ನಟಿ ರನ್ಯಾರಾವ್ ಅವರು ಕಳೆದ ವರ್ಷ ಸ್ವಿಟ್ಜರ್‌ಲ್ಯಾಂಡ್ ಗೆ ಹೋಗುವುದಾಗಿ ಹೇಳಿ ದುಬೈನಿಂದ ಬೆಂಗಳೂರಿಗೆ ಕೆಜಿಗಟ್ಟಲೇ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದರು ಎಂಬ ಸಂಗತಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರು (ಮಾ.13): ನಟಿ ರನ್ಯಾರಾವ್ ಅವರು ಕಳೆದ ವರ್ಷ ಸ್ವಿಟ್ಜರ್‌ಲ್ಯಾಂಡ್ ಗೆ ಹೋಗುವುದಾಗಿ ಹೇಳಿ ದುಬೈನಿಂದ ಬೆಂಗಳೂರಿಗೆ ಕೆಜಿಗಟ್ಟಲೇ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದರು ಎಂಬ ಸಂಗತಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದುಬೈನಲ್ಲಿ 2024ರ ಡಿಸೆಂಬರ್ 13 ಹಾಗೂ 20 ರಂದು ಪ್ರತ್ಯೇಕವಾಗಿ ಎರಡು ಬಾರಿ ಕೋಟ್ಯಂತರ ರು. ಮೌಲ್ಯದ ಚಿನ್ನವನ್ನು ರನ್ಯಾ ಖರೀದಿಸಿದ್ದರು. ಬಳಿಕ, ಆ ಚಿನ್ನವನ್ನು ಸಾಗಿಸುವಾಗ ಅಲ್ಲಿನ ವಿಮಾನ ನಿಲ್ದಾಣದಲ್ಲಿ ತಾವು ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾಕ್ಕೆ ಹೋಗುವುದಾಗಿ ಸುಳ್ಳು ಹೇಳಿಕೆ ಕೊಟ್ಟಿದ್ದರು. ಆದರೆ ಅಲ್ಲಿಗೆ ಹೋಗದೆ ಅವರು ಬೆಂಗಳೂರಿನ ವಿಮಾನ ಹತ್ತಿದ್ದರು.
ಹೀಗಾಗಿ ದುಬೈ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳನ್ನು ಆಕೆ ಕಣ್ತಪ್ಪಿಸಿದ್ದಾರೆ ಎಂದು ಡಿಆರ್‌ಐ ಹೇಳಿದೆ. ರನ್ಯಾ ಅವರು ನಿರಂತರವಾಗಿ ವಿದೇಶಕ್ಕೆ ತೆರಳುತ್ತಿದ್ದರು. ಕಳೆದ ವರ್ಷ ಆರು ತಿಂಗಳು ಬಹುತೇಕ ವಿದೇಶ ಪ್ರಯಾಣದಲ್ಲೇ ಕಾಲ ಕಳೆದಿದ್ದರು. ಈ ವೇಳೆ ದುಬೈನಲ್ಲಿ ಎರಡು ಬಾರಿ ಚಿನ್ನ ಖರೀದಿಸಿ ಅಲ್ಲಿನ ಅಧಿಕಾರಿಗಳ ಮುಂದೆ ತೆರಿಗೆ ಘೋಷಿಸಿದ್ದರು. ನಂತರ ಕಳ್ಳ ಮಾರ್ಗದಲ್ಲಿ ಬೆಂಗಳೂರಿಗೆ ಚಿನ್ನ ತಂದಿದ್ದರು. ಈಗಲೂ ಸಹ ಅದೇ ರೀತಿ ದುಬೈನಲ್ಲಿ ಅಧಿಕಾರಿಗಳಿಗೆ ಸುಳ್ಳು ಹೇಳಿ ಮತ್ತೆ ಬೆಂಗಳೂರಿಗೆ 14 ಕೆಜಿ ಚಿನ್ನ ಸಾಗಿಸಿರುವ ಬಗ್ಗೆ ಶಂಕೆ ಇದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಡಿಆರ್‌ಐ ತಿಳಿಸಿದೆ.
ಖಾಕಿ ಕೈವಾಡ: ನಟಿ ರನ್ಯಾರಾವ್ ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಪೊಲೀಸ್ ವ್ಯವಸ್ಥೆ ಕೈಜೋಡಿಸಿರುವುದು ಕಂಡು ಬಂದಿದ್ದು, ಪೊಲೀಸರ ಅಕ್ರಮಗಳನ್ನು ನಿಯಂತ್ರಿಸುವಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್) ಆರೋಪಿಸಿದೆ. ಪೊಲೀಸ್ ಇಲಾಖೆಯ ಮೇಲೆ ನಿಯಂತ್ರಣವಿಲ್ಲದಿರುವುದರಿಂದಲೇ ಇಲಾಖೆಯಲ್ಲಿನ ಹಲವು ಅಧಿಕಾರಿಗಳು ಯಾವುದೇ ಭಯವಿಲ್ಲದೆ ಕಳ್ಳ ಸಾಗಣೆಯಂತಹ ಅಕ್ರಮಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಪೊಲೀಸರು ನೇರವಾಗಿ ಭಾಗಿಯಾಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಡಾ.ಜಿ.ಪರಮೇಶ್ವರ ರಾಜ್ಯ ಕಂಡ ದುರ್ಬಲ ಗೃಹ ಸಚಿವರಲ್ಲಿ ಒಬ್ಬರಾಗಿದ್ದಾರೆ.
ಗೋಲ್ಡ್ ಸ್ಮಗ್ಲಿಂಗ್ ಕೇಸ್: ತರುಣ್ ಕಿಂಗ್‌ಪಿನ್, ನಟಿ ರನ್ಯಾ ರಾವ್ ಕೊರಿಯರ್?
ಇವರ ಈ ಸ್ಥಾನದಲ್ಲಿ ಮುಂದುವರೆಯುವುದರಿಂದ ರಾಜ್ಯದ ಪೊಲೀಸ್ ವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್.ಜೀವನ್ ಪ್ರಕಟಣೆ ಮೂಲಕ ಕಿಡಿಕಾರಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ವ್ಯವಹಾರಿಕ ಸಂಬಂಧ ಹೊಂದಿದ್ದಾರೆ ಎಂಬದು ತಿಳಿದಿರುವ ವಿಚಾರವಾಗಿದೆ. ಅಲ್ಲದೇ, ಅನೇಕ ಕ್ರಿಮಿನಲ್‌ಗಳ ಜೊತೆ ಅಧಿಕಾರಿಗಳಿಗೆ ನಿಕಟ ಸಂಪರ್ಕ ಇರುವುದು ಇದೆ. ಇವೆಲ್ಲವನ್ನು ತಡೆಯುವಲ್ಲಿ ಗೃಹ ಸಚಿವರಾಗಿ ಪರಮೇಶ್ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆದ್ದರಿಂದ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಜೀವನ್ ಆಗ್ರಹಿಸಿದ್ದಾರೆ.
