ಐಪಿಎಸ್ ರೂಪಾಗೆ ಲೀಗಲ್ ನೋಟಿಸ್ ನೀಡಿದ ರೋಹಿಣಿ ಸಿಂಧೂರಿ!
ನಿರೀಕ್ಷೆಯಂತೆಯೇ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಐಪಿಎಸ್ ಅಧಿಕಾರಿ ಡಿ ರೂಪಾ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ. ವಕೀಲ ಸಿವಿ ನಾಗೇಶ್ ಅವರ ಮೂಲಕ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ಬೆಂಗಳೂರು (ಫೆ.22): ರಾಜ್ಯದಲ್ಲಿ ಬೀದಿ ರಂಪಾಟ ಮಾಡಿಕೊಂಡು ಸುದ್ದಿಯಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ನಡುವಿನ ವಿವಾದ ತಣ್ಣಗಾಗುವಂತೆ ಕಾಣುತ್ತಿಲ್ಲ. ಸರ್ಕಾರ ಇಬ್ಬರನ್ನೂ ಸ್ಥಳ ನಿಯೋಜಿಸದೇ ಟ್ರಾನ್ಸ್‌ಫರ್ ಮಾಡಿರುವ ನಡುವೆಯೇ, ಬುಧವಾರ ಕೋರ್ಟ್ ಮೆಟ್ಟಿಲೇರಿದ್ದ ರೋಹಿಣಿ ಸಿಂಧೂರಿ, ತಮ್ಮ ಕುರಿತಾದ ಮಾಧ್ಯಮಗಳ ವರದಿಗೆ ತಡೆ ನೀಡುವಂತೆ ಮನವಿ ಮಾಡಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್ ಗುರುವಾರ ತೀರ್ಪು ನೀಡುವ ಸಾಧ್ಯತೆ ಇದೆ. ಅದರ ನಡುವೆ ರೋಹಿಣಿ ಸಿಂಧೂರಿ, ಡಿ. ರೂಪಾ ವಿರುದ್ಧ ಕಾನೂನು ಕ್ರಮಕ್ಕೂ ಮುಂದಾಗಿದ್ದಾರೆ. ವಕೀಲ ಸಿವಿ ನಾಗೇಶ್ ಮೂಲಕ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. 21 ಅಂಶಗಳನ್ನು ಮುಂದಿಟ್ಟುಕೊಂಡು ರೋಹಿಣಿ ಸಿಂಧೂರಿ ನೋಟಿಸ್ ಮಾಡಿದ್ದಾರೆ. ರೂಪಾ ಅವರ ಮನೆ ಹಾಗೂ ಕೆಲಸದ ಸ್ಥಳದ ಅಡ್ರೆಸ್‌ಅನ್ನು ಹಾಕಿ ನೋಟಿಸ್ ಜಾರಿ ಮಾಡಲಾಗಿದ್ದು, 1 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ಹಾಕುವ ಎಚ್ಚರಿಕೆ ನೀಡಿದ್ದಾರೆ. ಈ ನೋಟಿಸ್ ತಲುಪಿದ 24 ಗಂಟೆಯ ಒಳಗಾಗಿ ರೂಪಾ ಅವರು ಕ್ಷಮೆ ಕೇಳಬೇಕು ಇಲ್ಲದೇ, ಇದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ರೋಹಿಣಿ ಸಿಂಧೂರಿ ನೋಟಿಸ್‌ನಲ್ಲಿ ಎಚ್ಚರಿಸಿದ್ದಾರೆ. ಅದರೊಂದಿಗೆ ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿರುವ ಮಾನಹಾನಿಕರ ಮೆಸೇಜ್‌ಗಳು ಹಾಗೂ ಚಿತ್ರವನ್ನು ತಕ್ಷಣವೇ ಡಿಲೀಟ್ ಮಾಡಬೇಕು ಎಂದೂ ಅವರು ಹೇಳಿದ್ದಾರೆ.
ಲಿಖಿತ ರೂಪದಲ್ಲಿ ಕ್ಷಮೆಯಾಚನೆ ಕೇಳಬೇಕು: ಡಿ.ರೂಪಾ ಅವರು ಲಿಖಿತ ರೂಪದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಅದಕ್ಕೂ ಮುನ್ನ ಮಾನಹಾನಿಕರ ಪೋಸ್ಟ್‌ಗಳನ್ನು ಡಿಲೀಟ್ ಮಾಡಬೇಕು. 1 ಕೋಟಿ ರೂಪಾಯು ಮಾನನಷ್ಟ ಮೊಕದ್ದಮೆಯೊಂದಿಗೆ ಈ ನೋಟಿಸ್ ನೀಡಲು ಖರ್ಚಾಗಿರುವ 50 ಸಾವಿರ ರೂಪಾಯಿಯನ್ನು ರೂಪಾ ಅವರೇ ಭರಿಸಬೇಕು ಎಂದು ತಿಳಿಸಲಾಗಿದೆ.