Asianet Suvarna News Asianet Suvarna News

'ಚಂದ್ರಗಿರಿ ತೀರದಲ್ಲಿ' ಖ್ಯಾತಿಯ ಹಿರಿಯ ಸಾಹಿತಿ ನಾಡೋಜ ಸಾರಾ ಅಬೂಬಕ್ಕರ್‌ ನಿಧನ

ಕನ್ನಡ ಖ್ಯಾತ ಲೇಖಕಿ ನಾಡೋಜ, ಸಾರಾ ಅಬೂಬಕ್ಕರ್‌ ನಿಧನರಾಗಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯವರಾದ ಇವರು ಚಂದ್ರಗಿರಿ ತೀರದಲ್ಲಿ ಪುಸ್ತಕವನ್ನು ಬರೆದಿದ್ದಾರೆ. ಇವರು ತಮ್ಮ ಬರಹಗಳಲ್ಲಿ ಮುಸ್ಲಿಂನ ಕೆಲವು ಅರ್ಥಹೀನ  ಸಂಪ್ರದಾಯಗಳನ್ನು ಕಟುವಾಗಿ ಟೀಕಿಸುತ್ತಿದ್ದರು.

Renowned Kannada writer Sara Abubakar passed away Vin
Author
First Published Jan 10, 2023, 2:23 PM IST | Last Updated Jan 10, 2023, 2:56 PM IST

ಕನ್ನಡ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್‌ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾ.ರಾ.ಅಬೂಬಕ್ಕರ್ ಕೊನೆಯುಸಿರೆಳೆದಿ ದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮೃತರು ನಾಲ್ವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಮಂಗಳೂರಿನ ಲೇಡಿಹಿಲ್ ನ ನಿವಾಸದಲ್ಲಿ ಅಂತಿಮ ಕ್ರಿಯೆ ನಡೆಯಲಿದೆ. ಕೇರಳದ ಕಾಸರಗೋಡು ಜಿಲ್ಲೆಯವರಾದ ಸಾರಾ ಅಬೂಬಕ್ಕರ್ ಬಾಲ್ಯದಿಂದಲೇ ಬರವಣಿಯೆ ಬಗ್ಗೆ ಆಸಕ್ತಿ ಹೊಂದಿದ್ದರುತಮ್ಮ ಬರಹಗಳಲ್ಲಿ ಮುಸ್ಲಿಂನ ಕೆಲವು ಸಂಪ್ರದಾಯಗಳನ್ನು ಕಟುವಾಗಿ ಟೀಕಿಸುತ್ತಿದ್ದರು. 

ಬಾಲ್ಯದಿಂದಲೇ ಬರವಣಿಯೆ ಬಗ್ಗೆ ಆಸಕ್ತಿ ಹೊಂದಿದ್ದರು
ಸಾರಾ ಅವರು 1936ರ ಜೂನ್ 30ರಂದು  ಕಾಸರಗೋಡಿನ ಚಂದ್ರಗಿರಿ ತೀರದ  ಗ್ರಾಮವೊಂದರಲ್ಲಿ ಜನಿಸಿದರು. ತಂದೆ ಪಿ.ಅಹಮದ್ ನ್ಯಾಯವಾದಿ. ತಾಯಿ ಚೈನಾಬಿ. ಹುಟ್ಟಿದೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ (Education) ಮಾಡಿದ ಸಾರಾ, ಹೈಸ್ಕೂಲಿನ ವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಎಂಜನಿಯರ್ ಆಗಿದ್ದ ಅಬೂಬಕ್ಕರ್‌ ಅವರೊಡನೆ ಸಾರಾ ಅವರ ವಿವಾಹ (Wedding) ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ  ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ (Writing) ಮಾರು ಹೋಗಿ ಸದಾ ಓದಿನಲ್ಲಿ ಮಗ್ನರಾಗಿರುತ್ತಿದ್ದರು. ಮನೋವಿಜ್ಞಾನದ ಬಗ್ಗೆ ತ್ರಿವೇಣಿಯವರು ಬರೆದ ಕಾದಂಬರಿಗಳು ಸಾರಾ ಅವರಲ್ಲಿ  ಆಕರ್ಷಣೆ ಹುಟ್ಟಿಸಿದವು.

ನನ್ನ ಕತೆ ಪಾಠ ಮಾಡೋದು ಬೇಡ: ಸರ್ಕಾರಕ್ಕೆ ಪತ್ರ ಬರೆದ ದೇವನೂರ ಮಹದೇವ

ಸಾರಾ ಅವರ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’
ವೈಕಂ ಮಹಮದ್ ಬಷೀರ್‌ ಅವರ ಕಾದಂಬರಿಗಳನ್ನು ಇವರ ಸಹೋದರ ತಂದು ಕೊಡುತ್ತಿದ್ದರು. ಅವರ ಬರವಣಿಗೆಯಿಂದ ಪ್ರಭಾವಿತರಾಗಿದ್ದ ಸಾರಾ ಅವರಿಗೆ ಬರೆಯಬೇಕೆಂಬ ಬಯಕೆ ಹೆಚ್ಚಾಯಿತು. ಅದೂ ಅಲ್ಲದೇ ತಮ್ಮ ಸುತ್ತಲಿನಲ್ಲಿಯೇ ಹೆಣ್ಣು ಮಕ್ಕಳ (Women) ಕಷ್ಟ ಸಂಕಟಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಾರಾ ಅವರ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಈ ಕಥೆಯಲ್ಲಿ ಹೊರಹೊಮ್ಮಿದ ವಾಸ್ತವಿಕ ಬದುಕಿನ ಚಿತ್ರಣ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ಶೋಷಿತಗೊಂಡ ಮಹಿಳೆಯರ ಧ್ವನಿಗಳು ಅಸಂಖ್ಯಾತ ಓದುಗರ ಹೃದಯ ತಟ್ಟುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಸಿಕ್ಕ ಜನಮನ್ನಣೆ ಅಷ್ಟಿಷ್ಟಲ್ಲ.

ಸಾರಾ ಅಬೂಬಕ್ಕರ್ ಬರೆದ ಕೃತಿಗಳು:
ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ, ತಳ ಒಡೆದ ದೋಣಿ, ಪಂಜರ ಇವರ ಇತರೆ ಕೃತಿಗಳು. ಕಥಾ ಸಂಕಲನಗಳಾದ ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ ಸಹ ಜನರ ಹೃದಯ ಗೆದ್ದಿವೆ. ಬಾನುಲಿ ನಾಟಕಗಳು-ಕಮರಿದ ಕನಸು, ಮಗಳು ಹುಟ್ಟಿದಳು, ತೇಲಾಡುವ ಮೋಡಗಳು, ತಾಳ, ಹೀಗೂ ಒಂದು ಬದುಕು ಮುಂತಾದುವು. ಲೇಖನ ಮತ್ತು ಅನುವಾದಗಳು-ಲೇಖನ ಗುಚ್ಛ, ಮನೋಮಿ, ಬಲೆ, ನಾನಿನ್ನು ನಿದ್ರಿಸುವೆ ಖ್ಯಾತ ಕಾದಂಬರಿಗಳು. 

Mysuru : ತ್ರಿವೇಣಿ ನಿವಾಸ ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿ

ಪ್ರಶಸ್ತಿ, ಪುನಸ್ಕಾರಗಳು:
ಸಾರಾ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (Award), ದಾನ ಚಿಂತಾಮಣಿ ಅತ್ತಿಮಬ್ಬೆ  ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ‘ಸಹನಾ’ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ‘ಸುಳಿಯಲ್ಲಿ ಸಿಕ್ಕವರು’ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಹಾಗೂ ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ  ಮುಂತಾದ ಹಲವಾರು ಪ್ರಮುಖ ಪ್ರಶಸ್ತಿ ಗೌರವಗಳು ಸಂದಿವೆ.

ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪ್ರತಿಪಾದಿಸುತ್ತಿದ್ದ ಲೇಖಕಿ
ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಬೇಕೆಂದು ಸಾರಾ ಅಬೂಬಕ್ಕರ್ ನಿರಂತರವಾಗಿ ಪ್ರತಿಪಾದಿಸುತ್ತಿದ್ದರು. ಹೆಣ್ಣು ಮಕ್ಕಳು ಪ್ರಾಣಿಗಳು, ಹೆರಲು ಇರುವ ಯಂತ್ರಗಳು ಎಂದು ಬಿಂಬಿಸಿರುವ ಸಮಾಜ ನಮ್ಮದು. ಇಸ್ಲಾಂನ ಮೂಲದಲ್ಲಿ ಹೆಣ್ಣಿಗೆ ಅಪಾರ ಗೌರವವಿವೆ. ಆದರೆ ಸೌದಿ ಅರೇಬಿಯಾ ಮೂಲದ ‘ವಹಾದಿಸಂ’ ಅನ್ನು ಮುಂದಿಟ್ಟುಕೊಂಡು ಈಗೀಗ ವಿಶ್ವದ ನಾನಾ ಭಾಗಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬಾರದು ಎಂದೆಲ್ಲಾ ವಾದಿಸುತ್ತಿದ್ದಾರೆ. ಮಹಿಳೆಗೆ ಶಿಕ್ಷಣ ಸಿಗಬೇಕು. ಅದರಲ್ಲೂ ತಾಯಂದಿರಿಗೆ ಅಕ್ಷರ ಜ್ಞಾನ ಬೇಕು. ಆದರೆ ಕೇರಳ, ಕರ್ನಾಟಕ ಕರಾವಳಿ ಭಾಗದ ಬಹುತೇಕ ಮುಸ್ಲಿಂ ಕುಟುಂಬಗಳಲ್ಲಿನ ತಾಯಂದಿರಿಗೆ ಶಿಕ್ಷಣ ಇಲ್ಲ. ಎಲ್ಲೋ ದೂರದ ದುಬೈನಲ್ಲೋ, ಮತ್ತೊಂದೆಡೆಯೋ ಕುಳಿತ ಪತಿ ಹಣ ಕಳುಹಿಸುತ್ತಾನೆ. ಅದನ್ನು ಮಕ್ಕಳು ಮಜಾ ಮಾಡುತ್ತಾರೆ. ಹಣವನ್ನು ಸರಿಯಾಗಿ ನಿರ್ವಹಿಸಲೂ ಬಾರದ ಮಕ್ಕಳು ಕುಟುಂಬ ಸಮೇತ ಹಾಳಾಗಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ಮಹಿಳೆಯನ್ನು ಶಿಕ್ಷಣದಿಂದ ವಂಚಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸುತ್ತಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್
ಸಾರಾ ಅಬೂಬಕ್ಕರ್ ಅಗಲಿಕೆಗೆ ಅನೇಕ ಗಣ್ಯರು ಕಂಬನಿ ಮಿಡಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಟ್ವೀಟ್ ಮಾಡಿದ್ದು, ತಾ‌ನು ನಂಬಿದ ಮೌಲ್ಯಗಳಿಗೆ ಬದ್ಧರಾಗಿ, ಎದುರಾದ ವಿರೋಧಗಳನ್ನು ದಿಟ್ಟತನದಿಂದ ಎದುರಿಸಿ, ಮುಸ್ಲಿಂ ಲೋಕದ ತವಕ-ತಲ್ಲಣಗಳಿಗೆ ದನಿಯಾಗಿದ್ದ ಹಿರಿಯ ಸಾಹಿತಿ ಸಾ ರಾ ಅಬೂಬಕರ್ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ.

Latest Videos
Follow Us:
Download App:
  • android
  • ios