IAS vs IPS: ಡಿ ರೂಪಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರೋಹಿಣಿ ಸಿಂಧೂರಿ: ತಡೆಯಾಜ್ಞೆಗೆ ಮನವಿ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಕೋರ್ಟ್ ಮೆಟ್ಟಿಲೇರಿದ್ದು, ಡಿ. ರೂಪಾ ಹಾಗೂ ಮಾಧ್ಯಮಗಳ ವಿರುದ್ಧ ತಮ್ಮ ಬಗ್ಗೆ ಯಾವುದೇ ವಿಷಯಗಳನ್ನು ಮುನ್ನೆಲೆಗೆ ತರದಂತೆ ತಡೆಯಾಜ್ಞೆ ಹೊರಡಿಸುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರು (ಫೆ.22): ಸರ್ಕಾರದ ನೋಟಿಸ್‌ಗೂ ಬಗ್ಗದೆ ಐಪಿಎಸ್ ಅಧಿಕಾರಿ ಡಿ.ರೂಪ ಇಂದೂ ಕೂಡ ರೋಹಿಣಿ ಸಿಂಧೂರಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಲವು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಕೋರ್ಟ್ ಮೆಟ್ಟಿಲೇರಿದ್ದು, ಡಿ. ರೂಪಾ ಹಾಗೂ ಮಾಧ್ಯಮಗಳ ವಿರುದ್ಧ ತಮ್ಮ ಬಗ್ಗೆ ಯಾವುದೇ ವಿಷಯಗಳನ್ನು ಮುನ್ನೆಲೆಗೆ ತರದಂತೆ ತಡೆಯಾಜ್ಞೆ ಹೊರಡಿಸುವಂತೆ ಮನವಿ ಮಾಡಿದ್ದಾರೆ.
ನನ್ನ ಮೊಬೈಲ್ ನಿಂದ ಕಾನೂನು ಬಾಹಿರವಾಗಿ ಮಾಹಿತಿ ಪಡೆದಿದ್ದಾರೆ. ರೂಪ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಈಪಿಎಸ್ ಆಗಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸಿಟಿ ಸಿವಿಲ್‌ಕೋರ್ಟ್‌ನಲ್ಲಿ ಇಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ರೋಹಿಣಿ ಪರ ವಕೀಲರಿಂದ ವಾದ ಮಂಡನೆ ಮಾಡಲಾಗುತ್ತದೆ. ಸಿವಿಲ್ ಸರ್ವೀಸ್ ನಿಯಮಗಳ ಅಡಿ ಸಿಎಸ್ ಗೆ ದೂರು ನೀಡಲಾಗಿದೆ. ಪೊಲೀಸ್ ಠಾಣೆಗೂ ರೂಪ ವಿರುದ್ಧ ದೂರು ನೀಡಿದ್ದೇನೆ ಎಂದು ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
IAS vs IPS: ರೋಹಿಣಿ ಸಿಂಧೂರಿಯಿಂದ ಇಬ್ಬರು ಅಧಿಕಾರಿಗಳ ಸಾವು: ಕುಟುಂಬ ಉಳಿಸಿಕೊಳ್ಳಲು ಪರದಾಟ- ಡಿ. ರೂಪಾ
ನಾಳೆಗೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ: ನ್ಯಾಯಾಲಯದಲ್ಲಿ ಇಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪರ ವಕೀಲರಿಂದ ವಾದ ಮಂಡನೆ ಮಾಡುವುದು ಮುಕ್ತಾಯವಾಗಿದೆ. ಈ ವೇಳೆ ಮಧ್ಯಂತರ ಆದೇಶ ನೀಡುವಂತೆ ರೋಹಿಣಿ ಪರ ವಕೀಲರು ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದಾರೆ. ಇನ್ನು ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿಕೆ ಮಾಡಿದೆ. ಹೀಗಾಗಿ, ನಾಳೆಯೇ ಪೂರ್ಣ ಪ್ರಮಾಣದಲ್ಲಿ ಮಾಹಿತಿ ಪಡೆದುಕೊಂಡು ಕೋರ್ಟ್‌ನಿಂದ ಮಧ್ಯಂತರ ಆದೇಶ ಹೊರಡಿಸುವ ಸಾಧ್ಯತೆ ಕಂಡುಬರುತ್ತಿದೆ.
ರೂಪಾ ಮೌದ್ಗಿಲ್ 60ನೇ ಪ್ರತಿವಾದಿ: ಈ ಪ್ರಕರಣದಲ್ಲಿ ರೂಪಾ ಮೌದ್ಗಿಲ್ ಅವರನ್ನು 60ನೇ ಪ್ರತಿವಾದಿಯನ್ನಾಗಿ ಮಾಡಲಾಗಿದೆ. ತಮ್ಮ ಖಾಸಗಿ ಫೋಟೋಗಳನ್ನು ರೂಪಾ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ. ತಮ್ಮ ಖಾಸಗಿ ಮೊಬೈಲ್ ನಂಬರ್ ಅನ್ನೂ ಬಹಿರಂಗಪಡಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಈ ಪ್ರಕರಣದ ಆದೇಶವನ್ನು ಸಿಸಿಹೆಚ್ 74 ನೇ ನ್ಯಾಯಾಲಯ ನಾಳೆಗೆ ಕಾಯ್ದಿರಿಸಿದೆ. ಮಾದ್ಯಮಗಳು ಹಾಗೂ ರೂಪ ವಿರುದ್ಧ ತಡೆಯಾಜ್ಞೆ ರೋಹಿಣಿ ಸಿಂದೂರಿ ಕೋರಿದ್ದಾರೆ.
ಮೂರು ದಿನಗಳಾದರೂ ಮುಗಿಯದ ಜಗಳ: ಕಳೆದ ಮೂರು ದಿನಗಳ ಹಿಂದೆ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಒಟ್ಟು 19 ಅಂಶಗಳ ಆರೋಪಗಳನ್ನು ಪಟ್ಟಿ ಮಾಡಿ ಐಎಎಸ್ ಅಧಿಕಾರಿ ರೋಹಿಣಿ ಸಿಂದೂರಿ ಅವರಿಗೆ ಈ ಆರೋಪಗಳಲ್ಲಿ ಯಾವುದಾದರೂ ಪ್ರಕರಣಗಳಲ್ಲಿ ಪೂರ್ಣ ಪ್ರಮಾಣದ ತನಿಖೆಯಾಗಿ ಶಿಕ್ಷೆಯಾಗಬೇಕು ಎಂದು ಅಗ್ರಹಿಸಿದ್ದರು. ಇದರ ನಂತರ, ರೋಹಿಣಿ ಸಿಂಧೂರಿ ಅವರ ತೀರಾ ಖಾಸಗಿ ಎನ್ನುವಂತಹ ಕೆಲವು ಫೋಟೋಗಳನ್ನು ಹರಿಬಿಟ್ಟು, ಹಲವು ಐಎಎಸ್ ಅಧಿಕಾರಿಗಳು ಹಾಗೂ ಐಪಿಎಸ್ ಅಧಿಕಾರಿಗಳ ಕುಟುಂಬವನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದರು.
IAS vs IPS: ರೋಹಿಣಿ ಸಿಂಧೂರಿ, ರೂಪಾ ಸೇರಿ ಮನೀಶ್ ಮೌದ್ಗಿಲ್‌ಗೆ ಎತ್ತಂಗಡಿ ಶಾಕ್
ಇದಾದ ನಂತರ ಸರ್ಕಾರ ಮಧ್ಯಸ್ಥಿಕೆವಹಿಸಿ ಇಬ್ಬರಿಗೂ ನೋಟಿಸ್ ಜಾರಿಗೊಳಿಸಲಾಗಿತ್ತು. ನಂತರ, ಇಬ್ಬರೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು. ಇದಾದ ನಂತರವೂ ಡಿ ರೂಪಾ ಇಂದು ಬೆಳಗ್ಗೆ ಹಲವು ಆರೋಪ ಮಾಡಿದ್ದರು. ಈಗ ರೋಹಿಣಿ ಸಿಂಧೂರಿ ಅವರು ಕೋರ್ಟ್ ಮೆಟ್ಟಿಲೇರಿದ್ದು, ಯಾವ ತಿರುವು ಪಡೆದುಕೊಳ್ಳಲಿದೆ ಎಂದು ನಾಳೆಯ ಆದೇಶದಲ್ಲಿ ತಿಳಿಯಲಿದೆ.
ಆರೋಪಗಳ ಸುರಿಮಳೆಗೈದ ರೋಹಿಣಿ ಸಿಂಧೂರಿ: ಸಿವಿಲ್ ಸರ್ವೀಸ್ ನಿಯಮಗಳ ಅಡಿ ದೂರು ನೀಡಿದ್ದೇನೆ. ಕಾನೂನಿನ ಪ್ರಕಾರವೇ ನಾನು ದೂರು ನೀಡಿದ್ದೇನೆ. ಮುಖ್ಯ ಕಾರ್ಯದರ್ಶಿಗೆ ಡಿ.ರೂಪ ವಿರುದ್ಧ ದೂರು ನೀಡಿದ್ದೇನೆ. ರೂಪ ವಿರುದ್ದ ಪೊಲೀಸರಿಗೂ ದೂರು ನೀಡಿದ್ದೇನೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶವನ್ನೂ ರೂಪ ಪಾಲಿಸುತ್ತಿಲ್ಲ. ಸರ್ಕಾರದ ಸುತ್ತೋಲೆ ಧಿಕ್ಕರಿಸಿ ರೂಪ ಹೇಳಿಕೆ ಮುಂದುವರೆಸಿದ್ದಾರೆ. ನಾನೂ ಕಾನೂನು ಚೌಕಟ್ಟು ಪಾಲಿಸುತ್ತಿದ್ದೇನೆ, ರೂಪ ಪಾಲಿಸುತ್ತಿಲ್ಲ ಎಂದು ಕೋರ್ಟ್‌ನಲ್ಲಿ ಡಿ. ರೂಪಾ ವಿರುದ್ಧ ಹತ್ತು ಹಲವು ಆರೋಪಗಳನ್ನು ರೋಹಿಣಿ ಸಿಂಧೂರಿ ಮಾಡಿದ್ದಾರೆ.