Shikaripura KSRTC bus blast: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಿರೇಕಲವತ್ತಿ ಗ್ರಾಮದಲ್ಲಿ ಕೆಎಸ್ಆರ್‌ಟಿಸಿ ಬಸ್‌ನ ಕೆಳಗೆ ನಾಡಬಾಂಬ್ ಸ್ಫೋಟಗೊಂಡಿದೆ. ಸ್ಫೋಟಕ್ಕೆ ಕೇವಲ 7 ನಿಮಿಷಗಳ ಮೊದಲು 45 ವಿದ್ಯಾರ್ಥಿಗಳು ಬಸ್‌ನಿಂದ ಇಳಿದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.
ಶಿಕಾರಿಪುರ (ಡಿ.2): ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಿರೇಕಲವತ್ತಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದ ಭೀಕರ ಘಟನೆಯೊಂದು ರಾಜ್ಯದಲ್ಲಿ ಆತಂಕ ಮೂಡಿಸಿದೆ. ಕೆಎಸ್ಆರ್‌ಟಿಸಿ ಬಸ್‌ನ ಕೆಳಭಾಗದಲ್ಲಿ ನಾಡಬಾಂಬ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ.
ಮುಡಬಸಿದ್ಧಾಪುರದಿಂದ ಶಿಕಾರಿಪುರಕ್ಕೆ ಆಗಮಿಸುತ್ತಿದ್ದ ಬಸ್ ಹಿರೇಕಲವತ್ತಿ ಗ್ರಾಮಕ್ಕೆ ಬರುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ. ಜೋರಾದ ಸ್ಫೋಟದ ಸದ್ದಿನಿಂದಾಗಿ ಬಸ್ ತಕ್ಷಣವೇ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿದ್ದ ಟಿಸಿಗೆ (ವಿದ್ಯುತ್ ಪರಿವರ್ತಕಕ್ಕೆ) ಡಿಕ್ಕಿ ಹೊಡೆದು ನಿಂತಿದೆ.
7 ನಿಮಿಷದ ಹಿಂದೆ 45 ವಿದ್ಯಾರ್ಥಿಗಳು ಪ್ರಯಾಣಿಸಿದ್ದರು:
ಈ ಸ್ಫೋಟವು ಆತಂಕವನ್ನು ಇಮ್ಮಡಿಗೊಳಿಸಿದೆ. ಸ್ಫೋಟ ಸಂಭವಿಸುವುದಕ್ಕಿಂತ ಕೇವಲ 7 ನಿಮಿಷಗಳ ಮೊದಲು, ಅದೇ ಮಾರ್ಗದಲ್ಲಿ ಆ ಬಸ್‌ನಲ್ಲಿ 45ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಅನಾಹುತ ತಪ್ಪಿದ್ದು ಹೇಗೆ?
ಬಸ್‌ನ ಟೈರ್ ಅಂಚಿಗೆ (ರಿಮ್‌ಗೆ) ನಾಡಬಾಂಬ್ ತಗುಲಿ ಸ್ಫೋಟಗೊಂಡಿದ್ದರಿಂದ ದುರಂತದ ಪ್ರಮಾಣ ಕಡಿಮೆ ಆಗಿದೆ. ಒಂದು ವೇಳೆ ಬಾಂಬ್ ಟೈರ್‌ಗಳ ನಡುವೆ ಅಥವಾ ಬಸ್‌ನ ಮುಖ್ಯ ಭಾಗದ ಅಡಿಯಲ್ಲಿ ಸ್ಫೋಟಗೊಂಡಿದ್ದರೆ, ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಭಾರಿ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳು ಸಂಭವಿಸುತ್ತಿದ್ದವು.
ಘಟನೆಯ ನಂತರ ಪ್ರತಿಕ್ರಿಯಿಸಿದ ಬಸ್ ಚಾಲಕ ಬಸವರಾಜ್ ಅವರು, 'ನಾಡಬಾಂಬ್ ಸ್ಫೋಟಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ' ಎಂದು ತಿಳಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಸ್ಫೋಟದ ಹಿಂದಿನ ಉದ್ದೇಶ ಮತ್ತು ಬಾಂಬ್ ಇಟ್ಟವರು ಯಾರು ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.


