ಶಕ್ತಿ ಎಫೆಕ್ಟ್: ಚಳಿ, ಮಳೆ ಮಧ್ಯೆಯೂ ಚಾಮುಂಡಿ ಬೆಟ್ಟಕ್ಕೆ ಭಕ್ತರ ದಂಡು
ಮೂರನೇ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಮೈ ಕೊರೆಯುವ ಚಳಿ, ತುಂತುರು ಮಳೆಯನ್ನು ಲೆಕ್ಕಿಸದೇ ಮುಂಜಾನೆಯಿಂದಲೇ ಚಾಮುಂಡಿ ಬೆಟ್ಟಕ್ಕೆ ಬಂದ ಸಾವಿರಾರು ಭಕ್ತರು ಮಹಾಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಪುನೀತರಾದರೆ, ಅತ್ತ ನಂಜನಗೂಡಿನಲ್ಲೂ ದೇವಿ ದರ್ಶನಕ್ಕೆ ಜನಸ್ತೋಮ ಹರಿದು ಬಂತು.
ಮೈಸೂರು (ಜು.08): ಮೂರನೇ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಮೈ ಕೊರೆಯುವ ಚಳಿ, ತುಂತುರು ಮಳೆಯನ್ನು ಲೆಕ್ಕಿಸದೇ ಮುಂಜಾನೆಯಿಂದಲೇ ಚಾಮುಂಡಿ ಬೆಟ್ಟಕ್ಕೆ ಬಂದ ಸಾವಿರಾರು ಭಕ್ತರು ಮಹಾಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಪುನೀತರಾದರೆ, ಅತ್ತ ನಂಜನಗೂಡಿನಲ್ಲೂ ದೇವಿ ದರ್ಶನಕ್ಕೆ ಜನಸ್ತೋಮ ಹರಿದು ಬಂತು. ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸುವ ಶಕ್ತಿ ಯೋಜನೆ ಪರಿಣಾಮ ಕಣ್ಣಾಯಿಸಿದೆಲ್ಲೆಡೆ ಮಹಿಳೆಯರ ದಂಡೇ ಕಂಡು ಬಂತು.
ಜಿಲ್ಲೆ, ರಾಜ್ಯ, ಹೊರರಾಜ್ಯದ ಭಕ್ತರು ಮುಂಜಾನೆಯಿಂದಲೇ ಚಾಮುಂಡಿಬೆಟ್ಟಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದರು. ಕೆಲವರು, ಮೆಟ್ಟಿಲುಗಳ ಮೂಲಕ ಬಂದರೆ ಇನ್ನು ಕೆಲವರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಆಗಮಿಸಿದ್ದರು. ಉಚಿತ ಪ್ರವೇಶ, 50, 100, 300 ಸರತಿ ಸಾಲಿನಲ್ಲಿ ನಿಂತು ಸಾವಧಾನವಾಗಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು.
ಆಷಾಢ ಶುಕ್ರವಾರ: ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಮಂದಿ ಭಕ್ತರು ಭೇಟಿ
ವಿಶೇಷ ಪೂಜೆ: ಮುಂಜಾನೆ ಮೂರು ಗಂಟೆಯಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾದವು. ಮೊದಲು ಚಾಮುಂಡೇಶ್ವರಿ ವಿಗ್ರಹವನ್ನು ಶುದ್ಧಗೊಳಿಸಿ, ಬಳಿಕ ವಿಶೇಷವಾಗಿ ಅಲಂಕಾರ ಮಾಡಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಏಕದಶ ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು.
ಬಳಿಕ 5.30 ರಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ಮಧ್ಯೆ ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿ, ಸಂಜೆ 6.30 ರಿಂದ 7 ರವರೆಗೆ ಅಭಿಷೇಕ ನೆರವೇರಿಸಲಾಯಿತು. ರಾತ್ರಿ 9 ಗಂಟೆವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ದರ್ಶನದ ವೇಳೆ ಯಾವುದೇ ನೂಕು ನುಗ್ಗಲಿಗೆ ಅವಕಾಶವಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕುಟುಂಬ, ನಟ ಚಿಕ್ಕಣ್ಣ, ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಸೇರಿದಂತೆ ಹಲವು ಗಣ್ಯರು ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ದೇವಿಗೆ ಮಹಾಲಕ್ಷ್ಮೀ ಅಲಂಕಾರ: ಮೂರನೇ ಆಷಾಢ ಶುಕ್ರವಾರವೂ ಚಾಮುಂಡೇಶ್ವರಿ ದೇವಸ್ಥಾನದ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ತಾಯಿ ಚಾಮುಂಡೇಶ್ವರಿ ವಿಶೇಷ ಮಹಾಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಳು. ನೀಲಿ ಬಾಡರಿನ ಹಸಿರು ಸೀರೆಯುಟ್ಟಚಾಮುಂಡಿಯನ್ನು ನೋಡಲು ಭಕ್ತರು ಮುಗಿಬಿದ್ದರು. ದೇವಾಲಯದ ಇಡೀ ಆವರಣ ವಿಶೇಷ ಹೂಗಳಿಂದ ಕಂಗೊಳಿಸುತ್ತಿತ್ತು. ಪ್ರವೇಶ ದ್ವಾರದಿಂದ ದೇವಸ್ಥಾನದ ಗರ್ಭಗುಡಿವರೆಗೆ ಹೂವುಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಆರ್ಕಿಡ್ ಹೂ, ಗುಲಾಬಿ, ಸೇವಂತಿಗೆ, ಚೆಂಡು ಹೂ ಸೇರಿದಂತೆ ನಾನಾ ಬಗೆಯ ಹೂಗಳಿಂದ ದೇವಸ್ಥಾನದ ಆವರಣ ಕಂಗೊಳಿಸುತ್ತಿತ್ತು. ಹೂವಿನಿಂದ ಚಾಮುಂಡೇಶ್ವರಿ ಅಮ್ಮ ಎಂದು ಅಲಂಕಾರ ಮಾಡಲಾಗಿತ್ತು. ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು.
ತಮಿಳುನಾಡಿಗೆ ನೀರು ಕೊಡಲಾಗದು ಎಂದು ಹೇಳಿ: ರಾಜ್ಯ ಸರ್ಕಾರಕ್ಕೆ ಸಂಸದ ಪ್ರತಾಪ್ ಸಿಂಹ ಆಗ್ರಹ
ಪ್ರಸಾದ ವಿತರಣೆ: ಬೆಟ್ಟಕ್ಕೆ ಆಗಮಿಸಿದ ಭಕ್ತರಿಗೆ ಮಲ್ಟಿಲೆವೆಲ್ ಪಾರ್ಕಿಂಗ್ ಸ್ಥಳದಲ್ಲಿ ದೇವುಬಾಯಿ ರಾಜಾ ವೈದ್ಯಪಂಡಿತ್ ಪಿ.ಎಚ್. ಚಂದ್ರಬಾನ್ ಸಿಂಗ್ ಮೆಮೋರಿಯಲ್ ಹರ್ಬಲ್ ಗಾರ್ಡನ್ ಮತ್ತು ಹೋಲಿಸ್ಟಿಕ್ ಹಾಸ್ಪಿಟಲ್ ಕಾಂಪ್ಲೆಕ್ಸ್ ಟ್ರಸ್ಟ್ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕೇಸರಿಬಾತ್, ಬಾತ್, ಅಲಸಂದೆ ಹುಳಿ, ಅನ್ನ ಸಾಂಬಾರ್, ಮೊಸರು ವಿತರಿಸಲಾಯಿತು. ಬೆಳಗ್ಗೆ 8 ರಿಂದ ಸಂಜೆ 7 ಗಂಟೆಯವರೆಗೂ ಪ್ರಸಾದ ನೀಡಲಾಯಿತು. ಅಲ್ಲದೆ, ನಗರದ ವಿವಿಧೆಡೆ ಇರುವ ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಹಲವೆಡೆ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು. ಎಂಡಿಎ ವೃತ್ತ, ಅಗ್ರಹಾರ, ಚಾಮುಂಡಿಪುರಂ, ಕುವೆಂಪುನಗರ, ಒಂಟಿಕೊಪ್ಪಲು, ಆರ್‌ಟಿಒ ವೃತ್ತ ಸೇರಿದಂತೆ ಹಲವೆಡೆ ಪ್ರಸಾದ ವಿತರಿಸಲಾಯಿತು.