Asianet Suvarna News Asianet Suvarna News

Suspected Terrorists: ತುಂಗಾ, ನೇತ್ರಾವತಿ ತೀರದಲ್ಲಿ ಶಂಕಿತ ಉಗ್ರರ ಬಾಂಬ್‌ ಟೆಸ್ಟ್‌!

ರಾಜ್ಯವನ್ನು ಆತಂಕಕ್ಕೆ ತಳ್ಳಿರುವ ಶಿವಮೊಗ್ಗದ ಶಂಕಿತ ಐಸಿಸ್‌ ಉಗ್ರರ ಬಂಧನ ಪ್ರಕರಣದಲ್ಲೀಗ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಕಳೆದ ಆ.26ರಂದು ಈ ಶಂಕಿತ ಉಗ್ರರು ಗುರುಪುರ ಬಳಿಯ ತುಂಗಾ ನದಿ ದಡದಲ್ಲಿ ಬಾಂಬ್‌ ಸ್ಫೋಟದ ತಾಲೀಮು ನಡೆಸಿದ್ದಾರೆ.

Shivamogga suspected terrorists have tested bomb in Tunga and Netravati River gvd
Author
First Published Sep 22, 2022, 3:00 AM IST

ಶಿವಮೊಗ್ಗ (ಸೆ.22): ರಾಜ್ಯವನ್ನು ಆತಂಕಕ್ಕೆ ತಳ್ಳಿರುವ ಶಿವಮೊಗ್ಗದ ಶಂಕಿತ ಐಸಿಸ್‌ ಉಗ್ರರ ಬಂಧನ ಪ್ರಕರಣದಲ್ಲೀಗ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಕಳೆದ ಆ.26ರಂದು ಈ ಶಂಕಿತ ಉಗ್ರರು ಗುರುಪುರ ಬಳಿಯ ತುಂಗಾ ನದಿ ದಡದಲ್ಲಿ ಬಾಂಬ್‌ ಸ್ಫೋಟದ ತಾಲೀಮು ನಡೆಸಿದ್ದು, ಇನ್ನೊಮ್ಮೆ ದೊಡ್ಡ ಪ್ರಮಾಣದಲ್ಲಿ ಸ್ಫೋಟದ ತಾಲೀಮು ನಡೆಸಲು ತಯಾರಿ ನಡೆಸಿದ್ದರು ಎಂಬುದು ಪೊಲೀಸ್‌ ತನಿಖೆಯಲ್ಲಿ ತಿಳಿದುಬಂದಿದೆ. ಅದೇ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲೂ ಸಹ ನೇತ್ರಾವತಿ ನದಿ ದಡದಲ್ಲಿ ಇಂತಹದ್ದೇ ಸ್ಫೋಟದ ತಾಲೀಮು ನಡೆಸಿರುವ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ.

ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ಶಿವಮೊಗ್ಗದ ಸೈಯ್ಯದ್‌ ಯಾಸಿನ್‌ (21) ಹಾಗೂ ಮಂಗಳೂರಿನ ಮಾಜ್‌ ಮುನೀರ್‌ (22) ಎಂಬುವರನ್ನು ಮಂಗಳವಾರ ಬಂಧಿಸಿತ್ತು. ಇವರ ತನಿಖೆ ನಡೆಸಿದಾಗ, ನಾಪತ್ತೆಯಾದ ತೀರ್ಥಹಳ್ಳಿಯ ಶಾರೀಕ್‌ ಮೊಹಮ್ಮದ್‌ನ ಜೊತೆಗೂಡಿ ಇವರು ತುಂಗಾ ನದಿಯ ದಡದಲ್ಲಿ ಹಲವು ಬಾರಿ ಟ್ರಯಲ್‌ ಬ್ಲಾಸ್ಟ್‌ ನಡೆಸಿದ್ದರು. ಬಾಂಬ್‌ಗಳನ್ನು ತಯಾರಿಸಿ ತುಂಗಾ ನದಿಗೆ ಎಸೆಯುತ್ತಿದ್ದರು. ಯಾಸಿನ್‌ ಟ್ರಯಲ್‌ ಬಾಂಬ್‌ ಸ್ಫೋಟದ ಬಳಿಕ ಅವಶೇಷಗಳನ್ನು ತುಂಗಾ ಮೇಲ್ದಂಡೆ ನಾಲೆಯಲ್ಲಿ ಎಸೆದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಪಾಕ್‌ ಮೂಲದ ಭಾರತದ Most Wanted Terrorist ಅನ್ನು ಕಪ್ಪು ಪಟ್ಟಿಗೆ ಸೇರಿಸುವ ಮನವಿಗೆ ಚೀನಾ ಮತ್ತೆ ನಿರ್ಬಂಧ

ಅದೇ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ನೇತ್ರಾವತಿ ನದಿ ತಟವಾದ ಸರಪಾಡಿ ಗ್ರಾಮದ ಮತ್ತಕುದುರು ಎಂಬ ಸ್ಥಳದಲ್ಲೂ ಸ್ಫೋಟದ ತಾಲೀಮು ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸರಪಾಡಿ ಗ್ರಾಮದ ಸಿಂಥಾಣಿಕಟ್ಟೆಎಂಬಲ್ಲಿಂದ ನದಿ ದಾಟಿ ಹೋಗಬೇಕು. ಮತ್ತಕುದುರು ಎಂಬ ಸ್ಥಳ ಹೆಚ್ಚಾಗಿ ದನ ಮೇಯುವ ಜಾಗವಾಗಿದ್ದು, ನದಿ ತಟವೂ ಆಗಿದ್ದು ದ್ವೀಪದಂತಿದೆ. ಆ ಸ್ಥಳದಲ್ಲಿ ಜನಸಂಚಾರವೂ ಇಲ್ಲದೆ ನಿರ್ಜನವಾಗಿರುತ್ತದೆ. ಜನವಸತಿ ಇಲ್ಲದ ಸ್ಥಳದಲ್ಲಿ ಬಾಂಬ್‌ ರಿಹರ್ಸಲ್‌ ನಡೆಸಲಾಗುತ್ತಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಶಿವಮೊಗ್ಗ ಮತ್ತು ರಾಜ್ಯದಲ್ಲಿ ಸಂಭವಿಸಲಿದ್ದ ಭಾರಿ ಅವಘಡಗಳು ತಪ್ಪಿದಂತಾಗಿದೆ.

ಸ್ಫೋಟಕ್ಕೆ ಬಳಕೆಯಾದ ವಸ್ತುಗಳು ವಶಕ್ಕೆ: ಶಂಕಿತ ಉಗ್ರರು ತುಂಗಾ ತೀರದಲ್ಲಿ ಬಳಕೆ ಮಾಡಿದ ಸ್ಫೋಟಕಗಳ ಕುರಿತು ಪೊಲೀಸರಿಗೆ ಮಾಹಿತಿ ದೊರಕಿದೆ. ಅವರು ಪ್ರಾಯೋಗಿಕವಾಗಿ ಮಾಡಿದ ಸ್ಫೋಟದಲ್ಲಿ ಸಾಮಾನ್ಯ ಡಿಟೋನೇಟರ್‌ ಬದಲು ಐಇಡಿ (ಇಂಪ್ರೂವೈಸಡ್‌ ಎಕ್ಸ್‌ಪ್ಲೊಸೀವ್‌ ಡಿವೈಸ್‌) ಸಾಧನಗಳನ್ನು ಬಳಸುತ್ತಿದ್ದರು. ಸ್ಫೋಟ ನಡೆದಿದೆ ಎನ್ನಲಾದ ಸ್ಥಳದಿಂದ ಇದಕ್ಕೆ ಸಂಬಂಧಿಸಿದ ವಸ್ತುಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದು, ಇದುವರೆಗೆ ಒಟ್ಟು 11 ಸ್ಥಳಗಳಲ್ಲಿ ದಾಳಿ ನಡೆಸಿ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಶಂಕಿತ ಉಗ್ರರು ಸ್ಫೋಟಕ ತಯಾರಿಕೆಯಲ್ಲಿ ಸಾಕಷ್ಟುಪರಿಣತಿ ಸಾಧಿಸಿರಬಹುದು ಎಂದು ಅಂದಾಜಿಸಲಾಗಿದೆ. 

ತುಂಗಾ ತೀರದಲ್ಲಿ ಕೆಲವೊಮ್ಮೆ ಹಗಲು ಮತ್ತು ಕೆಲವೊಮ್ಮೆ ರಾತ್ರಿ ಹೊತ್ತಿನಲ್ಲಿ ತಮ್ಮ ಕೆಲಸ ಸಾಧಿಸುತ್ತಿದ್ದರು. ತುಂಗಾ ತೀರದ ಈ ಭಾಗ ನಿರ್ಜನವಾಗಿದ್ದು, ಒಂದು ಭಾಗದಲ್ಲಿ ಅಡಕೆ ತೋಟವಿದೆ. ಇಲ್ಲಿ ಕೆಲವರು ಮೀನು ಹಿಡಿಯಲು ನದಿಯಲ್ಲಿ ಸ್ಫೋಟಕ ಬಳಕೆ ಮಾಡುತ್ತಿದ್ದರು. ಹೀಗಾಗಿ ಇವರು ಮಾಡುತ್ತಿದ್ದ ಸ್ಫೋಟದ ಸದ್ದು ಕೇಳಿದರೂ ಸ್ಥಳೀಯರು ಅದರ ಕಡೆಗೆ ಗಮನ ನೀಡಿರಲಿಲ್ಲ ಎನ್ನಲಾಗಿದೆ. ಆರೋಪಿಗಳಿಂದ ಸ್ಫೋಟಕಗಳನ್ನು ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಅವರ ಬಳಿ ಜೀವಂತ ಬಾಂಬ್‌ ಸಿಕ್ಕಿಲ್ಲ ಎನ್ನಲಾಗಿದೆ.

ಶಿವಮೊಗ್ಗ ಇರಿತ ಕೇಸ್‌ ಆರೋಪಿಗೆ ಉಗ್ರ ನಂಟು, ಎನ್‌ಐಎ ತನಿಖೆ: ಆರಗ ಜ್ಞಾನೇಂದ್ರ

ನದಿ ತೀರಗಳಿಗೆ ಶಂಕಿತರ ಕರೆದೊಯ್ದು ಸ್ಥಳ ಮಹಜರು: ಮಂಗಳವಾರ ಬಂಧಿಸಲ್ಪಟ್ಟಿರುವ ಶಂಕಿತ ಉಗ್ರರಾದ ಸೈಯ್ಯದ್‌ ಯಾಸಿನ್‌ ಮತ್ತು ಮಾಜ್‌ ಮುನೀರ್‌ ಅವರನ್ನು ಪೊಲೀಸರು ಕ್ರಮವಾಗಿ ಶಿವಮೊಗ್ಗ ಮತ್ತು ಮಂಗಳೂರಿನ ಕೆಲ ಸ್ಥಳಗಳಿಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ. ಸೈಯ್ಯದ್‌ ಯಾಸಿನ್‌ನನ್ನು ಪೊಲೀಸರು ಶಿವಮೊಗ್ಗದ ಗುರುಪುರದ ತುಂಗಾ ನದಿ ತೀರದಲ್ಲಿ ಮತ್ತು ಸಿದ್ದೇಶ್ವರ ನಗರದ ಮನೆಯಲ್ಲಿ ಕರೆದುಕೊಂದು ಸ್ಥಳ ಮಹಜರು ನಡೆಸಿದರು. ಇನ್ನು ಮಾಝ್‌ ಮುನೀರ್‌ನನ್ನು ಪೊಲೀಸರು ಬುಧವಾರದಂದು ಬಂಟ್ವಾಳ ತಾಲೂಕಿನ ನೇತ್ರಾವತಿ ನದಿ ತೀರದ ಗ್ರಾಮಗಳಾದ ಸರಪಾಡಿ, ಸಿಂಥಾಣಿಕಟ್ಟೆ, ನಾವೂರಗಳಿಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ.

Follow Us:
Download App:
  • android
  • ios