ಗ್ರಾಮೀಣಾಭिवೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್ ಪಕ್ಷದೊಳಗೆ ಯಾವುದೇ ಯುದ್ಧವಿಲ್ಲ, ಕೇವಲ ಶಾಂತಿ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಯಾವುದೇ ವ್ಯತ್ಯಾಸವಿಲ್ಲ, ಹಾಗೂ ತಮ್ಮ ರಾಹುಲ್ ಗಾಂಧಿ ಭೇಟಿಗೆ ಬೇರೆ ಕಾರಣವಿತ್ತು ಎಂದು ಅವರು ಹೇಳಿದ್ದಾರೆ.
ಬೆಂಗಳೂರು (ಡಿ.2): ಪಕ್ಷದೊಳಗೆ ಏನೂ ಕೆಟ್ಟಿಲ್ಲ ಎಲ್ಲವೂ ಸರಿಯಾಗಿದೆ. ನಮ್ಮಲ್ಲಿ ಯಾವುದೇ ವಾರ್ (ಯುದ್ಧ) ಇಲ್ಲ, ಕೇವಲ ಪೀಸ್ (ಶಾಂತಿ) ಅಷ್ಟೇ. ಅದನ್ನು ಕದಡುವ ಪ್ರಯತ್ನ ಯಾರೂ ಮಾಡಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಮ್ಮ ಪಕ್ಷದಲ್ಲಿ ಎಲ್ಲವೂ ಸರಿ ಇದೆ:
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ , ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರು ತಮ್ಮಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಮಾಧ್ಯಮಗಳೆದುರೇ ಹೇಳಿದ್ದಾರೆ. ಇನ್ನು, ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ, ಯಾವುದೂ ಕೆಟ್ಟಿಲ್ಲ. ಎಲ್ಲವೂ ಶಾಂತಿಯಾಗಿದ್ದು, ವಿರೋಧ ಪಕ್ಷ, ಮಾಧ್ಯಮಗಳು ಅದನ್ನು ಕದಡುವ ಕೆಲಸ ಮಾಡಬಾರದು ಎಂದರು.
ರಾಹುಲ್ ಗಾಂಧಿಯವರನ್ನ ಬೇರೆಯೇ ಕಾರಣಕ್ಕೆ ಭೇಟಿಯಾಗಿದ್ದೆ:
ನಾಯಕತ್ವ ಬದಲಾವಣೆ ಗದ್ದಲ ತಣ್ಣಗಾಗಿಸಲು ನೀವು ನೇತೃತ್ವ ವಹಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಇದಕ್ಕೆ ಸಂಬಂಧಿಸಿ ನನಗೆ ಯಾರೂ, ಯಾವುದೇ ಜವಾಬ್ದಾರಿ ನೀಡಿಲ್ಲ. ರಾಹುಲ್ ಗಾಂಧಿ ಅವರನ್ನ ಭೇಟಿಯಾಗಲು ಬೇರೆಯೇ ಕಾರಣವಿತ್ತು ಎಂದರು.
ಅದನ್ನು ಈಗಾಗಲೇ ಹೇಳಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರೂ ನನಗೆ ಯಾವುದೇ ಜವಾಬ್ದಾರಿ ನೀಡಿಲ್ಲ. ದೊಡ್ಡವರು ಎಲ್ಲವನ್ನೂ ಸರಿ ಮಾಡಿಕೊಳ್ಳುತ್ತಾರೆ. ನಾನು ಮಧ್ಯಸ್ಥಿತಿಗೆ ವಹಿಸಿದ್ದೇನೆ ಎಂಬುದು ಹೊಸ ವಿಚಾರ. ಈ ರೀತಿಯ ವಿಚಾರ ಹೇಗೆ ಹಬ್ಬುತ್ತದೆಯೋ ತಿಳಿದಿಲ್ಲ ಎಂದರು.


