Asianet Suvarna News Asianet Suvarna News

‘ಶಕ್ತಿ’ ಪ್ರಯಾಣಿಕರಿಗೆ ಸ್ಮಾರ್ಟ್‌ಕಾರ್ಡ್‌ ನೀಡಿಕೆಗೆ ಗ್ರಹಣ

ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಸ್ಮಾರ್ಟ್‌ಕಾರ್ಡ್‌ ನೀಡುವ ಕುರಿತಂತೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಾರಿಗೆ ನಿಗಮಗಳು ವಿಫಲವಾಗಿದ್ದು, ಹೀಗಾಗಿ ಏಕರೂಪ ಗುರುತಿನ ಚೀಟಿ ವಿತರಣೆ ಮತ್ತಷ್ಟು ವಿಳಂಬವಾಗಲಿದೆ.

Shakti Yojana: Delay in distribution of smart cards to commuters yet bengaluru rav
Author
First Published Dec 10, 2023, 5:43 AM IST

ಗಿರೀಶ್‌ ಗರಗ

ಬೆಂಗಳೂರು (ಡಿ.10):  ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಸ್ಮಾರ್ಟ್‌ಕಾರ್ಡ್‌ ನೀಡುವ ಕುರಿತಂತೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಾರಿಗೆ ನಿಗಮಗಳು ವಿಫಲವಾಗಿದ್ದು, ಹೀಗಾಗಿ ಏಕರೂಪ ಗುರುತಿನ ಚೀಟಿ ವಿತರಣೆ ಮತ್ತಷ್ಟು ವಿಳಂಬವಾಗಲಿದೆ.

ಸದ್ಯ ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರು ಆಧಾರ್‌ ಕಾರ್ಡ್‌ ಸೇರಿದಂತೆ ಯಾವುದಾದರೂ ಸರ್ಕಾರಿ ಗುರುತಿನ ಚೀಟಿ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದರಿಂದ ನಿರ್ವಾಹಕರಿಗೆ ಸಾಕಷ್ಟು ಸಮಸ್ಯೆಗಳಾಗುತ್ತಿದ್ದು, ಎಲ್ಲ ಮಹಿಳಾ ಪ್ರಯಾಣಿಕರಿಗೆ ಸ್ಮಾರ್ಟ್‌ಕಾರ್ಡ್‌ ನೀಡುವ ಕುರಿತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ನಿರ್ಧರಿಸಿವೆ. ಅದಕ್ಕೆ ಸಂಬಂಧಿಸಿದಂತೆ ಇ-ಗವರ್ನೆನ್ಸ್‌ ಜತೆಗೂ ಸಭೆ ನಡೆಸಲಾಗಿದೆ.

 

ಮುಂದುವರಿದ ಶಕ್ತಿ ಯೋಜನೆ ಅವಾಂತರ: ಸೀಟು ಹಿಡಿಯಲು ಹೋದ ವೃದ್ಧ ಬಸ್ಸಿನ ಚಕ್ರಕ್ಕೆ ಸಿಲುಕಿ ತೀವ್ರ ಗಾಯ!

ಆದರೆ, ಸ್ಮಾರ್ಟ್‌ ಕಾರ್ಡ್‌ ನೀಡಿದರೆ ಬಿಎಂಟಿಸಿ ನಿರ್ವಾಹಕರಿಗೆ ಸಮಸ್ಯೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಮಹಿಳಾ ಪ್ರಯಾಣಿಕರಿಗೆ ಸ್ಮಾರ್ಟ್‌ ಕಾರ್ಡ್‌ ನೀಡಬೇಕೆ ಅಥವಾ ಸಾಮಾನ್ಯ ಗುರುತಿನ ಚೀಟಿ ನೀಡಬೇಕೆ ಎಂಬ ಕುರಿತಂತೆ ಚರ್ಚಿಸಲಾಗುತ್ತಿದೆ. ಅದರ ಪರಿಣಾಮ ಮಹಿಳಾ ಪ್ರಯಾಣಿಕರಿಗೆ ಏಕರೂಪ ಗುರುತಿನ ಚೀಟಿ ವಿತರಿಸುವುದು ವಿಳಂಬವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸ್ಮಾರ್ಟ್‌ಕಾರ್ಡ್‌ ಏಕೆ ಬೇಕು?:

ಶಕ್ತಿ ಯೋಜನೆ ಅಡಿಯಲ್ಲಿ ನಿರ್ವಾಹಕರು ಅನಾವಶ್ಯಕವಾಗಿ ಟಿಕೆಟ್‌ಗಳನ್ನು ಹರಿಯುತ್ತಾ, ವಾಸ್ತವಕ್ಕಿಂತ ಹೆಚ್ಚಿನ ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಬಿಂಬಿಸಲಾಗುತ್ತಿದೆ ಎಂಬ ಆರೋಪವಿದೆ. ಅದಕ್ಕಾಗಿಯೇ ಶಕ್ತಿ ಯೋಜನೆ ಅಡಿಯ ಪ್ರಯಾಣಿಕರಿಗೆ ಸ್ಮಾರ್ಟ್‌ಕಾರ್ಡ್‌ ವಿತರಿಸಬೇಕು ಹಾಗೂ ಅದನ್ನು ಸ್ವೈಪ್‌ ಮಾಡುವ ಮೂಲಕ ನಿಖರವಾಗಿ ಪ್ರಯಾಣಿಕರ ಲೆಕ್ಕ ಪಡೆಯಬೇಕು ಎಂದು ಸಾರಿಗೆ ನಿಗಮಗಳಿಗೆ ಆರ್ಥಿಕ ಇಲಾಖೆ ಸಲಹೆ ನೀಡಿದೆ.

ಸ್ಮಾರ್ಟ್‌ಕಾರ್ಡ್‌ಗೆ ಬಿಎಂಟಿಸಿ ವಿರೋಧ ಏಕೆ?:

ಆರ್ಥಿಕ ಇಲಾಖೆಯ ಸಲಹೆಯಂತೆ ಸ್ಮಾರ್ಟ್‌ಕಾರ್ಡ್‌ ವಿತರಿಸಿದರೆ ಕೆಎಸ್ಸಾರ್ಟಿಸಿ, ಈಶಾನ್ಯ ಕರ್ನಾಟಕದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ನಿರ್ವಾಹಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆ ನಿಗಮಗಳ ಬಸ್‌ಗಳು ದೂರದ ಮಾರ್ಗದಲ್ಲಿ ಸಂಚರಿಸುವುದರಿಂದ ಅದರಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಬಳಿಯ ಸ್ಮಾರ್ಟ್‌ ಕಾರ್ಡ್‌ನ್ನು ಸ್ವೈಪ್‌ ಮಾಡಿ ಟಿಕೆಟ್‌ ವಿತರಿಸುವುದಕ್ಕೆ ಸಮಯದ ಅಭಾವ ಆಗುವುದಿಲ್ಲ ಹಾಗೂ ನಿರ್ವಾಹಕರ ಮೇಲೆ ಒತ್ತಡ ಇರುವುದಿಲ್ಲ.

 

ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ವಜ್ರ ಬಸ್ ಗೂ ರಿಯಾಯಿತಿ ವಿದ್ಯಾರ್ಥಿ ಪಾಸ್ ಕೊಡಲು ಮುಂದಾದ ಬಿಎಂಟಿಸಿ!

ಆದರೆ, ಬಿಎಂಟಿಸಿ ಸೇವೆ ನೀಡುವಲ್ಲಿ ಬಹುತೇಕ ಕಡೆ ಅರ್ಧ ಕಿಮೀಗೊಂದು ನಿಲುಗಡೆ ಇದೆ. ಒಂದು ವೇಳೆ ಮಹಿಳಾ ಪ್ರಯಾಣಿಕರು ಆ ಅರ್ಧ ಕಿಮೀ ಮಾತ್ರ ಬಸ್‌ನಲ್ಲಿ ಪ್ರಯಾಣಿಸಿದರೆ, ಅವರ ಸ್ಟಾಪ್‌ ಬರುವುದರೊಳಗೆ ಕೆಲವೇ ಕ್ಷಣಗಳಲ್ಲಿ ಸ್ಮಾರ್ಟ್‌ಕಾರ್ಡ್‌ ಪಡೆದು ಸ್ವೈಪ್‌ ಮಾಡಿ ಟಿಕೆಟ್‌ ವಿತರಿಸುವುದು ಕಷ್ಟವಾಗಲಿದೆ. ಅಲ್ಲದೆ, ನಿರ್ವಾಹಕರು ಇದರಿಂದ ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಾರೆ. ಹೀಗಾಗಿ ಸ್ಮಾರ್ಟ್‌ಕಾರ್ಡ್‌ ಅಥವಾ ಏಕರೂಪ ಗುರುತಿನ ಚೀಟಿ ವಿತರಿಸಬೇಕೆ ಎಂಬ ಬಗ್ಗೆ ನಿಗಮಗಳಲ್ಲಿ ಗೊಂದಲ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios