ಕರ್ನಾಟಕದಲ್ಲಿ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಘೋಷಣೆಯಾಗಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅವಧಿ ಮುಕ್ತಾಯಗೊಳ್ಳಲಿದೆ. ಜೂನ್ 18 ರಂದು ಮತದಾನ ನಡೆಯಲಿದೆ. ಚುನಾವಣಾ ವೇಳಾಪಟ್ಟಿ ಇಲ್ಲಿದೆ ನೋಡಿ.
ಬೆಂಗಳೂರು (ಜೂ.01): ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೇರಿದಂತೆ ನಾಲ್ವರು ಸದಸ್ಯರ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ತೆರವಾಗಲಿರುವ ಈ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಈ ಕುರಿತು ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಗಳಾದ ಎಂ.ಕೆ. ವಿಶಾಲಾಕ್ಷಿ ಅವರು ಸೋಮವಾರ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಯಾರ ನಿವೃತ್ತಿಯಿಂದ ಚುನಾವಣೆ?
ಹಾಲಿ ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ, ಹೆಚ್.ಡಿ. ದೇವೇಗೌಡ, ಈರಣ್ಣ ಕಡಾಡಿ ಮತ್ತು ನಾರಾಯಣ ಕೊರಗಪ್ಪ ಅವರು ಜೂನ್ 25, 2026 ರಂದು ನಿವೃತ್ತಿ ಹೊಂದಲಿದ್ದಾರೆ. ಈ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಲು ಜೂನ್ 18 ರಂದು ಮತದಾನ ನಡೆಯಲಿದೆ.
ಚುನಾವಣಾ ವೇಳಾಪಟ್ಟಿ ಹೀಗಿದೆ:
- ಅಧಿಸೂಚನೆ ಹೊರಡಿಸಿದ ದಿನಾಂಕ: 01 ಜೂನ್ 2026
- ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: 08 ಜೂನ್ 2026 (ಸೋಮವಾರ)
- ನಾಮಪತ್ರಗಳ ಪರಿಶೀಲನೆ: 09 ಜೂನ್ 2026 (ಮಂಗಳವಾರ)
- ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ: 11 ಜೂನ್ 2026 (ಗುರುವಾರ)
- ಮತದಾನದ ದಿನಾಂಕ: 18 ಜೂನ್ 2026 (ಗುರುವಾರ)
- ಮತದಾನದ ಸಮಯ: ಬೆಳಗ್ಗೆ 9:00 ರಿಂದ ಸಂಜೆ 4:00 ರವರೆಗೆ.
- ಮತ ಎಣಿಕೆ: 18 ಜೂನ್ 2026 ರಂದು ಸಂಜೆ 5:00 ಗಂಟೆಗೆ.
ನಾಮಪತ್ರ ಸಲ್ಲಿಕೆ ಎಲ್ಲಿ?
ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 121 ಅಥವಾ 127 ಬಿ ನಲ್ಲಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಬಹುದು. ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿರುತ್ತದೆ. ಜೂನ್ 7 ಭಾನುವಾರ ಸಾರ್ವಜನಿಕ ರಜೆಯಾಗಿರುವುದರಿಂದ ಅಂದು ನಾಮಪತ್ರ ಸ್ವೀಕರಿಸಲಾಗುವುದಿಲ್ಲ.
ಪ್ರಮುಖ ನಿಯಮಗಳು:
ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯ ನಾಮಪತ್ರಕ್ಕೆ ವಿಧಾನಸಭೆಯ ಕನಿಷ್ಠ 10 ಮಂದಿ ಚುನಾಯಿತ ಸದಸ್ಯರು ಸೂಚಕರಾಗಿ ಸಹಿ ಮಾಡಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ 10,000 ರೂ. ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5,000 ರೂ.ಗಳ ಠೇವಣಿ ನಿಗದಿಪಡಿಸಲಾಗಿದೆ. ಮತದಾನ ಪ್ರಕ್ರಿಯೆಯು ಬೆಂಗಳೂರಿನ ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 106 ರಲ್ಲಿ ನಡೆಯಲಿದೆ. ಚುನಾವಣಾಧಿಕಾರಿಯಾಗಿ ಎಂ.ಕೆ. ವಿಶಾಲಾಕ್ಷಿ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ಬಿ.ಎಸ್. ಮಹಲಿಂಗೇಶ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


