ಮೂರು ತಿಂಗಳೊಳಗೆ ರಾಜ್ಯದ 1,715 ಆಂಬ್ಯುಲೆನ್ಸ್‌ಗಳನ್ನು ಸರ್ಕಾರದ ಕಮಾಂಡ್ ಸೆಂಟರ್ ವಹಿಸಿಕೊಳ್ಳಲಿದೆ. ಈ ವಾಹನಗಳನ್ನು ಸಹಾಯವಾಣಿ 112 ಸಾಫ್ಟ್‌ವೇರ್‌ಗೆ ವಿಲೀನಗೊಳಿಸಿ, ಕೇಂದ್ರೀಕೃತ ವ್ಯವಸ್ಥೆಯಡಿ ತರಲಾಗುವುದು.ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ವಿಧಾನ ಪರಿಷತ್‌ನಲ್ಲಿ ತಿಳಿಸಿದರು.

ವಿಧಾನ ಪರಿಷತ್‌: ಮೂರು ತಿಂಗಳೊಳಗೆ 1,715 ಆಂಬ್ಯುಲೆನ್ಸ್​ಗಳನ್ನು ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಮೂಲಕ ಸರ್ಕಾರವೇ ವಹಿಸಿಕೊಂಡು ಸಹಾಯವಾಣಿ ಸಂಖ್ಯೆ 112 ಸಾಫ್ಟ್‌ವೇರ್​​ಗೆ ವಿಲೀನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೆಡಿಎಸ್‌ನ ಟಿ.ಎನ್‌.ಜವರಾಯಿಗೌಡ ಅವರ ಪ್ರಶ್ನೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರ ಪರವಾಗಿ ಉತ್ತರಿಸಿದ ಅವರು,ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ರಾಜ್ಯದ 108 ಆರೋಗ್ಯ ಕವಚ ಯೋಜನೆಯಡಿ ರಾಜ್ಯದಲ್ಲಿ ಒಟ್ಟು 1,715 ಆಂಬ್ಯುಲೆನ್ಸ್​ಗಳು ಕಾರ್ಯನಿರ್ವಹಿಸುತ್ತಿದ್ದು, ಸದ್ಯ ಆಂಬ್ಯುಲೆನ್ಸ್​ಗಳ ಕೊರತೆಯಿಲ್ಲ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿ ಪ್ರಕಾರ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಸುಮಾರು 820 ಆಂಬ್ಯುಲೆನ್ಸ್ ಇರಬೇಕು. ಆದರೆ, ಈಗ ರಾಜ್ಯದಲ್ಲಿ 1,715 ಆಂಬ್ಯುಲೆನ್ಸ್ ಕಾರ್ಯಾಚರಣೆ ನಡೆಸುತ್ತಿದ್ದು, ಕೊರತೆ ಎದುರಾಗಿಲ್ಲ. 108 ಆರೋಗ್ಯ ಕವಚ ಯೋಜನೆಯಡಿ 715 ಆಂಬ್ಯುಲೆನ್ಸ್​ಗಳಿದ್ದು, ಇತ್ತೀಚೆಗೆ 262 ಆಂಬ್ಯುಲೆನ್ಸ್ ಖರೀದಿಸಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಕವಚ ಯೋಜನೆಯಡಿ 715 ಆಂಬ್ಯುಲೆನ್ಸ್​ಗಳು ಕೇಂದ್ರೀಕೃತ ಕಮಾಂಡ್ ಕಂಟ್ರೋಲ್​ನಲ್ಲಿದ್ದರೆ, ಬಾಕಿ 1000 ಆಂಬ್ಯುಲೆನ್ಸ್​ಗಳನ್ನು ಸ್ಥಳೀಯ ಆಸ್ಪತ್ರೆಗಳು ನಿಯಂತ್ರಿಸುತ್ತಿವೆ. ಆರೋಗ್ಯ ಕವಚ ಯೋಜನೆಯಡಿ ಸಿಬ್ಬಂದಿ ಕೊರತೆಯಿದ್ದು, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಜವರಾಯಿಗೌಡ ಅವರು, ಗ್ರಾಮೀಣ ಭಾಗದಲ್ಲಿ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್​ಗಳು ಸಕಾಲಕ್ಕೆ ಸಿಗದೆ ಪ್ರತಿ ವರ್ಷ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ಹೀಗಾಗಿ ಪ್ರತಿ ಮೂರ್ನಾಲ್ಕು ಗ್ರಾಮ ಪಂಚಾಯಿತಿಗೊಂದು ಆಂಬ್ಯುಲೆನ್ಸ್ ಸೇವೆ ಒದಗಿಸಬೇಕೆಂದು ಮನವಿ ಮಾಡಿದರು.