ವೀರ ಸಾವರ್ಕರ್ ಪೈಂಟಿಂಗ್ ಮಾಡಿರೋದು ನಂಗೆ ಹೆಮ್ಮೆ: ಹಿರಿಯ ಚಿತ್ರ ಕಲಾವಿದ ಡಾ ಸುಭಾಷ್ ಕಮ್ಮಾರ್ ಹೇಳಿಕೆ
ವೀರ ಸಾವರ್ಕರ್ ಪೈಂಟಿಂಗ್ ಮಾಡಿರೋದು ನಂಗೆ ಹೆಮ್ಮೆ ಅನ್ಸಿದೆ. ವಿರೋಧ ಪಕ್ಷದವರು ಆರೋಪ ಮಾಡೋದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಸುವರ್ಣ ಸೌಧದಲ್ಲಿ ವೀರ ಸಾವರ್ಕರ್ ಭಾವಚಿತ್ರ ಅನಾವರಣ ವಿವಾದ ಹಿನ್ನಲೆ ಸಾವರ್ಕರ್ ಫೋಟೋ ಪೈಂಟಿಂಗ್ ಮಾಡಿದ ಹಿರಿಯ ಚಿತ್ರ ಕಲಾವಿದ ಡಾ ಸುಭಾಷ್ ಕಮ್ಮಾರ್ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಹೇಳಿಕೆ ನೀಡಿದ್ದಾರೆ.
ಬೆಂಗಳೂರು (ಡಿ.20): ಸುವರ್ಣ ಸೌಧದಲ್ಲಿ ವೀರ ಸಾವರ್ಕರ್ ಭಾವಚಿತ್ರ ಅನಾವರಣ ವಿವಾದ ಹಿನ್ನಲೆ ವೀರ ಸಾವರ್ಕರ್ ಫೋಟೋ ಪೈಂಟಿಂಗ್ ಮಾಡಿದ ಹಿರಿಯ ಚಿತ್ರ ಕಲಾವಿದ ಡಾ ಸುಭಾಷ್ ಕಮ್ಮಾರ್ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಹೇಳಿಕೆ ನೀಡಿದ್ದು, ವೀರ ಸಾವರ್ಕರ್ ಪೈಂಟಿಂಗ್ ಮಾಡಿರೋದು ನಂಗೆ ಹೆಮ್ಮೆ ಅನ್ಸಿದೆ. ವಿರೋಧ ಪಕ್ಷದವರು ಆರೋಪ ಮಾಡೋದು ಅವರ ವಿವೇಚನೆಗೆ ಬಿಟ್ಟಿದ್ದು. ಲಲಿತಾ ಕಲಾ ಅಕಾಡೆಮಿಯಿಂದ ಸಾವರ್ಕರ್ ಫೈಂಟಿಂಗ್ ಆರ್ಡರ್ ಬಂದಿತ್ತು. ಸುವರ್ಣಸೌಧದಲ್ಲಿ ನನ್ನ ಪೈಂಟಿಂಗ್ ಇರುತ್ತೆ ಅಂತಾ ಖುಷಿಯಾಗಿತ್ತು ಹೀಗಾಗಿ ಖುಷಿಯಿಂದ ಒಪ್ಪಿ ಮಾಡಿದ್ದೇನೆ. ಈ ಪೈಂಟಿಂಗ್ ಮಾಡಲು ಸತತ ಮೂರೂವರೆ ತಿಂಗಳು ಹಗಲು ರಾತ್ರಿ ಶ್ರಮ ವಹಿಸಿ ವಿಶೇಷವಾಗಿ ಮಾಡಿದ್ದೇನೆ. ದೇಶಕ್ಕಾಗಿ ಹೋರಾಡಿದ ವೀರ ಸಾವರ್ಕರ್ ಪೈಂಟಿಂಗ್ ಮಾಡುವಾಗ ಒಂದು ಮಗುವನ್ನು ಮುದ್ದಿಸುವಂತೆ ಖುಷಿಪಟ್ಟಿದ್ದೇನೆ ಎಂದಿದ್ದಾರೆ.
ನನ್ನಂತೆ ಇನ್ನಿತರ ಕಲಾವಿದರು ಹಲವರ ಚಿತ್ರ ಪೈಂಟಿಂಗ್ ಮಾಡಿದ್ದಾರೆ, ಇದು ವಿವಾದ ಅನ್ನೋದು ಮೂರ್ಖತನ ಅಷ್ಟೆ. ನನಗ್ಯಾವ ಪಶ್ಚಾತ್ತಾಪವಿಲ್ಲ ಸಾವರ್ಕರ್ ಪೈಂಟಿಂಗ್ ಗೆ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಿದೆ. ಸಿದ್ದರಾಮಯ್ಯ, ಡಿಕೆಶಿ ಫೋಟೋ ಪೈಂಟಿಂಗ್ ಮಾಡಿ ಅಂದ್ರು ನಾನು ಮಾಡ್ತಿನಿ, ಯಾವುದೇ ರಾಜಕೀಯ ಪಕ್ಷದವನು ನಾನಲ್ಲ ಎಂದು ಚಿತ್ರ ಕಲಾವಿದ ಡಾ ಸುಭಾಷ್ ಕಮ್ಮಾರ್ ಹೇಳಿಕೆ ನೀಡಿದ್ದಾರೆ.
ಬ್ರಿಟಿಷರ ಜತೆಗಿದ್ದ ಸಾವರ್ಕರ್ ಫೋಟೋ ಏಕೆ ಬೇಕು: ಡಿಕೆಶಿ
ಸಾವರ್ಕರ್ ಅವರಿಗೆ ರಾಜ್ಯ, ರಾಷ್ಟ್ರ ರಾಜಕಾರಣ ಹಾಗೂ ಸ್ವಾತಂತ್ರ್ಯ ಹೋರಾಟದ ಜತೆ ಯಾವುದೇ ಸಂಬಂಧವಿಲ್ಲ. ಅವರು ಬ್ರಿಟಿಷರ ಜತೆಗಿದ್ದವರು. ತಪ್ಪೊಪ್ಪಿಗೆ ನೀಡಿದ ವಿವಾದಾತ್ಮಕ ವ್ಯಕ್ತಿ. ಅಂತಹ ವ್ಯಕ್ತಿಯ ಭಾವಚಿತ್ರ ಅಳವಡಿಸುವ ಅಗತ್ಯವೇನಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಪ್ರತಿಪಕ್ಷಗಳ ಜತೆ ಚರ್ಚಿಸದೆ ಸಾವರ್ಕರ್ ಸೇರಿದಂತೆ ವಿವಿಧ ಗಣ್ಯರ ಭಾವಚಿತ್ರಗಳನ್ನು ವಿಧಾನಸಭೆ ಸಭಾಂಗಣದಲ್ಲಿ ಅಳವಡಿಸಿದ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಸುವರ್ಣಸೌಧ ಮುಖ್ಯದ್ವಾರದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಶಿವಕುಮಾರ್, ಸ್ವಾತಂತ್ರ್ಯಕ್ಕೆ ಸಾವರ್ಕರ್ ಅವರ ಯಾವುದೇ ಕೊಡುಗೆ ಇಲ್ಲ. ಅವರು ಬ್ರಿಟಿಷರ ಜತೆಗಿದ್ದ ವ್ಯಕ್ತಿ. ಅವರಿಗೂ ರಾಜ್ಯ, ರಾಷ್ಟ್ರ ರಾಜಕಾರಣಕ್ಕೆ ಯಾವುದೇ ಸಂಬಂಧವಿಲ್ಲ. ಹೀಗಾಗಿ ಅವರ ಬದಲಿಗೆ ದೇಶದ ಮೊದಲ ಪ್ರಧಾನ ಮಂತ್ರಿ, ಆಧುನಿಕ ಭಾರತದ ನಿರ್ಮಾತೃ ಜವಾಹರ್ ಲಾಲ್ ನೆಹರೂ, ಶಿಶುನಾಳ ಶರೀಫರು, ವಿಶ್ವಗುರು ಬಸವಣ್ಣ, ನಾರಾಯಣಗುರು, ಕನಕದಾಸರು, ಅಂಬೇಡ್ಕರ್, ಬಾಬು ಜಗಜೀವನ ರಾಮ್, ಸರ್ದಾರ್ ವಲ್ಲಭಭಾಯ್ ಪಟೇಲ್, ಕುವೆಂಪು ಹಾಗೂ ಈ ಭಾಗದ ಪ್ರಮುಖ ವ್ಯಕ್ತಿಗಳ ಭಾವಚಿತ್ರ ಅಳವಡಿಸಬೇಕು ಎಂಬುದು ನಮ್ಮ ಒತ್ತಾಯ ಎಂದು ಹೇಳಿದರು.
ನಾವು ಹುಟ್ಟಿನಿಂದ ಹಿಂದುಗಳು, ಬಿಜೆಯವರದ್ದು ನಾಟಕೀಯ ಹಿಂದುತ್ವ:
ಇದು ಬಿಜೆಪಿಯ ಹಿಂದುತ್ವ ಅಜೆಂಡಾವೇ ಎಂಬ ಪ್ರಶ್ನೆಗೆ ಉತ್ತರಿಸಿ, ‘ನಾವು ಹುಟ್ಟಿನಿಂದಲೇ ಹಿಂದೂಗಳು. ಹಿಂದೂಗಳಾಗಿಯೇ ಹುಟ್ಟಿದ್ದೇವೆ, ಹಿಂದೂಗಳಾಗಿಯೇ ಸಾಯುತ್ತೇವೆ. ಬಿಜೆಪಿಯವರಂತೆ ನಾಟಕೀಯ ಹಿಂದುತ್ವ ನಮ್ಮದಲ್ಲ. ಹಿಂದೂ ಆಚರಣೆಗಳನ್ನೇ ಪಾಲಿಸುತ್ತೇವೆ. ನಮ್ಮಲ್ಲಿ ಹಿಂದೂ ಭಾವ, ಭಕ್ತಿ, ಆಚಾರ, ವಿಚಾರ ಅಡಗಿದೆ. ಆದರೆ ಬಿಜೆಪಿಯವರು ನಾಟಕದ ಹಿಂದುತ್ವ ತೋರುತ್ತಾರೆ ಎಂದು ಕಿಡಿಕಾರಿದರು.
ಸಾವರ್ಕರ್ ಅಂಚೆ ಚೀಟಿ ಬಿಡುಗಡೆ ಮಾಡಿದ್ದೇ ಇಂದಿರಾ ಗಾಂಧಿ ಸರ್ಕಾರ: ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು
ನನಗೆ ಸ್ಪೀಕರ್ ಕಚೇರಿಯಿಂದ ದೂರವಾಣಿ ಕರೆ ಮಾಡಿ ಇಂದು (ಸೋಮವಾರ) ಬೆಳಗ್ಗೆ 10 ಗಂಟೆಗೆ ಮಹಾತ್ಮಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮವಿದೆ. ನೀವು ಆಗಮಿಸಬೇಕು ಎಂದು ಆಹ್ವಾನಿಸಿದ್ದರು. ನಾನು ಬಹಳ ಸಂತೋಷದಿಂದ ಭಾಗವಹಿಸಲು ಒಪ್ಪಿದೆ. ಆದರೆ, ಬಳಿಕ ಸಾವರ್ಕರ್ ಫೋಟೋ ಕೂಡ ಅಳವಡಿಸುವುದಾಗಿ ತಿಳಿದುಬಂದಿತು ಎಂದರು.
Assembly session: ಬೆಳಗಾವಿ ಸುವರ್ಣಸೌಧದಲ್ಲಿ ವೀರ್ ಸಾವರ್ಕರ್ ಫೋಟೋ ಅನಾವರಣ
ಬಿಜೆಪಿಯವರ ಈ ನಡೆ ಹಿಂದೆ ಯಾವ ಅಜೆಂಡಾ ಇದೆ ಎಂಬ ಪ್ರಶ್ನೆಗೆ, ಮಿತಿ ಮೀರಿದ ಭ್ರಷ್ಟಾಚಾರ, ಮತದಾರರ ಮಾಹಿತಿ ಕಳವು, 40 ಪರ್ಸೆಂಟ್ ಕಮಿಷನ್, ಈ ಭಾಗದ ಜನರಿಗೆ ಆಗುತ್ತಿರುವ ಸಮಸ್ಯೆ, ದುರಾಡಳಿತ, ಕಾನೂನು ವ್ಯವಸ್ಥೆಯ ವೈಫಲ್ಯದ ಬಗ್ಗೆ ಚರ್ಚೆಯಾಗಬಾರದು ಎಂಬುದು ಬಿಜೆಪಿಯ ಅಜೆಂಡಾ. ಹೀಗಾಗಿ ಇಂತಹ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಕಿಡಿಕಾರಿದರು.