾಲನೆ

ಬೇಲೂರು, ಹಳೆಬೀಡು ಪಾರಂಪರಿಕ ಪಟ್ಟಿಗೆ: ನಾಡಿನ ಪ್ರವಾಸೋದ್ಯಮ ರಾಜ- ಮಹಾರಾಜರು ಸೃಷ್ಟಿಮಾಡಿರುವ ಕಲಾ ಜಗತ್ತು. ಹಂಪಿ, ಬೇಲೂರು, ಹಳೆಬೀಡು, ಗೋಲಗುಂಬಜ್‌, ಜೈನ ಬಸದಿಗಳು ಇವುಗಳಿಗೆ ಕೆಲವು ಉದಾಹರಣೆಗಳು. ಈ ಐತಿಹಾಸಿಕ ಹಾಗೂ ಪಾರಂಪರಿಕ ಆಸ್ತಿಯನ್ನು ಸಂರಕ್ಷಿಸುವ ಮೂಲಕ ಪ್ರವಾಸೋದ್ಯಮವನ್ನು ಆಕರ್ಷಿಸಬಹುದು. ಯುನೆಸ್ಕೋ ಸಂಸ್ಥೆ ಹಂಪಿಯನ್ನು ಈಗಾಗಲೇ ಪಾರಂಪರಿಕ ಕಟ್ಟಡ ಎಂದು ಗುರುತಿಸಿದೆ. ಕೆಲವೇ ತಿಂಗಳಲ್ಲಿ ಬೇಲೂರು, ಹಳೆಬೀಡು ಕೂಡ ಈ ಪಟ್ಟಿಯಲ್ಲಿ ಸೇರಲಿವೆ. ಬಾದಾಮಿ ಗುಹೆಗಳು ಅಜಂತಾ ಗುಹೆಗಳಿಗಿಂತ ಪುರಾತನ ಹಾಗೂ ಮಹತ್ವದ್ದಾಗಿವೆ. ಆದರೆ ಪ್ರವಾಸಿಗರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಇದನ್ನು ಸೃಜನಾತ್ಮಕವಾಗಿ ಪ್ರಸಿದ್ಧಿಗೊಳಿಸಬೇಕು ಎಂದು ಸಲಹೆ ನೀಡಿದರು.

ಪ್ರವಾಸೋದ್ಯಮ ಸರ್ಕೀಟ್‌: ರಾಜ್ಯದಲ್ಲಿ 2 ಪ್ರವಾಸೋದ್ಯಮ ಸರ್ಕೀಟ್‌ಗಳನ್ನು ಅಂದರೆ ಬೇಲೂರು, ಹಳೆಬೀಡು, ಸೋಮನಾಥಪುರ ಸುತ್ತಮುತ್ತಲ ಪ್ರವಾಸಿ ತಾಣಗಳನ್ನೊಳಗೊಂಡ ಮೈಸೂರು ಸರ್ಕೀಟ್‌ , ವಿಜಯಪುರದಿಂದ ಬಾದಾಮಿ, ಪಟ್ಟದಕಲ್ಲು, ಹಂಪಿ ಇತ್ಯಾದಿಗಳನ್ನು ಒಳಗೊಂಡ ಹಂಪಿ ಸರ್ಕೀಟ್‌ಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸಿದೆ. ಮುಂದಿನ 2 ತಿಂಗಳ ಒಳಗಾಗಿ ಎರಡು ಸರ್ಕಿಟ್‌ಗಳನ್ನು ಕಾರ್ಯಾರಂಭ ಮಾಡಲಾಗುವುದು ಎಂದು ಹೇಳಿದರು.

ಧಾರ್ಮಿಕ ಸ್ಥಳಗಳ (ಟೆಂಪಲ್‌ ಟೂರಿಸಂ) ಪ್ರವಾಸೋದ್ಯಮ, ನೈಸರ್ಗಿಕ ಪ್ರವಾಸೋದ್ಯಮಗಳಿಗೆ ಪ್ರಾಶಸ್ತ್ಯ ನೀಡಲಾಗುವುದು. ಜೋಗ ಜಲಪಾತ ಪ್ರವಾಸಿ ತಾಣ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗಾಗಿ 100 ಕೋಟಿ ರು. ಮೀಸಲಿರಿಸಲಾಗಿದ್ದು, 600 ಕೊಠಡಿಗಳ ಪ್ರವಾಸಿ ವಸತಿ ನಿಲಯ ನಿರ್ಮಿಸಲಾಗುತ್ತಿದೆ. ಕರಾವಳಿ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿ ಸಿಆರ್‌ಝಡ್‌ ಆದೇಶಕ್ಕೆ ಕೇಂದ್ರ ಸರ್ಕಾರ ವಿನಾಯ್ತಿ ನೀಡಿದ್ದು, ಕರಾವಳಿ ಭಾಗದ ಪ್ರವಾಸೋದ್ಯಮಕ್ಕೆ ದೊಡ್ಡ ಪ್ರಮಾಣದ ಸಹಾಯವಾಗಲಿದೆ. ಕರಾವಳಿ ಪ್ರದೇಶದ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕರಾವಳಿ ಅಭಿವೃದ್ಧಿ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದರು.

ಐಷಾರಾಮಿ ಪ್ರವಾಸಕ್ಕೆ ಬಂತು ಸುಸಜ್ಜಿತ ಕ್ಯಾರವಾನ್‌!

ಗೈಡ್‌ಗಳ ಪ್ರೋತ್ಸಾಹಧನ 5000 ರು.ಗೆ ಹೆಚ್ಚಳ: ರಾಜ್ಯದ 365 ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳಿಗೆ ಕೊಡುತ್ತಿರುವ 2 ಸಾವಿರ ರು. ಪ್ರೋತ್ಸಾಹ ಧನವನ್ನು 5 ಸಾವಿರ ರು.ಗೆ ಹೆಚ್ಚಿಸಲಾಗುವುದು. ಜೊತೆಗೆ ಬಹುಭಾಷೆ ಮಾತನಾಡುವ ತರಬೇತಿ, ಸಮವಸ್ತ್ರ, ಬ್ಯಾಡ್ಜ್‌ಗಳನ್ನು ಕೂಡ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Follow Us:
Download App:
  • android
  • ios