ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು[ಜ.27]: ಕಂದಾಯ ನಿವೇಶನ, ಇ-ಸ್ವತ್ತು ಖಾತಾ ಹೊಂದಿರದ ಪಂಚಾಯ್ತಿ ನಿವೇಶನ ಹಾಗೂ ಬಿಬಿಎಂಪಿ ‘ಬಿ-ಖಾತಾ’ ಹೊಂದಿರುವ ನಿವೇಶನಗಳ ಸಕ್ರಮಕ್ಕೆ ರಾಜ್ಯ ಸರ್ಕಾರ ಪರಿಹಾರ ಕಂಡುಕೊಂಡಿಲ್ಲ. ಹೀಗಿದ್ದರೂ ಏಕಾಏಕಿ 2013ಕ್ಕಿಂತ ಮೊದಲು ಇ-ಸ್ವತ್ತು ಖಾತಾ ಪಡೆಯದ ಕಂದಾಯ, ಪಂಚಾಯ್ತಿ ಹಾಗೂ ಬಿಬಿಎಂಪಿ ಬಿ-ಖಾತಾ ನಿವೇಶನಗಳ ನೋಂದಣಿ ಸ್ಥಗಿತಗೊಳಿಸಿದ್ದು, ಲಕ್ಷಾಂತರ ಮಂದಿ ಅತಂತ್ರಗೊಂಡಿದ್ದಾರೆ.

ಹೌದು, ಬಿಬಿಎಂಪಿ ವ್ಯಾಪ್ತಿಯಲ್ಲೇ ಪಾಲಿಕೆ ಅಂಕಿ-ಅಂಶಗಳ ಪ್ರಕಾರ ಬರೋಬ್ಬರಿ 3.8 ಲಕ್ಷ ಬಿಬಿಎಂಪಿ ಬಿ-ಖಾತಾ ನಿವೇಶನಗಳಿವೆ. ಇದೀಗ ನೋಂದಣಿಗೆ ಭೂ ಪರಿವರ್ತನೆ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಹಾಗೂ ಇ-ಖಾತಾ ಕಡ್ಡಾಯಗೊಳಿಸಿರುವುದರಿಂದ ಅರ್ಧದಷ್ಟುಬಿಬಿಎಂಪಿ ಬಿ-ಖಾತಾ ನಿವೇಶನಗಳ ನೋಂದಣಿಯೂ ಸ್ಥಗಿತಗೊಳ್ಳಲಿದೆ. ಹೊಸ ನಿಯಮದಿಂದಾಗಿ, 2013ರ ಡಿ.31ರ ಒಳಗಾಗಿ ಬಿ-ಖಾತಾ ಪಡೆಯದ ನಿವೇಶನಗಳ ನೋಂದಣಿ ಆಗುವುದಿಲ್ಲ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸ್ಪಷ್ಟಪಡಿಸಿದೆ.

ಅಕ್ರಮ ತಡೆಗೆ ರೆವಿನ್ಯೂ ಸೈಟ್‌ ನೋಂದಣಿ ಸ್ಥಗಿತ: ಅಶೋಕ್

ಹೀಗಿದ್ದರೂ, ಬಿಬಿಎಂಪಿ ಹೊರ ವಲಯದಲ್ಲಿ ಕೆಲವರು ನಿಯಮ ಉಲ್ಲಂಘನೆ ಮಾಡಿ 2013ರ ಬಳಿಕ ಬಿ-ಖಾತಾ ಪಡೆದಿರುವ ಬಿಬಿಎಂಪಿ ನಿವೇಶನಗಳನ್ನು ನೋಂದಣಿ ಮಾಡಿಕೊಡಲು ಯತ್ನಿಸಬಹುದು. ಹೀಗಾಗಿ ಕಾವೇರಿ ತಂತ್ರಾಂಶದ ಮೇಲೆ ಕಣ್ಗಾವಲು ಇಟ್ಟಿದ್ದೇವೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ತಿಳಿಸಿದೆ. ಹೀಗಾಗಿ ಇಷ್ಟೂಮಂದಿ ತಮ್ಮ ನಿವೇಶನಗಳ ಮಾರಾಟ ಮಾಡಲಾಗದೆ, ಬಿ-ಖಾತಾ ನಿವೇಶನಗಳನ್ನು ಖರೀದಿಸಲಾಗದೆ ಅತಂತ್ರಗೊಂಡಿದ್ದಾರೆ.

ಇನ್ನು ರಾಜ್ಯದ ಇತರೆಡೆ ಶೇ.60ರಿಂದ 80ರಷ್ಟುಕಂದಾಯ ಹಾಗೂ ಇ-ಸ್ವತ್ತು ಹೊಂದಿರದ ಪಂಚಾಯ್ತಿ ನಿವೇಶನಗಳೇ ಇವೆ. ಇದೀಗ ಏಕಾಏಕಿ ನೋಂದಣಿ ಸ್ಥಗಿತಗೊಳಿಸಿರುವುದರಿಂದ ಆರ್ಥಿಕ ಸಂಕಷ್ಟದಿಂದಾಗಿ ನಿವೇಶನ ಮಾರಾಟಕ್ಕೆ ಮುಂದಾಗಿರುವವರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದಕೆÜ್ಕ ಕೂಡಲೇ ಪರಿಹಾರ ಒದಗಿಸಬೇಕಾಗಿದ್ದ ರಾಜ್ಯ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿವೇಶನದಾರರಿಗೆ ಪ್ರಾಣ ಸಂಕಟ:

ಯಾವುದೇ ಪೂರ್ವಸಿದ್ಧತೆ ಇಲ್ಲದೆ ಕಂದಾಯ ನಿವೇಶನಗಳ ನೋಂದಣಿಗೆ ಕಡಿವಾಣ ಹಾಕಲಾಗಿದೆ. ಇದು ಕಂದಾಯ ಇಲಾಖೆಗೆ ಚೆಲ್ಲಾಟದಂತಿದ್ದರೆ ಲಕ್ಷಾಂತರ ನಿವೇಶನದಾದರಿಗೆ ಪ್ರಾಣ ಸಂಕಟದಂತಹ ಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವವರೂ ತಮ್ಮ ನಿವೇಶನ ಮಾರಾಟ ಮಾಡಲಾಗದೆ ಸಮಸ್ಯೆ ಉಂಟಾಗಿದೆ. ಮಕ್ಕಳ ಮದುವೆ, ಶಿಕ್ಷಣ, ಉದ್ಯೋಗ, ವ್ಯಾಪಾರ ವೆಚ್ಚಗಳಿಗಾಗಿ ನಿವೇಶನ ಮಾರಾಟ ಮಾಡಲು ಯತ್ನಿಸಿದರೂ ಸರ್ಕಾರ ಪರಿಹಾರ ತೋರಿಸುವವರೆಗೂ ಇಂತಹ ನಿವೇಶನಗಳ ಮಾರಾಟ ಅಸಾಧ್ಯ.

ರಾಜ್ಯಾದ್ಯಂತ ಸೈಟ್‌ ನೋಂದಣಿ ಏಕಾ ಏಕಿ ಸ್ಥಗಿತ!

ಒಂದೊಮ್ಮೆ ಸರ್ಕಾರವು ಅಭಿವೃದ್ಧಿ ಶುಲ್ಕ ಪಾವತಿಸಿಕೊಂಡು ಕಂದಾಯ ನಿವೇಶನಗಳನ್ನು ಸಕ್ರಮಗೊಳಿಸಿದರೆ ಬಳಿಕ ನೋಂದಣಿ ಸಲೀಸಲಾಗಲಿದೆ. ಆದರೆ, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ.

2013ಕ್ಕಿಂತ ಮುಂಚೆ ಇ-ಖಾತಾ ಹೊಂದಿರುವವರಿಗೆ ಸಮಸ್ಯೆ ಇಲ್ಲ

ಪಂಚಾಯ್ತಿ ವ್ಯಾಪ್ತಿಗಳಲ್ಲಿ ಹಸಿರು ವಲಯ ಹೊರತುಪಡಿಸಿ ಉಳಿದೆಡೆ ಕಂದಾಯ ನಿವೇಶನ ಹಾಗೂ ಕಟ್ಟಡಗಳಿಗೆ 2013ಕ್ಕಿಂತಲೂ ಮೊದಲು ಇ-ಖಾತಾ ಸ್ವತ್ತು ಪಡೆದಿರುವವರಿಗೆ ನೋಂದಣಿ ಸಮಸ್ಯೆ ಇಲ್ಲ. ಅಂದರೆ, 2013ರ ಜೂನ್‌ಗೆ ಮೊದಲು 1 ಕ್ಕಿಂತ ಹೆಚ್ಚು ಬಾರಿ ಮಾರಾಟವಾಗಿರುವ ಹಾಗೂ 2013ರ ಜೂನ್‌ ಒಳಗೆ ಕಟ್ಟಡ ನಿರ್ಮಾಣವಾಗಿ ಆರು ತಿಂಗಳು ಮೊದಲು ಯಾವುದಾದರೂ ವಿದ್ಯುಚ್ಛಕ್ತಿ ಬಿಲ್‌ ಒದಗಿಸಿದರೆ ನಮೂನೆ-11 ಬಿ ನೀಡಿ ನೋಂದಾಯಿಸಿರುತ್ತಾರೆ. ನಮೂನೆ -11 ಬಿ ಇದ್ದರೆ ಪಂಚಾಯ್ತಿ ಇ- ಸ್ವತ್ತು ಖಾತಾ ದೊರೆಯಲಿದೆ. ಆದರೆ, ಹಸಿರು ವಲಯದ ನಿವೇಶನ ಅಥವಾ ಕಟ್ಟಡಗಳಿಗೆ 11-ಬಿ ನೀಡಲು ಸಾಧ್ಯವೇ ಇಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಈ ಸೈಟ್‌ಗಳಷ್ಟೇ ನೋಂದಣಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ನಿವೇಶನ ನೋಂದಣಿ ಮಾಡಲು ಸಕ್ಷಮ ಪ್ರಾಧಿಕಾರಗಳಿಂದ ನೀಡುವ ‘ಎ’-ಖಾತಾ ಹಾಗೂ ತೆರಿಗೆ ನಿರ್ಧರಣೆ ರಿಜಿಸ್ಟರ್‌ ಹೊಂದಿರಬೇಕು. ಅಥವಾ 2013ರ ಡಿ.31ಕ್ಕಿಂತ ಹಿಂದೆ ಸೃಜಿಸಿರುವ ಬಿ-ಖಾತಾ ಹಾಗೂ 2013ರ ಡಿ.31ಕ್ಕಿಂತ ಹಿಂದಿನ ಅವಧಿಯಲ್ಲಿ ಒಂದು ಅಥವಾ ಹೆಚ್ಚಿನ ಬಾರಿ ಆಸ್ತಿ ಮಾರಾಟವಾಗಿರಬೇಕು.

ಒಂದು ವೇಳೆ ಸ್ಥಿರಾಸ್ತಿಯು ಕಟ್ಟಡವಾಗಿದ್ದರೆ 2013ರ ಡಿ.31ಕ್ಕಿಂತ ಮೊದಲು ಸೃಜಿಸಲ್ಪಟ್ಟಬಿ-ಖಾತಾ ಮತ್ತು ನೋಂದಾಯಿಸಲ್ಪಡುವ ಆಸ್ತಿಗೆ ಸಂಬಂಧಿಪಟ್ಟಂತೆ 6-12 ತಿಂಗಳುಗಳ ವಿದ್ಯುತ್‌ ಬಿಲ್ಲು ಅಥವಾ ಎಸ್ಕಾಂನಿಂದ ನೀಡುವ ವಿದ್ಯುತ್‌ ಸಂಪರ್ಕ, ಅದರ ವಿವರಗಳ ಪ್ರತಿ ನೀಡಬೇಕು. ಇವು ಇಲ್ಲದ ನಿವೇಶನಗಳು ನೋಂದಣಿ ಆಗುವುದಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಕಲೆಕ್ಟರ್‌ ಎಂದು ಮರುನಾಮಕರಣ?

ಬಿಬಿಎಂಪಿ ಬಿ ಖಾತಾ ನಿವೇಶನಕ್ಕೆ ‘ಎ’ ಖಾತಾ ನೀಡಲು ಸಮಿತಿ

ಬಿಬಿಎಂಪಿ ವ್ಯಾಪ್ತಿಯಲ್ಲೇ 3.80 ಲಕ್ಷ ಬಿ ಖಾತಾ ನಿವೇಶನಗಳಿವೆ. ಇವುಗಳಿಗೆ ಎ ಖಾತಾ ನೀಡಲು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಏಳು ತಿಂಗಳ ಹಿಂದೆ ಸಮಿತಿ ರಚಿಸಲಾಗಿದೆ. ಆದರೆ, ಈವರೆಗೂ ಮಹತ್ವದ ಬೆಳವಣಿಗೆಗಳು ಆಗಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಗೆ ಇತ್ತೀಚೆಗೆ ಸೇರ್ಪಡೆಗೊಂಡಿರುವ 7 ನಗರಸಭೆ, 1 ಪುರಸಭೆ ಹಾಗೂ 110 ಹಳ್ಳಿಗಳ ವ್ಯಾಪ್ತಿಯಲ್ಲಿ ಬಹುತೇಕ ಕಡೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ಕಂದಾಯ ಭೂಮಿಯಲ್ಲೇ ನಿವೇಶನಗಳು ಅಭಿವೃದ್ಧಿಪಡಿಸಿರುವುದರಿಂದ ಎ ಖಾತಾ ನೀಡಿಲ್ಲ. ಇದಕ್ಕಾಗಿ ಸುಧಾರಣಾ ಶುಲ್ಕ ಪಡೆದು ಎ ಖಾತಾ ನೀಡಲು ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ಕಾನೂನು ಇಲಾಖೆ ಅಧಿಕಾರಿಗಳಿರುವ ಸಮಿತಿ ರಚಿಸಲಾಗಿದೆ. ಒಂದು ವೇಳೆ ಇವುಗಳ ಸಕ್ರಮಕ್ಕೆ ಅವಕಾಶ ನೀಡಿದರೆ ಇದರಿಂದ ಸುಮಾರು 1,500 ಕೋಟಿ ರು. ಆದಾಯ ಬರುವ ನಿರೀಕ್ಷೆ ಇದೆ.