ರಾಯಚೂರಿನ ಮಂಗಳಮುಖಿಯರು ಭಿಕ್ಷಾಟನೆ ಮಾಡಿದ ಹಣದಿಂದ ಬಡ ಜೋಡಿಗಳಿಗೆ ಐದು ವರ್ಷಗಳಿಂದ ಮದುವೆ ಮಾಡಿಸುತ್ತಿದ್ದಾರೆ. ಈ ವರ್ಷ ಐದು ನವಜೋಡಿಗಳಿಗೆ ವಿವಾಹ ಮಾಡಿಸಿದ್ದು, ವಧು-ವರರಿಗೆ ಅಗತ್ಯ ವಸ್ತುಗಳನ್ನು ಒದಗಿಸಿ, ಭರ್ಜರಿ ಭೋಜನ ವ್ಯವಸ್ಥೆ ಮಾಡಿದ್ದಾರೆ.

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಫೆ.8): ಮಂಗಳಮುಖಿಯರು ಅಂದ್ರೆ ಭಿಕ್ಷೆ ಬೇಡ್ತಾರೆ, ಜನರನ್ನ ಹೆದರಿಸಿ, ಬೆದರಿಸಿ ಹಣ ವಸೂಲಿ ಮಾಡ್ತಾರೆ ಅನ್ನೋ ಆರೋಪವಿದೆ. ಆದ್ರೆ ಇದೆಲ್ಲವನ್ನೂ ಮೀರಿ ರಾಯಚೂರಿನಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಮಂಗಳಮುಖಿಯರು ಬಡ ವಧು-ವರ ಜೋಡಿಯ ಮದುವೆ ಮಾಡಿಸಿ ಸಾಮಾಜಿಕ ಕಾಳಜಿಯನ್ನು ಮರೆದಿದ್ದಾರೆ.

ಮಂಗಳಮುಖಿಯರು ಅಂದ್ರೆ ಈ ಸಮಾಜ ನೋಡುವ ದೃಷ್ಡಿಕೋನವೇ ಬೇರೆ. ಹೆಚ್ಚಾಗಿ ಭೀಕ್ಷಾಟನೆ ಮಾಡ್ತಾರೆ, ದುಡ್ಡು ಕೊಡದೇ ಇದ್ರೆ ಹಲ್ಲೆ ಮಾಡ್ತಾರೆ, ದೌರ್ಜನ್ಯ ಮಾಡ್ತಾರೆ ಅನ್ನೋ ಮನಸ್ಥಿತಿ ಹಾಗೂ ಆರೋಪಗಳು ಎಲ್ಲೆಡೆಯಿವೆ. ಆದ್ರೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿರುವ ಮಂಗಳಮುಖಿಯರು ಮಾತ್ರ ಇದೆಲ್ಲಕ್ಕೂ ವಿಭಿನ್ನವಾಗಿದ್ದಾರೆ. ನಿತ್ಯವೂ ರಸ್ತೆಗಳಲ್ಲಿ ನಿಂತು, ಅಂಗಡಿಯ ಮುಂದೆ ಹೋಗಿ ಭೀಕ್ಷೆ ಬೇಡಿ ತಂದ ಹಣ ಸಂಗ್ರಹಿಸಿಟ್ಟು, ಬಡ ಜೋಡಿಯ ಮದುವೆ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಂಗಳ ಮುಖಿಯರ ಗುರುಮಾತೆ ಗುರು ಜಮುನಾ ನೇತೃತ್ವದಲ್ಲಿ ಮದುವೆ ನಡೆದಿವೆ. 

ಇದನ್ನೂ ಓದಿ: Motivation: ಕಷ್ಟದ ಜೀವನಕ್ಕೆ ಹೆದರಿದ್ದೀರಾ? ಈಕೆಯ ಬದುಕು ನೋಡಿ, ಮತ್ತೆಂದಿಗೂ ಹೆದರುವುದಿಲ್ಲ!

ಭಿಕ್ಷಾಟನೆ ಮಾಡಿದ ದುಡ್ಡಿನಲ್ಲಿ ವಿವಾಹ ಸಮಾರಂಭ:

ಮಂಗಳಮುಖಿಯರು ಭಿಕ್ಷಾಟನೆ ಮಾಡುತ್ತಾ ಬಂದ ಹಣದಲ್ಲಿ‌ ಯಾರೊಬ್ಬರ ಸಹಾಯ ಪಡೆಯದೆ ಕಳೆದ ಐದು ವರ್ಷಗಳಿಂದ ಬಡವರಿಗೆ ಮದುವೆ ಮಾಡಿಸುತ್ತಿದ್ದಾರೆ. ಈ ವರ್ಷ ಐದು ನವಜೋಡಿಗಳಿಗೆ ವಿವಾಹ ಮಾಡಿದ್ದಾರೆ. ಅಷ್ಟೇ ಅಲ್ಲದೇ ಜನರು ಸಹಕಾರ ಕೊಟ್ಟರೆ ಮುಂದಿನ ದಿನಗಳಲ್ಲಿ ಹೆಚ್ಚು ಮದುವೆ ಮಾಡಿಸುವ ಅಭಿಲಾಷೆ ಹೊಂದಿದ್ದಾರೆ ಈ ಮಂಗಳಮುಖಿಯರು.

ವಧು- ವರರ ಸಂಬಂಧಿಕರಿಗೆ ಭರ್ಜರಿ ಭೋಜನೆ ವ್ಯವಸ್ಥೆ:

ರಾಯಚೂರು ಜಿಲ್ಲೆ ಸಿಂಧನೂರಿನ ಇಜೆ ಹೊಸಳ್ಳಿಯ ದುರ್ಗಾದೇವಿ ದೇವಸ್ಥಾನದಲ್ಲಿ ಮದುವೆ ಮಾಡಿಸಲಾಗಿದ್ದು, ವಧು ವರರ ಕುಟುಂಬಸ್ಥರು ಭರ್ಜರಿ ಭೋಜನ ಸವಿದು, ನೂತನ ದಂಪತಿಗಳಿಗೆ ಆಶೀರ್ವದಿಸಿದ್ದಾರೆ. ಇಡೀ ಮದುವೆಯ ಖರ್ಚನ್ನ ಮಂಗಳಮುಖಿಯರೇ ತಾವೇ ಹೊತ್ತುಕೊಂಡಿದ್ದರು. ಮಂಗಳಮುಖಿಯರು ಯಾವುದೇ ಕೊರತೆಯಾಗದಂತೆ ಅದ್ದೂರಿಯಾಗಿ ಮದುವೆ ಮಾಡಿಸಿದ್ದಾರೆ. ವಧುವಿಗೆ ತಾಳಿ, ಕಾಲುಂಗರ ಸೇರಿದಂತೆ ವಧು, ವರನ ವಸ್ತ್ರಗಳನ್ನ ತಾವೇ ಕೊಡಿಸಿ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. 

ಇದನ್ನೂ ಓದಿ: ಮಂಗಳಮುಖಿಯರು ನೀಡಿದ ಹಣ ಏನು ಮಾಡಬೇಕು? ನಾಣ್ಯ ಬಾಯಲ್ಲಿ ಕಚ್ಚಿ ಕೊಡೋದ್ಯಾಕೆ?

 ಪ್ರತೀ ವರ್ಷವೂ ಕಡು ಬಡವರನ್ನ ಹುಡುಕಿ ಮದುವೆ ಮಾಡಿಸುವ ಸಂಪ್ರದಾಯ ಹೊತ್ತಿರುವ ಈ ಮಂಗಳಮುಖಿಯರು ಮಹಾತ್ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮತ್ತೊಂದು ಕಡೆ ಜೀವನ ಇಡೀ ಅವಮಾನ ಅನುಭಿಸುತ್ತಾ ಬಂದ ಮಂಗಳಮುಖಿಯರು, ಹುಟ್ಟುವಾಗ ಗಂಡಾಗಿ ಹುಟ್ಟಿ, ಹೆಣ್ಣಾಗಿ ಬದಲಾದ ಮಂಗಳಮುಖಿಯರನ್ನ ಕಂಡ್ರೆ ಕೆಲ ಜನರಿಗೆ ಈಗಲೂ ತಾತ್ಸಾರ ಮನೋಭಾವ ಇದೆ. ಹೀಗಾಗೇ ಇತ್ತೀಚೆಗೆ ಕೆಲ ಮಂಗಳಮುಖಿಯರು ಸ್ವಾವಲಂಭಿ ಜೀವನ ನಡೆಸಲು ಮುಂದಾಗುತ್ತಿದ್ದಾರೆ. ಎಲ್ಲದರ ನಡುವೆ ಅವಮಾನ, ಅಪಮಾನಗಳನ್ನ ಮೆಟ್ಟಿ ನಿಂತು ಬಡವರ ಮದುವೆಗೆ ತಮ್ಮ ಹಣ ಬಳಸಿ ಸಾಮಾಜಿಕ ಜವಾಬ್ದಾರಿಯನ್ನ ಮೆರೆದಿದ್ದಾರೆ. ಇವರ ಈ ಕಾರ್ಯ ಹೀಗೆ ಸಾಗಲಿ ಎಂಬುವುದು ಎಲ್ಲರ ಆಶಯವಾಗಿದೆ.