Mysuru : ತ್ರಿವೇಣಿ ನಿವಾಸ ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿ
ಕನ್ನಡದ ಖ್ಯಾತ ಕಾದಂಬರಿಗಾರ್ತಿ ದಿವಂಗತ ತ್ರಿವೇಣಿ ಅವರ ಮನೆಯು ಇನ್ನು ಮುಂದೆ ಗತಕಾಲದ ವೈಭವದೊಡನೆ ಹೊಸ ತಲೆಮಾರಿನವರಿಗೆ ವಸ್ತು ಸಂಗ್ರಹಾಲಯವಾಗಿ ದೊರಕಲಿದೆ
ಮೈಸೂರು (ಡಿ.15): ಕನ್ನಡದ ಖ್ಯಾತ ಕಾದಂಬರಿಗಾರ್ತಿ ದಿವಂಗತ ತ್ರಿವೇಣಿ ಅವರ ಮನೆಯು ಇನ್ನು ಮುಂದೆ ಗತಕಾಲದ ವೈಭವದೊಡನೆ ಹೊಸ ತಲೆಮಾರಿನವರಿಗೆ ವಸ್ತು ಸಂಗ್ರಹಾಲಯವಾಗಿ ದೊರಕಲಿದೆ. ಕನ್ನಡದ ಪ್ರಖ್ಯಾತ ಸಿನಿಮಾಗಳಾದ ಬೆಳ್ಳಿಮೋಡ, ಶರಪಂಜರ, ಹಣ್ಣೆಲೆ ಚಿಗುರಿದಾಗ, ಹೂವು ಹಣ್ಣು ಮತ್ತು ಕಂಕಣ ಮುಂತಾದ ಸಿನಿಮಾಗಳಿಗೆ ತಮ್ಮ ಕಾದಂಬರಿ ಮೂಲಕ ಕಥೆ ಒದಗಿಸಿದ ತ್ರಿವೇಣಿ ಅವರ ಮನೆಯನ್ನು ಜೀರ್ಣೋದ್ಧಾರಗೊಳಿಸಿ ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಲಾಗುತ್ತಿದೆ.
ತ್ರಿವೇಣಿ ಅವರ ಪುತ್ರಿ ಮೀರಾ ಶಂಕರ್ (Meera Shankar) ಅವರು ಈಗ ಮನೆಯನ್ನು ಪುನರುಜ್ಜೀವನಗೊಳಿಸಲು ಮುಂದಾಗಿದ್ದಾರೆ. ಅವರು ಬುಧವಾರ ಗುದ್ದಲಿಪೂಜೆ ನೆರವೇರಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಚಾಮರಾಜಪುರಂ ರೈಲ್ವೆ ನಿಲ್ದಾಣ (Railway Station) ಬಳಿಯ 120 ವರ್ಷ ಹಳೆಯದಾದ ತ್ರಿವೇಣಿ ಅವರ ಮನೆ ಇನ್ನು ಒಂದು ವರ್ಷದಲ್ಲಿ ವಸ್ತು ಸಂಗ್ರಹಾಲಯವಾಗಲಿದೆ. ಕಟ್ಟಡ ಈಗ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. 1950 ರಿಂದ 1963 ಅವಧಿಯಲ್ಲಿ ತ್ರಿವೇಣಿ ಅವರು ರಚಿಸಿದ 24 ಕತೆ, ಕಾದಂಬರಿಗಳು ಇದೇ ಮನೆಯಲ್ಲಿಯೇ ಎಂಬುದು ವಿಶೇಷ. ಅವರು ಬದುಕಿದಷ್ಟೂದಿನ ಇದೇ ಮನೆಯಲ್ಲಿದ್ದರು. ಆ ಮನೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮನೆಗೆ ‘ಬೆಳ್ಳಿಮೋಡ’ ಎಂಬ ಹೆಸರಿಟ್ಟು, ಪಾರಂಪರಿಕ ಶೈಲಿಯಲ್ಲಿಯೇ ಕಟ್ಟಡ ಉಳಿಸಿಕೊಂಡು ಜೀರ್ಣೋದ್ಧಾರಗೊಳಿಸಲಾಗುವುದು ಎಂದು ಅವರು ಹೇಳಿದರು.
ಮನೆಯಲ್ಲಿ ತ್ರಿವೇಣಿ ಅವರು ಬಳಸಿದ್ದ ಎಲ್ಲಾ ವಸ್ತುಗಳನ್ನು ಸಂರಕ್ಷಿಸಲಾಗಿದೆ. ನಾನು ಲಂಡನ್ ಪ್ರವಾಸದಲ್ಲಿದ್ದಾಗ ಖ್ಯಾತ ನಾಟಕಗಾರ ವಿಲಿಯಂ ಷೇಕ್ಸ್‌ಪಿಯರ್ ಅವರು ಜೀವಿಸಿದ್ದ ಮನೆಗೆ ಭೇಟಿ ನೀಡಿದಾಗ, ಅಲ್ಲಿ ಷೇಕ್ಸ್‌ಪಿಯರ್ ಅವರು ಬಳಸಿದ್ದ ವಸ್ತುಗಳು, ಬರೆದ ಪತ್ರಗಳು, ಪಡೆದ ಪ್ರಶಸ್ತಿಯನ್ನು ಸಂಗ್ರಹಿಸಿರುವುದನ್ನು ನೋಡಿ, ಅದರಂತೆಯೇ ನಮ್ಮ ತಾಯಿ ತ್ರಿವೇಣಿ ಅವರ ಮನೆಯನ್ನೂ ಸ್ಮಾರಕ ಮಾಡಬೇಕು ಎಂಬ ಬಯಕೆ ಮೂಡಿತು ಎಂದು ಮೀರಾ ಶಂಕರ್ ತಿಳಿಸಿದರು.
ಮನೆ ದುರಸ್ತಿಗೆ ಅಗತ್ಯವಿರುವ ಅನುದಾನದ ಕೊರತೆ ಇತ್ತು. ಸದ್ಯಕ್ಕೆ ತ್ರಿವೇಣಿ ಅವರ ಅಭಿಮಾನಿಯೊಬ್ಬರು ಮನೆ ಜೀರ್ಣೋದ್ಧಾರ ಮಾಡಿಕೊಡಲು ಮುಂದಾಗಿದ್ದಾರೆ. 75/100 ಅಡಿ ಅಳತೆಯ ನಿವೇಶನದಲ್ಲಿ ಎರಡು ಮನೆಗಳಿದ್ದು, ಒಂದಕ್ಕೊಂದು ಹೊಂದಿಕೊಂಡಂತಿವೆ. ಒಂದು ಮನೆ 120 ವರ್ಷ ಹಳೆಯದಾದರೇ, ಮತ್ತೊಂದು 90 ವರ್ಷ ಹಳೆಯದು. 2ನೇ ಮನೆಯನ್ನು ಅಮ್ಮನೇ ತಂದೆಗೆ ಹೇಳಿ ಕಟ್ಟಿಸಿಕೊಂಡಿದ್ದರು. ಈಗ ಎರಡೂ ಶಿಥಿಲವಾಗಿರುವುದರಿಂದ ಹಳೆಯ ಕಟ್ಟಡವನ್ನು ಶಿಲ್ಪಶಾಸ್ತ್ರಜ್ಞರಾದ ಪಂಕಜ್ ಮೋದಿ ಮತ್ತು ರಘುನಾಥ್ ತಂಡ ಪರಿಶೀಲಿಸಿ ದುರಸ್ತಿಕಾರ್ಯ ಆರಂಭಿಸುತ್ತಿದೆ ಎಂದು ಅವರು ವಿವರಿಸಿದರು.
ನಮ್ಮ ತಾಯಿ ಬಳಸುತ್ತಿದ್ದ ಸೀರೆ, ಮೇಕಪ್ ಬಾಕ್ಸ್, ಪೆನ್ನು, ಡೈರಿ, ಬರೆದ ಪತ್ರ, ಪಡೆದ ಪ್ರಶಸ್ತಿ, ಅಪರೂಪದ ಛಾಯಾಚಿತ್ರ, ಪೀಠೋಪಕರಣ ಇರುತ್ತದೆ. ಜತೆಗೆ ಆಪ್ತ ಸಲಹಾಕೇಂದ್ರ ತೆರೆದು ಅಗತ್ಯ ಸಲಹೆ ನೀಡಲಾಗುವುದು ಎಂದರು.
ಆಡಿಯೋ ಬುಕ್, ಇ ಬುಕ್ನಲ್ಲಿ ತ್ರಿವೇಣಿ ಸಾಹಿತ್ಯ
ತ್ರಿವೇಣಿ ಎಂಬ ಹೆಸರಿನಿಂದ ಖ್ಯಾತರಾದ ಅನಸೂಯ ಶಂಕರ್ ಅವರು, ಕನ್ನಡದ ಪ್ರಮುಖ ಕಾದಂಬರಿಕಾರರಲ್ಲೊಬ್ಬರು. ಹಲವು ಜನಪ್ರಿಯ ಕಾದಂಬರಿಗಳ ಮೂಲಕ ಪ್ರಸಿದ್ಧರಾಗಿದ್ದಾರೆ. ಅವರ ಸಾಹಿತ್ಯವನ್ನು ಗಡಿಯಾಚೆಗೂ ದಾಟಿಸಲು ಇ-ಬುಕ್ ಮತ್ತು ಆಡಿಯೋ ಬುಕ್ ತಯಾರಿ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.
ತ್ರಿವೇಣಿ ಅವರು ಹಣ್ಣೆಲೆ ಚಿಗುರಿದಾಗ, ಬೆಳ್ಳಿ ಮೋಡ, ಶರಪಂಜರ, ದೂರದ ಬೆಟ್ಟ, ಬೆಕ್ಕಿನ ಕಣ್ಣು ಸೇರಿದಂತೆ 21 ಕಾದಂಬರಿ, 03 ಸಣ್ಣ ಕಥೆ ರಚಿಸಿದ್ದಾರೆ. ಇದರಲ್ಲಿ 5 ಸಿನಿಮಾಗಳಾಗಿದ್ದು, ಬೆಳ್ಳಿಮೋಡ ಖ್ಯಾತಿಗಳಿಸಿತು. ಆದ್ದರಿಂದ ಮನೆಗೆ ಬೆಳ್ಳಿಮೋಡ ಎಂದು ಹೆಸರಿಡಲಾಗುತ್ತಿದೆ. ಇವರ ಎಲ್ಲಾ ಕೃತಿಯನ್ನೂ ಇ-ಬುಕ್ ರೂಪಕ್ಕೆ ಇಳಿಸಲಾಗಿದ್ದು, ಜನವರಿ ವೇಳೆಗೆ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಅಂತೆಯೇ ವಿದೇಶದ ಕನ್ನಡಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಲ್ಲಾ 24 ಕೃತಿಯನ್ನೂ ಧ್ವನಿ ಮುದ್ರಿಕೆ ಮಾಡುವ ಕಾರ್ಯ ಆರಂಭಿಸಿದ್ದು, ಸದ್ಯದಲ್ಲಿಯೇ ಆಡಿಯೋ ಬಿಡಗಡೆ ಆಗಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಾರ್ವತಿ ವಟ್ಟಂ, ಶಿಲ್ಪಶಾಸ್ತ್ರಜ್ಞ ಪಂಕಜ್ ಮೋದಿ ಮೊದಲಾದವರು ಇದ್ದರು.
ಕಟ್ಟಡ ಜೀರ್ಣೋದ್ಧಾರಕ್ಕೆ ಸುಮಾರು ಒಂದು ವರ್ಷ ಬೇಕಾಗುತ್ತದೆ. ಈ ಹಿಂದೆ ಕಟ್ಟಡ ಕಟ್ಟಲು ಬಳಸಿದ್ದ ವಸ್ತುಗಳನ್ನೇ ಬಳಸಿ ದುರಸ್ತಿಗೊಳಿಸಲಾಗುವುದು. ಕೆಲ ಭಾಗ ತೆಗೆದು ಮೊದಲಿದ್ದಂತೆಯೇ ಉಳಿಸಲಾಗುವುದು. ಅಲ್ಲದೆ ತ್ರಿವೇಣಿ ಅವರ ಬದುಕನ್ನು ಇಲ್ಲಿ ಕಟ್ಟಿಕೊಡಲಾಗುವುದು.
- ಪಂಕಜ್ ಮೋದಿ, ಶಿಲ್ಪಶಾಸ್ತ್ರಜ್ಞ.