Asianet Suvarna News

ಲಕ್ಷಾಂತರ ರೆವಿನ್ಯೂ ಸೈಟ್‌ ಮಾಲೀಕರು ಅತಂತ್ರ..!

* ಬಡವರ ಸ್ವಂತ ನಿವೇಶನದ ಕನಸಿಗೂ ತಣ್ಣೀರು
* ಒಂದೂವರೆ ವರ್ಷದಿಂದ ಕಂದಾಯ ನಿವೇಶನ ನೋಂದಣಿ ಸ್ಥಗಿತ
* ಕೊರೋನಾದಿಂದ ಸಂಕಷ್ಟ ಎದುರಾಗಿದ್ದರೂ ನಿವೇಶನ ಮಾರಲಾಗದ ಸ್ಥಿತಿಯಲ್ಲಿ ಮಾಲೀಕರು
 

Revenue Site Owners Faces Problems due to Government Decision in Karnataka grg
Author
Bengaluru, First Published Jul 9, 2021, 8:58 AM IST
  • Facebook
  • Twitter
  • Whatsapp

ಬೆಂಗಳೂರು(ಜು.09): ರಾಜ್ಯಾದ್ಯಂತ ಕಂದಾಯ ನಿವೇಶನಗಳ ನೋಂದಣಿಯನ್ನು ಸ್ಥಗಿತಗೊಳಿಸಿ ಬರೋಬ್ಬರಿ ಒಂದೂವರೆ ವರ್ಷ ಕಳೆದಿದೆ. ಈವರೆಗೂ ರೆವಿನ್ಯೂ ನಿವೇಶನ ಮಾಲೀಕರಿಗೆ ಅಕ್ರಮ-ಸಕ್ರಮಕ್ಕೆ ಪರ್ಯಾಯ ಮಾರ್ಗ ಸೂಚಿಸಿಲ್ಲ. ಅಲ್ಲದೆ ಸದ್ಯಕ್ಕೆ ಅಂತಹ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ ಎಂದು ಕಂದಾಯ ಇಲಾಖೆ ಸ್ಪಷ್ಟಪಡಿಸಿದೆ. ಹೀಗಾಗಿ ಲಕ್ಷಾಂತರ ಸಂಖ್ಯೆಯ ನಿವೇಶನದಾರರು ಅತಂತ್ರರಾಗಿದ್ದಾರೆ.

2020ರ ಜನವರಿಯಲ್ಲೇ ಕಂದಾಯ ಇಲಾಖೆ ಏಕಾಏಕಿ ಕಂದಾಯ ನಿವೇಶನಗಳ ನೋಂದಣಿ ಸ್ಥಗಿತಗೊಳಿಸಿ ಆದೇಶಿಸಿತ್ತು. ಇದರಿಂದ ಕಂದಾಯ ನಿವೇಶನಗಳ ಖರೀದಿ ಹಾಗೂ ಮಾರಾಟ ಸ್ಥಗಿತಗೊಂಡಿದೆ. ಕೊರೋನಾ ಸಂಕಷ್ಟದ ಬಳಿಕವಂತೂ ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ವೆಚ್ಚ ಮತ್ತಿತರ ತುರ್ತು ಹಣಕಾಸು ಅಗತ್ಯಗಳಿಗೆ ಜನರು ತಮ್ಮದೆ ನಿವೇಶನ ಮಾರಾಟ ಮಾಡಲೂ ಆಗದ ಸ್ಥಿತಿ ತಲುಪಿದ್ದಾರೆ. ಕಷ್ಟಪಟ್ಟು ದುಡಿದು ಹೂಡಿಕೆ ಮಾಡಿದ ಹಣ ಕಷ್ಟಕ್ಕೆ ನೆರವಾಗದಂತಾಗಿದೆ. ಅಲ್ಪ-ಸ್ವಲ್ಪ ಹಣ ಕೂಡಿಟ್ಟು ಕಡಿಮೆ ಬೆಲೆಯಲ್ಲಿ ನಿವೇಶನ ಖರೀದಿಸುವ ಬಡವರ ಆಸೆಗೂ ತಣ್ಣೀರು ಬಿದ್ದಿದೆ ಎಂದು ನಿವೇಶನದಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಕಂದಾಯ ಇಲಾಖೆ ಮಾತ್ರ ಕಂದಾಯ ನಿವೇಶನಗಳ ನೋಂದಣಿ ಅಥವಾ ಅಕ್ರಮ- ಸಕ್ರಮಕ್ಕೆ ಅವಕಾಶ ಕಲ್ಪಿಸಲು ಯಾವುದೇ ನಿರ್ಧಾರ ಮಾಡಿಲ್ಲ. ಅಲ್ಲದೆ, ಅಂತಹ ಪ್ರಸ್ತಾವನೆಯನ್ನೇ ಕೈಗೆತ್ತಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಹೀಗಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿರುವ ರೆವಿನ್ಯೂ ನಿವೇಶನದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೋಂದಣಿ ಸ್ಥಗಿತಕ್ಕೂ ಮೊದಲೂ ಸಾವಿರಾರು ಮಂದಿ ಮುಂಗಡ ಹಣ ಪಾವತಿಸಿ ನಿವೇಶನ ಖರೀದಿಗೆ ಕರಾರು ಒಪ್ಪಂದ ಮಾಡಿಕೊಂಡಿದ್ದಾರೆ. ಇದೀಗ ನೋಂದಣಿ ಸ್ಥಗಿತಗೊಂಡಿದ್ದು ನಿವೇಶನ ಮಾಲೀಕರು ಹಣ ವಾಪಸು ನೀಡಲು ನಿರಾಕರಿಸುತ್ತಿದ್ದಾರೆ. ಸರ್ಕಾರ ಅನುಮತಿ ನೀಡಿದ ಕೂಡಲೇ ನೋಂದಣಿ ಮಾಡಿಕೊಡುವುದಾಗಿ ಸಬೂಬು ಹೇಳುತ್ತಿರುವುದರಿಂದ ಸಾವಿರಾರು ಮಂದಿಯ ಲಕ್ಷಾಂತರ ರು. ಹಣ ಬಡಾವಣೆ ಅಭಿವೃದ್ಧಿಗಾರರ ಕೈ ಸೇರಿ ವಾಪಸಾಗದಂತಾಗಿದೆ.

ರಾಜ್ಯಾದ್ಯಂತ ರೆವಿನ್ಯೂ ಸೈಟ್‌ ಏಕಾಏಕಿ ಸ್ಥಗಿತ: ಮಾಲಿಕರು ಅತಂತ್ರ!

ಏನಿದು ರೆವಿನ್ಯೂ ನಿವೇಶನ ಸಮಸ್ಯೆ?

ಭೂ ಬಳಕೆ ಪರಿವರ್ತನೆ ಹಾಗೂ ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದ ಇ-ಸ್ವತ್ತು ಖಾತಾ ಹೊಂದಿರದ ಎಲ್ಲಾ ನಿವೇಶನಗಳ ನೋಂದಣಿ 2020ರ ಜನವರಿಯಲ್ಲೇ ಕಡ್ಡಾಯವಾಗಿ ಸ್ಥಗಿತಗೊಂಡಿದೆ. ಹೀಗಾಗಿ ಯಾವುದೇ ಪಂಚಾಯ್ತಿ ಹಾಗೂ ಕಂದಾಯ ನಿವೇಶನಗಳೂ ನೋಂದಣಿ ಆಗುತ್ತಿಲ್ಲ. ಕೃಷಿ ಬಳಕೆಯಿಂದ ಭೂ ಪರಿವರ್ತನೆ (ಡಿ.ಸಿ. ಕನ್ವರ್ಷನ್‌) ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದ ನಿವೇಶನಗಳು ಕಂದಾಯ ನಿವೇಶನಗಳು. 2006ರ ಕರ್ನಾಟಕ ಭೂ ಕಂದಾಯ ತಿದ್ದುಪಡಿ ಕಾಯಿದೆ ಪ್ರಕಾರ ಕಂದಾಯ ನಿವೇಶನಗಳನ್ನು ನೋಂದಣಿ ಮಾಡುವುದನ್ನು ನಿರ್ಬಂಧಿಸಲಾಗಿದೆ. 2016ರಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ಕಂದಾಯ ನಿವೇಶನಗಳ ನೋಂದಣಿ ಸ್ಥಗಿತಗೊಳಿಸುವಂತೆ ಆದೇಶಿಸಿತ್ತು. ಹೀಗಿದ್ದರೂ ಉಪ ನೋಂದಣಾಧಿಕಾರಿಗಳು ನೋಂದಣಿ ಮಾಡುತ್ತಿದ್ದರು. 2020ರ ಜನವರಿಯಲ್ಲಿ ಕಾವೇರಿ ಆಸ್ತಿ ನೋಂದಣಿ ತಂತ್ರಾಂಶದ ಮೂಲಕ ನಿವೇಶನಗಳ ನೋಂದಣಿ ಮಾಡುತ್ತಿರುವುದರಿಂದ ಭೂ ಪರಿವರ್ತನೆ, ಪ್ರಾಧಿಕಾರದ ಅನುಮೋದನೆ, ಇ-ಸ್ವತ್ತು ದಾಖಲೆಗಳನ್ನು ಕಡ್ಡಾಯವಾಗಿ ಅಪ್‌ಲೋಡ್‌ ಮಾಡಬೇಕು. ಅಲ್ಲದೆ, ಖರೀದಿದಾರರು ಹಾಗೂ ಮಾರಾಟಗಾರರ ದೂರವಾಣಿ ಸಂಖ್ಯೆಯನ್ನು ನೀಡಿ ಓಟಿಪಿ ಸಂಖ್ಯೆ ನಮೂದಿಸಬೇಕು. ಹೀಗಾಗಿ ಯಾವುದೇ ಕಂದಾಯ ನಿವೇಶನ ನೋಂದಣಿ ಸಾಧ್ಯವಾಗುತ್ತಿಲ್ಲ.

ಅಕ್ರಮ- ಸಕ್ರಮ ಪ್ರಸ್ತಾವ ಇಲ್ಲ

ರಾಜ್ಯದಲ್ಲಿನ ಕಂದಾಯ ನಿವೇಶನಗಳ ನೋಂದಣಿಯನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಕಂದಾಯ ನಿವೇಶನಗಳ ಅಕ್ರಮ-ಸಕ್ರಮ ಪ್ರಸ್ತಾವನೆ ಕಂದಾಯ ಇಲಾಖೆ ಮುಂದೆ ಸದ್ಯಕ್ಕೆ ಚರ್ಚೆಯಲ್ಲಿಲ್ಲ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ. 

ಇ-ಸ್ವತ್ತು ಖಾತಾ ಕಡ್ಡಾಯ:

ಈ ಮೊದಲು ಗ್ರಾಮೀಣ ಭಾಗದಲ್ಲಿ ಶುದ್ಧ ಕ್ರಯ ಪತ್ರ, ಖಾತಾ ನಕಲು, ಕಂದಾಯ ರಸೀದಿ ಇದ್ದರೆ ಸಾಕು ನೋಂದಣಿ ಮಾಡಿಕೊಡಲಾಗುತ್ತಿತ್ತು. ಆದರೆ, ಪ್ರಸ್ತುತ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ 9, 11-ಎ, 11-ಬಿ ಫಾರಂ ವಿತರಿಸುತ್ತಿದೆ. ‘ಕಾವೇರಿ’ ಮತ್ತು ‘ಇ-ಸ್ವತ್ತು’ ತಂತ್ರಾಂಶಗಳನ್ನು ಸಂಯೋಜಿಸಲಾಗಿದೆ. ಹೀಗಾಗಿ ಇ-ಸ್ವತ್ತಿನಲ್ಲಿ ಇಲ್ಲದ ನಿವೇಶನಗಳನ್ನು ನೋಂದಣಿ ಮಾಡಲು ಆಗುವುದಿಲ್ಲ ಉಪ ನೋಂದಣಾಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಕಂದಾಯ ನಿವೇಶನಗಳೇ ಹೆಚ್ಚು, ಪರಿಹಾರ ಸೂಚಿಸಿ: ಸಾರ್ವಜನಿಕರು

ರಾಜ್ಯದಲ್ಲಿ ಅನುಮೋದಿತ ನಿವೇಶನಗಳಿಗಿಂತ ಕಂದಾಯ ನಿವೇಶನಗಳೇ ಹೆಚ್ಚಿವೆ. ಬೆಂಗಳೂರು ಹೊರ ವಲಯದಲ್ಲಿನ ಶೇ.80 ನಿವೇಶನಗಳು ಕಂದಾಯ ನಿವೇಶನಗಳು. ಈ ನಿವೇಶನಗಳ ನೋಂದಣಿ ರದ್ದುಪಡಿಸಿರುವುದರಿಂದ ಕಂದಾಯ ನಿವೇಶನ ಹೊಂದಿರುವವರಿಗೆ ಪರಿಹಾರವೇನು ಎಂಬ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ನಿವೇಶನಗಳನ್ನು ಸಕ್ರಮಗೊಳಿಸಲು ಸಹ ಮುಂದಾಗಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ಇಂತಹ ನಿವೇಶನಗಳನ್ನು ಸಕ್ರಮಗೊಳಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
 

Follow Us:
Download App:
  • android
  • ios