ಎಸ್. ಜಾನಕಿ ಅವರ ಸಾವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾವಿಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದು, ಸಂತಾಪ ಸೂಚಿಸಿದ್ದಾರೆ. 

ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಇಂದು (ಜುಲೈ 11) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಜಾನಕಿ ಅವರಿಗೆ 88 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಅವರು ಹಾಡಿದ್ದರು. ಅವರ ಸಾವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾವಿಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದು, ಸಂತಾಪ ಸೂಚಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಿ.ಕೆ ಶಿವಕುಮಾರ್ ಸಂತಾಪ

ಹಾಡು ನಿಲ್ಲಿಸಿದ ʻಕೋಗಿಲೆʼ... ಪ್ರಖ್ಯಾತ ಗಾಯಕಿ, 'ಗಾನ ಕೋಗಿಲೆ' ಎಸ್. ಜಾನಕಿ ಅಮ್ಮ ಅವರ ನಿಧನವಾರ್ತೆ ತಿಳಿದು, ದುಃಖಿತನಾಗಿದ್ದೇನೆ. 17 ಭಾಷೆಗಳಲ್ಲಿ ತಮ್ಮ ಇಂಪಾದ ಕಂಠದ ಮೂಲಕ ಸಾವಿರಾರು ಹಾಡುಗಳನ್ನು ಹಾಡಿದ ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಗಾಯನವನ್ನೇ ಉಸಿರಾಗಿಸಿಕೊಂಡಿದ್ದ ಜಾನಕಮ್ಮನವರು, ಅವರ ಹಾಡುಗಳ ಮೂಲಕ ಸದಾ ಸಂಗೀತಪ್ರಿಯರ ಮನಸ್ಸಿನಲ್ಲಿ ಹಸಿರಾಗಿರುತ್ತಾರೆ. ಅವರ ಅಸಂಖ್ಯಾತ ಅಭಿಮಾನಿಗಳು, ಆಪ್ತರು, ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ. ಓಂ ಶಾಂತಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಪೋಸ್ಟ್ ಮಾಡಿದ್ದಾರೆ.

ಸಂಗೀತಶಾರದೆಯ ವರಪುತ್ರಿ

ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ನಿಧನದ ಸುದ್ದಿ ನೋವುಂಟು ಮಾಡಿದೆ. ಕನ್ನಡ ಭಾಷೆಯೂ ಸೇರಿದಂತೆ 20 ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದ, 6 ದಶಕಗಳ ಕಾಲ‌ ತಮ್ಮ ಕಂಠಸಿರಿಯ ಮೂಲಕ ಸಂಗೀತ ಸೇವೆಗೈದ ಮೇರು ಪ್ರತಿಭೆಯೊಂದು ನಮ್ಮನ್ನಗಲಿರುವುದು ಕಲಾ ಜಗತ್ತಿಗಾಗಿರುವ ತುಂಬಲಾರದ ನಷ್ಟ. ಜಾನಕಿಯಮ್ಮನವರ ಧ್ವನಿಯಿಲ್ಲದ ಚಿತ್ರಗಳೇ ಅಪರೂಪ ಎನ್ನುವ ಕಾಲವೊಂದಿತ್ತು, ಆ ಮಟ್ಟಿನ ಬೇಡಿಕೆಯನ್ನು ತಮ್ಮ ಅನನ್ಯ ಕಂಠದ ಮೂಲಕ ಸೃಷ್ಟಿಸಿದ್ದ ಸಂಗೀತಶಾರದೆಯ ವರಪುತ್ರಿ ಅವರು. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬವರ್ಗ ಮತ್ತು ಕೋಟ್ಯಂತರ ಸಂಗೀತ ಪ್ರಿಯರಿಗೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ.

ಜಿ.ಟಿ.ದೇವೇಗೌಡ ಹೇಳಿದ್ದೇನು?

ಮಾಜಿ ಸಚಿವ ಜಿ.ಟಿ.ದೇವೇಗೌಡ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು ಪ್ರಶಸ್ತಿಗಳು ಬೇರೆ ಬೇರೆ ರಾಜ್ಯದಿಂದ ಅವರನ್ನು ಹುಡುಕಿಕೊಂಡು ಬಂದಿವೆ. ಭಾರತ ದೇಶದ ಅತ್ಯುನ್ನತ ಹಿನ್ನೆಲೆ ಗಾಯಕಿ ಗಾಯಕಿಯಾಗಿದ್ದರು. ಎಸ್​.ಪಿ.ಬಾಲಸುಬ್ರಮಣ್ಯಂ ಹಾಗೂ ಎಸ್​ ಜಾನಕಿ ಅವರನ್ನು ನಾವು ಯಾರೂ ಮರೆಯುವಂತಿಲ್ಲ. ಅವರ ಆತ್ಮಕ್ಕೆ ದೇವರು ಶಾಂತಿಯನ್ನು ಕೊಡಲಿ. ನಟಿ-ನಟಿಯರಿಗೆ, ಅಭಿಮಾನಿಗಳು ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ

ಭಾರತೀಯ ಸಂಗೀತ ಲೋಕದ ದಿಗ್ಗಜರು, ತಮ್ಮ ಅಮೋಘ ಕಂಠಸಿರಿಯ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದ ಖ್ಯಾತ ಗಾಯಕಿ ಶ್ರೀಮತಿ ಎಸ್. ಜಾನಕಿ ಅವರ ನಿಧನದ ಸುದ್ದಿ ಅತ್ಯಂತ ದುಃಖ ತಂದಿದೆ. ಭಾಷೆಗಳ ಗಡಿಗಳನ್ನು ಮೀರಿ ಅವರ ಗಾಯನ ತಲೆಮಾರುಗಳನ್ನು ಬೆಸೆಯಿತು. ಅವರ ಅಪೂರ್ವ ಧ್ವನಿ, ಭಾವಪೂರ್ಣ ಗಾಯನ ಮತ್ತು ಸಂಗೀತಕ್ಕೆ ನೀಡಿದ ಅಪಾರ ಕೊಡುಗೆ ಸದಾ ಅಮರವಾಗಿರುತ್ತದೆ. ಅವರ ಅಗಲಿಕೆಯಿಂದ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬದವರು, ಅಭಿಮಾನಿಗಳು ಹಾಗೂ ಸಂಗೀತಾಸಕ್ತರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸಂತಾಪ ಸೂಚಿಸಿದ್ದಾರೆ.

ರಾಜ್ಯಪಾಲರ ಸಂತಾಪ

ಕರ್ನಾಟಕ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಸಂತಾಪ ಸಂದೇಶದಲ್ಲಿ ರಾಜ್ಯಪಾಲರು, "ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ತಮ್ಮ ಗಾಯನದ ಮೂಲಕ ಕೋಟ್ಯಂತರ ಜನರ ಮನಗೆದ್ದ ಅವರು, ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ" ಎಂದು ಪ್ರಾರ್ಥಿಸಿದ್ದಾರೆ.