ರಾಜ್ಯಕ್ಕೆ ಮೇ 27 ಅಥವಾ 28ರ ವೇಳೆಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಾಮಾನ್ಯವಾಗಿ ಜೂ.1ರ ವೇಳೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಜೂನ್‌ ಮೊದಲ ವಾರದಲ್ಲಿ ರಾಜ್ಯಕ್ಕೆ ಬರುತ್ತದೆ. 

ಬೆಂಗಳೂರು (ಮೇ.21): ರಾಜ್ಯಕ್ಕೆ ಮೇ 27 ಅಥವಾ 28ರ ವೇಳೆಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಾಮಾನ್ಯವಾಗಿ ಜೂ.1ರ ವೇಳೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಜೂನ್‌ ಮೊದಲ ವಾರದಲ್ಲಿ ರಾಜ್ಯಕ್ಕೆ ಬರುತ್ತದೆ. ಈ ಬಾರಿ ನಿರೀಕ್ಷೆಗಿಂತ ಮೊದಲೇ ಮುಂಗಾರು ಮಾರುತಗಳು ಚುರುಕುಗೊಂಡಿವೆ. ಹೀಗಾಗಿ, ಅವಧಿಗೆ ಒಂದು ವಾರ ಮೊದಲೇ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ. ಮುಂಗಾರು ಆರಂಭಕ್ಕೆ ಪೂರಕ ವಾತಾವರಣ ಸಹ ಅರಬ್ಬಿ ಸಮುದ್ರದಲ್ಲಿ ರೂಪುಗೊಂಡಿದೆ. ಈಗಾಗಲೇ ಮುಂಗಾರು ಮಾರುತಗಳು ಶ್ರೀಲಂಕಾ ಪ್ರವೇಶಿಸಿವೆ. 

ಮೇ 25ರ ಒಳಗೆ ಲಕ್ಷದ್ವೀಪ ಹಾಗೂ ಕೇರಳ ರಾಜ್ಯ ಪ್ರವೇಶಿಸಲಿದೆ. ಕಳೆದ ವರ್ಷ ಮೇ 30ಕ್ಕೆ ಕೇರಳ ಪ್ರವೇಶಿಸಿದ್ದ ಮುಂಗಾರು, ಜೂ.2ಕ್ಕೆ ರಾಜ್ಯಕ್ಕೆ ಕಾಲಿಟ್ಟಿತ್ತು. ಅರಬ್ಬಿ ಸಮುದ್ರದಲ್ಲಿ ಇದೀಗ ವಾಯುಭಾರ ಕುಸಿತದ ಲಕ್ಷಣ ಇದ್ದು, ವಾಯುಭಾರ ಕುಸಿತ ಪ್ರಬಲಗೊಂಡು ಮುಂಗಾರು ಮಾರುತಗಳನ್ನು ಸೆಳೆದರೆ ಮುಂಗಾರು ಪ್ರವೇಶಕ್ಕೆ ಹಿನ್ನೆಡೆ ಉಂಟಾಗಬಹುದು. ಇಲ್ಲವಾದರೆ ಯಥಾ ಪ್ರಕಾರ ನಿರೀಕ್ಷೆಯಂತೆ ಮುಂಗಾರು ರಾಜ್ಯದಲ್ಲಿ ಆರಂಭಗೊಳ್ಳಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಏರ್ಪೋರ್ಟ್‌ ರನ್‌ವೇನಲ್ಲಿದ್ದ ನೀರು ಏಕಾಏಕಿ ಹೊರಕ್ಕೆ: ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯಲ್ಲಿ ತುಂಬಿದ ಮಳೆ ನೀರನ್ನು ಏಕಾಏಕಿ ಹೊರಬಿಟ್ಟ ಪರಿಣಾಮ ಕೆಳಭಾಗದ ಅದ್ಯಪಾಡಿ ಗ್ರಾಮಕ್ಕೆ ತೆರಳುವ ರಸ್ತೆಯುದ್ದಕ್ಕೂ ಭಾರೀ ಕೆಸರು ನೀರು ತುಂಬಿ, ವಾಹನ ಸವಾರರು ಪರದಾಡುವಂತಾಯಿತು. ಅಲ್ಲದೆ ನೀರಿನ ರಭಸದಿಂದ ಐದಾರು ಮನೆಗಳಿಗೂ ಹಾನಿ ಸಂಭವಿಸಿದೆ. ರಸ್ತೆಯ ಅಡಿ ಭಾಗ ಕುಸಿದು ರಸ್ತೆಗೂ ಹಾನಿಯಾಗಿದೆ. ಇದೇ ವೇಳೆ, ಮಂಗಳೂರು ನಗರದ ವಿವಿಧೆಡೆ ಹತ್ತಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿದ್ದು, ಕೆಲ ಮನೆಗಳಿಗೆ ಹಾನಿಯಾಗಿದೆ. ಮಣ್ಣಗುಡ್ಡೆಯ ಕೆನರಾ ಹೈಸ್ಕೂಲ್, ಕೊಡಿಯಾಲ್ ಗುತ್ತು, ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತ ಉಂಟಾಗಿದೆ.

ಬೆಂಗಳೂರಿನಲ್ಲಿ ಮಳೆ ಅಬ್ಬರ: ಜಲ ಯೋಧರಾದ ಸಂಚಾರಿ ಪೊಲೀಸರು

ವಿಪತ್ತು ನಿರ್ವಹಣೆಗೆ ಸಿದ್ಧರಾಗಿ: ಮೇ ತಿಂಗಳ ಎರಡನೇ ವಾರದಲ್ಲಿಯೇ ಮುಂಗಾರು ಮಳೆಯ ಪ್ರಮಾಣ ಹೆಚ್ಚಾಗಿದ್ದು, ಮುಂದಿನ 3 ತಿಂಗಳವರೆಗೂ ಮಳೆಯು ನಿರಂತರವಾಗಿ ಬರಲಿದ್ದು, ಸಾರ್ವಜನಿಕರ ಜೀವನಕ್ಕೆ ತೊಂದರೆಯಾಗದಂತೆ ವಿಪತ್ತು ನಿರ್ವಹಣೆ ಮಾಡಲು ಅಧಿಕಾರಿಗಳು ಪಾಲಿಕೆಯ ಎಲ್ಲಾ ಅಧಿಕಾರಿಗಳನ್ನು ಒಳಗೊಂಡಂತೆ ಟಾಸ್ಕ್ ಫೋರ್ಸ್ ರಚಿಸುವ ಮೂಲಕ ಹಾಗೂ ತುರ್ತು ಸಹಾಯವಾಣಿ ತೆರೆಯುವ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಲು ಸಿದ್ದರಾಗುವಂತೆ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧಿಕಾರಿಗಳಿಗೆ ಸೂಚಿಸಿದರು.