Terror Doctor Dr Shaheena Syed: ಟೆರರ್‌ ಡಾಕ್ಟರ್‌ ಡಾ. ಶಾಹೀನಾ ಸೈಯದ್ ಘಟನೆ ನಡೆಯುವ ಕೆಲ ದಿನಗಳ ಹಿಂದಷ್ಟೇ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದಳು. ವಿಧ್ವಂಸಕ ಕೃತ್ಯಗಳಿಗೆ ಅಂತಿಮ ರೂಪ ನೀಡುವವರೆಗೆ ದುಬೈಗೆ ಪಲಾಯನ ಮಾಡಲು ಪ್ಲಾನ್ ಮಾಡಿದ್ದುಳು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. 

ದೆಹಲಿ ಸ್ಫೋಟಕ್ಕೂ ಮೊದಲು ದೇಶ ಬಿಟ್ಟು ಪರಾರಿಯಾಗುವ ಪ್ಲಾನ್ ಮಾಡಿದ್ದ ಶಾಹೀನಾ

ಫರಿದಾಬಾದ್: ದೆಹಲಿ ಕಾರು ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಹಾಗೂ ಸುಶಿಕ್ಷಿತ ವೈಟ್ ಕಾಲರ್ ಭಯೋತ್ಪಾದಕ ಘಟಕದಲ್ಲಿ ಸಕ್ರಿಯವಾಗಿ ಫರಿದಾಬಾದ್‌ನಲ್ಲಿ 3000 ಕೆಜಿ ಸ್ಫೋಟಕ ಸಂಗ್ರಹ ಪ್ರಕರಣದಲ್ಲಿ ಆರೋಪಿಯಾಗಿರುವ ವೈದ್ಯೆ ಡಾ ಶಾಹೀನಾ ಸೈಯದ್ ಘಟನೆ ನಡೆಯುವ ಕೆಲ ದಿನಗಳ ಹಿಂದಷ್ಟೇ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದಳು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯೆ ಡಾ. ಶಾಹೀನ್ ಶಾಹಿದ್ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ತಮ್ಮ ಈ ವಿಧ್ವಂಸಕ ಕೃತ್ಯಗಳಿಗೆ ತಮ್ಮ ಸಹಚರರು ಅಂತಿಮ ರೂಪ ನೀಡುವವರೆಗೆ ದುಬೈಗೆ ಪಲಾಯನ ಮಾಡಲು ಪ್ಲಾನ್ ಮಾಡಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಟೆರರ್ ಡಾಕ್ಟರ್

ಆದರೆ ಜಮ್ಮು ಮತ್ತು ಕಾಶ್ಮೀರ, ಸಹರಾನ್‌ಪುರ ಮತ್ತು ಫರಿದಾಬಾದ್‌ನಲ್ಲಿ ವೈದ್ಯ ಹುದ್ದೆಯ ಸೋಗಿನಲ್ಲಿದ್ದ ಶಂಕಿತರ ಬಂಧನದ ನಂತರ ಈ ವೈಟ್ ಕಾಲರ್ ಭಯೋತ್ಪಾದಕ ಘಟಕದ ಒಂದೊಂದೇ ಮುಖವಾಡ ಕಳಚಿ ಬಿದ್ದಿತ್ತು. ಹೀಗಾಗಿ ಆಕೆ ದುಬೈಗೆ ಹಾರುವ ಮೊದಲೇ ಪೊಲೀಸರು ಆಕೆಯನ್ನು ಜಾಮ್ ಮಾಡಿದರು.

ಅಕ್ಟೋಬರ್ 30 ರಂದು ಶಾಹೀನಾಳ ಸಹೋದ್ಯೋಗಿ ಡಾ. ಮುಜಮ್ಮಿಲ್ ಅಹ್ಮದ್ ಗನೈನನ್ನು ಬಂಧಿಸಿದ ನಂತರ, ಆತ ಶಾಹೀನಾಳ ಸ್ವಿಫ್ಟ್ ಡಿಜೈರ್ ಕಾರನ್ನು ಬಳಸುತ್ತಿರುವುದು ಕಂಡುಬಂದಿತು. ಆ ಕಾರಿನಿಂದ ಒಂದು ಅಸಾಲ್ಟ್ ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಪೊಲೀಸ್ ಮೂಲಗಳು ತಿಳಿಸುವಂತೆ ಇದೆಲ್ಲಾ ಆಗುವುದಕ್ಕೂ ಮೊದಲೇ ಶಾಹೀನಾ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದಳು. ಪಾಸ್‌ಪೋರ್ಟ್ ಪ್ರಕ್ರಿಯೆಯ ಭಾಗವಾಗಿ ನವೆಂಬರ್ 3 ರಂದು ಫರಿದಾಬಾದ್‌ನ ಒಬ್ಬ ಪೊಲೀಸ್ ಅಧಿಕಾರಿ ಅಲ್-ಫಲಾಹ್ ಕ್ಯಾಂಪಸ್‌ನಲ್ಲಿಆಕೆಯನ್ನ ಭೇಟಿ ಮಾಡಿ ಛಾಯಾಚಿತ್ರವನ್ನು ತೆಗೆದುಕೊಂಡಿದ್ದರು. ಆದರೆ ವಿಚಿತ್ರ ಎಂದರೆ ಇದೇ ಸಮಯದಲ್ಲಿ ಭದ್ರತಾ ಸಂಸ್ಥೆಯ ಅಧಿಕಾರಿಗಳು ಆಕೆಯ ಪತ್ತೆಗೆ ಬಲೆ ಬೀಸಿದ್ದರು. ಅಂತಿಮವಾಗಿ ನವೆಂಬರ್ 11 ರಂದು ಲಕ್ನೋದಲ್ಲಿ ಆಕೆಯನ್ನು ಬಂಧಿಸಲಾಯಿತು.

ಜಮ್ಮು ಕಾಶ್ಮೀರ ಪೊಲೀಸರು ಆರಂಭದಲ್ಲಿ ನಮ್ಮ ಜೊತೆ ಯಾವುದೇ ವಿವರಗಳನ್ನು ಹಂಚಿಕೊಂಡಿರಲಿಲ್ಲ, ಅಲ್ಲಿ(ಜಮ್ಮುಕಾಶ್ಮೀರ) ಕೆಲವು ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಅಂಟಿಸುವಲ್ಲಿ ಭಾಗಿಯಾಗಿದ್ದಕ್ಕಾಗಿ ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯನೊಬ್ಬನನ್ನು ಬಂಧಿಸಲು ನಾವು ಇಲ್ಲಿಗೆ ಬಂದಿದ್ದೇವೆ ಎಂದಷ್ಟೇ ನಮಗೆ ತಿಳಿಸಿದರು. ಕೆಲವು ದಿನಗಳ ನಂತರ ನಮಗೆ ಪ್ರಕರಣದ ಬಗ್ಗೆ ತಿಳಿಯಿತು ಎಂದು ಫರಿದಾಬಾದ್‌ನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ನಡುವೆ ನವೆಂಬರ್ 9 ರಂದು, ಫರಿದಾಬಾದ್‌ನ ಎರಡು ಬಾಡಿಗೆಗೆ ಪಡೆದ ಸ್ಥಳಗಳಿಂದ ಪೊಲೀಸರು ಸುಮಾರು 3,000 ಕೆಜಿ ಅಮೋನಿಯಂ ನೈಟ್ರೇಟ್ ಮತ್ತು ಇತರ ಸ್ಫೋಟಕ ವಸ್ತುಗಳನ್ನು ಸೀಜ್ ಮಾಡಿದ್ದರು. ಇದೇ ದಿನವೇ ಶಾಹೀನಾಳ ಸ್ವಿಫ್ಟ್ ಡಿಜೈರ್‌ ಕಾರ್‌ನಲ್ಲಿ ಕ್ರಿಂಕೋವ್ ಅಸಾಲ್ಟ್ ರೈಫಲ್ ಪತ್ತೆಯಾಗಿತ್ತು. ಇದುವೇ ಪೊಲೀಸರು ಆಕೆಯನ್ನು ಬಲೆಗೆ ಕೆಡವುದಕ್ಕೆ ಕಾರಣವಾಗಿತ್ತು.

ಶಾಹೀನಾಳ ಹೆಸರಲ್ಲಿ ನೋಂದಣಿಯಾಗಿದ್ದ ಮಾರುತಿ ಬ್ರೇಝಾ ಕಾರು ಪತ್ತೆ

ಶಾಹೀನಾಳ ಡಿಜೈರ್ ಕಾರನ್ನು ಬಳಸುತ್ತಿದ್ದ ಮುಜಮ್ಮಿಲ್, ಅಮೋನಿಯಂ ನೈಟ್ರೇಟ್ ದಾಸ್ತಾನು ಮಾಡುವುದಕ್ಕೆ ಅದನ್ನು ಬಳಸಿದ್ದ. ನವೆಂಬರ್ 10 ರ ದೆಹಲಿ ಸ್ಫೋಟದ ಹಿಂದಿನ ಭಯೋತ್ಪಾದಕರ ಪ್ಲಾನ್‌ಗೆ ಸಂಬಂಧಿಸಿದ ಮೂರು ಕಾರುಗಳಲ್ಲಿ ಒಂದಾದ ಮಾರುತಿ ಬ್ರೆಝಾ ಕಾರನ್ನು ಸೆಪ್ಟೆಂಬರ್‌ನಲ್ಲಿ ಶಾಹೀನಾಳ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ನವಂಬರ್ 13ರಂದು ಅದನ್ನು ಅಲ್-ಫಲಾಹ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪತ್ತೆಹಚ್ಚಲಾಗಿದೆ. ಶಾಹೀನಾಳ ವಿಚಾರಣೆಯ ಸಮಯದಲ್ಲಿ ವಾಹನವನ್ನು ಅಲ್ಲಿ ನಿಲ್ಲಿಸಲಾಗಿದೆ ಎಂದು ತಿಳಿದ ನಂತರ ಅದರ ಕೀಲಿಯೊಂದಿಗೆ ಜೆ & ಕೆ ಪೊಲೀಸರು ಬಂದಿದ್ದರು ಎಂದು ಫರಿದಾಬಾದ್ ಪೊಲೀಸರು ತಿಳಿಸಿದ್ದಾರೆ. ಮುಜಮ್ಮಿಲ್ ವಾಸಿಸುತ್ತಿದ್ದ ಟವರ್ 17 ಬಳಿ ಈ ಬ್ರೆಝಾ ಕಾರು ಪತ್ತೆಯಾಗಿದೆ.

ಕಾಶ್ಮೀರದ ವಿದ್ಯಾರ್ಥಿಗಳು ವೈದ್ಯರೇ ಟಾರ್ಗೆಟ್

ಅಲ್-ಫಲಾಹ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಭಯೋತ್ಪಾದಕ ಘಟಕವನ್ನು ಶಾಹೀನಾ ಮುನ್ನಡೆಸುತ್ತಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಚಟುವಟಿಕೆಯಲ್ಲಿ ಭಾಗಿಯಾಗಿರುವ ವೈದ್ಯರ ನಡುವೆ ಘರ್ಷಣೆಗಳು ಉಂಟಾದಾಗಲೆಲ್ಲಾ ಶಾಹೀನಾ ವಿವಾದಗಳನ್ನು ಬಗೆಹರಿಸಲು ಮುಂದಾಗುತ್ತಿದ್ದರು. ಈ ಗುಂಪು ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಅವರ ಸ್ವಂತ ರಾಜ್ಯ(ಜಮ್ಮು ಕಾಶ್ಮೀರ) ಅಥವಾ ಆ ಪ್ರದೇಶದ ವೈದ್ಯರನ್ನೆ ಈ ಜಾಲಕ್ಕೆ ಸೇರಿಸಿಕೊಳ್ಳುವ ಗುರಿ ಹೊಂದಿದ್ದರು. ದೆಹಲಿ ಸ್ಫೋಟದೊಂದಿಗೆ ಈಗ ಹಲವಾರು ವ್ಯಕ್ತಿಗಳು ಭದ್ರತಾಪಡೆಗಳ ರೆಡ್‌ ಕಾರ್ನರ್‌ನಲ್ಲಿದ್ದಾರೆ.

ನುಹ್‌ನಿಂದ ಒಂದು ವಾರದಲ್ಲಿ ಐವರ ಬಂಧನ

ಹರ್ಯಾಣದ ನುಹ್‌ನಿಂದ ಒಂದು ವಾರದಲ್ಲಿ ಕೇಂದ್ರೀಯ ತನಿಖಾ ಐದು ಜನರನ್ನು ಬಂಧಿಸಿದ್ದಾರೆ. ಅವರಲ್ಲಿ ಮೂವರು ಎಂಬಿಬಿಎಸ್ ವೈದ್ಯರು, ಓರ್ವ ರಸಗೊಬ್ಬರ ಮಾರಾಟಗಾರ ಮತ್ತೊರ್ವ ಮುಸ್ಲಿಂ ಧರ್ಮಗುರು. ಗುರುವಾರ ರಾತ್ರಿ ಫಿರೋಜ್‌ಪುರ ಝಿರ್ಕಾದಿಂದ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ. ಅವರಲ್ಲೊರ್ವ ಶಂಕಿತಾ ಸುನೆಹ್ರಾದವನು. ಆತಚೀನಾದಲ್ಲಿ ಎಂಬಿಬಿಎಸ್ ಮುಗಿಸಿ ನವೆಂಬರ್ 2 ರವರೆಗೆ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಹಾಗೆಯೇ ಇನ್ನೊರ್ವ ಅಹ್ಮದ್‌ಬಾಸ್ ಗ್ರಾಮದವನಾಗಿದ್ದು, ಅಲ್ ಫಲಾಹ್‌ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದ.

ಇಬ್ಬರೂ ದೆಹಲಿ ಸ್ಫೋಟದ ಬಾಂಬರ್ ಆಗಿದ್ದ ಡಾ. ಉಮರ್ ಉನ್ ನಬಿಗೆ ಆಪ್ತರಾಗಿದ್ದರು. ಉಮರ್ ನಬಿ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ 13 ಜನರ ಸಾವಿಗೆ ಕಾರಣವಾದ ಸ್ಫೋಟವಾದ ಹುಂಡೈ i20 ಕಾರಿನಲ್ಲಿದ್ದ. ಈ ಕಾರು ದೆಹಲಿಗೆ ಪ್ರವೇಶಿಸುವ ಮೊದಲು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಮತ್ತು ಫಿರೋಜ್‌ಪುರ್ ಝಿರ್ಕಾದಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಗೆಯೇ ಟೌರು ಪಟ್ಟಣದಿಂದ ಬಂಧಿತನಾದ ಮೂರನೇ ವೈದ್ಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಅಲ್-ಫಲಾಹ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಆಗಿದ್ದ.

ಶುಕ್ರವಾರ ಎನ್‌ಐಎ ತಂಡಗಳು ಪಿನಾಂಗ್ವಾನ್ ಸೇರಿದಂತೆ ನುಹ್‌ನ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿವೆ. ಶಂಕಿತರ ಉಗ್ರರಿಗೆ 300 ಕೆಜಿ ಅಮೋನಿಯಂ ನೈಟ್ರೇಟ್ ಪೂರೈಸಿದ ಆರೋಪದ ಮೇಲೆ ರಸಗೊಬ್ಬರ ಮಾರಾಟಗಾರನನ್ನು ಬಂಧಿಸಲಾಗಿದೆ ಮತ್ತು ಇತರ ಕೆಲವರನ್ನು ವಿಚಾರಣೆಗಾಗಿ ಬಂಧಿಸಲಾಗಿದೆ. ರಾಸಾಯನಿಕವನ್ನು ಮಾರಾಟ ಮಾಡಲು ಅವರಿಗೆ ಪರವಾನಗಿ ನೀಡಲಾಗಿದ್ದರೂ, ಬೃಹತ್ ಖರೀದಿಯ ಉದ್ದೇಶವನ್ನು ಪರಿಶೀಲಿಸಲು ಅವರು ವಿಫಲರಾಗಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಫರಿದಾಬಾದ್‌ನಾದ್ಯಂತ ಕೂಂಬಿಂಗ್ ಮತ್ತು ಶೋಧ

ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ, ಸ್ಥಳೀಯ ಪೊಲೀಸ್ ಘಟಕಗಳು ಫರಿದಾಬಾದ್‌ನಾದ್ಯಂತ ಕೂಂಬಿಂಗ್ ಮತ್ತು ಶೋಧ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿವೆ. ಎನ್‌ಐಟಿ, ಬಲ್ಲಭಗಢ ಮತ್ತು ಕೇಂದ್ರ ವಲಯದ ಘಟಕಗಳು ಶುಕ್ರವಾರ ಸೂಕ್ಷ್ಮ ಪ್ರದೇಶಗಳು, ಮಾರುಕಟ್ಟೆಗಳು ಮತ್ತು ಜನದಟ್ಟಣೆ ಇರುವ ನೆರೆಹೊರೆಗಳಲ್ಲಿ ವ್ಯಾಪಕ ತಪಾಸಣೆ ನಡೆಸಿವೆ. ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಆದಷ್ಟು ಬೇಗ ಪತ್ತೆಹಚ್ಚಲು ವಿಶೇಷ ತಂಡಗಳು ನಿರಂತರ, ತೀವ್ರವಾದ ತಪಾಸಣೆ ನಡೆಸುತ್ತಿವೆ ಎಂದು ಪೊಲೀಸ್ ವಕ್ತಾರ ಯಶ್ಪಾಲ್ ತಿಳಿಸಿದ್ದಾರೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಜಾರಿ

ಉಗ್ರರ ಜಾಲ ಬಹಳ ವ್ಯಾಪಕವಾದ ಹಿನ್ನೆಲೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023 ರ ಸೆಕ್ಷನ್ 163 ರನ್ನು ಜಾರಿಗೊಳಿಸಿದ್ದಾರೆ. ಇದರ ಅನ್ವಯ ಹೋಟೆಲ್‌ಗಳು, ಅತಿಥಿ ಗೃಹಗಳು, ಪಿಜಿ ವಸತಿಗೃಹಗಳು, ಬಾಡಿಗೆದಾರರು, ಸೈಬರ್ ಕೆಫೆಗಳು ಮತ್ತು ಬಳಸಿದ ವಾಹನಗಳ ವ್ಯಾಪಾರಿಗಳು, ಪಿಜಿಗಳು, ಧರ್ಮಶಾಲೆಗಳು ಮತ್ತು ಆಸ್ಪತ್ರೆಗಳು ತಮ್ಮ ಆವರಣದಲ್ಲಿ ತಂಗುವ ಪ್ರತಿಯೊಬ್ಬ ವ್ಯಕ್ತಿಯ ಐಡಿ ವಿವರಗಳನ್ನು ದಾಖಲಿಸುವುದು ಮತ್ತು ಸಂರಕ್ಷಿಸುವುದು ಅಗತ್ಯವಾಗಿದೆ. ಯಾವುದೇ ಹೋಟೆಲ್, ಅತಿಥಿ ಗೃಹ, ಪಿಜಿ, ಧರ್ಮಶಾಲೆ ಅಥವಾ ಆಸ್ಪತ್ರೆಯಲ್ಲಿ ತಂಗುವ ವಿದೇಶಿ ಪ್ರಜೆಗಳಿಗೆ ಸಿ-ಫಾರ್ಮ್‌ಗಳನ್ನು ತುಂಬುವುದನ್ನು ಕಡ್ಡಾಯಗೊಳಿಸಲಾಗಿದೆ.

ಸೈಬರ್ ಕೆಫೆಗಳಲ್ಲಿ ಬಳಕೆದಾರರ ಹೆಸರುಗಳು, ವಿಳಾಸಗಳು, ಐಡಿ ವಿವರಗಳು ಮತ್ತು ಸಂದರ್ಶಕರ ಐಡಿಗಳ ಪ್ರತಿಗಳೊಂದಿಗೆ ರಿಜಿಸ್ಟರ್ ಅನ್ನು ನಿರ್ವಹಿಸಲು ತಿಳಿಸಲಾಗಿದೆ. ಮನೆ ಮಾಲೀಕರು ಎಲ್ಲಾ ಬಾಡಿಗೆದಾರರ ಪೊಲೀಸ್ ಪರಿಶೀಲನೆಯನ್ನು ಸಹ ಪಡೆಯಬೇಕು. ಕಾರು ಗ್ಯಾರೇಜ್‌ಗಳು, ಮೆಕ್ಯಾನಿಕ್‌ಗಳು, ಬಳಿಯುವ ಅಂಗಡಿಗಳು ಮತ್ತು ಬಳಸಿದ ವಾಹನಗಳ ವ್ಯಾಪಾರಿಗಳು ಪ್ರತಿಯೊಂದು ವಾಹನ ಮತ್ತು ಅದರ ಮಾಲೀಕರ ಸಂಪೂರ್ಣ ದಾಖಲೆಗಳನ್ನು ನಿರ್ವಹಿಸಲು ನಿರ್ದೇಶಿಸಲಾಗಿದೆ.

ಕಾರು ವಿತರಕರು ಖರೀದಿಸಿದ ಅಥವಾ ಮಾರಾಟ ಮಾಡಿದ ವಾಹನಗಳ ವಿವರಗಳನ್ನು ಹತ್ತಿರದ ಪೊಲೀಸ್ ಠಾಣೆಯೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಮೊಬೈಲ್ ಮಾರಾಟಗಾರರು ಹಳೆಯ ಮೊಬೈಲ್ ಫೋನ್‌ಗಳು ಅಥವಾ ಸಿಮ್ ಕಾರ್ಡ್‌ಗಳನ್ನು ಒಳಗೊಂಡ ಎಲ್ಲಾ ವಹಿವಾಟುಗಳನ್ನು ದಾಖಲಿಸಬೇಕು. ಇದರಲ್ಲಿ ಖರೀದಿದಾರರು ಮತ್ತು ಮಾರಾಟಗಾರರಿಂದ ಅವರ ಹೆಸರು, ವಿಳಾಸ, ಫೋನ್ ವಿವರಗಳು, IMEI ಸಂಖ್ಯೆಗಳು ಮತ್ತು ಸಾಧನ ಅಥವಾ ಸಿಮ್ ಕಳ್ಳತನವಾಗಿಲ್ಲ ಎಂಬ ಘೋಷಣೆಗಳಿರುವ ಅಫಿಡವಿಟ್‌ಗಳು ಸೇರಿವೆ. ಈ ನಡುವೆ ನಿವೃತ್ತ ರಕ್ಷಣಾ ಸಿಬ್ಬಂದಿ ಸೇರಿದಂತೆ ನಿವಾಸಿಗಳ ಗುಂಪು ಶುಕ್ರವಾರ ಪೊಲೀಸ್ ಆಯುಕ್ತ ಸತೇಂದರ್ ಕುಮಾರ್ ಗುಪ್ತಾ ಅವರನ್ನು ಭೇಟಿ ಮಾಡಿ ಪೊಲೀಸರಿಗೆ ಅವರ ತನಿಖೆಯಲ್ಲಿ ಸಹಾಯ ಮಾಡುವುದಾಗಿ ಹೇಳಿದೆ.

ಇದನ್ನೂ ಓದಿ: ಕೇರಳದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಪೋಷಕರ ಏಕೈಕ ಪುತ್ರ ದುಬೈನಲ್ಲಿ ಕಟ್ಟಡದಿಂದ ಬಿದ್ದು ಸಾವು

ಇದನ್ನೂ ಓದಿ: 15 ವರ್ಷಗಳ ಹಿಂದಿನ ಡಿವೋರ್ಸ್‌ ಪ್ರಕರಣ: ಪತ್ನಿಗೆ 664 ಕೋಟಿ ರೂ ಪರಿಹಾರ ನೀಡುವಂತೆ ಉದ್ಯಮಿಗೆ ಕೋರ್ಟ್ ಆದೇಶ