ಬರದ ನೆರಳಲ್ಲಿ ಭಾಗ್ಯದಂತೆ ಕಾಲಿಟ್ಟ ಕೃಷ್ಣೆ, ಒಮ್ಮೆಲೆ ಹರಿದ ಐದು ಸಾವಿರ ಕ್ಯೂಸೆಕ್ ನೀರು!
ತೀವ್ರ ಬಿಸಿಲಿನಿಂದ ಸಂಪೂರ್ಣವಾಗಿ ಬತ್ತಿ ಹೋಗಿದ್ದ ಕೃಷ್ಣಾ ನದಿಗೆ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ 5,000 ಕ್ಯೂಸೇಕ್ ನೀರು ಹರಿದು ಬಂದಿದೆ. ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಮತ್ತು ಬಾಗಲಕೋಟೆ ಜಿಲ್ಲೆಗಳ ರೈತರಿಗೆ ಕೃಷಿ ಹಾಗೂ ಕುಡಿಯುವ ನೀರಿನ ಭರವಸೆ ಮೂಡಿಸಿದೆ.

ಕೃಷ್ಣಾ ನದಿಗೆ ಮರುಜೀವ; 5 ಸಾವಿರ ಕ್ಯೂಸೇಕ್ ನೀರು ಒಳಹರಿವು!
ಕಳೆದ ಎರಡು ತಿಂಗಳಿನಿಂದ ತೀವ್ರ ಬಿಸಿಲಿನ ಬೇಗೆಗೆ ಸಂಪೂರ್ಣವಾಗಿ ಬತ್ತಿ ಹೋಗಿದ್ದ ಕೃಷ್ಣಾ ನದಿಗೆ ಈಗ ಒಮ್ಮೆಲೆ ಬರೋಬ್ಬರಿ 5,000 ಕ್ಯೂಸೇಕ್ ನೀರು ಹರಿದು ಬಂದಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯೇ ಕೃಷ್ಣೆಯ ಈ ದಿಢೀರ್ ಒಳಹರಿವಿಗೆ ಪ್ರಮುಖ ಕಾರಣವಾಗಿದ್ದು, ಖಾಲಿ ಖಾಲಿಯಾಗಿದ್ದ ನದೀಪಾತ್ರದಲ್ಲಿ ಮತ್ತೆ ನೀರಿನ ಜಲಕಳೆ ಎದ್ದುಕಂಡಿದೆ.
ಮೂರು ರಾಜ್ಯಗಳ ಜೀವನದಿಗೆ ಮಹಾರಾಷ್ಟ್ರ ಮಳೆಯ ಆಸರೆ
ಕೃಷ್ಣಾ ನದಿಯು ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳ ಪಾಲಿಗೆ ಅತ್ಯಂತ ಪ್ರಮುಖ ಜೀವನದಿಯಾಗಿದೆ. ಪ್ರಸ್ತುತ ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಮುಂಗಾರು ಮಳೆ ಚುರುಕಾಗಿರುವುದರಿಂದ, ನದಿಯತ್ತ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ಕೃಷ್ಣೆ ಮತ್ತೆ ತನ್ನ ಹಳೆಯ ವೈಭವದ ದಿನಗಳಿಗೆ ಮರಳುತ್ತಿದೆ.
ಚಿಕ್ಕೋಡಿಯ ಕಲ್ಲೋಳ ಬಳಿ ಕೃಷ್ಣೆಯ ಭೋರ್ಗರೆತ!
ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನದಿಯ ನೀರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ಸದ್ಯ ಪ್ರವೇಶಿಸುತ್ತಿದೆ. ನದಿಗೆ ಹೊಸ ನೀರು ಹರಿದು ಬರುತ್ತಿರುವ ದೃಶ್ಯಗಳನ್ನು ಕಣ್ಣುಂಬಿಕೊಳ್ಳಲು ಸ್ಥಳೀಯರು ನದೀತೀರದತ್ತ ಧಾವಿಸುತ್ತಿದ್ದಾರೆ.
ಉತ್ತರ ಕರ್ನಾಟಕದ ಮೂರು ಜಿಲ್ಲೆಗಳ ರೈತರ ಮೊಗದಲ್ಲಿ ಹರ್ಷ
ಕೃಷ್ಣಾ ನದಿಗೆ ನೀರು ಬಂದಿರುವುದು ಕಂಡು ಗಡಿಭಾಗದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ನದಿಗೆ ನೀರು ಬಂದಿರುವುದರಿಂದ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಕೃಷ್ಣಾ ತೀರದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಹಾಗೂ ಕುಡಿಯುವ ನೀರಿಗೆ ಭಾರಿ ಅನುಕೂಲವಾಗಲಿದೆ.
ಹವಾಮಾನ ಇಲಾಖೆಯಿಂದ ಇನ್ನೂ ಒಂದು ವಾರ ಮಳೆಯ ಸೂಚನೆ
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮುಂದಿನ ಒಂದು ವಾರದವರೆಗೆ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಕೃಷ್ಣಾ ನದಿಗೆ ಬರುವ ಒಳಹರಿವಿನ ಪ್ರಮಾಣ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದ್ದು, ನದಿಯ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

