ಚಿನ್ನ ಅಕ್ರಮ‌ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ‌ ಒಳಗಾಗಿರುವ ನಟಿ ರನ್ಯಾ ರಾವ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ನಗರ ಆರ್ಥಿಕ ಅಪಾರಾಧಗಳ ತಡೆ ವಿಶೇಷ ನ್ಯಾಯಾಲಯ, ಮಾ.14ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. 

ಬೆಂಗಳೂರು (ಮಾ.13): ಚಿನ್ನ ಅಕ್ರಮ‌ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ‌ ಒಳಗಾಗಿರುವ ನಟಿ ರನ್ಯಾ ರಾವ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ನಗರ ಆರ್ಥಿಕ ಅಪಾರಾಧಗಳ ತಡೆ ವಿಶೇಷ ನ್ಯಾಯಾಲಯ, ಮಾ.14ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ರನ್ಯಾರಾವ್‌ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಶ್ವನಾಥ ಸಿ.ಗೌಡರ್‌ ತೀರ್ಪು ಕಾಯ್ದಿಸಿದರು.

ಇದಕ್ಕೂ ಮುನ್ನ ರನ್ಯಾ ಪರ ವಕೀಲರು, ಅಪರಾಧ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ ವೇಳೆ ಯಾವ ಕಾರಣಕ್ಕೆ ಬಂಧನ ಮಾಡಲಾಗಿದೆ ಎಂಬ ಬಗ್ಗೆ ಅರೆಸ್ಟ್‌ ಮೆಮೊದಲ್ಲಿ ತನಿಖಾಧಿಕಾರಿಗಳು ವಿವರಣೆ ನೀಡಬೇಕು. ಬಂಧನಕ್ಕೆ ಸಕಾರಣ ನೀಡದಿರುವುದು ಸುಪ್ರಿಂ ಕೋರ್ಟ್‌ ಆದೇಶದ ಉಲ್ಲಂಘನೆ. ಆರೋಪಿಗೆ ತನ್ನ ಅಪರಾಧ ಕೃತ್ಯ ಏನು ಎನ್ನುವುದನ್ನು ತಿಳಿಸಬೇಕು. ಆದರೆ, ಅರ್ಜಿದಾರೆಯನ್ನು ಬಂಧಿಸಿದ ವೇಳೆ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯದ (ಡಿಆರ್‌ಐ) ತನಿಖಾಧಿಕಾರಿಗಳು ಅರೆಸ್ಟ್‌ ಮೆಮೊದಲ್ಲಿ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಕಳೆದ ವರ್ಷವೂ ಕೇಜಿಗಟ್ಟಲೇ ಚಿನ್ನ ಸಾಗಿಸಿದ್ದ ರನ್ಯಾ ರಾವ್‌: ಡಿಆರ್‌ಐ ತನಿಖೆಯಲ್ಲೇನಿದೆ?

ಬಂಧಿಸಿದ ಕೂಡಲೇ ಕಸ್ಟಮ್ಸ್ ಇಲಾಖೆಯ ಗೆಜೆಟೆಡ್‌ ಅಧಿಕಾರಿ ಅಥವಾ ಮ್ಯಾಜಿಸ್ಟ್ರೇಟ್‌ ಮುಂದೆ ಆರೋಪಿಯನ್ನು ಹಾಜರುಪಡಿಸಬೇಕು. ಅವರೇ ಶೋಧನಾ ಕಾರ್ಯ ನಡೆಸಬೇಕು. ರನ್ಯಾ ಬಂಧನದ ವೇಳೆ ಕಸ್ಟಮ್ಸ್‌ ಕಾಯ್ದೆಯ ನಿಯಮಗಳನ್ನೂ ಅನುಸರಿಸಿಲ್ಲ. ಮೂವರು ಆರೋಪಿಗಳ ಪೈಕಿ ರನ್ಯಾ ಅವರನ್ನು ಮಾತ್ರ ಬಂಧನ ಮಾಡಲಾಗಿದೆ. ದೇಹ, ಶೂ ಮತ್ತು ಪಾಕೆಟ್‌ನಲ್ಲಿ ಚಿನ್ನ ಇರಿಸಿಕೊಳ್ಳಲಾಗಿತ್ತು ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಆದರೆ, ಮೆಟಲ್‌ ಡಿಟೆಕ್ಟರ್‌ನಲ್ಲಿ ಚಿನ್ನ ಇರುವುದು ಪತ್ತೆಯಾಗಿಲ್ಲ. ಬಂಧನ ಪ್ರಕ್ರಿಯೆಯಲ್ಲಿ ಡಿಆರ್‌ಐ ಅಧಿಕಾರಿಗಳು ಸಾಕಷ್ಟು ಕಾನೂನು ಲೋಪ ಎಸಗಿದ್ದಾರೆ. 

ಮೇಲಾಗಿ ಅರ್ಜಿದಾರೆ ಮಹಿಳೆಯಾಗಿದ್ದು, ಜಾಮೀನು ನೀಡಬೇಕು ಎಂದು ಕೋರಿದರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಐಆರ್‌ ಪರ ವಕೀಲರು, ರನ್ಯಾ ರಾವ್‌ 83 ಲಕ್ಷ ರು. ರು ನೀಡಿ ದುಬೈನಲ್ಲಿ ಎರಡು ವರ್ಷಗಳ ಕಾಲ ರೆಸಿಡೆಂಟ್‌ ವಿಸಾ ಪಡೆದಿದ್ದಾರೆ. ದುಬೈನಿಂದ ಚಿನ್ನವನ್ನು ಭಾರತಕ್ಕೆ ಅಕ್ರಮವಾಗಿ ಸಾಗಣೆ ಮಾಡಿದ್ದಾರೆ. ರಾಜ್ಯ ಪೊಲೀಸರ ಪ್ರೊಟೋಕಾಲ್‌ ದುರ್ಬಳಕೆ ಮಾಡಿಕೊಂಡು ಚಿನ್ನ ಅಕ್ರಮ ಸಾಗಣೆ ಕೃತ್ಯದಲ್ಲಿ ತೊಡಗಿದ್ದಾರೆ. ಇದು ರಾಷ್ಟ್ರಕ್ಕೆ ಅಪಾಯಕಾರಿ ಬೆಳವಣಿಗೆ ಎಂದು ವಿವರಿಸಿದರು.

ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ತರುಣ್ ಕಿಂಗ್‌ಪಿನ್, ನಟಿ ರನ್ಯಾ ರಾವ್ ಕೊರಿಯರ್?

ಮಾ.3ರಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿದ್ದ ರನ್ಯಾ ಅವರ ಲಗೇಜ್‌ನಲ್ಲಿ ಚಿನ್ನ ಇರುವುದು ಮೆಟಲ್‌ ಡಿಟೆಕ್ಟರ್‌ ಮೂಲಕ ಪತ್ತೆಯಾಗಿದೆ. ಕೂಡಲೇ ಅವರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ 14 ಕೆ.ಜಿ. 24 ಕ್ಯಾರೆಟ್‌ ಚಿನ್ನ ಪತ್ತೆಯಾಗಿದೆ. ಚಿನ್ನವನ್ನು ಭಾರತಕ್ಕೆ ತರುವಾಗ ದುಬೈನಲ್ಲಿ ಸುಳ್ಳು ಹೇಳಿ, ಅಲ್ಲಿನ ಅಧಿಕಾರಿಗಳನ್ನು ದಿಕ್ಕು ತಪ್ಪಿಸಿದ್ದಾರೆ. ಇದು ಪೂರ್ವಯೋಜಿತ ಕೃತ್ಯವಾಗಿದೆ. ಪ್ರಕರಣ ತನಿಖಾ ಹಂತದಲ್ಲಿದ್ದು, ಚಿನ್ನ ಅಕ್ರಮ ಸಾಗಣೆಯಲ್ಲಿ ಭಾಗಿಯಾಗಿರುವ ಇತರರನ್ನು ಪತ್ತೆ ಮಾಡಬೇಕಿದೆ. ಪೂರ್ಣ ಪ್ರಮಾಣದಲ್ಲಿ ಅಕ್ರಮ ಬಯಲಿಗೆಳೆಯಬೇಕಿದೆ. ಈ ಹಂತದಲ್ಲಿ ರನ್ಯಾಗೆ ಜಾಮೀನು ನೀಡಬಾರದು ಎಂದು ಕೋರಿದರು.