ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ಫಾಸ್ಟ್ ಟ್ರ್ಯಾಕ್ ಕೋರ್ಟ್ ವಿಚಾರಣೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಯಡಿಯೂರಪ್ಪ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು (ಡಿ.02): ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೋ (POCSO) ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಮಂಗಳವಾರ ಬೆಂಗಳೂರಿನ ಒಂದನೇ ಫಾಸ್ಟ್ ಟ್ರ್ಯಾಕ್ ಕೋರ್ಟ್‌ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿ, ತ್ವರಿತಗತಿ ನ್ಯಾಯಾಲಯದ ಪ್ರಕ್ರಿಯೆಗೆ ತಡೆ ನೀಡಿದೆ ಎನ್ನಲಾಗಿದೆ.
ಪೋಕ್ಸೋ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಈ ಪ್ರಕರಣದ ವಿಚಾರಣೆಯನ್ನು ಇಂದು ಫಾಸ್ಟ್ ಟ್ರ್ಯಾಕ್ ಕೋರ್ಟ್‌ನಲ್ಲಿ ಕೈಗೆತ್ತಿಕೊಳ್ಳಲಾಯಿತು. ನ್ಯಾಯಾಲಯದ ವಿಚಾರಣೆಗೆ ಬಿ.ಎಸ್. ಯಡಿಯೂರಪ್ಪ ಗೈರಾಗಿದ್ದರು. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ, ಅರುಣ, ಮರಿಸ್ವಾಮಿ ಮತ್ತು ರುದ್ರೇಶ್ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾದ ಎಲ್ಲರಿಗೂ ಕೋರ್ಟ್ ಈ ಹಿಂದೆ ಟ್ರಯಲ್ ಆರಂಭಿಸಲು ಸಮನ್ಸ್ ಜಾರಿ ಮಾಡಿತ್ತು. ಆದರೆ, ಇವರಾರೂ ನ್ಯಾಯಾಲಯಕ್ಕೆ ಹಾಜರಾಗದೆ, ಹಾಜರಾತಿಯಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್‌ನಿಂದ ತಡೆ:
ಯಡಿಯೂರಪ್ಪ ಪರವಾಗಿ ಹಿರಿಯ ವಕೀಲರಾದ ಸಿ.ವಿ. ನಾಗೇಶ್ ಅವರು ನ್ಯಾಯಾಲಯದಲ್ಲಿ ಹಾಜರಿದ್ದರು. ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ, ವಕೀಲ ಸಿ.ವಿ. ನಾಗೇಶ್ ಅವರು, ತಮ್ಮ ಕಕ್ಷಿದಾರರಿಗೆ ಸುಪ್ರೀಂ ಕೋರ್ಟ್‌ನಲ್ಲಿ ತಡೆ ಸಿಕ್ಕಿರುವುದಾಗಿ ನ್ಯಾಯಾಲಯದ ಗಮನಕ್ಕೆ ತಂದರು. ನ್ಯಾಯಾಲಯದ ಪ್ರಕ್ರಿಯೆಗೆ ತಡೆ ಸಿಕ್ಕಿದೆ ಎಂಬ ಮಾಹಿತಿ ಪಡೆದ ನ್ಯಾಯಾಧೀಶರು, ಈ ಕುರಿತು ಸೂಕ್ತ ದಾಖಲೆಗಳನ್ನು ನೀಡುವಂತೆ ಯಡಿಯೂರಪ್ಪ ಪರ ವಕೀಲರಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, 'ಈಗಷ್ಟೇ ನಮಗೆ ಮಾಹಿತಿ ಸಿಕ್ಕಿದೆ, ದಾಖಲೆಗಳ ಪ್ರತಿಯನ್ನು ಶೀಘ್ರದಲ್ಲಿಯೇ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು' ಎಂದು ತಿಳಿಸಿದರು.
ಇದೇ ವೇಳೆ, ಯಡಿಯೂರಪ್ಪ ಪರವಾಗಿ ಸಲ್ಲಿಸಲಾದ ವಿನಾಯಿತಿ ಅರ್ಜಿ ಮತ್ತು ಸುಪ್ರೀಂ ಕೋರ್ಟ್‌ನ ತಡೆ ಆದೇಶದ ಕುರಿತು ವಿಶೇಷ ಸರ್ಕಾರಿ ಅಭಿಯೋಜಕರು (SPP) ಅಶೋಕ್ ನಾಯಕ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿನಾಯಿತಿ ಅರ್ಜಿಯ ವಿಚಾರವಾಗಿ ಮತ್ತು ಸುಪ್ರೀಂ ಕೋರ್ಟ್‌ನ ಆದೇಶದ ಅಧಿಕೃತ ಪ್ರತಿ ಹಾಜರಾದ ನಂತರದ ಪ್ರಕ್ರಿಯೆಗಳ ಬಗ್ಗೆ ನ್ಯಾಯಾಲಯವು ಮಧ್ಯಾಹ್ನ 2:45 ಕ್ಕೆ ತನ್ನ ನಿರ್ಧಾರವನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್
ತಮ್ಮ ವಿರುದ್ಧದ ಸಮನ್ಸ್ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ್ದ ಆದೇಶವನ್ನು ಪ್ರಶ್ನಿಸಿ ಬಿ.ಎಸ್. ಯಡಿಯೂರಪ್ಪ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸದ್ಯ ಸುಪ್ರೀಂ ಕೋರ್ಟ್‌ನಿಂದ ತಾತ್ಕಾಲಿಕವಾಗಿ ತಡೆಯಾಜ್ಞೆ ಸಿಕ್ಕಿರುವುದು ಯಡಿಯೂರಪ್ಪ ಅವರಿಗೆ ಕೊಂಚ ನಿರಾಳತೆ ನೀಡಿದೆ. ಸುಪ್ರೀಂ ಕೋರ್ಟ್‌ನ ಅಧಿಕೃತ ಆದೇಶದ ಪ್ರತಿ ನ್ಯಾಯಾಲಯಕ್ಕೆ ತಲುಪಿದ ನಂತರವೇ ಫಾಸ್ಟ್ ಟ್ರ್ಯಾಕ್ ಕೋರ್ಟ್‌ನ ಮುಂದಿನ ಪ್ರಕ್ರಿಯೆಗಳು ನಿರ್ಧಾರವಾಗಲಿವೆ.


