ಸಚಿವ ಶರಣಪ್ರಕಾಶ್ ಪಾಟೀಲ್ ಅವರು, ಅಯೋಧ್ಯೆ ರಾಮ ಮಂದಿರದ ಹಣವನ್ನು ಲೂಟಿ ಮಾಡುವ ಮೂಲಕ ಬಿಜೆಪಿ ಸರ್ಕಾರವು ಮೊಹಮ್ಮದ್ ಘಜ್ನಿಯಂತೆ ವರ್ತಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು ಎಂದಿದ್ದಾರೆ.

ಕೊಪ್ಪಳ (ಜು.3): 'ಹಿಂದುತ್ವ ರಕ್ಷಣೆ ಮಾಡುತ್ತೇವೆ ಎಂದು ದೇಶದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಈಗ ಅಯೋಧ್ಯೆಯ ರಾಮ ಮಂದಿರವನ್ನು ಲೂಟಿ ಮಾಡುತ್ತಿದೆ. ಹಿಂದೆ ಭಾರತಕ್ಕೆ ದಾಳಿ ಇಟ್ಟು ಸೋಮನಾಥ ದೇವಸ್ಥಾನವನ್ನು ಲೂಟಿ ಮಾಡಿದ ಮೊಹಮ್ಮದ್ ಘಜ್ನಿ ಮತ್ತು ಮೊಹಮ್ಮದ್ ಘೋರಿಗೂ, ಇಂದಿನ ಬಿಜೆಪಿಯವರಿಗೂ ಯಾವುದೇ ವ್ಯತ್ಯಾಸವಿಲ್ಲ," ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಗಂಭೀರವಾಗಿ ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಮಮಂದಿರದ ಹೆಸರಿನಲ್ಲಿ ಹಣ ಲೂಟಿ ಮಾಡಿರುವುದು ಈ ದೇಶದ ದೊಡ್ಡ ದುರಂತ. ಇವರ ಬಳಿ ಯಾವುದೇ ಸತ್ವ, ಬದ್ಧತೆ ಇಲ್ಲ. ಇವರಿಗೆ ಹಿಂದುತ್ವದ ಬಗ್ಗೆ ಕಾಳಜಿಯೂ ಇಲ್ಲ. ಇವರೆಲ್ಲ ಹಿಂದುತ್ವದ ಮುಖವಾಡ ಧರಿಸಿರುವ ಖದೀಮರು ಎಂದು ಹರಿಹಾಯ್ದರು.

ಇಡೀ ದೇಶದ ಜನ ಭಕ್ತಿಯಿಂದ ರಾಮಮಂದಿರಕ್ಕೆ ದೇಣಿಗೆ ನೀಡಿದ್ದಾರೆ. ಆದರೆ ಇವರು ಕೇವಲ ಹುಂಡಿಯ ಹಣವನ್ನಷ್ಟೇ ಲೂಟಿ ಮಾಡಿಲ್ಲ; ರಾಮಮಂದಿರ ಕಟ್ಟಲು ಸಂಗ್ರಹವಾದ ಭಾರಿ ಮೊತ್ತದ ಹಣದಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ. ಈ ಹಣವನ್ನು ಲೂಟಿ ಮಾಡಿ ಬಿಜೆಪಿ, ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದೂ ಪರಿಷತ್ (VHP) ನಾಯಕರು ಶ್ರೀಮಂತರಾಗಿದ್ದಾರೆ. ದೇಶದ ಜನರ ಹಣ ಲೂಟಿಯಾಗುತ್ತಿದ್ದರೂ ಪ್ರಧಾನಿ ಮೋದಿಯವರು ಯಾಕೆ ತನಿಖೆ ಮಾಡಿಸುತ್ತಿಲ್ಲ? ಬಿಜೆಪಿಯವರು ಕೇವಲ ಹಣವನ್ನಷ್ಟೇ ಅಲ್ಲ, ಜನರ ವಿಶ್ವಾಸವನ್ನೂ ಲೂಟಿ ಮಾಡಿದ್ದಾರೆ. ಅವರಿಗೆ ಜನರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ಪ್ರಧಾನಿ ಮೋದಿ ತಕ್ಷಣವೇ ರಾಜೀನಾಮೆ ನೀಡಿ ಮನೆಗೆ ಹೋಗಬೇಕು. ಈ ಇಡೀ ಹಗರಣವು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ (Supreme Court Monitoring) ತನಿಖೆಯಾಗಬೇಕು," ಎಂದು ಅವರು ಆಗ್ರಹಿಸಿದರು.

ಆರ್‌ಎಸ್‌ಎಸ್‌ನವರಿಗೆ ನಿಯತ್ತೂ ಇಲ್ಲ, ದೇಶಪ್ರೇಮವೂ ಇಲ್ಲ!

ಇದೇ ವೇಳೆ ಆರ್‌ಎಸ್‌ಎಸ್ (RSS) ಸಂಸ್ಥೆಯ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಇತ್ತೀಚೆಗೆ ಆಡಿದ್ದ ಮಾತುಗಳನ್ನು ಶರಣಪ್ರಕಾಶ್ ಪಾಟೀಲ್ ಸಂಪೂರ್ಣವಾಗಿ ಸಮರ್ಥಿಸಿಕೊಂಡರು.

ಪ್ರಿಯಾಂಕ್ ಖರ್ಗೆ ಹೇಳಿರುವುದು ನೂರಕ್ಕೆ ನೂರರಷ್ಟು ಸರಿ ಇದೆ. ಆರ್‌ಎಸ್‌ಎಸ್ ಎನ್ನುವುದು ಒಂದು ಸಂಸ್ಥೆಯಾಗಿದ್ದು, ಅದು ಕಡ್ಡಾಯವಾಗಿ ನೋಂದಣಿ (Registration) ಆಗಲೇಬೇಕು. ದೇಶದಾದ್ಯಂತ ಸಂಘಟನೆ ಹೊಂದಿದ್ದೇವೆ, ಶಿಸ್ತಿನ ಮಾರ್ಚ್ ನಡೆಸುತ್ತೇವೆ ಎನ್ನುವ ಇವರಿಗೆ ಹೇಳುವವರು ಕೇಳುವವರು ಯಾರು ಇಲ್ಲವೇ? ನೋಂದಣಿ ಮಾಡಿಕೊಳ್ಳಲು ಇವರಿಗಿರುವ ಇಕ್ಕಟ್ಟೇನು? ನಾವು ಸಂಘಟನೆಯನ್ನು ಬ್ಯಾನ್ ಮಾಡಿ ಎಂದು ಹೇಳುತ್ತಿಲ್ಲ, ಕೇವಲ ನಿಯಮದಂತೆ ನೋಂದಣಿ ಮಾಡಿ ಎನ್ನುತ್ತಿದ್ದೇವೆ ಎಂದರು.

ಮುಂದುವರಿದು ಮಾತನಾಡಿದ ಅವರು, "ಆರ್‌ಎಸ್‌ಎಸ್ ಸಂಘಟನೆಯವರ ನಿಯತ್ತು ಸರಿ ಇಲ್ಲ. ಅವರಿಗೆ ನಿಜವಾದ ದೇಶಪ್ರೇಮವೂ ಇಲ್ಲ ಮತ್ತು ಅವರು ದೇಶದ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಅವರ ಮೇಲೆ ನಾವು ನಂಬಿಕೆ ಇಡಲು ಸಾಧ್ಯವಿಲ್ಲ," ಎಂದು ಸಚಿವರು ಟೀಕಿಸಿದ್ದಾರೆ.