ರಾಜ್ಯದಲ್ಲಿ ಕನ್ನಡವನ್ನು ಮೂರನೇ ಭಾಷೆಯಾಗಿ ಜಾರಿಗೊಳಿಸಲು ಎನ್‌ಸಿಇಆರ್‌ಟಿ ಹೊರಡಿಸಿರುವ ಆದೇಶಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದು ರಾಜ್ಯದ ಭಾಷಾ ಕಾನೂನಿನ ಉಲ್ಲಂಘನೆ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ. ಆದೇಶ ಹಿಂಪಡೆಯದಿದ್ದರೆ ರಕ್ತಕ್ರಾಂತಿ ಎಂದು ಎಚ್ಚರಿಸಿದೆ.

ಬೆಂಗಳೂರು (ಜು.3): ರಾಜ್ಯದಲ್ಲಿ ಕನ್ನಡವನ್ನು ಮೂರನೇ ಭಾಷೆಯಾಗಿ ಜಾರಿಗೊಳಿಸಬೇಕೆಂದು ಎನ್‌ಸಿಇಆರ್‌ಟಿ ಹೊರಡಿಸಿರುವ ಆದೇಶ ಕೂಡಲೇ ಹಿಂಪಡೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಆಗ್ರಹಿಸಿದೆ.

ಗುರುವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ(TA Narayanagowda), ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (NCERT) ಹೊರಡಿಸಿರುವ ಸೂಚನೆ ರಾಜ್ಯದ ಭಾಷಾ ಕಾನೂನು, ಸಂವಿಧಾನದ ಒಕ್ಕೂಟ ವ್ಯವಸ್ಥೆ ಹಾಗೂ ಕರ್ನಾಟಕದ ಸ್ವಾಭಿಮಾನದ ಮೇಲಿನ ನೇರ ದಾಳಿ. ಈ ಆದೇಶ ಹೊರಡಿಸಿದ ಅಧಿಕಾರಿಗಳ ವಿರುದ್ಧ ದೇಶದ್ರೋಹದ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.

ಕಾನೂನು ಉಲ್ಲಂಘಿಸುವ ದುಸ್ಸಾಹಸ:

ಕರ್ನಾಟಕ ಕನ್ನಡ ಭಾಷಾ ಕಲಿಕಾ ಅಧಿನಿಯಮ, 2015 ಹಾಗೂ ಅದರಡಿ ರೂಪಿಸಲಾದ ನಿಯಮಗಳ ಪ್ರಕಾರ ರಾಜ್ಯದ ಪ್ರತಿಯೊಂದು ಶಾಲೆಯಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸುವುದು ಕಡ್ಡಾಯ. ಈ ಕಾನೂನು ಸಿಬಿಎಸ್‌ಇ, ಐಸಿಎಸ್‌ಇ ಸೇರಿ ಎಲ್ಲ ಶಾಲೆಗಳಿಗೂ ಅನ್ವಯಿಸುತ್ತದೆ. ಹೀಗಿರುವಾಗ ಕನ್ನಡವನ್ನು ಮೂರನೇ ಭಾಷೆಯಾಗಿ ಪರಿಗಣಿಸುವ ಎನ್‌ಸಿಇಆರ್‌ಟಿ ನಿರ್ಧಾರವು ರಾಜ್ಯದ ಕಾನೂನನ್ನು ಉಲ್ಲಂಘಿಸುವ ದುಸ್ಸಾಹಸವಾಗಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಭಾಷಾ ನೀತಿ ಕಾನೂನು ಸ್ಪಷ್ಟವಾಗಿದ್ದರೂ ಅದನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಆದೇಶ ಹೊರಡಿಸಿರುವುದು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ. ಇದು ನೇರವಾಗಿ ದೇಶ ಒಡೆಯುವ ಸಂಚು ಎಂದೇ ನಾವು ಭಾವಿಸಬೇಕಾಗುತ್ತದೆ. ಕರ್ನಾಟಕದ ಭಾಷಾ ಕಾನೂನು ದುರ್ಬಲಗೊಳಿಸುವ ಯಾವುದೇ ಪ್ರಯತ್ನ ಸಹಿಸುವುದಿಲ್ಲ. ಕನ್ನಡವನ್ನು ಮೂರನೇ ಭಾಷೆಗೆ ಇಳಿಸುವ ಯಾವುದೇ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಕರ್ನಾಟಕದ ಕಾನೂನು ಹಾಗೂ ರಾಜ್ಯದ ಭಾಷಾ ಹಕ್ಕುಗಳಿಗೆ ಗೌರವ ನೀಡಬೇಕು. ಒಂದು ವೇಳೆ ಎನ್‌ಸಿಇಆರ್‌ಟಿ ಬಲವಂತವಾಗಿ ಈ ಆದೇಶ ಜಾರಿಗೊಳಿಸಲು ಯತ್ನಿಸಿದರೆ ರಾಜ್ಯದಲ್ಲಿ ರಕ್ತಕ್ರಾಂತಿಯೇ ನಡೆಯುತ್ತದೆ. ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.