ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ತಿಕ್ಕಾಟ ಇದೀಗ ಕೌಟುಂಬಿಕ ಸಂಘರ್ಷದ ಸ್ವರೂಪ ಪಡೆದಿದೆ.

ಬೆಂಗಳೂರು (ಫೆ.23): ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ತಿಕ್ಕಾಟ ಇದೀಗ ಕೌಟುಂಬಿಕ ಸಂಘರ್ಷದ ಸ್ವರೂಪ ಪಡೆದಿದೆ. ‘ತಮ್ಮ ಪತಿ, ಐಎಎಸ್‌ ಅಧಿಕಾರಿಯೂ ಆಗಿರುವ ಮುನೀಶ್‌ ಮೌದ್ಗಿಲ್‌ ಹಿಂದೆ ಎಂಟು ವರ್ಷದಿಂದ ರೋಹಿಣಿ ಸಿಂಧೂರಿ ಬಿದ್ದಿದ್ದಾರೆ’ ಎಂದು ರೂಪಾ ಮಾತನಾಡಿದ್ದಾರೆನ್ನಲಾದ ಸಂಭಾಷಣೆಯ ಆಡಿಯೋ ಬಹಿರಂಗಗೊಂಡಿದೆ. ತಮ್ಮ ಕುಟುಂಬದ ಉಳಿವಿಗೆ ಹೋರಾಟ ನಡೆಸಬೇಕಿದೆ ಎಂಬರ್ಥದಲ್ಲಿ ರೂಪಾ ಆಡುವ ಮಾತುಗಳು ಅದರಲ್ಲಿವೆ.

ಆರ್‌ಟಿಐ ಕಾರ್ಯಕರ್ತ ಎನ್‌.ಗಂಗರಾಜು ಎಂಬುವರು ಜ.30 ಹಾಗೂ ಫೆ.1ರಂದು ಐಪಿಎಸ್‌ ಅಧಿಕಾರಿ ರೂಪಾ ತಮ್ಮೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆಯನ್ನು ಮೈಸೂರಿನಲ್ಲಿ ಬಹಿರಂಗಪಡಿಸಿದ್ದಾರೆ. ಸಂಭಾಷಣೆಯಲ್ಲಿ ರೂಪಾ, ‘ಆಯಮ್ಮನ (ರೋಹಿಣಿ) ದೆಸೆಯಿಂದ ನಮ್ಮ ಕುಟುಂಬ ಸರಿ ಇಲ್ಲದಂತಾಗಿದೆ. ಆಯಮ್ಮ ಕ್ಯಾನ್ಸರ್‌ ಇದ್ದಂತೆ. ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ಳುತ್ತಾಳೆ. ಡಿ.ಕೆ.ರವಿ ವಿಷಯದಲ್ಲಿ ಆಗಿದ್ದೂ ಅದೇ. ಎಂಟು ವರ್ಷ​ಗ​ಳಿಂದ ನಮ್ಮ ಯಜಮಾನರ ಹಿಂದೆ ಬಿದ್ದಿದ್ದಾಳೆ. ಲೋಕಾಯುಕ್ತ ಪ್ರಕರಣದ ಉತ್ತರವನ್ನೂ ಇವರ ಬಳಿಯೇ ಬರೆಸಿಕೊಳ್ಳುತ್ತಾಳೆ. ನಮ್ಮ ಮನೆಯವರು ಮನೆಯ ಕಡೆ ಗಮನ ಕೊಡುತ್ತಿಲ್ಲ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಐಪಿಎಸ್‌ ರೂಪಾಗೆ ಲೀಗಲ್‌ ನೋಟಿಸ್‌ ನೀಡಿದ ರೋಹಿಣಿ ಸಿಂಧೂರಿ!

‘ರೋಹಿಣಿ ಸಿಂಧೂರಿ ಎನ್ನುವವಳು ಎಷ್ಟು ಮನೆ ಕೆಡಿಸಿದ್ದಾಳೆ, ತನ್ನ ಗಂಡನ ರಿಯಲ್‌ ಎಸ್ಟೇಟ್‌ ಬ್ಯುಸಿನೆಸ್‌ ಪ್ರಮೋಟ್‌ ಮಾಡಲು ಭೂ ದಾಖಲಾತಿಗಳಿಗೆ ಸಂಬಂಧಿಸಿ ಎಷ್ಟುಮಾಹಿತಿಯನ್ನು ನನ್ನ ಪತಿಯಿಂದ ಸಂಗ್ರಹಿಸಿದ್ದಾಳೆ ಎಂಬುದನ್ನು ಕೇಳಿಕೊಳ್ಳಿ’ ಎಂದು ಗಂಗರಾಜು ವಿರುದ್ಧ ರೇಗಾಡಿರುವುದು ಸಂಭಾಷಣೆಯಲ್ಲಿದೆ. ಅಲ್ಲದೆ ಸಂಭಾಷಣೆಯಲ್ಲಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಕೀಳು ಪದಗಳನ್ನೂ ಬಳಕೆ ಮಾಡಲಾಗಿದೆ. ಇದು ಪ್ರಕರಣಕ್ಕೆ ಹೊಸ ಸ್ವರೂಪ ನೀಡಿದ್ದು, ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಮುಖ್ಯಕಾರ್ಯದರ್ಶಿಗಳಿಗೆ ನೀಡಿರುವ ದೂರಿನಲ್ಲಿ ತಿಳಿಸಿರುವಂತೆ ಇಬ್ಬರ ತಿಕ್ಕಾಟಕ್ಕೆ ಕೇವಲ ಭ್ರಷ್ಟಾಚಾರ ಪ್ರಕರಣಗಳು ಮಾತ್ರ ಕಾರಣವಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ನ್ಯಾಯಾಲಯ ಮೆಟ್ಟಿಲೇರಿದ ಪ್ರಕರಣ: ಮತ್ತೊಂದೆಡೆ ಇಬ್ಬರು ಅಧಿಕಾರಿಗಳ ನಡುವಿನ ಪ್ರಕರಣ ಕೋರ್ಟ್‌ ಮೆಟ್ಟಿಲೇರಿದ್ದು, ತಮ್ಮ ವಿರುದ್ಧ ಮಾನಹಾನಿಕಾರಕ ಸುದ್ದಿ ಪ್ರಸಾರ ಮಾಡದಂತೆ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ಹಾಗೂ ಮಾಧ್ಯಮಗಳ ವಿರುದ್ಧ ಪ್ರತಿಬಂಧಕ ಆದೇಶ ಹೊರಡಿಸುವಂತೆ ಕೋರಿ ರೋಹಿಣಿ ಸಿಂಧೂರಿ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಕೋರ್ಟ್‌ ಆದೇಶವನ್ನು ಗುರುವಾರಕ್ಕೆ ಕಾಯ್ದಿರಿಸಿದೆ.

ಭ್ರಷ್ಟಾಚಾರದ ಬಗ್ಗೆ ಗಮನ ಹರಿಸಿ: ಗಂಗರಾಜು ಅವರು ಆಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿರುವ ರೂಪಾ ಮೌದ್ಗಿಲ್‌, ‘ನಾನು ರೋಹಿಣಿ ಸಿಂಧೂರಿ ವಿರುದ್ಧ ಎತ್ತಿರುವ ಭ್ರಷ್ಟಾಚಾರ ವಿಚಾರಗಳ ಬಗ್ಗೆ ಗಮನ ಹರಿಸಿ. ಅದನ್ನು ಬಿಟ್ಟು ವೈಯಕ್ತಿಕ ವಿಚಾರಗಳಿಗೆ ಕೈ ಹಾಕಬೇಡಿ. ನಾನು ಯಾವುದೇ ಹೋರಾಟವನ್ನು ನಡೆಸದಂತೆ ಯಾರನ್ನೂ ತಡೆದಿಲ್ಲ. ಅದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂಬುದು ಗೊತ್ತಿದೆ’ ಎಂದು ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದ್ದಾರೆ.

ನಾನು, ಪತಿ ಒಟ್ಟಿಗಿದ್ದೇವೆ- ರೂಪಾ: ಇದೇ ವೇಳೆ ತಾವು ಹಾಗೂ ಪತಿ ಒಟ್ಟಿಗಿದ್ದೇವೆ ಎಂಬುದುನ್ನು ಸ್ಪಷ್ಟಪಡಿಸಿರುವ ಅವರು, ‘ನಾನೊಬ್ಬ ಧೈರ್ಯಶಾಲಿ ಹೆಣ್ಣು. ಎಲ್ಲ ಸಂತ್ರಸ್ತ ಮಹಿಳೆಯರ ಪರವಾಗಿ ಹೋರಾಟ ಮಾಡುತ್ತಿದ್ದೇನೆ. ಎಲ್ಲಾ ಮಹಿಳೆಯರಿಗೂ ಹೋರಾಟ ಮಾಡಲು ಶಕ್ತಿ ಇರುವುದಿಲ್ಲ. ದಯವಿಟ್ಟು ಅಂತಹ ಮಹಿಳೆಯರ ಪರವಾಗಿ ಧ್ವನಿಗೂಡಿಸಿ. ನಮ್ಮ ದೇಶ ಕೌಟುಂಬಿಕ ಮೌಲ್ಯಗಳಿಗೆ ಹೆಸರುವಾಸಿ. ಅವುಗಳನ್ನು ಮುಂದುವರೆಸಿಕೊಂಡು ಹೋಗೋಣ’ ಎಂದಿದ್ದಾರೆ.

ಡಿ ರೂಪಾ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ರೋಹಿಣಿ ಸಿಂಧೂರಿ: ತಡೆಯಾಜ್ಞೆಗೆ ಮನವಿ

ರೂಪಾರಿಂದ ಬೆದ​ರಿ​ಕೆ,ಆರ್‌​ಟಿಐ ಕಾರ್ಯ​ಕರ್ತ ಆರೋ​ಪ: ಆಡಿಯೋ ಬಹಿ​ರಂಗ​ವಾದ ಬೆನ್ನಲ್ಲೇ ಆರ್‌​ಟಿಐ ಕಾರ್ಯ​ಕರ್ತ ಗಂಗರಾಜು ಅವರು ಐಪಿ​ಎಸ್‌ ಅಧಿ​ಕಾರಿ ರೂಪಾ ಅವ​ರಿಂದ ಬೆದ​ರಿಕೆ ಬಂದಿದೆ. ಈ ಸಂಬಂಧ ಕಾನೂನು ಹೋರಾ​ಟಕ್ಕೆ ಸಿದ್ಧತೆ ನಡೆ​ಸಿ​ದ್ದೇನೆ ಎಂದು ತಿಳಿ​ಸಿ​ದ್ದಾ​ರೆ. ಈ ಸಂಬಂಧ ಬುಧ​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿ, ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಹೋರಾಟ ನಡೆಸಲು ನನ್ನನ್ನು ಬಳಸಿಕೊಳ್ಳಲೆತ್ನಿ​ಸಿ​ದರು. 

ಅದಕ್ಕೆ ನಾನು ಸಹಕರಿಸದಿದ್ದಾಗ ಅವರಿಂದ ಬೆದರಿಕೆ ಬಂದಿದೆ ಎಂದು ಗಂಗರಾಜು ಆರೋಪಿಸಿದರು. ರೋಹಿಣಿ ಸಿಂಧೂರಿ ನಡೆಸಿರುವ ಅಕ್ರಮದ ಬಗ್ಗೆ ನನ್ನ ಬಳಿ ಸಾಕಷ್ಟುದಾಖಲೆ ಇದೆ. ಇದನ್ನು ಅರಿತ ರೂಪಾ ರೋಹಿಣಿ ಸಿಂಧೂರಿ ಅಕ್ರಮಗಳ ಬಗ್ಗೆ ಮಾಧ್ಯಮಗಳ ಬಳಿ ಹೇಳಿ ಎಂದು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ನನಗೆ ಕೆಲ ಫೋಟೋಗಳನ್ನು ಕಳುಹಿಸಿ ಅವುಗಳನ್ನು ಮಾಧ್ಯಮಗಳ ಮುಂದಿಡಿ ಎಂದರು. ಆದರೆ, ನಾನು ನಿರಾಕರಿಸಿದ್ದಕ್ಕೆ ನನ್ನನ್ನು ನಿಂದಿಸಿದ್ದಾರೆ ಎಂದು ದೂರಿದರು.