ಬೆಳಗಾವಿಯ ಅಥಣಿಯಲ್ಲಿ, ಶಾಸಕ ಯತ್ನಾಳ್ ಭಾಷಣಕ್ಕೆ ಪ್ರತ್ಯುತ್ತರ ನೀಡಲು ಯತ್ನಿಸಿದ ಸಚಿವ ಸಂತೋಷ್ ಲಾಡ್, ಶಿವಾಜಿ ಮಹಾರಾಜರ ಇತಿಹಾಸದ ಬಗ್ಗೆ ಮಾತನಾಡಿದರು. ಇದರಿಂದ ಕೆರಳಿದ ಯುವಕರು 'ಜೈ ಶ್ರೀರಾಮ್' ಮತ್ತು 'ಜೈ ಶಿವಾಜಿ' ಘೋಷಣೆ ಕೂಗಿ ಅವರ ಭಾಷಣಕ್ಕೆ ಅಡ್ಡಿ, ಇದು ಸಚಿವರ ಅಸಮಾಧಾನಕ್ಕೆ ಕಾರಣವಾಯಿತು.
ಬೆಳಗಾವಿ, ಅಥಣಿ (ಡಿ.14): ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಭಾಷಣದ ನಂತರ ವೇದಿಕೆಗೆ ಬಂದ ಸಚಿವ ಸಂತೋಷ್ ಲಾಡ್ ಅವರು ಇತಿಹಾಸದ ಕುರಿತು ಯತ್ನಾಳರಿಗೆ ಟಾಂಗ್ ನೀಡಲು ಹೋಗಿ ಯಡವಟ್ಟು ಮಾಡಿಕೊಂಡ ಪ್ರಸಂಗ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ. ಲಾಡ್ ಭಾಷಣ ಮಾಡುತ್ತಿದ್ದಾಗ ಕೆಲ ಯುವಕರು 'ಜೈ ಶ್ರೀರಾಮ್' ಮತ್ತು 'ಜೈ ಶಿವಾಜಿ' ಎಂದು ಘೋಷಣೆ ಕೂಗಿ ಅಡ್ಡಿಪಡಿಸಿದರು.
ಸಚಿವ ಸಂತೋಷ್ ಲಾಡ್ ಭಾಷಣಕ್ಕೆ ಯುವಕರಿಂದ ಅಡ್ಡಿ
ಸಚಿವ ಸಂತೋಷ್ ಲಾಡ್ ಅವರು ಭಾಷಣ ಆರಂಭಿಸುತ್ತಿದ್ದಂತೆ, 'ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿ ಆಗಿರಲಿಲ್ಲ. ಕೆಲವರು ಶಿವಾಜಿಯವರು ಮುಸ್ಲಿಂ ವಿರೋಧಿಯಾಗಿದ್ದರು ಎಂದು ಹೇಳ್ತಾರೆ, ಅದೆಲ್ಲ ಸುಳ್ಳು,' ಎಂದು ಪರೋಕ್ಷವಾಗಿ ಯತ್ನಾಳ್ ಭಾಷಣಕ್ಕೆ ಟಾಂಗ್ ನೀಡುವ ಪ್ರಯತ್ನ ಮಾಡಿದರು.
ಇದಕ್ಕೂ ಮುನ್ನ, ಯತ್ನಾಳ್ ಅವರು ಶಿವಾಜಿ ಸಹೋದರ ಸಂಭಾಜಿ ಮಹಾರಾಜರ ಮೇಲೆ ಮುಸ್ಲಿಂ ಸುಲ್ತಾನರು ನಡೆಸಿದ್ದ ದೌರ್ಜನ್ಯದ ಬಗ್ಗೆ ವಿವರಣೆ ನೀಡಿದ್ದರು. ಆದರೆ, ಲಾಡ್ ಅವರು ಈ ಇತಿಹಾಸ ಸುಳ್ಳು ಎಂದು ವಾದಿಸಿ ಭಾಷಣ ಮಾಡುತ್ತಿದ್ದ ವೇಳೆ, ನೆರೆದಿದ್ದ ಯುವಕರ ಗುಂಪು 'ಜೈ ಶ್ರೀರಾಮ್' ಮತ್ತು 'ಜೈ ಶಿವಾಜಿ' ಎಂದು ಘೋಷಣೆ ಕೂಗಿ ತೀವ್ರ ವಿರೋಧ ವ್ಯಕ್ತಪಡಿಸಿತು.
ಯುವಕರ ಜೊತೆಗೇ ಘೋಷಣೆ ಕೂಗಿದ ಲಾಡ್
ಘೋಷಣೆಗಳು ಹೆಚ್ಚುತ್ತಿದ್ದಂತೆ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ ಸಚಿವ ಲಾಡ್ ಅವರು, ಯುವಕರ ಜೊತೆಗೆ ತಾವೂ ಕೂಡ 'ಜೈ ಶ್ರೀರಾಮ್, ಜೈ ಶಿವಾಜಿ' ಎಂದು ಘೋಷಣೆ ಕೂಗಿದರು. ನಂತರ ಯುವಕರನ್ನುದ್ದೇಶಿಸಿ, 'ಹೀಗೆ ಕೂಗಾಡಬೇಡಿ, ಇದು ಸರಿಯಾದ ಮಾರ್ಗವಲ್ಲ (Not the correct way) ಎಂದು ಎಚ್ಚರಿಕೆ ನೀಡಿದರು.
ಗರಂ ಆದ ಸಚಿವ ಸಂತೋಷ್ ಲಾಡ್
ಆದರೆ, ಯುವಕರು ಭಾಷಣಕ್ಕೆ ಅಡ್ಡಿಪಡಿಸುವುದನ್ನು ಮುಂದುವರೆಸಿದಾಗ ಲಾಡ್ ಒಂದು ಕ್ಷಣ ಗರಂ ಆದರು. 'ಏಯ್ ಯಾರು, ಯಾಕೆ ಮಾತಾಡ್ತಿದಿರಾ? ಇಲ್ಲಿ ಯಾರೂ ಇತಿಹಾಸದ ಬಗ್ಗೆ ಸುಳ್ಳು ಹೇಳಬಾರದು. ನಾನೂ ಮರಾಠಾ ಸಮುದಾಯದವನೇ, ಎಂದು ಗಡಸು ಧ್ವನಿಯಲ್ಲಿ ಹೇಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ, ಯತ್ನಾಳ್ ಭಾಷಣಕ್ಕೆ ಪ್ರತ್ಯುತ್ತರ ನೀಡಲು ಹೋಗಿ ಸಚಿವ ಸಂತೋಷ್ ಲಾಡ್ ಅವರು ವೇದಿಕೆಯಲ್ಲೇ ಯುವಕರ ವಿರೋಧವನ್ನು ಎದುರಿಸುವಂತಾಯಿತು.


