ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎ ವಿಳಂಬದಿಂದಾಗಿ ನಿವೇಶನದಾರರು ಗಂಭೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಯಸ್ಸಿನ ಮಿತಿ, ರೇರಾ ತೊಡಕು ಮತ್ತು ಭೂಸ್ವಾಧೀನ ಸಮಸ್ಯೆಗಳಿಂದ ಬ್ಯಾಂಕುಗಳು ಗೃಹ ಸಾಲ ನಿರಾಕರಿಸುತ್ತಿದ್ದು, ಸಾವಿರಾರು ಮಂದಿಯ ಸ್ವಂತ ಮನೆಯ ಕನಸು ನನಸಾಗದ ಸ್ಥಿತಿ ತಲುಪಿದೆ.

ಬೆಂಗಳೂರು (ಡಿ.08): ದಶಕಗಳ ಕಾಲದ ವಿಳಂಬದಿಂದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ದ ಮಹತ್ವಾಕಾಂಕ್ಷೆಯ ನಾಡಪ್ರಭು ಕೆಂಪೇಗೌಡ ಬಡಾವಣೆ (NPKL) ನಿವೇಶನದಾರರು ಗಂಭೀರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಸಕಾಲದಲ್ಲಿ ನಿವೇಶನ ಹಸ್ತಾಂತರವಾಗದ ಕಾರಣದಿಂದಾಗಿ, ನಿವೇಶನದಾರರು ಮನೆ ನಿರ್ಮಾಣಕ್ಕಾಗಿ ಬ್ಯಾಂಕುಗಳಿಂದ ಸಾಲ ಪಡೆಯಲು ವಯಸ್ಸಿನ ಕಾರಣದಿಂದ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಕುರಿತು ಹಲವಾರು ನಿವೇಶನದಾರರು ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್ ಅವರಿಗೆ ಟ್ವಿಟರ್ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

55ರ ನಂತರ ಸಾಲ ನಿರಾಕರಣೆ: ಬಿಡಿಎ ವಿಳಂಬದ ಪರಿಣಾಮ

ನಿವೇಶನ ಹಂಚಿಕೆಯಾದಾಗ ನಲವತ್ತರ ಆಸುಪಾಸಿನಲ್ಲಿದ್ದ ಸಾವಿರಾರು ನಿವೇಶನದಾರರು, ಬಿಡಿಎ ಮೂಲಸೌಕರ್ಯ ಅಭಿವೃದ್ಧಿ ಪೂರ್ಣಗೊಳಿಸಲು ಸುಮಾರು ಒಂಬತ್ತು ವರ್ಷಗಳನ್ನು ತೆಗೆದುಕೊಂಡಿದ್ದರಿಂದ ಮನೆ ನಿರ್ಮಿಸಲು ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ರಾಷ್ಟ್ರೀಕೃತ ಬ್ಯಾಂಕುಗಳು 55 ವರ್ಷ ವಯಸ್ಸನ್ನು ಮೀರಿದವರಿಗೆ ಗೃಹ ನಿರ್ಮಾಣಕ್ಕೆ ಸಾಲ ನೀಡಲು ನಿರಾಕರಿಸುತ್ತವೆ. ಪರಿಣಾಮವಾಗಿ, ಅನೇಕ ಹಿರಿಯ ನಿವೇಶನದಾರರಿಗೆ ಈಗ ಸಾಲ ಸಿಗುತ್ತಿಲ್ಲ. ಅನೇಕ ನಿವೇಶನ ಮಾಲೀಕರು ಈಗ ನಿವೃತ್ತಿ ವಯಸ್ಸಿಗೆ ಹತ್ತಿರವಾಗಿದ್ದಾರೆ. ಇನ್ನು ಈಗಾಗಲೇ ನಿವೃತ್ತರಾಗಿದ್ದಾರೆ. ಸಾಲದ ಬಡ್ಡಿ ದರಗಳು ಕಡಿಮೆಯಿದ್ದರೂ ಸಹ, ಈ ಹಿರಿಯ ನಾಗರಿಕರಿಗೆ ಬ್ಯಾಂಕ್ ಸಾಲ ಪಡೆಯುವುದು ದೊಡ್ಡ ಸವಾಲಾಗಿದೆ. ನಿವೃತ್ತರು ಅನಿವಾರ್ಯವಾಗಿ ಹೆಚ್ಚಿನ ಬಡ್ಡಿ ದರದಲ್ಲಿ ಎನ್‌ಬಿಎಫ್‌ಸಿ (NBFC) ಗಳಿಂದ ಸಾಲ ಪಡೆಯುವ ಅನಿವಾರ್ಯತೆ ಎದುರಾಗಿದೆ.

Scroll to load tweet…

ರೇರಾ ಮಾನದಂಡ ಮತ್ತು ಭೂಸ್ವಾಧೀನ ಬಿಕ್ಕಟ್ಟು

ಬ್ಯಾಂಕುಗಳು ಸಾಲ ನಿರಾಕರಿಸಲು ವಯಸ್ಸು ಮಾತ್ರವಲ್ಲದೆ, ಬಡಾವಣೆಯ ಕಾನೂನು ತೊಡಕುಗಳನ್ನೂ ಕಾರಣವಾಗಿ ನೀಡುತ್ತಿವೆ. ಎಚ್‌ಡಿಎಫ್‌ಸಿ (HDFC) ಸೇರಿದಂತೆ ಪ್ರಮುಖ ಬ್ಯಾಂಕುಗಳು, ಕೆಂಪೇಗೌಡ ಬಡಾವಣೆಯನ್ನು ಬ್ಯಾಂಕ್‌ಗಳು ರೇರಾ (RERA) ಮಾನದಂಡಗಳ ಅನುಸರಣೆ ಇಲ್ಲದ ಮತ್ತು ಅಪೂರ್ಣ ಬಡಾವಣೆ ಎಂದು ಪಟ್ಟಿ ಮಾಡಿರುವುದನ್ನು ಎತ್ತಿ ತೋರಿಸಿವೆ. ಜೊತೆಗೆ, ಬಡಾವಣೆಯಲ್ಲಿ ಭೂಸ್ವಾಧೀನ ಸಮಸ್ಯೆಗಳು ಇನ್ನೂ ಬಾಕಿ ಉಳಿದಿರುವುದನ್ನು ಸಹ ಬ್ಯಾಂಕ್ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಇದೀಗ ಕೆಂಪೇಗೌಡ ಬಡಾವಣೆಯನ್ನು , 4040 ಎಕರೆಗಳಲ್ಲಿ ಯೋಜಿಸಿತ್ತಾದರೂ, ದಶಕಗಳು ಕಳೆದರೂ ಈವರೆಗೆ ಕೇವಲ 2,800 ಎಕರೆಗಳಲ್ಲಿ ಮಾತ್ರ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದೆ. ಸುಮಾರು 1,200 ಎಕರೆ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಬಾಕಿ ಇದೆ. ಅರ್ಕಾವತಿ ಬಡಾವಣೆ ನಂತರ NPKL ಕೂಡ ಅಪೂರ್ಣವಾಗಿ ಉಳಿದಿರುವುದರಿಂದ ನಿವೇಶನದಾರರು ಕಂಗಾಲಾಗಿದ್ದಾರೆ.

ಪೆನಾಲ್ಟಿ ರದ್ದುಗೊಳಿಸಲು ಒತ್ತಾಯ

ಈ ಗಂಭೀರ ಸಮಸ್ಯೆಯನ್ನು ಒಪ್ಪಿಕೊಂಡಿರುವ ಬಿಡಿಎ ಕಮಿಷನರ್ ಮೇಜರ್ ಮಣಿವಣ್ಣನ್, 'ಇದು ನಿಜವಾಗಿಯೂ ಗಂಭೀರ ಸಮಸ್ಯೆ. ಇದನ್ನು ಬ್ಯಾಂಕುಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ' ತಮ್ಮ ತಂಡಕ್ಕೆ ಸೂಚಿಸಿದ್ದಾರೆ. ಬಿಡಿಎಯು ತಕ್ಷಣಕ್ಕೆ ಸಾಲ ಪಡೆಯಲು ಸಾಧ್ಯವಾಗದ ನಿವೇಶನದಾರರಿಗೆ ನಿವೇಶನಗಳ ದಂಡವನ್ನು (Penalty) ರದ್ದುಗೊಳಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

Scroll to load tweet…