ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಮತ್ತು ತಮ್ಮ ನಡುವೆ ಬಣ ರಾಜಕೀಯ ಇಲ್ಲ. ನಾವಿಬ್ಬರೂ 'ಬ್ರದರ್ಸ್' ನಂತೆ ಸೌಹಾರ್ದಯುತವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು. 'ಬ್ರೇಕ್‌ಫಾಸ್ಟ್ ಮೀಟಿಂಗ್' ಕುರಿತ ಗುಂಪುಗಾರಿಕೆಯ ವರದಿಗಳನ್ನು ತಳ್ಳಿಹಾಕಿದರು.
ಬೆಂಗಳೂರು (ಡಿ.01): ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಬಣ ರಾಜಕೀಯವಾಗಲಿ, ಗುಂಪುಗಾರಿಕೆಯಾಗಲಿ ಇಲ್ಲ. ನಾವು ಇಬ್ಬರೂ 'ಬ್ರದರ್ಸ್' ಥರ ಸೌಹಾರ್ದಯುತವಾಗಿ ಒಟ್ಟಿಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸಚಿವ ಸಂಪುಟದ 'ಬ್ರೇಕ್‌ಫಾಸ್ಟ್ ಮೀಟಿಂಗ್' ಮತ್ತು ಆಡಳಿತದಲ್ಲಿ ಗುಂಪುಗಾರಿಕೆ ಇದೆ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಈ ಮೂಲಕ ತೆರೆ ಎಳೆದರು.
ವಿಧಾನಸೌಧದಲ್ಲಿ ಸೋಮವಾರ ನಡೆದ ಕೆಂಗಲ್ ಹನುಮಂತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿಧಾನಸೌಧ ಕಟ್ಟಿದ ಹನುಮಂತಯ್ಯ, ವಿಕಾಸಸೌಧ ಕಟ್ಟಿದ ಎಸ್.ಎಂ. ಕೃಷ್ಣ ಹಾಗೂ ಬೆಂಗಳೂರು ನಗರವನ್ನು ಕೆಂಪೇಗೌಡರು ಕಟ್ಟಿದ್ದಾರೆ. ಯಾರಿಗೇ ಆಗಲೀ ಅಧಿಕಾರ ಸಿಕ್ಕಿದಾಗ ಇವರೆಲ್ಲ ಸಾಕ್ಷಿಗಳನ್ನು ಬಿಟ್ಟು ಹೋಗಿದ್ದಾರೆ. ನಾವೂ ಕೂಡ ಅದೇ ದಿಕ್ಕಿನಲ್ಲಿ ಕೆಲಸ ಮಾಡಬೇಕು. ಅಧಿಕಾರ ಸಿಕ್ಕಾಗ ಇಂತಹ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು' ಎಂದು ಹೇಳಿದರು.
ಬ್ರೇಕ್‌ಫಾಸ್ಟ್ ಮೀಟಿಂಗ್ ಅನಗತ್ಯ
ಸಚಿವ ಸಂಪುಟದ ಕೆಲವು ಸದಸ್ಯರು ಮುಖ್ಯಮಂತ್ರಿಯವರೊಂದಿಗೆ ಬ್ರೇಕ್‌ಫಾಸ್ಟ್ ಸಭೆ ನಡೆಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಗುಂಪುಗಾರಿಕೆಯ ವರದಿಗಳನ್ನು ತಳ್ಳಿಹಾಕಿದರು. 'ನಾವು 16-17 ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡಿದ್ದೇವೆ, ನಾವು ಒಂದು ಕುಟುಂಬದ ತರಹ. ಈಗ ಇಡೀ ಪಕ್ಷಕ್ಕೆ ನಾವು ಬೆಂಬಲವಾಗಿ ನಿಂತಿದ್ದೇವೆ. ನಿಮ್ಮ (ಮಾಧ್ಯಮದವರ) ಒತ್ತಡಕ್ಕೆ ಬ್ರೇಕ್‌ಫಾಸ್ಟ್ ಮೀಟಿಂಗ್‌ನಂತಹ ಅಗತ್ಯ ನಮಗಿಲ್ಲ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ. 140 ಶಾಸಕರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇವೆ' ಎಂದು ಸಿದ್ದರಾಮಯ್ಯ ಜೊತೆಗಿನ ಸಂಬಂಧವನ್ನು ಸ್ಪಷ್ಟಪಡಿಸಿದರು.
ರಾಜೀವ್ ರೈ ಜತೆ ಮಾತನಾಡುತ್ತೇನೆ
ಎಸ್ಪಿ ಸಂಸದ ರಾಜೀವ್ ರೈ ಅವರು ಬೆಂಗಳೂರು ಟ್ರಾಫಿಕ್ ನಿರ್ವಹಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ, 'ನಾನು ಅವರೊಂದಿಗೆ ದೆಹಲಿಯಲ್ಲಿ ಭೇಟಿ ಮಾಡಿ ಮಾತನಾಡುತ್ತೇನೆ. ಬೆಂಗಳೂರು ನಗರದ ಮಹತ್ವವೇನು ಎಂಬುದರ ಬಗ್ಗೆ ಅವರಿಗೆ ತಿಳಿಸುತ್ತೇನೆ' ಎಂದು ಹೇಳಿದರು.
ಕೇಂದ್ರದ ವಿರುದ್ಧ ಕಿರುಕುಳದ ಆರೋಪ
ಇದೇ ವೇಳೆ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ತಮ್ಮ ನಾಯಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಡಿಕೆಶಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 'ಕೇಂದ್ರ ಸರ್ಕಾರ ನಮ್ಮ ನಾಯಕರಿಗೆ ಕಿರುಕುಳ ಕೊಡುತ್ತಿದೆ. ಈ ಪ್ರಕರಣವನ್ನೇ ಮುಂದಿಟ್ಟುಕೊಂಡು ಟಾರ್ಗೆಟ್ ಮಾಡಲಾಗುತ್ತಿದೆ. ಇದೊಂದು ರಾಜಕೀಯ ಕಿರುಕುಳ. ನಮ್ಮ ನಾಯಕರು ಯಾವುದೇ ಕಾರಣಕ್ಕೂ ಹೆದರುವುದಿಲ್ಲ, ಎದುರಿಸುತ್ತಾರೆ. ಚುನಾವಣೆಯಲ್ಲಿ ಎದುರಿಸಲಿ, ಹೀಗೆ ಕಿರುಕುಳ ಕೊಡುವುದು ಸರಿಯಲ್ಲ' ಎಂದು ಖಂಡಿಸಿದರು.
ಸರ್ವಪಕ್ಷ ಸಭೆಯಲ್ಲಿ ಸಿಎಂ ಮತ್ತು ಡಿಸಿಎಂ ಭಾಗಿ ವಿಚಾರದ ಕುರಿತು, 'ನಾನು ಹೋಗಬೇಕು ಅಂತ ಮಾಡಿದ್ದೇನೆ. ನಾನು ಮುಖ್ಯಮಂತ್ರಿಯವರ ಜೊತೆ ಮಾತನಾಡಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ' ಎಂದು ತಿಳಿಸಿದರು.


