ಕಲಬುರಗಿ ಹಾಗೂ ಬೆಂಗಳೂರು ನಡುವೆ ನಿತ್ಯ ಓಡಾಡುವ ಹಾಗೂ ಅತ್ಯಂತ ಡಿಮ್ಯಾಂಡ್‌ ಇರುವಂತಹ ಸೊಲ್ಲಾಪುರ- ಹಾಸನ್‌ ಸೂಪರ್‌ ಫಾಸ್ಟ್‌ ಎಕ್ಸಪ್ರೆಸ್‌ ರೈಲಿನ ಸಂಚಾರ ಡಿಸೆಂಬರ್‌ ಹಾಗೂ ಜನವರಿ ತಿಂಗಳಲ್ಲಿ 63 ದಿನಗಳ ಕಾಲ ರದ್ದಾಗಲಿದೆ.

ಕಲಬುರಗಿ(ನ.26): ಕಲಬುರಗಿ ಹಾಗೂ ಬೆಂಗಳೂರು ನಡುವೆ ನಿತ್ಯ ಓಡಾಡುವ ಹಾಗೂ ಅತ್ಯಂತ ಡಿಮ್ಯಾಂಡ್‌ ಇರುವಂತಹ ಸೊಲ್ಲಾಪುರ- ಹಾಸನ್‌ ಸೂಪರ್‌ ಫಾಸ್ಟ್‌ ಎಕ್ಸಪ್ರೆಸ್‌ ರೈಲಿನ ಸಂಚಾರ ಡಿಸೆಂಬರ್‌ ಹಾಗೂ ಜನವರಿ ತಿಂಗಳಲ್ಲಿ (1.12. 2023 ರಿಂದ 1.2.2024) 63 ದಿನಗಳ ಕಾಲ ರದ್ದಾಗಲಿದೆ.

ಹುಬ್ಬಳ್ಳಿ ಕೇಂದ್ರವಾಗಿರುವ ನೈರುತ್ಯ ರೇಲ್ವೆಯಿಂದ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ರೈಲು ಸೇವೆಯನ್ನು ಡಿ.1 ರಿಂದ ಫೆ.2 ರವರೆಗೂ ರದ್ದು ಮಾಡಲಾಗುತ್ತದೆಂದು ರೇಲ್ವೆ ಪ್ರಕಟಣೆ ಸಾರಿದೆ. ಈ ಸುದ್ದಿ ಕಲಬುರಗಿ- ಬೆಂಗಳೂರು ನಡುವೆ ಸೂಪರ್‌ ಫಾಸ್ಟ್‌ ರೈಲಿಗೆ ಓಡಾಡುವ ಸಾವಿರಾರು ಪ್ರಯಾಣಿಕರನ್ನು ಕಂಗಾಲಾಗಿಸಿದೆ.

4 ಮಾರ್ಗಗಳಲ್ಲಿ ಮೆಟ್ರೋ ಫೀಡರ್‌ ಬಸ್‌ ಹೆಚ್ಚಳ, ಯಾವೆಲ್ಲ ಮಾರ್ಗದಲ್ಲಿ ಓಡಾಡಲಿದೆ?

ಕಲಬುರಗಿಯಿಂದ ಬೆಂಗಳೂರಿಗೆ ಓಡಾಡುವ ರೈಲುಗಳ ಪೈಕಿ ಸೊಲ್ಲಾಪೂರ ಹಾಸನ ರೈಲು ಕಲಬುರಗಿ- ಬೆಂಗಳೂರು ನಡುವಿನ ಲೈಫ್‌ಲೈನ್‌ ಎಕ್ಸಪ್ರೆಸ್‌ ಎಂದೇ ಜನಜನಿತವಾಗಿತ್ತು. ಪ್ರಯಾಣಿಕರಿಗೆ ಈ ರೈಲಿನ ಓಡಾಟದ ಸಮಯ ಸೂಕ್ತವಾಗಿತ್ತು. ಇದೀಗ ಸುರಂಗ ಮಾರ್ಗ ಕಾಮಗಾರಿ ಹಾಗೂ ದುರಸ್ತಿ ಕಾರಣದ ಹಿನ್ನೆಲೆಯಲ್ಲಿ ನೈರುತ್ಯ ರೇಲ್ವೆ ಸೊಲ್ಲಾಪುರ ಹಾಗೂ ಹಾಸನ ನಡುವೆ ನಿತ್ಯ ಸಂಚರಿಸುವ, ತುಂಬ ಬೇಡಿಕೆ ಇರುವ ಈ ಸೂಪರ್‌ ಫಾಸ್ಟ್‌ ರೈಲಿನ ಸೇವೆ 63 ದಿನಗಳ ಕಾಲ ಸ್ಥಗಿತಗೊಳಿಸಿದ್ದು, ಜನ ಹೌಹಾರುವಂತೆ ಮಾಡಿದೆ.

ಏಕೆಂದರೆ ಡಿಸೆಂಬರ್‌, ಜನವರಿನಲ್ಲಿ ಮದುವೆಗಳು ಅಧಿಕ. ಈಗಾಗಲೇ ಅನೇಕರು ಮದುವೆಗಾಗಿ ಇಡೀ ಬೋಗಿಯನ್ನೆ ಬುಕ್‌ ಮಾಡಿದ್ದಾರೆ. ಸಾವಿರಾರು ಜನ ನಿತ್ಯ ಸಮಾರಂಭಗಲಿಗೆ ಓಡಾಡೋ ಈ 2 ತಿಂಗಳಲ್ಲೇ ಸೊಲ್ಲಾಪುರ ಹಾಸನ ರೈಲಿನ ಸೇವೆ ರದ್ದು ಮಾಡಿರೋದು ಇವರೆಲ್ಲರನ್ನು ಫಜೀತಿಗೆ ತಳ್ಳಿದೆ.

ಪ್ರಾಯೋಗಿಕವಾಗಿ ಸಂಚರಿಸಿದ ಬೆಳಗಾವಿ-ಬೆಂಗಳೂರು ವಂದೇ ಭಾರತ ರೈಲು..!

ಮಾರ್ಗ ಬದಲಿಸಿ ಸಂಚಾರಕ್ಕೆ ಬಸವ- ಉದ್ಯಾನ್‌ ಎಕ್ಸಪ್ರೆಸ್‌ಗೆ ಅವಕಾಶ

ಸುರಂಗದಲ್ಲಿ ವೈರ್‌ ಮೆಶ್‌, ಕಲ್ಲು ಒಡೆಯೋದು, ಫಿನಿಶಿಂಗ್‌, ಗ್ರೌಟಿಂಗ್‌ ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿರೋದರಿಂದ ಲೈನ್‌ ಬ್ಲಾಕ್‌, ಪವರ್‌ ಬ್ಲಾಕ್‌ ಮಾಡಲೆಂದು ಬೆಂಗಳೂರಿನಿಂದ ಶ್ರೀಸಾಯಿ ಪ್ರಶಾಂತಿ ನಿಲಯಂ, ಬಸ್ಸಂಪಲ್ಲಿ ಮಾರ್ಗವಾಗಿ ಓಡಾಡುವ ರೈಲುಗಳ ಪೈಕಿ ಉದ್ಯಾನ, ಬಸವ ಎಕ್ಸಪ್ರೆಸ್‌ ಸೇರದಂತೆ 31 ರೈಲುಗಳನ್ನು ಪೆನುಕೊಂಡಾ, ಧರ್ಮಾವರಮ್‌ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಬದಲಿ ಮಾರ್ಗದಲ್ಲಿ ಸಂಚಾರಕ್ಕೆ ಸೊಲ್ಲಾಪುರ- ಹಾಸನ್‌ ರೈಲಿಗೆ ಯಾಕಿಲ್ಲ ಅವಕಾಶ!

ಬೆಂಗಳೂರಿನಿಂದ ಇದೇ ಮಾರ್ಗವಾಗಿ ನಿತ್ಯ ಓಡಾಡುವ ಮೈಸೂರು- ಬಾಗಲಕೋಟೆ ಬಸವ ಎಕ್ಸಪ್ರೆಸ್‌, ಬೆಂಗಳೂರು- ಮುಂಬೈ ಉದ್ಯಾನ್‌ ಎಕ್ಸಪ್ರೆಸ್‌ ರೈಲುಗಳೂ ಸೇರಿದಂತೆ 31 ರೈಲುಗಳನ್ನು ಪೇನುಕೊಂಡಾ, ಧರ್ಮಾವರಮ್‌ ಮಾರ್ಗವಾಗಿ ಓಡಾಡಲು ಅವಕಾಶ ಕಲ್ಪಿಸಲಾಗಿದೆ.

ಆದರೆ ಇದೇ ದಾರಿಯಲ್ಲಿ ಓಡಾಡುವ ಸೊಲ್ಲಾಪುರ- ಹಾಸನ್‌ ಸೇರಿದಂತೆ 41 ರೈಲುಗಳಿಗೆ ಮಾರ್ಗ ಬದಲಿಸಿ ಸಂಚರಿಸಲು ಅವಕಾಶ ನೀಡದೆ, 63 ದಿನಗಳ ಕಾಲ ಸೇವೆಯನ್ನೇ ರದ್ದು ಮಾಡಿರುವ ನೈರುತ್ಯ ರೇಲ್ವೆಯ ಈ ಧೋರಣೆ ಪ್ರಯಾಣಿಕರನ್ನು ಕಂಗಾಲಾಗಿಸಿದೆ.

ಗಮನಾರ್ಹ ಸಂಗತಿ ಎಂದರೆ, 63 ದಿನ ಸೇವೆಯನ್ನೇ ರದ್ದು ಮಾಡಿರುವ ನೈರುತ್ಯ ರೇಲ್ವೆಯ 41 ರೈಲುಗಳ ಪಟ್ಟಿಯಲ್ಲಿ ಸೊಲ್ಲಾಪುರ ಹಾಸನ್‌ ಸೂಪರ್‌ ಫಾಸ್ಟ್‌ ರೈಲೊಂದೇ ನಿತ್ಯ ಓಡಾಡುವ ರೈಲಾಗಿದ್ದು, ಉಳಿದೆಲ್ಲವೂ ವಾರದಲ್ಲ, 2, 3 ದಿನ ಓಡಾಡುವ ರೈಲುಗಳಾಗಿವೆ. ಹೀಗಾಗಿ ಸೊಲ್ಲಾಪುರ ಹಾಸನ್‌ ರೈಲನ್ನೂ ಮಾರ್ಗ ಬದಲಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸದೆ ಅದ್ಯಾಕೆ 2 ತಿಂಗಳು ರದ್ದು ಮಾಡಲಾಗುತ್ತಿದದೆಯೋ? ರೈಲ್ವೆಯವರ ಈ ಧೋರಣೆಯೇ ಅರ್ಥವಾಗುತ್ತಿಲ್ಲವೆಂದು ಜನ ಕಂಗಾಲಾಗಿದ್ದಾರೆ.

ಬಸವ, ಉದ್ಯಾನ್‌ ರೈಲು ಬದಲಾದ ಮಾರ್ಗದಲ್ಲೇ ಸೊಲ್ಲಾಪುರ- ಹಾಸನ್‌ ರೈಲು ಸಂಚರಿಸಲಿ, 2 ತಿಂಗಳ ಸುದೀರ್ಘ ಅವಧಿ ಈ ರೈಲನ್ನೇ ರದ್ದು ಮಾಡಿದರೆ ಜನರಿಗೆ ಆಗುವ ತೊಂದರೆ ಅಷ್ಟಿಷ್ಟಲ್ಲ, ರೇಲ್ವೆ ಇಲಾಖೆ ಇದನ್ನು ಗಮನಿಸಿ ತನ್ನ ನಿರ್ಧಾರ ವಾಪಸ್‌ ಪಡೆಯಲಿ ಎಂಬ ಆಗ್ರಹಗಳು ಕೇಳಿ ಬರುತ್ತಿವೆ.

- ಶ್ರೀಸಾಯಿ ಪ್ರಶಾಂತಿ ನಿಲಯಂ- ಬಸ್ಸಂಪಲ್ಲಿ ನಡುವಿನ ಸುರಂಗ ಮಾರ್ಗದಲ್ಲಿ ಕಾಮಗಾರಿ ಹಿನ್ನೆಲೆ ರದ್ದು

- ನೈರುತ್ಯ ರೇಲ್ವೆಯಿಂದ 31 ರೈಲುಗಳ ಮಾರ್ಗ ಬದಲು, 41 ರೈಲುಗಳ ಸೇವೆ 2 ತಿಂಗಳು ರದ್ದು

- ಕಲಬುರಗಿ- ಬೆಂಗಳೂರು ಲೈಫ್‌ಲೈನ್‌ ಎಕ್ಸ್‌ಪ್ರೆಸ್‌ 2 ತಿಂಗಳು ರದ್ದತಿಯಿಂದ ಪ್ರಯಾಣಿಕರಿಗೆ ಸಂಕಷ್ಟ

- ಡಿಸೆಂಬರ್‌, ಜನವರಿಯಲ್ಲಿ ಮದುವೆ, ಸಾಲು ರಜೆಗಳು. ಪ್ರಯಾಣಿಕರಿಗೆ ಎದುರಾಗಲಿದೆ ಸಮಸ್ಯೆ