Asianet Suvarna News Asianet Suvarna News

ಪ್ರಾಯೋಗಿಕವಾಗಿ ಸಂಚರಿಸಿದ ಬೆಳಗಾವಿ-ಬೆಂಗಳೂರು ವಂದೇ ಭಾರತ ರೈಲು..!

ಬೆಂಗಳೂರಿನಿಂದ ಹೊರಟ ರೈಲು 7 ಗಂಟೆ 45 ನಿಮಿಷದಲ್ಲಿ ಬೆಳಗಾವಿಗೆ ತಲುಪಲಿದೆ. ಬಳಿಕ ಅಲ್ಲಿಂದ ಹೊರಟ ರೈಲು ಬೆಂಗಳೂರಿಗೆ ತಲುಪಲು 8 ಗಂಟೆ 10 ನಿಮಿಷ ತೆಗೆದುಕೊಳ್ಳುತ್ತದೆ. ಬೆಂಗಳೂರು-ಧಾರವಾಡ ನಡುವೆ ಇರುವ ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಿ ಈಚೆಗೆ ರೈಲ್ವೆ ಮಂಡಳಿ ಆದೇಶ ಹೊರಡಿಸಿತ್ತು.

Belagavi Bengaluru Vande Bharat Express Train Runs on Trial grg
Author
First Published Nov 22, 2023, 4:30 AM IST

ಬೆಳಗಾವಿ(ನ.22): ಬೆಳಗಾವಿ-ಬೆಂಗಳೂರಿನ ನಡುವಿನ ವಂದೇ ಭಾರತ ಇಂಟರ್‌ಸಿಟಿ ಸೆಮಿ ಹೈಸ್ಪೀಡ್ ರೈಲು ಮಂಗಳವಾರ ಪ್ರಾಯೋಗಿಕ ಸಂಚಾರ ಆರಂಭಿಸಿತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ (ಕೆಎಸ್‌ಆರ್) ಬೆಳಗ್ಗೆ 5.45ಕ್ಕೆ ಹೊರಟಿದ್ದ ವಂದೇ ಭಾರತ ರೈಲು ಹುಬ್ಬಳ್ಳಿ ಮೂಲಕ ಮಧ್ಯಾಹ್ನ 1.30ಕ್ಕೆ ಬೆಳಗಾವಿ ತಲುಪಿತು.

ಬೆಳಗ್ಗೆ 10.50ಕ್ಕೆ ಹುಬ್ಬಳ್ಳಿಗೆ ಆಗಮಿಸಿ, ಬೆಳಗ್ಗೆ 10.55ಕ್ಕೆ ಅಲ್ಲಿಂದ ಹೊರಟು ಬೆಳಗ್ಗೆ 11.20ಕ್ಕೆ ಧಾರವಾಡ ತಲುಪಿತು. ನಂತರ ಮಧ್ಯಾಹ್ನ 1.30ಕ್ಕೆ ಬೆಳಗಾವಿಗೆ ಆಗಮಿಸಿತು. ಬೆಳಗಾವಿಯಿಂದ ಮಧ್ಯಾಹ್ನ 2ಕ್ಕೆ ವಾಪಸ್ ಹೊರಟ ರೈಲು, ಸಂಜೆ 4.15ಕ್ಕೆ ಧಾರವಾಡ, 4.45ಕ್ಕೆ ಹುಬ್ಬಳ್ಳಿ, ರಾತ್ರಿ 10.10ಕ್ಕೆ ಬೆಂಗಳೂರು ತಲುಪಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ವಂದೇ ಭಾರತ್ ಎಕ್ಸಪ್ರೆಸ್‌ ರೈಲು ಬೆಳಗಾವಿಗೆ ವಿಸ್ತರಣೆ

ಬೆಂಗಳೂರಿನಿಂದ ಹೊರಟ ರೈಲು 7 ಗಂಟೆ 45 ನಿಮಿಷದಲ್ಲಿ ಬೆಳಗಾವಿಗೆ ತಲುಪಲಿದೆ. ಬಳಿಕ ಅಲ್ಲಿಂದ ಹೊರಟ ರೈಲು ಬೆಂಗಳೂರಿಗೆ ತಲುಪಲು 8 ಗಂಟೆ 10 ನಿಮಿಷ ತೆಗೆದುಕೊಳ್ಳುತ್ತದೆ. ಬೆಂಗಳೂರು-ಧಾರವಾಡ ನಡುವೆ ಇರುವ ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಿ ಈಚೆಗೆ ರೈಲ್ವೆ ಮಂಡಳಿ ಆದೇಶ ಹೊರಡಿಸಿತ್ತು. ಈ ರೈಲಿನ ಎಲ್ಲ ಬೋಗಿಗಳು ಸಂಪೂರ್ಣವಾಗಿ ಹವಾನಿಯಂತ್ರಿತ ಸೌಲಭ್ಯಹೊಂದಿವೆ. ಸುಸಜ್ಜಿತ ಆಸನಗಳು ಸೇರಿದಂತೆ ಹೈಟೆಕ್‌ ಸೌಲಭ್ಯ ಹೊಂದಿದೆ.

ವಂದೇ ಭಾರತ ರೈಲು ಪ್ರಾಯೋಗಿಕವಾಗಿ ಸಂಚರಿಸಿತು. ಬೆಳಗಾವಿಗೆ ಈ ರೈಲು ಬರುತ್ತಿದ್ದಂತೆಯೇ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ್ದ ಪ್ರಯಾಣಿಕರು ಈ ರೈಲಿನಲ್ಲಿ ಏರಿ ತಮ್ಮ ಮೊಬೈಲ್‌ಗಳಲ್ಲಿ ಸೆಲ್ಫಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ರೈಲಿನ ಬೋಗಿಗಳಲ್ಲಿ ಸಂಚರಿಸಿ ಈ ರೈಲಿನಲ್ಲಿ ಸೌಲಭ್ಯಗಳನ್ನು ವೀಕ್ಷಿಸಿದ ಪ್ರಯಾಣಿಕರು ಪುಳಕಿತಗೊಂಡರು.

ಬರಲಿದೆ ಅತ್ಯಾಧುನಿಕ ಸೌಲಭ್ಯದ ಟಿಕೆಟ್‌ ದರ ಕಡಿಮೆ ಇರುವ ವಂದೇ ಸಾಧಾರಣ್‌ ಎಕ್ಸ್‌ಪ್ರೆಸ್‌

ವಂದೇ ಭಾರತಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರಕಿದ್ದರಿಂದ ಮತ್ತು ವಿಸ್ತರಿಸಲು ಬೆಳಗಾವಿ ಜನಪ್ರತಿನಿಧಿಗಳ ನಿರಂತರವಾಗಿ ಒತ್ತಾಯದ ಬೇಡಿಕೆ ಬಂದಿದ್ದರಿಂದ ದೇಶದ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳನ್ನು ವಿಸ್ತರಿಸಿ ರೈಲ್ವೆ ಬೋರ್ಡ್ ಆದೇಶ ಹೊರಡಿಸಿತ್ತು. ಅದರಲ್ಲಿ ಕರ್ನಾಟಕದ ಬೆಂಗಳೂರು ಬೆಳಗಾವಿಯ ರೈಲು ಕೂಡ ಸೇರಿತ್ತು.

ಬೆಂಗಳೂರು–ಧಾರವಾಡ ಜೂನ್‌ನಲ್ಲಿ ವಂದೇ ಭಾರತ್ ಆರಂಭಿಸಲಾಗಿತ್ತು. ನಿತ್ಯ ಶೇ.93ರಿಂದ ಶೇ.96ರಷ್ಟು ಅಸನಗಳು ಭರ್ತಿಯಾಗುತ್ತಿದ್ದವು. ಬೆಳಗಾವಿಗೆ ವಿಸ್ತರಿಸಬೇಕು ಎಂಬ ಬಹುದಿನಗಳಿಂದ ಬೇಡಿಕೆ ಇತ್ತು. ಕೊನೆಗೂ ಈ ಭಾಗದ ಬೇಡಿಕೆ ಈಡೇರಿದಂತಾಗಿದೆ.

Follow Us:
Download App:
  • android
  • ios