Cartier ವಾಚ್ ಕಟ್ಟಿ ಒಗ್ಗಟ್ಟು ಪ್ರದರ್ಶಿಸಿದ್ರಾ ಸಿಎಂ-ಡಿಸಿಎಂ? ಕಂಪನಿ ಪ್ರಕಾರ ಇದ್ರ ಬೆಲೆ 43 ಲಕ್ಷ ರೂ, ಬ್ರೇಕ್ ಫಾಸ್ಟ್ ಮೀಟಿಂಗ್ ವೇಳೆ ಉಭಯ ನಾಯಕರು ಒಂದೇ ರೀತಿ ವಾಚ್ ಕಟ್ಟಿ ಮಾಧ್ಯಮ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಆದರೆ ಇದೀಗ ಇದರ ಬೆಲೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು (ಡಿ.02) ಕರ್ನಾಟಕ ರಾಜಕಾರಣದಲ್ಲಿ ಕಳೆದ ಕೆಲ ತಿಂಗಳಿಂದ ನಡೆಯುತ್ತಿರುವ ಅಧಿಕಾರ ಬದಲಾವಣೆ ಜಗ್ಗಾಟಕ್ಕೆ ತಾತ್ಕಾಲಿಕ ಬ್ರೇಕ್ ಹಾಕುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಹೈಕಮಾಂಡ್ ಸೂಚನೆ ಹಿನ್ನಲೆಯಲ್ಲಿ ಉಭಯ ನಾಯಕರ ಎರಡನೇ ಬ್ರೇಕ್ ಫಾಸ್ಟ್ ಮೀಟಿಂಗ್ ಯಶಸ್ವಿಯಾಗಿದೆ. ಆದರೆ ಇದೇ ವೇಳೆ ವಾಚ್ ಚರ್ಚೆಯೊಂದು ಹುಟ್ಟಿಕೊಂಡಿದೆ. ಒಗ್ಗಟ್ಟು ಪ್ರದರ್ಶಿಸಲು ಇಬ್ಬರು ನಾಯಕರು ಸೇಮ್ ಟು ಸೇಮ್ ವಾಚ್ ಕಟ್ಟಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಕಾರಣ ಇಂದಿನ ಬ್ರೇಕ್ ಫಾಸ್ಟ್ ಮೀಟಿಂಗ್ ವೇಳೆ ಇಬ್ಬರು ನಾಯಕರು ಕಾರ್ಟಿಯರ್ (cartier) ಬ್ರ್ಯಾಂಡ್ ವಾಚ್ ಕಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಧ್ಯಮಗಳ ಕ್ಯಾಮೆರಾದಲ್ಲಿ ಇಬ್ಬರ ವಾಚ್ ಒಂದೇ ರೀತಿ ಹಾಗೂ ಬ್ರ್ಯಾಂಡ್ ಕೂಡ ಗೋಚರಿಸುತ್ತಿದೆ. ಆದರೆ ಪ್ರಶ್ನೆ ಇದಲ್ಲ, ಇದರ ಬೆಲೆ, ಈ ವಾಚ್ ಬೆಲೆ ಕಂಪನಿ ವೆಬ್‌ಸೈಟ್‌ನಲ್ಲಿ ಬರೋಬ್ಬರಿ 43 ಲಕ್ಷ ರೂಪಾಯಿ ಎಂದು ಹೇಳುತ್ತಿದೆ.

ಹ್ಯೂಬ್ಲೋಟ್ ವಾಚ್ ಬಳಿಕ ಇದೀಗ ಕಾರ್ಟಿಯರ್

2016ರಲ್ಲಿ ಸಿದ್ದರಾಮಯ್ಯ ಸುತ್ತು ಹ್ಯೂಬ್ಲೋಟ್ ವಾಚ್ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಇದೀಗ ಕಾರ್ಟಿಯರ್ ವಾಚ್ ಚರ್ಚೆಗಳು ಶುರುವಾಗಿದೆ. ಈ ಬಾರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರು ಒಂದೇ ಬ್ರ್ಯಾಂಡ್‌ನ ವಾಚ್ ಕಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಈ ವಾಚ್ ಬೆಲೆಗಳು ಮುನ್ನಲೆಗೆ ಬಂದಿದೆ. ಕಾರ್ಟಿಯರ್ ಕಂಪನಿ ವೆಬ್‌ಸೈಟ್ ಪ್ರಕಾರ ಈ ವಾಚ್ ಬೆಲೆ 43,20,000 ರೂಪಾಯಿ. ಉಭಯ ನಾಯಕರು ಇದೇ ಬ್ರ್ಯಾಂಡ್ ಸೇಮ್ ವಾಚ್ ಕಟ್ಟಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ ಎಂದು ವರದಿಯಾಗಿದೆ.

ಏನಿದರೆ ವಿಶೇಷತೆ?

ಕಾರ್ಟಿಯರ್ ವೆಬ್‌ಸೈಟ್‌ನಲ್ಲಿ ವಾಚ್ ಕುರಿತ ವಿವರಣೆ ನೀಡಲಾಗಿದೆ. ಸ್ಯಾಂಟೋಸ್ ಡೇ ಕಾರ್ಟಿಯರ್ ವಾಚ್ ಎಡಿಶನ್ ಇದಾಗಿದೆ. ಈ ವಾಚ್‌ನಲ್ಲಿ ಹಲವು ವಿಶೇಷತೆಗಳಿವೆ. ಕಾರಣ ಈ ವಾಚ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಬಳಕೆ ಮಾಡಲಾಗಿದೆ. ಇದರ ಡೈಯಲ್, ಚೈನ್ ಸೇರಿದಂತೆ ಬಹುತೇಕ ಭಾಗದಲ್ಲಿ 750/1000 ಕೇಸ್ ಚಿನ್ನ ಬಳಕೆ ಮಾಡಲಾಗಿದೆ. ಇನ್ನು ಬೆಳ್ಳಿ ಒಪಾನಲೈನ್ ಡೈಯಲ್ ಬಳಕೆ ಮಾಡಲಾಗಿದೆ. ಇದರ 7 ಸೈಡೆಡ್ ಕ್ರೌನ್‌ನಲ್ಲಿ ರೋಸ್ ಗೋಲ್ಡ್ ಬಳಕೆ ಮಾಡಲಾಗಿದೆ. ಈ ವಾಚ್‌ಗೆ 8 ವರ್ಷದ ವಾರೆಂಟಿ ನೀಡಲಾಗುತ್ತದೆ. ಈ ವಾರೆಂಟಿ ಸಮಯದಲ್ಲಿ ವಾಚ್, ಚೈನ್, ಡೈಯಲ್, ಟೈಮ್‌ನಲ್ಲಿ ಸಣ್ಣ ವ್ಯತ್ಯಾಸವಾದರೂ ರಿಪ್ಲೇಸ್ ಮಾಡಲಾಗುತ್ತದೆ. ಇದಾದ ಬಳಿಕ ಪ್ರತಿ ಸರ್ವೀಸ್ ಕೂಡ ಕಾಂಪ್ಲಿಮೆಂಟರಿ ಆಗಿರುತ್ತದೆ. ಪರಿಣಿತ ಹಾಗೂ ಕೌಶಲ್ಯ ಭರಿತ ತಂಡ ಈ ವಾಚ್ ತಯಾರಿಸುತ್ತದೆ. ಕಾರ್ಟಿಯರ್ ಅತ್ಯಂತ ಲಕ್ಷುರಿ ವಾಚ್ ಬ್ರ್ಯಾಂಡ್ ಆಗಿದೆ. ಶ್ರೀಮಂತರು, ಉದ್ಯಮಿಗಳು, ರಾಜಕಾರಣಿಗಳು, ಸೆಲೆಬ್ರೆಟಿಗಳು ಈ ಬ್ರ್ಯಾಂಡ್ ಬಳಕೆ ಮಾಡುತ್ತಾರೆ. ಹಾಲಿವುಡ್, ಬಾಲಿವುಡ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಈ ವಾಚ್ ಬಳಕೆ ಮಾಡುತ್ತಾರೆ. ವಿಶೇಷವಾಗಿ ಬ್ರಿಟಿಷ್ ರಾಯಲ್ ಫ್ಯಾಮಿಲಿ ಹೆಚ್ಚಾಗಿ ಈ ವಾಚ್ ಬಳಕೆ ಮಾಡುತ್ತದೆ.ಈ ಪೈಕಿ ಪ್ರಿನ್ಸ್ ಡಯಾನ ಬಳಿ ಕಾರ್ಟಿಯರ್‌ ಬ್ರ್ಯಾಂಡ್ ಬಹುತೇಕ ಎಲ್ಲಾ ಮಾಡೆಲ್ ವಾಚ್‌ಗಳಿತ್ತು.

ಹ್ಯೂಬ್ಲೋಟ್ ವಾಚ್ ವಿವಾದ

2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟಿದ್ದ ಹ್ಯೂಬ್ಲೋಟ್ ವಾಚ್ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಸಿದ್ದರಾಮಯ್ಯಗೆ ಉಡುಗೊರೆಯಾಗಿ ಬಂದಿದ್ದ ಹ್ಯೂಬ್ಲೂಟ್ ವಾಚ್ ಬೆಲೆ ಸರಿಸುಮಾರು 70 ಲಕ್ಷ ರರೂಪಾಯಿ ಎಂದು ವರದಿಯಾಗಿತ್ತು. ಈ ಪ್ರಕರಣ ಕುರಿತು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ತನಿಖೆ ನಡೆಸಿತ್ತು.