ಸ್ಯಾಂಡಲ್‌ವುಡ್ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಎವಿಆರ್ ಗ್ರೂಪ್ ಸ್ಥಾಪಕ ಮತ್ತು ಬಳ್ಳಾರಿ ಟಸ್ಕರ್ ತಂಡದ ಮಾಲೀಕ ಅರವಿಂದ್ ವೆಂಕಟೇಶ್ ರೆಡ್ಡಿಯನ್ನು ಬಂಧಿಸಲಾಗಿದೆ.

ಬೆಂಗಳೂರು: ಚಂದನವನದ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಎವಿಆರ್ ಗ್ರೂಪ್ ಸ್ಥಾಪಕ, ಬಳ್ಳಾರಿ ಟಸ್ಕರ್ ತಂಡದ ಮಾಲೀಕ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿಯನ್ನು ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಎಸಿಪಿ ಚಂದನ್ ಮತ್ತು ತಂಡ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಲಾಗಿದೆ. ಲೈಂಗಿಕ ಕಿರುಕುಳ ಸಂಬಂಧ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಐದು ದಿನದ ಹಿಂದೆ ಕೇಸ್ ಗೋವಿಂದರಾಜನಗರಕ್ಕೆ ವರ್ಗಾವಣೆಯಾಗಿತ್ತು. ನಂತರ ಆರೋಪಿ ಅರವಿಂದ್ ವೆಂಕಟೇಶ್ ರೆಡ್ಡಿ ಬಂಧನಕ್ಕೆ ಎಸಿಪಿ ಚಂದನ್ ಮತ್ತು ಸುಬ್ರಹ್ಮಣಿ ತಂಡ ರಚಿಸಲಾಗಿತ್ತು.

2021ರಲ್ಲಿ ನಟಿಗೆ ಪರಿಚಯವಾದ ಅರವಿಂದ್ ರೆಡ್ಡಿ

2021ರಲ್ಲಿ ನಟಿಗೆ ಅರವಿಂದ್ ರೆಡ್ಡಿಯ ಪರಿಚಯವಾಗಿತ್ತು. ನಂತರ ಮಾರ್ಚ್ 2022ರರಲ್ಲಿ ನಟಿಯನ್ನು ಶ್ರೀಲಂಕಾದ ಲಾರ್ಸ್ ಕ್ರಿಕೆಟ್ ಕಪ್ ಉದ್ಘಾಟನಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಅಂದಿನಿಂದ ಅರವಿಂದ್ ರೆಡ್ಡಿಯೊಂದಿಗೆ ನಟಿ ಚೆನ್ನಾಗಿ ಮಾತನಾಡಿಕೊಂಡಿದ್ದರು. ಕೆಲ ದಿನಗಳ ಬಳಿಕ ನಟಿ ಅರವಿಂದ್ ರೆಡ್ಡಿಯ ಮಾನಸಿಕ ಸ್ಥಿತಿ ಮತ್ತು ಕುಡಿತದ ಚಟ ಗಮನಿಸಿದ್ದರು. ಆಗಸ್ಟ್ 2022ರಿಂದ ಅರವಿಂದ್ ರೆಡ್ಡಿಯಿಂದ ನಟಿ ಅಂತರ ಕಾಯ್ದುಕೊಂಡಿದ್ದರು. 2023ರಿಂದ ನಟಿಯ ಸಂಪರ್ಕಕ್ಕೆ ಅರವಿಂದ್ ರೆಡ್ಡಿ ಪ್ರಯತ್ನಿಸಿದ್ದನು.

ನಟಿ ಹಿಂದೆ ಓಡಾಡುವುದು, ಬಲವಂತವಾಗಿ ಸಂಬಂಧ ಇಟ್ಟುಕೊಳ್ಳುವಂತೆ ಒತ್ತಡ, ಲೋಕೇಷನ್ ಟ್ರಾಕ್ ಮಾಡುವುದು, ಇನ್ಸ್ಟಾಗ್ರಾಮ್ ನಲ್ಲಿ ನಟಿಯ ಮಾರ್ಫ್ ಮಾಡಿದ ಫೋಟೊ ಪೋಸ್ಟ್ ಮಾಡುವ ಮೂಲಕ ನಟಿಗೆ ಅವಮಾನ ಮಾಡಲು ಅರವಿಂದ್ ರೆಡ್ಡಿ ಪ್ರಯತ್ನಿಸುತ್ತಿದ್ದನು. ಮನೆ ಬಳಿ ಹುಡುಗರನ್ನು ಕಳಿಸಿ ನಟಿಯ ತಂದೆ-ತಾಯಿಗೆ ಬೆದರಿಕೆ, ತಮ್ಮನನ್ನ ಕೊ*ಲೆ ಮಾಡೋದಾಗಿ ಹೆದರಿಸಿದ್ದನು. 2024ರ ಏಪ್ರಿಲ್ ತಿಂಗಳಿನಲ್ಲಿ ಅರವಿಂದ ಕಿರುಕುಳ ಹೆಚ್ಚಾಗಿತ್ತು ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆತ್ಮ*ಹತ್ಯೆಗೆ ಯತ್ನಿಸಿದ್ದ ನಟಿ?

ಕರೆಮಾಡಿ ನಾನು ವಾಸ ಮಾಡುತ್ತಿದ್ದ ಮನೆಗೆ ಬರೋದಾಗಿ ಹೆದರಿಸಿದ್ದ. ಅಷ್ಟೇ ಅಲ್ಲದೆ ಬಂದು ನಾಳೆ ಬೆಳಗ್ಗೆ ನಿನ್ನ ಜೊತೆಗೆ ಮದುವೆಯಾಗುತ್ತೇನೆ ಎಂದು ಭಯ ಮೂಡಿಸಿದ್ದನು. ಈ ವೇಳೆ ನೂರು ಮಾತ್ರೆಗಳನ್ನು ನುಂಗಿ ಆತ್ಮ*ಹತ್ಯೆಗೆ ನಟಿ ಯತ್ನಿಸಿದ್ದರು. ನಂತರ ಆರೋಪಿ ಸ್ನೇಹಿತ ಶೈಲೇಶ್ ಮೂಲಕ ನಟಿಯನ್ನು ಜೆ.ಪಿ.ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪೊಲೀಸರು ಭೇಟಿ ನೀಡಿದ್ದಾಗಲೂ ಸುಳ್ಳು ಹೇಳುವಂತೆ ಒತ್ತಡ ಹಾಕಿದ್ದನು. ನಾನು ಇವತ್ತೇ ನಿನ್ನ ಸಹವಾಸ ಬಿಡುತ್ತೇನೆ ಎಂದು ಹೇಳಿ ಪೊಲೀಸರ ಮುಂದೆ ಸುಳ್ಳು ಹೇಳಿಸಿದ್ದನು. ನಂತರ ಮಾರತಹಳ್ಳಿಯ ಸ್ನೇಹಿತರ ಆಸ್ಪತ್ರೆಗೆ ನಟಿಯನ್ನು ಅರವಿಂದ್ ರೆಡ್ಡಿ ಶಿಫ್ಟ್ ಮಾಡಿದ್ದನು.

ಅನುಸರಿಸಿಕೊಂಡು ಹೋಗುವಂತೆ ಹೇಳಿದ್ದ ಆರೋಪಿ ತಾಯಿ

ಈ ವೇಳೆ ಆಸ್ಪತ್ರೆಯಲ್ಲಿ ನಟಿಯೊಂದಿಗೆ ಅರವಿಂದ್ ರೆಡ್ಡಿ ಮತ್ತು ಆತನ ಸೋದರ ವಿಶ್ವನಾಥ್ ಇಬ್ಬರೇ ಇದ್ದರು. ಈ ವಿಷಯವನ್ನು ನಟಿಯ ಪೋಷಕರಿಗೆ ತಿಳಿಸಿರಲಿಲ್ಲ. ಈ ವೇಳೆ ನಟಿಯ ಫೋನ್ ಸಹ ಅರವಿಂದ್ ರೆಡ್ಡಿ ತೆಗೆದುಕೊಂಡಿದ್ದನು. ನನ್ನ ಮನೆಯವರಿಗೆ ವಿಷಯ ತಿಳಿಸಬೇಕು, ಫೋನ್ ನೀಡುವಂತೆ ನಟಿ ಮನವಿ ಮಾಡಿಕೊಂಡಿದ್ದರು. ನನ್ನ ಬಿಟ್ಟು ಬಿಡು, ನಮ್ಮಿಬ್ಬರ ಸಂಬಂಧ ಮುಂದುವರೆಸುವುದು ಕಷ್ಟ ಎಂದು ಹೇಳಿದ್ದರು. ಇದರಿಂದ ಕೋಪಗೊಂಡು ಅರವಿಂದ್ ರೆಡ್ಡಿ ನಟಿಯ ಬಟ್ಟೆ ಹರಿದು ಅರೆಬೆತ್ತಲೆ ಮಾಡಿ ಚಿತ್ರಹಿಂಸೆ ನೀಡಿದ್ದನು. ನಟಿ ಈ ವಿಷಯವನ್ನು ಅರವಿಂದ್ ರೆಡ್ಡಿ ತಾಯಿಗೂ ತಿಳಿಸಿದ್ದರು. ಅನುಸರಿಸಿಕೊಂಡು ಹೋಗು ಎಂದು ಆರೋಪಿ ತಾಯಿ ಹೇಳಿದ್ದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ನಟಿ ದೂರು

ಇದಾದ ಬಳಿಕ ನಾನು ನೀಡಿದ ಎಲ್ಲಾ ವಸ್ತುಗಳನ್ನು ಹಿಂದಿರುಗಿಸಬೇಕು ಮತ್ತು 1 ಕೋಟಿ ಹಣ ನೀಡುವಂತೆ ಅರವಿಂದ್ ರೆಡ್ಡಿ ಡಿಮ್ಯಾಂಡ್ ಮಾಡಿದ್ದನು. ಟಿ ಅಪ್ಪ-ಅಮ್ಮನಿಗೆ ಹಣಕೊಡುವಂತೆ ಮನೆಯ ಬಳಿ ಹೋಗಿ ಗಲಾಟೆ ಸಹ ಮಾಡಿದ್ದನು.ಜೂನ್ 14,2024 ರಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ನಟಿ ದೂರು ನೀಡಿದ್ದರು. ಇದಕ್ಕೂ ಒಂದು ವಾರದ ಮೊದಲು ಬನಶಂಕರಿ ಸೈಬರ್ ಕ್ರೈಂ ಠಾಣೆಯಲ್ಲಿ ತನ್ನ ಚಿತ್ರವನ್ನು ಅಶ್ಲೀಲವಾಗಿ ಮಾರ್ಫ್ ಮಾಡಿ ಪೋಸ್ಟ್ ಮಾಡಿದ್ದ ಕುರಿತು ದೂರು ನೀಡಿದ್ದರು. ಮಹಿಳಾ ಆಯೋಗಕ್ಕೆ ನೀಡಿದ್ದ ದೂರು ಸಂಬಂಧ ಆರ್.ಆರ್.ನಗರ ಠಾಣೆಯಲ್ಲಿ‌ ಎನ್‌ಸಿಆರ್ ದಾಖಲಾಗಿತ್ತು. ಇದಾದ ಬಳಿಕ ಅರವಿಂದ್ ರೆಡ್ಡಿ ಮುಚ್ಚಳಿಕೆ ಬರೆದುಕೊಟ್ಟಿದ್ದನು. ಮುಚ್ಚಳಿಕೆ ಬರೆದುಕೊಟ್ಟ ನಂತರ ಒಂದು ವರ್ಷ ನಟಿಯಿಂದ ಆರೋಪಿ ಅಂತರ ಕಾಯ್ದುಕೊಂಡಿದ್ದನು.

ಇದನ್ನೂ ಓದಿ: ಸ್ಪೋಟಕ್ಕೂ ಮೊದಲು ದುಬೈಗೆ ಪರಾರಿಯಾಗಲು ಪ್ಲಾನ್ ಮಾಡಿದ್ದ ಟೆರರ್ ಡಾಕ್ಟರ್ ಶಾಹೀನಾ

ನಟಿ ವಿರುದ್ಧ ಅರವಿಂದ್ ರೆಡ್ಡಿ ಆರೋಪ

ಒಂದು ವರ್ಷದ ಬಳಿಕ ನಟಿಯ ಸ್ನೇಹಿತನ ಪತ್ನಿಗೆ ಮತ್ತು ನಟಿ ವಾಸವಿರುವ ಮನೆ ಮಾಲೀಕನಿಗೆ ಅನಾಮಧೇಯ ಪತ್ರ ಬರೆದಿದ್ದನು. ನಟಿ ಮನೆಯಲ್ಲಿ ವೇಶ್ಯವಾಟಿಕೆ ನಡೆಸುತ್ತಿದ್ದಾಳೆ ಎಂದು ಆರೋಪಿಸಲಾಗಿತ್ತು. ಇದೆಲ್ಲದಕ್ಕೂ ಅರವಿಂದ್ ರೆಡ್ಡಿ ಕಾರಣ ಎಂದು ಅನುಮಾನಿಸಿ ನಟಿ ಆರ್.ಆರ್‌.ನಗರ ಠಾಣೆಗೆ ದೂರು ನೀಡಿದ್ದರು. ದೂರು ನೀಡಿದ ಬಳಿಕವೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ನಟಿ ಅರೋಪಿಸಿದ್ದರು. ನಂತರ ಪ್ರಕರಣವನ್ನು ಗೋವಿಂದರಾಜ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಇಂದು ಬೆಳಗಿನ ಜಾವ 4 ಗಂಟೆಗೆ ಆರೋಪಿಯ ಬಂಧನ ಮಾಡಲಾಗಿದೆ.

ಪೊಲೀಸರ ಮುಂದೆ ನಟಿಗಾಗಿ ಮೂರು ಕೋಟಿ ಹಣ ಖರ್ಚು ಮಾಡಿದ್ದೇನೆ. ಆಕೆಗೆ ಸೈಟ್, ಮನೆ ಕೊಡಿಸಿದ್ದೇನೆ. ದುಬಾರಿ ಕಾರನ್ನು ಗಿಫ್ಟ್ ಮಾಡಿದ್ದೇನೆ. ನನ್ನ ಬಿಟ್ಟು ಆಕೆ ಬೇರೆ ವ್ಯಕ್ತಿ ಜೊತೆಗೆ ಕಾಣಿಕೊಳ್ಳುತ್ತಿದ್ದಳು ಎಂದು ನಟಿ ವಿರುದ್ಧ ಅರವಿಂದ್ ರೆಡ್ಡಿ ಆರೋಪ ಮಾಡಿದ್ದಾನೆ.

ಇದನ್ನೂ ಓದಿ: ಸಿಂಪಲ್ ಸುನಿ ಗತವೈಭವ ವಿಮರ್ಶೆ: ಪ್ರೀತಿ ಬಣ್ಣ ಹಚ್ಕೊಂಡ್ಮೇಲೆ ಲೈಫು ಹಿಂಗೇನೆ..