ಮತ್ತೆ ಗೋವಿನ ಕರುವಿಗೆ ದುರುಳರಿಂದ ಮಚ್ಚಿನೇಟು! ನೋವಿನಿಂದ ಒದ್ದಾಡಿದ ಕರು
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಕರುವಿನ ಕುತ್ತಿಗೆ ಮತ್ತು ಬೆನ್ನಿಗೆ ಗಂಭೀರ ಗಾಯಗಳಾಗಿದ್ದು, ಪಶುವೈದ್ಯರು ಚಿಕಿತ್ಸೆ ನೀಡಿದ್ದಾರೆ. ಈ ಹಿಂದೆಯೂ ಜಾನುವಾರುಗಳ ಮೇಲೆ ಹಲ್ಲೆ ನಡೆದಿತ್ತು ಎನ್ನಲಾಗಿದೆ.

ಹಾಸನ (ಫೆ.19) ರಾಜ್ಯಾದ್ಯಂತ ಹಸು ಹಾಗೂ ಕರುವಿನ ಮೇಲೇ ಕಿಡಿಗೇಡಿಗಳು ಹಲ್ಲೆ ನಡೆಸುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ ಹೋರಿ ಕರುವಿನ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಸೋಮವಾರ ರಾತ್ರಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಅರೆಕೆರೆಯಲ್ಲಿ ನಡೆದಿದೆ.
ಅರೆಕೆರೆ ಗ್ರಾಮದ ನವೀನ್ ಎಂಬುವವರ ಮನೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ಕಿಡಿಗೇಡಿಗಳು ಮಚ್ಚಿನಿಂದ ಮನಸೋಯಿಚ್ಛೆ ಹಲ್ಲೆ ನಡೆಸಿದ್ದಾರೆ. ಇದರಿಂದ ಕರುವಿನ ಕುತ್ತಿಗೆ ಹಾಗೂ ಬೆನ್ನಿನ ಮೇಲೆ ಗಂಭೀರ ಗಾಯಗಳಾಗಿವೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಕರುವನ್ನು ನವೀನ್ ಅವರು ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ದುಷ್ಕರ್ಮಿಗಳಿಗೆ ಬಲೆ ಬೀಸಿದ್ದಾರೆ.
ಈ ಹಿಂದೆಯೂ ನವೀನ್ ಅವರು ಸಾಕಿದ್ದ ಜಾನುವಾರುಗಳ ಮೇಲೆ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದರು ಎಂದು ತಿಳಿದು ಬಂದಿದೆ
ಇದನ್ನೂ ಓದಿ: ಗೋ ಹಂತಕರಿಗೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾಕ್ತೇವೆ: ಸಚಿವ ಮಂಕಾಳು ವೈದ್ಯ