NEET ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮತ್ತು ಪೋಷಕರು ಮಧ್ಯವರ್ತಿಗಳ ಮೋಸದ ಜಾಲಕ್ಕೆ ಬೀಳಬಾರದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಎಚ್ಚರಿಸಿದ್ದಾರೆ. ಕೆಇಎ ಮೂಲಕ ಸೀಟು ಹಂಚಿಕೆ ನಡೆಯಲಿದ್ದು, ದಲ್ಲಾಳಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರಾಯಚೂರು: ವೈದ್ಯರಾಗಬೇಕೆಂಬ ಭವ್ಯ ಭವಿಷ್ಯದ ಕನಸು ಹೊತ್ತು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಬರೆದಿರುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೋಸದ ಜಾಲಕ್ಕೆ ಬೀಳಬಾರದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ (medical education minister sharan prakash patil) ಸೂಚನೆ ನೀಡಿದ್ದಾರೆ. ಅತ್ಯುತ್ತಮವಾಗಿ ಓದಿ, ಪರೀಕ್ಷೆ ಬರೆದಿರುವ ಆಕಾಂಕ್ಷಿಗಳು, ಸೀಟು ಪಡೆಯಲೇಬೇಕು ಎಂಬ ಆತಂಕದಿಂದ ಮೋಸದ ಜಾಲಕ್ಕೆ ಬೀಳಬಾರದು ಪೋಷಕರಿಗೆ ಸಲಹೆ ನೀಡಿದರು.

Add Asianetnews Kannada as a Preferred SourcegooglePreferred

ವೈದ್ಯಕೀಯ ಸೀಟು ಕೊಡಿಸುತ್ತೇವೆ. ಆ ಕಾಲೇಜಿನಲ್ಲಿ ಸೀಟು ಸಿಗುತ್ತೆ ನಿಮಗೆ, ನಮಗೆ ಅವರು ಗೊತ್ತಿದ್ದಾರೆ. ಇವರು ಗೊತ್ತಿದ್ದಾರೆ ಎಂದು ಹೇಳಿ ಸೀಟು ಕೊಡಿಸುವ ಭರವಸೆ ನೀಡಿ ಮರಳು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಪೋಷಕರು ಯಾರ ಮಾತಿಗೂ ಕಿವಿಕೊಟ್ಟು ಹಣ ಕಳೆದುಕೊಳ್ಳಬೇಡಿ. ಈಗಾಗಲೇ ನೀಟ್‌ ಫಲಿತಾಂಶಗಳು ಪ್ರಕಟವಾಗಿವೆ. ರಾಜ್ಯದಲ್ಲಿ 1,47,782 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 1,42,369 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 83,582 ಅರ್ಹತೆ ಪಡೆದುಕೊಂಡಿದ್ದಾರೆ. ಅರ್ಹತೆ ‌ಪಡೆದ ವಿದ್ಯಾರ್ಥಿಗಳಿಗೆ ಸೀಟುಗಳು ಸಿಗುತ್ತವೆ.

ಹೇಗಾದರೂ ಮಾಡಿ ಒಳ್ಳೆಯ ಕಾಲೇಜಿನಲ್ಲಿ ಸೀಟು ಪಡೆಯಬೇಕು ಎಂಬ ಆತುರಕ್ಕೆ ಪೋಷಕರು ಬರಬೇಡಿ. ನಿಮ್ಮ ಆತಂಕವನ್ನು ದುರುಪಯೋಗಪಡಿಸಿಕೊಳ್ಳಲು ಮಧ್ಯವರ್ತಿಗಳು ಕಾದಿರುತ್ತಾರೆ. ಅವರ ಮೋಸದ ಜಾಲಕ್ಕೆ ಬೀಳಬೇಡಿ ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಸಲಹೆ ನೀಡಿದ್ರು.

ಕೆಇಎಯಿಂದ ಸೀಟು ಹಂಚಿಕೆ

ನಮ್ಮ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದಲೇ ಸೀಟುಗಳ ಹಂಚಿಕೆ ಕ್ರಮ ಬದ್ಧವಾಗಿ ಆಗುತ್ತದೆ. ಅದರಂತೆ ನಿಯಮಗಳನ್ನು ಪಾಲಿಸಿ. ವಿದ್ಯಾರ್ಥಿಗಳು ಮತ್ತು ಪೋಷಕರು ಇದನ್ನು ತಪ್ಪದೇ ತಿಳಿದುಕೊಳ್ಳಬೇಕು ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಪೋಷಕರಿಗೆ ಸೂಚನೆ ‌ನೀಡಿದ್ದಾರೆ. ಇನ್ನೂ ಅತ್ಯುತ್ತಮ ಸಾಧನೆ ಮಾಡಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಾ ವಿದ್ಯಾರ್ಥಿಗಳ ಭವಿಷ್ಯವೂ ಉತ್ತಮವಾಗಿರಲಿ ಎಂದು ಹಾರೈಸುತ್ತೇನೆ ಎಂದು ಸಚಿವ ಡಾ. ಶರಣ್‌ ಪ್ರಕಾಶ್‌ ಪಾಟೀಲ್‌ ತಿಳಿಸಿದ್ದಾರೆ.

ದಲ್ಲಾಳಿಗಳಿಗೆ ಎಚ್ಚರಿಕೆ

ಸೀಟು ಕೊಡಿಸುತ್ತೇನೆಂದು ವಿದ್ಯಾರ್ಥಿಗಳು ಅಥವಾ ಪೋಷಕರನ್ನು ದಿಕ್ಕು ತಪ್ಪಿಸಿ ಮೋಸ ಮಾಡಿದವರು ಕಂಡುಬಂದರೆ, ಅಂಥ ದಲ್ಲಾಳಿಗಳನ್ನು ಪತ್ತೆ ಹಚ್ಚಿ, ಕಾನೂನು ರೀತಿಯಲ್ಲಿ ಕಠಿಣ ಕ್ರಮ ಜಾರಿಗೊಳಿಸಲಾಗುವುದು ವಿದ್ಯಾರ್ಥಿಗಳು ಮತ್ತು ಪೋಷಕರ ಭವಿಷ್ಯದ ಜೊತೆ ಚೆಲ್ಲಾಟವಾಡುವುದನ್ನು ಸಹಿಸುವುದಿಲ್ಲ. ಮಧ್ಯವರ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ರು.