ಪಂಚರಾಜ್ಯ ಚುನಾವಣೆಯಲ್ಲಿನ ಗೆಲುವಿನ ಬಳಿಕ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭವ್ಯ ಸ್ವಾಗತ ದೊರೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಗೆಲುವಿನ ಸಂಭ್ರಮವನ್ನು ಹಂಚಿಕೊಂಡು, ದಕ್ಷಿಣ ಭಾರತದಲ್ಲಿ ಪಕ್ಷದ ಬೆಳವಣಿಗೆಯನ್ನು ಶ್ಲಾಘಿಸಿದರು
ಬೆಂಗಳೂರು (ಮೇ.10) ದೇಶದ ಪಂಚರಾಜ್ಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ಮೂರು ರಾಜ್ಯಗಳಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾದಿಸಿದೆ. ಈ ಅಭೂತಪೂರ್ವ ಗೆಲುವಿನ ಬೆನ್ನಲ್ಲೇ ಇಂದು ಸಿಲಿಕಾನ್ ಸಿಟಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಗಳೂರಿನ ಎಚ್‌ಎಎಲ್ (HAL) ವಿಮಾನ ನಿಲ್ದಾಣದಲ್ಲಿ ಕೇಸರಿ ಪಡೆಯಿಂದ ಭವ್ಯ ಸ್ವಾಗತ, ಅಭೂತಪೂರ್ವ ಸನ್ಮಾನ ಕಾರ್ಯಕ್ರಮ ನೆರವೇರಿತು.

ವೇದಿಕೆಯಲ್ಲಿ ಯಡಿಯೂರಪ್ಪ ಕೈಕುಲುಕಿದ ಮೋದಿ:
ಕಾರ್ಯಕ್ರಮದ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಪ್ರಧಾನಿ ಮೋದಿ ಅವರು ರಾಜ್ಯದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಕೈ ಕುಲುಕಿ ಅತ್ಯಂತ ಆತ್ಮೀಯವಾಗಿ ವಿಚಾರಿಸಿದರು. ಈ ವೇಳೆ ರಾಜ್ಯ ಬಿಜೆಪಿ ನಾಯಕರು ಪ್ರಧಾನಿಯವರಿಗೆ ಮೈಸೂರು ಶಲ್ಯ, ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ, '13 ಕೆಜಿಯ ಬೃಹತ್ ಬೆಳ್ಳಿಯ ಪ್ರತಿಮೆಯನ್ನು ನೀಡಿ ಗೌರವಿಸಿದರು.
ಬೆಂಗಳೂರಿನ ನೆಲದಲ್ಲಿ ಕೇಸರಿ ಸೂರ್ಯನ ಉದಯ!
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, 'ನಾನು ಈ ಹಿಂದೆ ಸಾಕಷ್ಟು ಬಾರಿ ಬೆಂಗಳೂರಿಗೆ ಬಂದಿದ್ದೇನೆ. ಸಾಮಾನ್ಯವಾಗಿ ವಿಮಾನ ನಿಲ್ದಾಣದ ಬಳಿ ಸಣ್ಣ ಕಾರ್ಯಕ್ರಮ ಮುಗಿಸಿ ಹೋಗುತ್ತಿದ್ದೆ. ಆದರೆ ಈ ಬಾರಿ ಏರ್‌ಪೋರ್ಟ್ ಬಳಿ ಇಷ್ಡು ದೊಡ್ಡ ಕಾರ್ಯಕ್ರಮ ಮಾಡಿದ್ದೀರಿ. ನನಗೆ ಅನಿಸುತ್ತೆ ಬೆಂಗಳೂರಿನ ಈ ನೆಲದಲ್ಲಿ ಕೇಸರಿ ಸೂರ್ಯ ಉದಯವಾಗಿದೆ. ಇಷ್ಟು ಬೆಳಗ್ಗೆ ಎಲ್ಲರೂ ಸಂಘಟಿತರಾಗಿ ಬಂದಿದ್ದೀರಿ. ನಿಮಗೆ ನಾನು ಆಭಾರಿ ಆಗಿದ್ದೇನೆ. ನಿಮ್ಮ ಕಣ್ಣುಗಳಲ್ಲಿ ನೋಡ್ತಿದ್ದೇನೆ. ನಿಮ್ಮ ಪ್ರೀತಿಯ ಕಣ್ಣುಗಳಲ್ಲಿ ನಾನು ಪಶ್ಚಿಮ ಬಂಗಾಳದ ಗೆಲುವಿನ ಸಂಭ್ರಮವನ್ನು ಕಾಣುತ್ತಿದ್ದೇನೆ' ಎಂದು ಹರ್ಷ ವ್ಯಕ್ತಪಡಿಸಿದರು.
ಸ್ಥಿರತೆಯ ಮಂತ್ರ ಜಪಿಸುತ್ತಿದೆ ಭಾರತ: ಮೋದಿ ವಿಶ್ವಾಸ
'ದೇಶದ ಜನತೆ ಇಂದು ಸ್ಥಿರತೆ ಮತ್ತು ರಾಷ್ಟ್ರನೀತಿಗೆ ಜೈ ಎಂದಿದ್ದಾರೆ. ಅಸ್ಸಾಂ ಮತ್ತು ಪುದುಚೇರಿಯಲ್ಲಿ ನಮ್ಮ ಸರ್ಕಾರ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಕೇವಲ 3 ಸ್ಥಾನದಿಂದ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಇತಿಹಾಸ ಬರೆದಿದ್ದೇವೆ. ಗುಜರಾತ್‌ನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿದೆ. ಜನರಿಗೆ ಈಗ ಲೂಟಿ ಮಾಡುವ ಸರ್ಕಾರ ಬೇಡ, ಪರಿಹಾರ ನೀಡುವ ಸರ್ಕಾರ ಬೇಕಾಗಿದೆ' ಎಂದು ಮೋದಿ ಗುಡುಗಿದರು.
ದಕ್ಷಿಣ ಭಾರತದಲ್ಲಿ ಬಿಜೆಪಿಯ ವಿಶ್ವರೂಪ
ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಯ ಬಲದ ಬಗ್ಗೆ ಮಾತನಾಡಿದ ಅವರು, "ಕರ್ನಾಟಕದಲ್ಲಿ ಬಿಜೆಪಿ ನಂಬರ್ 1 ಶಕ್ತಿಯಾಗಿ ಹೊರಹೊಮ್ಮಿದೆ. ತೆಲಂಗಾಣದಲ್ಲಿ ನಂಬರ್ 2 ಸ್ಥಾನಕ್ಕೇರಿದ್ದೇವೆ. ಇನ್ನು ಕೇರಳದಲ್ಲಿ ಈ ಬಾರಿ ಮೂರು ಸ್ಥಾನಗಳನ್ನು ಗೆದ್ದಿದ್ದೇವೆ. ಮುಂದೆ ಕೇರಳದಲ್ಲೂ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಒಂದು ಅಜೆಂಡಾ ಇಲ್ಲದ ವಿಶ್ವಾಸದ್ರೋಹಿ ಪಕ್ಷ!
ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ, 'ಕಳೆದ ಮೂರು ಚುನಾವಣೆಗಳಿಂದ ದೇಶದ ಜನತೆ ಕಾಂಗ್ರೆಸ್‌ಗೆ ಅವಕಾಶವೇ ಇಲ್ಲದಂತೆ ಮಾಡಿದ್ದಾರೆ. ಅವರ ಬಳಿ ಅಭಿವೃದ್ಧಿಯ ಅಜೆಂಡಾ ಇಲ್ಲ, ಕೇವಲ ನಿರಾಶೆ ಮನೆಮಾಡಿದೆ. ನಮ್ಮದು 'ಸಬ್ ಕಾ ಸಾತ್ ಸಬ್ ಕಾ ವಿಕಾಸ್' ಮಂತ್ರವಾದರೆ, ಕಾಂಗ್ರೆಸ್‌ನದ್ದು ಅಧಿಕಾರಕ್ಕೆ ಬಂದು ಜನರಿಗೆ ವಿಶ್ವಾಸದ್ರೋಹ ಮಾಡುವ ತಂತ್ರ' ಎಂದು ಟೀಕಿಸಿದರು.
ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಗ್ಯಾರಂಟಿಗಳ ವಿರುದ್ಧ ಕಿಡಿ
ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಜನರು ಸಮಸ್ಯೆ ಎದುರಿಸುತ್ತಿದ್ದರೆ, ಇಲ್ಲಿನ ನಾಯಕರು ಮಾತ್ರ ಕುರ್ಚಿಗಾಗಿ ಜಗಳವಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ. ಇನ್ನು ಇವರ ಗ್ಯಾರಂಟಿಗಳೆಲ್ಲಾ ಬರೀ ಸುಳ್ಳು. ಹಿಮಾಚಲ ಪ್ರದೇಶದಲ್ಲಿ ಪೌರಕಾರ್ಮಿಕರಿಗೆ ಸಂಬಳ ಕೊಡಲು ಹಣವಿಲ್ಲ, ತೆಲಂಗಾಣದಲ್ಲಿ ಲೂಟಿ ಹೊಡೆದ ಹಣಕ್ಕಾಗಿ ಗಲಾಟೆ ನಡೆಯುತ್ತಿದೆ. ತಮಿಳುನಾಡಿನಲ್ಲೂ ಡಿಎಂಕೆ ಜೊತೆಗಿನ ಮೈತ್ರಿ ಕಡಿದುಕೊಂಡು ಕಾಂಗ್ರೆಸ್ ತನ್ನ ವಿಶ್ವಾಸದ್ರೋಹಿ ಗುಣವನ್ನು ಸಾಬೀತುಪಡಿಸಿದೆ' ಎಂದು ಪ್ರಧಾನಿ ಮೋದಿ ಕಿಡಿಕಾರಿದರು.


