ರಾಜಧಾನಿ ಬೆಂಗಳೂರು, ಕೊಡಗು, ಕರಾವಳಿ, ಮಲೆನಾಡು ಸೇರಿ ರಾಜ್ಯದ 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂಗಾರುಪೂರ್ವ ಮಳೆ ಅಬ್ಬರಿಸುತ್ತಿದ್ದು, ಮಂಗಳವಾರ ಸುರಿದ ಸಿಡಿಲಬ್ಬರದ ಮಳೆಗೆ 6 ಮಂದಿ ಮೃತಪಟ್ಟಿದ್ದಾರೆ. 

ಬೆಂಗಳೂರು (ಮೇ.21): ರಾಜಧಾನಿ ಬೆಂಗಳೂರು, ಕೊಡಗು, ಕರಾವಳಿ, ಮಲೆನಾಡು ಸೇರಿ ರಾಜ್ಯದ 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂಗಾರುಪೂರ್ವ ಮಳೆ ಅಬ್ಬರಿಸುತ್ತಿದ್ದು, ಮಂಗಳವಾರ ಸುರಿದ ಸಿಡಿಲಬ್ಬರದ ಮಳೆಗೆ 6 ಮಂದಿ ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಇಬ್ಬರು, ಧಾರವಾಡ, ಬಳ್ಳಾರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ತಲಾ ಒಬ್ಬೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ರಾಮನಗರದ ಹೊರವಲಯದಲ್ಲಿ ಬೆಂಗಳೂರಿನ ಬಾಲಕನೊಬ್ಬ ಅರ್ಕಾವತಿ ನದಿಯಲ್ಲಿ ಕೊಚ್ಚಿಹೋಗಿದ್ದಾನೆ.

ರಾಮನಗರದ ಹೊರವಲಯದ ಹಳ್ಳಿಮಾಳ ಸಮೀಪ ಅರ್ಕಾವತಿ ನದಿ ಪಕ್ಕದಲ್ಲಿರುವ ದರ್ಗಾಗೆ ಬಂದಿದ್ದ ಬೆಂಗಳೂರಿನ ಲಕ್ಕಸಂದ್ರದ ಮೊಹಮ್ಮದ್ ಸೈಫ್ (9) ಎಂಬ ಬಾಲಕ ನೀರಿನಲ್ಲಿ ಆಟವಾಡುವಾಗ ಕಾಲುಜಾರಿ ಬಿದ್ದು ಕೊಚ್ಚಿ ಹೋಗಿದ್ದಾನೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಕರಜಗಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ರೈತ ನಬಿಲಾಲ ಚೌಧರಿ (70) ಎಂಬುವರು ಅಸುನೀಗಿದ್ದಾರೆ. ಇದೇ ವೇಳೆ, ರಾಯಚೂರು ಜಿಲ್ಲೆ ಅರಕೇರಾ ತಾಲೂಕಿನ ಭೋಗಿ ರಾಮನಗುಡ್ಡ ಗ್ರಾಮದಲ್ಲಿ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದಾಗ ಸಿಡಿಲು ಬಡಿದು ಹನುಮಗೌಡ ನಾಯಕ (16) ಎಂಬುವರು ಮೃತಪಟ್ಟಿದ್ದಾರೆ. ದೇವದುರ್ಗ ತಾಲೂಕಿನ ಲಿಂಗದಹಳ್ಳಿಯಲ್ಲಿ ಸಿಡಿಲಿಗೆ ಯಲ್ಲಮ್ಮ (42) ಎಂಬುವರು ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದ ಸಮಯದಲ್ಲಿ ಸಿಡಿಲು ಬಡಿಯಿತು.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇನೆರ್ತಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಹಿರೇಹರಕುಣಿ ಗ್ರಾಮದ ಮೈಲಾರಪ್ಪ(18) ಎಂಬುವರು ಮೃತಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ದೇವಲಾಪುರದಲ್ಲಿ ಕುರಿ ಮೇಯಿಸುತ್ತಿದ್ದಾಗ ಸಿಡಿಲು ಬಡಿದು ಕುರಿ ಕರಿಬಸಪ್ಪ (23) ಎಂಬುವರು ಮೃತಪಟ್ಟಿದ್ದಾರೆ. ಇತರ ಐವರು ಗಾಯಗೊಂಡಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಅನ್ವರಿ ಸಮೀಪ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಹಟ್ಟಿ-ಕವಿತಾಳ ಸಾರಿಗೆ ಬಸ್‌ ಸಿಲುಕಿ, ಪ್ರಯಾಣಿಕರು ಪರದಾಡಿದರು. ಬಳಿಕ, ಜೆಸಿಬಿ ನೆರವಿನಿಂದ ಬಸ್ಸನ್ನು ದಾಟಿಸಲಾಯಿತು.

ಮಳೆ ಸಮಸ್ಯೆಗಳ ಪುನರಾವರ್ತನೆ: ಅಧಿಕಾರಿಗಳಿಗೆ ಬೆವರಿಳಿಸಿದ ಬಿಜೆಪಿ ನಾಯಕರು

ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್‌ನ ಸುಂಕಸಾಲೆ ಬಳಿ ಮಿನಿ ಬಸ್‌ ಹಾಗೂ ಬೈಕ್‌ ಮೇಲೆ ಬೃಹತ್‌ ಮರ ಬಿದ್ದಿದ್ದು, ಬೈಕ್‌ ಸವಾರನಿಗೆ ಗಾಯವಾಗಿದೆ. ಮಿನಿ ಬಸ್‌ನ ಮುಂಭಾಗ ಜಖಂಗೊಂಡಿದೆ. ಉಡುಪಿ ಜಿಲ್ಲೆಯಾದ್ಯಂತ ಮಳೆಯಾಗಿದ್ದು, ಮಣಿಪಾಲದ ಸಿಂಡಿಕೇಟ್ ವೃತ್ತದಲ್ಲಿ ಮಳೆ ನೀರು ಕಾಲುವೆಯಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದು, ಕೃತಕ ಪ್ರವಾಹದ ಪರಿಸ್ಥಿತಿ ಸೃಷ್ಟಿಸಿತ್ತು. ಇದರಿಂದ ಕೆಲವು ದ್ವಿಚಕ್ರ ವಾಹನಗಳು ಉರುಳಿಬಿದ್ದು, ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಈ ಕೃತಕ ನೆರೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದೇ ವೇಳೆ, ಮಂಡ್ಯ, ಬೆಂಗಳೂರು, ಧಾರವಾಡ, ಚಿಕ್ಕೋಡಿ ಸೇರಿ ರಾಜ್ಯದ ಇತರಡೆಯೂ ಮಳೆಯಾದ ವರದಿಯಾಗಿದೆ.