ಅಧಿಕಾರಿಯೊಬ್ಬರಿಗೆ ಭಡ್ತಿ ನೀಡಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ₹1.60 ಕೋಟಿ ಲಂಚ ಪಡೆದಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ₹9 ಕೋಟಿ ಅಕ್ರಮ ಹಣ ವರ್ಗಾವಣೆ ನಡೆದಿದ್ದು, ಹಣ ಸಾಗಿಸಿದ ಕಾರಿನ ಫೋಟೋ ಸಹಿತ ದೂರು ಸಲ್ಲಿಸಿದ್ದಾರೆ.
ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿ ಆಗಿರುವ ಅಧಿಕಾರಿಗೆ ಲಂಚ ಪಡೆದು ಭಡ್ತಿ ನೀಡಲಾಗಿದೆ ಎಂಬ ಗಂಭೀರ ಆರೋಪಗಳು ರಾಜ್ಯ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಈ ಸಂಬಂಧ ದೂರುದಾರ ಸ್ನೇಹಮಯಿ ಕೃಷ್ಣ ಮತ್ತೊಂದು ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ದೂರುದಾರರ ಆರೋಪದ ಪ್ರಕಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಲಂಚ ಸ್ವೀಕರಿಸಿದ್ದಾರೆ. ಮುಡಾ ಮಾಜಿ ಆಯುಕ್ತ ಹಾಗೂ ಹಾಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಬಿ. ನಟೇಶ್ ಅವರಿಗೆ ಭಡ್ತಿ ನೀಡುವ ಸಲುವಾಗಿ ಬರೋಬ್ಬರಿ ರೂ.1.60 ಕೋಟಿ ಲಂಚ ಪಡೆಯಲಾಗಿದೆ ಎಂಬುದು ಪ್ರಮುಖ ಆರೋಪವಾಗಿದೆ.
ಹಣ ಸಾಗಣೆ ಆರೋಪ, ಕಾರಿನ ಫೋಟೋ ಬಿಡುಗಡೆ
ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಹಣವನ್ನು ಸಾಗಣೆ ಮಾಡಿದ ಕಾರಿನ ಫೋಟೋ ಹಾಗೂ ಹಣ ವರ್ಗಾವಣೆ ಸಂದರ್ಭದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವ್ಯಕ್ತಿಗಳ ದೂರವಾಣಿ ಸಂಖ್ಯೆಗಳ ಸಮೇತ ದಾಖಲೆಯನ್ನು ಸ್ನೇಹಮಯಿ ಕೃಷ್ಣ ಬಿಡುಗಡೆ ಮಾಡಿದ್ದಾರೆ. ಈ ಸಂಬಂಧ ಅವರು ಜಾರಿ ನಿರ್ದೇಶನಾಲಯ (ED) ಹಾಗೂ ಆದಾಯ ತೆರಿಗೆ ಇಲಾಖೆಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.
9 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಆರೋಪ
ದೂರುದಾರರ ಹೇಳಿಕೆಯಂತೆ, 09.02.2026ರಂದು ಕೋಟ್ಯಾಂತರ ರೂಪಾಯಿ ಹಣವನ್ನು ಅಕ್ರಮವಾಗಿ ವಹಿವಾಟು ಮಾಡಲಾಗಿದೆ. ಕೆಎ–41 ಸಿ–6723 ಸಂಖ್ಯೆಯ ಇಟಿಯಾಸ್ ಕಾರಿನಲ್ಲಿ ಈ ಹಣ ಸಾಗಿಸಲಾಗಿದೆ . ಬೆಂಗಳೂರಿನಿಂದ ಸುಮಾರು ಐದು ಬ್ಯಾಗುಗಳಲ್ಲಿ 9 ಕೋಟಿ ರೂಪಾಯಿಗೂ ಅಧಿಕ ನಗದು ಹಣವನ್ನು ಮೈಸೂರಿಗೆ ತರಲಾಗಿದೆ. ಈ ಹಣ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ಅದು ಡಿ.ಬಿ. ನಟೇಶ್ ಅವರಿಗೆ ಸೇರಿದ್ದಾಗಿರಬಹುದು ಎಂಬ ಶಂಕೆಯನ್ನು ದೂರುದಾರರು ವ್ಯಕ್ತಪಡಿಸಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೈಸೂರಿನಲ್ಲಿ ಹಣ ವರ್ಗಾವಣೆ ನಡೆದ ಸ್ಥಳಗಳ ವಿವರ
ಮೈಸೂರಿನ ಹೆಬ್ಬಾಳು ಬಡಾವಣೆ, ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಣ ವರ್ಗಾವಣೆ ನಡೆದಿದೆ. ಪಟಾಕಿ ಮಾರಾಟ ಮಾಡುವ ರಸ್ತೆಯಲ್ಲಿರುವ ಗ್ಯಾಸ್ ಬಂಕ್ ಬಳಿ, ಮಧ್ಯಾಹ್ನ ಸುಮಾರು 1.00 ರಿಂದ 2.00 ಗಂಟೆಯ ನಡುವೆ, ನಿಖಿಲ್ (ಮೊಬೈಲ್ ಸಂಖ್ಯೆ: 7760938***) ಎಂಬ ವ್ಯಕ್ತಿ ಆಗಮಿಸಿ, ಇಟಿಯಾಸ್ ಕಾರಿನಿಂದ ನಾಲ್ಕು ಬ್ಯಾಗುಗಳನ್ನು ತಮ್ಮ ಕಾರಿನಲ್ಲಿ ಹಾಕಿಕೊಂಡು ಸ್ಥಳದಿಂದ ತೆರಳಿದ್ದಾರೆ ಎಂದು ಆರೋಪಿಸಲಾಗಿದೆ.
ಉಳಿದ ಒಂದು ಬ್ಯಾಗ್‌ನ್ನು ಹೊತ್ತ ಇಟಿಯಾಸ್ ಕಾರು ಮೈಸೂರಿನ ಹಳೆಯ ಕೋರ್ಟ್ ಸಮೀಪದ ಆರ್.ಟಿ.ಒ. ಕಚೇರಿ ಬಳಿ ಹೋಗಿದ್ದು, ನಂತರ ಆ ಪ್ರದೇಶದ ಜಸ್ವಂತ್ (ಮೊಬೈಲ್ ಸಂಖ್ಯೆ: 9901330***) ಎಂಬುವವರ ಮನೆ ಸಮೀಪಕ್ಕೆ ತೆರಳಿ, ಅಲ್ಲಿ ಒಂದು ಬ್ಯಾಗ್ ಇಳಿಸಲಾಗಿದೆ ಎಂಬ ಮಾಹಿತಿ ದೂರಿನಲ್ಲಿ ಇದೆ.
1.60 ಕೋಟಿ ಲಂಚ ಆರೋಪ, ಉಳಿದ ಹಣದ ಬಗ್ಗೆ ಅನುಮಾನ
ಈ ಐದು ಬ್ಯಾಗುಗಳಲ್ಲಿ ಒಟ್ಟು 9 ಕೋಟಿ ರೂಪಾಯಿಗೂ ಅಧಿಕ ಹಣ ಇದ್ದು, ಅದರಲ್ಲಿ ರೂ.1 ಕೋಟಿ 60 ಲಕ್ಷ ಹಣವನ್ನು ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಕಡೆಯವರಿಗೆ ನೀಡಲಾಗಿದೆ ಎಂಬ ಆರೋಪವನ್ನು ಸ್ನೇಹಮಯಿ ಕೃಷ್ಣ ಮಾಡಿದ್ದಾರೆ. ಉಳಿದ ಹಣ ಎಲ್ಲಿಗೆ ಹೋಯಿತು ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ನಿಖಿಲ್ ಮತ್ತು ಜಸ್ವಂತ್ ಬೇನಾಮಿ ದೂರುದಾರರ ಹೇಳಿಕೆ
ನಿಖಿಲ್ ಮತ್ತು ಜಸ್ವಂತ್ ಇಬ್ಬರೂ ಡಿ.ಬಿ. ನಟೇಶ್ ಅವರ ಬೇನಾಮಿ ವ್ಯಕ್ತಿಗಳು ಎಂದು ದೂರುದಾರರು ಆರೋಪಿಸಿದ್ದಾರೆ. ಹಣ ವರ್ಗಾವಣೆ ನಡೆಯುತ್ತಿದ್ದ ದಿನವೇ ಪೊಲೀಸರಿಗೆ ಮಾಹಿತಿ ನೀಡಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಅಸಮಾಧಾನವನ್ನು ಅವರು ವ್ಯಕ್ತಪಡಿಸಿದ್ದಾರೆ.
ಎರಡು ದಿನವಾದರೂ ಸ್ಪಷ್ಟನೆ ಇಲ್ಲ: ಸ್ನೇಹಮಯಿ ಕೃಷ್ಣ
ನಾನು ಈ ಗಂಭೀರ ಆರೋಪ ಮಾಡಿ ಎರಡು ದಿನ ಕಳೆದರೂ, ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಇದರಿಂದಲೇ ಲಂಚ ಪಡೆದು ಭಡ್ತಿ ನೀಡಲಾಗಿದೆ ಎಂಬ ಅನುಮಾನ ಮತ್ತಷ್ಟು ಬಲವಾಗುತ್ತದೆ” ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಈಗಾಗಲೇ ಐಟಿ ಮತ್ತು ಇಡಿ ಇಲಾಖೆಗೆ ದೂರು ನೀಡಿರುವುದಾಗಿ ತಿಳಿಸಿರುವ ಅವರು, 7 ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಎಲ್ಲ ಆರೋಪಗಳನ್ನು ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.


