ರಾಜ್ಯದಲ್ಲಿ ಇನ್ನೂ ಎರಡ್ಮೂರು ದಿನ ಭಾರೀ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಕರಾವಳಿಯ ಮೂರು ಜಿಲ್ಲೆಗಳು ಸೇರಿ ಒಟ್ಟು 7 ಜಿಲ್ಲೆಗಳಲ್ಲಿ ಭಾರೀ ಮಳೆ ಲಕ್ಷಣ ಹಿನ್ನೆಲೆಯಲ್ಲಿ ‘ರೆಡ್ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು (ಮೇ.21): ರಾಜ್ಯದಲ್ಲಿ ಇನ್ನೂ ಎರಡ್ಮೂರು ದಿನ ಭಾರೀ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಕರಾವಳಿಯ ಮೂರು ಜಿಲ್ಲೆಗಳು ಸೇರಿ ಒಟ್ಟು 7 ಜಿಲ್ಲೆಗಳಲ್ಲಿ ಭಾರೀ ಮಳೆ ಲಕ್ಷಣ ಹಿನ್ನೆಲೆಯಲ್ಲಿ ‘ರೆಡ್ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಲಕ್ಷಣ ಕಂಡು ಬರುತ್ತಿವೆ. ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ ವಾರ ಭಾರೀ ಮಳೆಯ ಸಾಧ್ಯತೆ ಇದೆ. ಹೀಗಾಗಿ ಮೇ 21, 22ಕ್ಕೆ ಮೂರು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’, ಚಿಕ್ಕಮಗಳೂರು, ಶಿವಮೊಗ್ಗಕ್ಕೆ ಮುಂದಿನ ಎರಡು ದಿನಕ್ಕೆ ಹಾಗೂ ಹಾಸನ ಮತ್ತು ಕೊಡಗು ಜಿಲ್ಲೆಗಳಿಗೆ ಮುಂದಿನ 24 ಗಂಟೆಗೆ ‘ರೆಡ್ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಮೈಸೂರು ಜಿಲ್ಲೆಗಳಿಗೆ ಮುಂದಿನ ಎರಡು ದಿನಕ್ಕೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ತುಮಕೂರು, ರಾಮನಗರ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ವಿಜಯಪುರ, ಕೊಪ್ಪಳ, ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ರಾಜ್ಯದ ಉಳಿದೆಡೆ ಎರಡು ದಿನಗಳ ಬಳಿಕ ಮಳೆ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗುವ ಲಕ್ಷಣ ಇದೆ. ಬೆಂಗಳೂರಿನಲ್ಲಿ ಬುಧವಾರದಿಂದ ಮಳೆ ಅರ್ಭಟ ತಗ್ಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಾರ್ಕಳದಲ್ಲಿ 15 ಸೆಂ.ಮೀ. ಮಳೆ: ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಿರುವ ವರದಿ ಪ್ರಕಾರ, ಕಾರ್ಕಳದಲ್ಲಿ ಅತಿ ಹೆಚ್ಚು 15 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಯಲ್ಲಾಪುರದಲ್ಲಿ 13, ಮಂಗಳೂರು ವಿಮಾನ ನಿಲ್ದಾಣದಲ್ಲಿ 12, ಹಾವೇರಿಯ ಗುತ್ತಲ 11, ಪಣಂಬೂರು, ಕಳಸ, ಬೆಂಗಳೂರಲ್ಲಿ ತಲಾ 10, ಕೋಲಾರ 8, ಮುಲ್ಕಿ 7, ಕೊಟ್ಟಿಗೆಹಾರ 6, ಮಂಗಳೂರು, ಯಲಬುರಗಿ, ಕುಣಿಗಲ್, ಭಾಗಮಂಡಲ, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ತಲಾ 5, ಉಡುಪಿ, ಪುತ್ತೂರು, ಮಾಣಿ, ಕುಷ್ಟಗಿ, ನೆಲಮಂಗಲ, ಬೆಂಗಳೂರು ವೀಕ್ಷಣಾಲಯ, ದಾವಣಗೆರೆಯಲ್ಲಿ ತಲಾ 4, ಗೋಕರ್ಣ, ಕುಮಟಾ, ಗೇರಸೊಪ್ಪ, ಗಬ್ಬೂರು, ಗುರುಮಿಟ್ಕಲ್, ಸೈದಾಪುರ, ಅನವಟ್ಟಿ, ಎಲೆಕ್ಟ್ರಾನಿಕ್ ಸಿಟಿ, ಬೆಳ್ಳೂರು, ಮಾಗಡಿ, ವಿರಾಜಪೇಟೆಯಲ್ಲಿ ತಲಾ 3, ಕಾರವಾರ, ಮಂಕಿ, ಧರ್ಮಸ್ಥಳ, ಹೊನ್ನಾವರ, ಬನವಾಸಿ, ಅಂಕೋಲಾ, ಹಾವೇರಿ, ಮಸ್ಕಿಯಲ್ಲಿ ತಲಾ 2 ಸೆಂ.ಮೀ. ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಭೀತಿಯ ಪ್ರವಾಹ: ಹಲವು ಬಡಾವಣೆಗಳಿಗೆ ವಿದ್ಯುತ್, ನೀರು, ಅವಶ್ಯ ವಸ್ತುಗಳ ಪೂರೈಕೆ ಸ್ಥಗಿತ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿವಿಧೆಡೆ ಸೋಮವಾರ ಮಳೆಯಾಗಿದೆ. ಬಿಸಿಲು ಮತ್ತು ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ಬಳಿಕ ಅಲ್ಲಲ್ಲಿ ಗುಡುಗು ಸಹಿತ ಮಳೆ ಸುರಿದಿದೆ. ಹವಾಮಾನ ಇಲಾಖೆಯು ಮೇ 21ರಿಂದ 23ರವರೆಗೆ ಆರೇಂಜ್ ಮತ್ತು ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಉತ್ತಮ ಮಳೆಯಾಗುವ ಮುನ್ಸೂಚನೆ ಸೋಮವಾರವೇ ಲಭಿಸಿದೆ. ದ.ಕ.ಜಿಲ್ಲೆಯಲ್ಲಿ ಸಂಜೆ ಬಳಿಕ ಚಳಿ ಗಾಳಿಯ ವಾತಾವರಣವಿತ್ತು. ಉಡುಪಿ ಜಿಲ್ಲೆಯಾದ್ಯಂತ ಹಗಲಿಡಿ ಬಿಸಿಲಿನ ವಾತಾವರಣ ಇತ್ತು. ಆದರೆ ಸಂಜೆಯಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ಸಿಡಿಲು ಗುಡುಗುಗಳೊಂದಿಗೆ ಉತ್ತಮ ಮಳೆಯಾಗಿದೆ. ಮುಖ್ಯವಾಗಿ ಕಾಪು ಮತ್ತು ಕಾರ್ಕಳ ತಾಲೂಕುಗಳಲ್ಲಿ ಜೋರಾದ ಮಳೆ ಸುರಿದಿದೆ ಈ ಭಾಗಗಳಲ್ಲಿ ಕೆಲಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ.


