ದುಬೈನಲ್ಲಿ ಚಿನ್ನ ಸಂಗ್ರಹಿಸುವ ಕುರಿತು ನಟಿ ರನ್ಯಾ ರಾವ್ ಅವರಿಗೆ ಅವರ ಸ್ನೇಹಿತ ಹಾಗೂ ಹೋಟೆಲ್ ಉದ್ಯಮಿ ಪುತ್ರ ತರುಣ್ ರಾಜ್ ಮಾಹಿತಿ ನೀಡುತ್ತಿದ್ದರು ಎಂದು ಮೂಲಗಳು ಹೇಳಿವೆ.
ಬೆಂಗಳೂರು (ಮಾ.12): ದುಬೈನಲ್ಲಿ ಚಿನ್ನ ಸಂಗ್ರಹಿಸುವ ಕುರಿತು ನಟಿ ರನ್ಯಾ ರಾವ್ ಅವರಿಗೆ ಅವರ ಸ್ನೇಹಿತ ಹಾಗೂ ಹೋಟೆಲ್ ಉದ್ಯಮಿ ಪುತ್ರ ತರುಣ್ ರಾಜ್ ಮಾಹಿತಿ ನೀಡುತ್ತಿದ್ದರು ಎಂದು ಮೂಲಗಳು ಹೇಳಿವೆ. ದುಬೈನಲ್ಲಿ ಯಾರಿಂದ ಚಿನ್ನ ಪಡೆದು ಆನಂತರ ಹೇಗೆ ಬೆಂಗಳೂರಿಗೆ ಸಾಗಿಸಬೇಕು ಎಂಬ ನೀಲನಕ್ಷೆಯನ್ನು ರನ್ಯಾ ಅವರಿಗೆ ತರುಣ್ ರವಾನಿಸುತ್ತಿದ್ದ. ಅಲ್ಲದೆ ದುಬೈ ಪಯಣದಲ್ಲಿ ಗೆಳತಿ ಜತೆ ನಿರಂತರವಾಗಿ ಆತ ಸಂಪರ್ಕದಲ್ಲಿದ್ದು ಸೂಚನೆ ಕೊಡುತ್ತಿದ್ದ. ತನ್ನ ಗೆಳೆಯನ ಸೂಚನೆ ಅನುಸಾರ ರನ್ಯಾ ನಡೆದುಕೊ ಳ್ಳುತ್ತಿದ್ದರು. ಹೀಗಾಗಿ ವಿದೇಶದಿಂದ ಚಿನ್ನ ಸಾಗಿಸುವ ಜಾಲದ ಕೊರಿಯರ್ ಆಗಿ ರನ್ಯಾ ಬಳಕೆಯಾಗಿರಬಹುದು ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಬಂಧನವಾದ ಬಳಿಕ ತರುಣ್‌ನನ್ನು ಡಿಆರ್‌ಐ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಅಲ್ಲದೆ ತಮ್ಮ ವಶದಲ್ಲಿ ರನ್ಯಾ ಇದ್ದಾಗಲೇ ತರುಣ್‌ನನ್ನು ವಶಕ್ಕೆ ಪಡೆದು ಡಿಆರ್‌ಐ ವಿಚಾರಣೆ ನಡೆಸಿತ್ತು. ಆ ವೇಳೆ ಚಿನ್ನ ಕಳ್ಳ ಸಾಗಾಣಿಕೆ ಕೃತ್ಯದಲ್ಲಿ ಈ ಇಬ್ಬರ ಪಾತ್ರದ ಬಗ್ಗೆ ಮುಖಾಮುಖಿ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ ಎನ್ನಲಾಗಿದೆ. ಹಲವು ವರ್ಷಗಳಿಂದ ರನ್ಯಾ ಜತೆ ತರುಣ್‌ಗೆ ಆತ್ಮೀಯ ಒಡನಾಟವಿತ್ತು. ಅಲ್ಲದೆ ತನ್ನ ಉದ್ಯಮ ಸಮೂಹದಿಂದ ಆತನಿಗೆ ದುಬೈನಲ್ಲಿ ಕೆಲ ಉದ್ಯಮಿಗಳ ಸಂಪರ್ಕವಿತ್ತು. ಸುಲಭವಾಗಿ ಹಣ ಸಂಪಾದಿಸುವ ಹಾಗೂ ಕಪ್ಪು ಹಣವನ್ನು ಸಕ್ರಮಗೊಳಿಸುವ ಕಾರಣಕ್ಕೆ ಸ್ಮಗ್ಲಿಂಗ್ ನಲ್ಲಿ ತರುಣ್ ಪಾತ್ರ ವಹಿಸಿರಬಹುದು. ಈ ಗುಮಾನಿ ಹಿನ್ನೆಲೆಯಲ್ಲಿ ಆತನನ್ನು ಐದು ದಿನ ಕಸ್ಟಡಿಗೆ ಪಡೆದು ಡಿಆರ್‌ಐ ವಿಚಾರಣೆಗೊಳಪಡಿಸಿದೆ ಎಂದು ತಿಳಿದು
ಬಂದಿದೆ.
ರನ್ಯಾ ಗೆಳೆಯರಿಗೆ ಸಂಕಷ್ಟ?: ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅವರ ಮೂರು ಸ್ನೇಹಿತರು ಪಾತ್ರ ವಹಿಸಿರುವ ಬಗ್ಗೆ ಶಂಕೆ ಮೂಡಿದೆ. ಈ ಗೆಳೆಯರಿಗೆ ಡಿಆರ್‌ಐ ತಲಾಶ್ ಸಹ ನಡೆಸಿದೆ ಎನ್ನಲಾಗಿದೆ.
ಕೆಜಿಎಫ್ ರೀತಿ ದೊಡ್ಡ ಫಿಲಂನಲ್ಲಿ ಹೂಡಿಕೆ ಆಮಿಷವೊಡ್ಡಿ ನಟಿ ರನ್ಯಾ ರಾವ್ ಟ್ರ್ಯಾಪ್?
ವಿಧಾನಸಭೆಯಲ್ಲೂ ಪ್ರತಿಧ್ವನಿ: ಅಕ್ರಮವಾಗಿ ಚಿನ್ನ ಸಾಗಣೆ ಆರೋಪದ ಮೇಲೆ ಬಂಧಿತರಾಗಿರುವ ನಟಿ ರನ್ಯಾರಾವ್ ಪ್ರಕರಣ ವಿಧಾನಸಭೆಯಲ್ಲೂ ಪ್ರಸ್ತಾಪವಾಗಿದ್ದು, ಆಕೆಯ ಜತೆ ನಂಟು ಹೊಂದಿರುವ ಸಚಿವರ ಹೆಸರು ಬಹಿರಂಗಪಡಿಸುವಂತೆ ಪ್ರತಿಪಕ್ಷ ಬಿಜೆಪಿ ಆಗ್ರಹಿಸಿದೆ. ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ಅವರು, ರಾಜ್ಯ ಸರ್ಕಾರ ಯಾರನ್ನೋ ರಕ್ಷಣೆ ಮಾಡುವ ಪ್ರಯತ್ನ ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಇದು ಅಂತಾರಾಷ್ಟ್ರೀಯ ಚಿನ್ನ ಸಾಗಾಟ ಪ್ರಕರಣವಾಗಿದೆ. 14 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ ಎಂಬ ಸುದ್ದಿ ಇದೆ. ಇದರ ಹಿಂದೆ ಹವಾಲಾ ದಂಧೆ ಇದೆ ಎಂಬ ಅನುಮಾನ ಇದೆ. ಬೇರೆ ಬೇರೆ ರಾಜ್ಯಗಳಿಗೆ ಅಕ್ರಮ ಚಿನ್ನ ಸಾಗಾಟದಲ್ಲಿ ಬೆಂಗಳೂರು ಕೇಂದ್ರ ಆಗಿದೆಯೇ? ಎಂಬ ಅನುಮಾನ ಇದೆ. ಅಲ್ಲದೇ, ಪ್ರಕರಣದಲ್ಲಿ ಸಚಿವರ ಕೈವಾಡ ಇದೆ ಎಂಬ ಆರೋಪ ಇದೆ. ಪ್ರಭಾವಿ ವ್ಯಕ್ತಿಗಳು ಯಾರು ಎಂಬುದು ಬಹಿರಂಗವಾಗಬೇಕು ಎಂದರು.
