ರಾಜ್ಯ ಸರ್ಕಾರವು ಸ್ವದೇಶಿ ಪ್ರೇಮ ಉತ್ತೇಜಿಸಲು, ಪ್ರತಿ ತಿಂಗಳ ಮೊದಲ ಶನಿವಾರದಂದು ಸರ್ಕಾರಿ ನೌಕರರಿಗೆ ಖಾದಿ ಉಡುಪು ಧರಿಸುವುದು ಕಡ್ಡಾಯ. ಈ ಯೋಜನೆಯಡಿ ನೌಕರರಿಗೆ ಖಾದಿ ಖರೀದಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದ್ದು, ಸೇನಾ ಮಾದರಿಯಲ್ಲಿ 'ಸರ್ಕಾರಿ ನೌಕರರ ಕ್ಯಾಂಟೀನ್' ಸ್ಥಾಪಿಸುವ ಚಿಂತನೆಯೂ ಇದೆ.
ಬೆಂಗಳೂರು (ಜ.29): ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರಲ್ಲಿ ಸ್ವದೇಶಿ ಪ್ರೇಮ ಹಾಗೂ ಖಾದಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಪ್ರತಿ ತಿಂಗಳ ಮೊದಲ ಶನಿವಾರದಂದು ಎಲ್ಲಾ ಸರ್ಕಾರಿ ನೌಕರರು ಕಡ್ಡಾಯವಾಗಿ ಖಾದಿ ಉಡುಪು ಧರಿಸುವಂತೆ ಸೂಚನೆ ನೀಡಲಾಗಿದೆ. ಈ ನಿಯಮವು ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ, ಪ್ರಾಧಿಕಾರ ಮತ್ತು ಅನುದಾನಿತ ಸಂಸ್ಥೆಗಳಿಗೂ ಅನ್ವಯಿಸಲಿದೆ.
ಖಾದಿ ಖರೀದಿಗೆ ಬಂಪರ್ ರಿಯಾಯಿತಿ
ನೌಕರರು ಸರ್ಕಾರಿ ಸ್ವಾಮ್ಯದ ಖಾದಿ ಗ್ರಾಮೋದ್ಯೋಗ ಮಳಿಗೆಗಳಲ್ಲಿಯೇ ಬಟ್ಟೆಗಳನ್ನು ಖರೀದಿಸಬೇಕು ಎಂದು ತಿಳಿಸಲಾಗಿದೆ. ನೌಕರರನ್ನು ಪ್ರೋತ್ಸಾಹಿಸಲು ಖಾದಿ ಗ್ರಾಮೋದ್ಯೋಗ ಮಂಡಳಿಯು ಪ್ರಸ್ತುತ ನೀಡುತ್ತಿರುವ ರಿಯಾಯಿತಿಯ ಜೊತೆಗೆ ಹೆಚ್ಚುವರಿಯಾಗಿ ಶೇ. 5% ವಿಶೇಷ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ಇದರಿಂದಾಗಿ ನೌಕರರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಖಾದಿ ಬಟ್ಟೆಗಳು ಸಿಗಲಿವೆ.
ಪುರುಷರು-ಮಹಿಳೆಯರಿಗೆ ಡ್ರೆಸ್ ಕೋಡ್
ಸಭೆಯಲ್ಲಿ ಉಡುಪಿನ ವಿನ್ಯಾಸದ ಬಗ್ಗೆಯೂ ಸ್ಪಷ್ಟನೆ ನೀಡಲಾಗಿದೆ. ಪುರುಷ ನೌಕರರು ಖಾದಿ ಶರ್ಟ್-ಪ್ಯಾಂಟ್ ಅಥವಾ ಓವರ್ ಕೋಟ್ ಧರಿಸಬೇಕು. ಮಹಿಳಾ ನೌಕರರಿಗೆ ಖಾದಿ ಅಥವಾ ಖಾದಿ ಸಿಲ್ಕ್ ಸೀರೆ ಅಥವಾ ಚೂಡಿದಾರ್ ಧರಿಸಲು ಸೂಚಿಸಲಾಗಿದೆ. ಶಿಸ್ತಿನ ಹಾಗೂ ಸಾಂಪ್ರದಾಯಿಕ ಉಡುಗೆಯ ಮೂಲಕ ಕಚೇರಿಗಳಲ್ಲಿ ಹೊಸ ಸಂಚಲನ ಮೂಡಿಸಲು ಸರ್ಕಾರ ಮುಂದಾಗಿದೆ.
ಏಪ್ರಿಲ್ 21ರಿಂದ ಯೋಜನೆಗೆ ಅಧಿಕೃತ ಚಾಲನೆ
ಈ ನೂತನ ಯೋಜನೆಯನ್ನು 2026ರ ಏಪ್ರಿಲ್ 21ರಂದು ಅಂದರೆ 'ಸರ್ಕಾರಿ ನೌಕರರ ದಿನಾಚರಣೆ'ಯಂದು ಅಧಿಕೃತವಾಗಿ ಚಾಲನೆ ನೀಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಸುತ್ತೋಲೆ ಹೊರಬೀಳಲಿದ್ದು, ಅಂದಿನಿಂದಲೇ ರಾಜ್ಯಾದ್ಯಂತ ಎಲ್ಲಾ ಕಚೇರಿಗಳಲ್ಲಿ ಖಾದಿ ಕಳೆ ಕಟ್ಟುವುದು ಖಚಿತವಾಗಿದೆ.
ಸೇನಾ ಮಾದರಿಯಲ್ಲಿ 'ಸರ್ಕಾರಿ ನೌಕರರ ಕ್ಯಾಂಟೀನ್'
ಖಾದಿ ಉಡುಪಿನ ಜೊತೆಗೆ ನೌಕರರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ಸರ್ಕಾರ ನೀಡಿದೆ. ಎಂಎಸ್ಐಎಲ್. (MSIL) ಮೂಲಕ ಸೇನಾ ಕ್ಯಾಂಟೀನ್ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗಾಗಿ 'ಸರ್ಕಾರಿ ನೌಕರರ ಕ್ಯಾಂಟೀನ್' ಆರಂಭಿಸಲು ಚಿಂತನೆ ನಡೆಸಲಾಗಿದೆ. 2026-27ನೇ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿ, ದಿನಬಳಕೆ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪೂರೈಸಲು ಉದ್ದೇಶಿಸಲಾಗಿದೆ.


