Karnataka Politics: ಎಂಬಿಪಾ- ಅಶ್ವತ್ಥ್ ಭೇಟಿ ಬಗ್ಗೆ ಡಿಕೆಶಿ ಹೇಳಿಕೆಗೆ ರಮ್ಯಾ ಅತೃಪ್ತಿ
ಅನ್ಯ ಪಕ್ಷದ ನಾಯಕರು ಪರಸ್ಪರ ಭೇಟಿಯಾಗುವುದು ಸಾಮಾನ್ಯ. ಆದರೆ, ಪಕ್ಷದ ನಿಷ್ಠಾವಂತರಾದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆ ಆಶ್ಚರ್ಯ ತಂದಿದೆ ಎಂದು ಮಾಜಿ ಸಂಸದೆ ರಮ್ಯಾ ಅವರು ಅಸಮಾಧಾನ ಹೊರ ಹಾಕಿದ್ದಾರೆ.
ಬೆಂಗಳೂರು (ಮೇ.12): ಅನ್ಯ ಪಕ್ಷದ ನಾಯಕರು ಪರಸ್ಪರ ಭೇಟಿಯಾಗುವುದು ಸಾಮಾನ್ಯ. ಆದರೆ, ಪಕ್ಷದ ನಿಷ್ಠಾವಂತರಾದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ (MB Patil) ಅವರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ನೀಡಿರುವ ಹೇಳಿಕೆ ಆಶ್ಚರ್ಯ ತಂದಿದೆ ಎಂದು ಮಾಜಿ ಸಂಸದೆ ರಮ್ಯಾ (Ramya) ಅವರು ಅಸಮಾಧಾನ ಹೊರ ಹಾಕಿದ್ದಾರೆ. ಇದೇ ವೇಳೆ ಪಕ್ಷದ ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಹೋರಾಟ ಮಾಡಬೇಕಲ್ಲವೇ? ಎನ್ನುವ ಮೂಲಕ ಬಣ ರಾಜಕೀಯ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
ಸಚಿವ ಅಶ್ವತ್ಥ್ ನಾರಾಯಣ್ (Dr CN Ashwath Narayan), ಎಂ.ಬಿ.ಪಾಟೀಲ್ ಭೇಟಿ ವದಂತಿ ಬಗ್ಗೆ ಟ್ವೀಟ್ (Tweet) ಮಾಡಿರುವ ರಮ್ಯಾ, ಅನ್ಯ ಪಕ್ಷದ ರಾಜಕೀಯ ನಾಯಕರು ಪರಸ್ಪರ ಭೇಟಿಯಾಗುವುದು, ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಭಾಗವಹಿಸುವುದು ಸಾಮಾನ್ಯ. ಕೆಲವರು ಅನ್ಯ ಪಕ್ಷದವರ ಜತೆ ಮದುವೆ ಸಂಬಂಧವನ್ನೂ ಬೆಳೆಸಿದ್ದಾರೆ. ಹೀಗಿದ್ದಾಗ ಪಕ್ಷದ ನಿಷ್ಠಾವಂತ ನಾಯಕರ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ಈ ರೀತಿ ಮಾತನಾಡಿದ್ದಾರೆ ಎಂದರೆ ನನಗೆ ಆಶ್ಚರ್ಯ ಉಂಟಾಗಿದೆ ಎಂದು ಹೇಳಿದ್ದಾರೆ.
ಎಂ.ಬಿ.ಪಾಟೀಲ್ ಭೇಟಿಯಾದ ಅಶ್ವತ್ಥ್: ಹಗರಣ ಬಗ್ಗೆ ಕಾಂಗ್ರೆಸಿಗರು ಮಾತಾಡದಂತೆ ಎಂಬಿಪಾರಿಂದ ರಕ್ಷಣೆ ಕೋರಿಕೆ
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ತಮ್ಮ ಹಗರಣಗಳ ಬಗ್ಗೆ ಕಾಂಗ್ರೆಸ್ಸಿಗರು ಧ್ವನಿ ಎತ್ತದಂತೆ ರಕ್ಷಣೆ ಪಡೆಯಲು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದ್ದರು. ಇದನ್ನು ಎಂ.ಬಿ. ಪಾಟೀಲ್ ಸ್ಪಷ್ಟವಾಗಿ ತಳ್ಳಿ ಹಾಕಿದ್ದರು. ಡಿ.ಕೆ. ಶಿವಕುಮಾರ್ ಅವರು ಎಂ.ಬಿ. ಪಾಟೀಲ್ ಅವರ ಬಗ್ಗೆ ನೀಡಿದ ಹೇಳಿಕೆ ಪಕ್ಷದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಡಿ.ಕೆ. ಶಿವಕುಮಾರ್ ಅವರು ಪಕ್ಷದ ಹಿರಿಯ ನಾಯಕರ ಬಗ್ಗೆ ಈ ರೀತಿ ಹೇಳಿಕೆಗಳನ್ನು ನೀಡಬಾರದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ರಮ್ಯಾ ಅವರು ಟ್ವೀಟ್ ಮಾಡಿರುವುದು ಮಹತ್ವ ಪಡೆದುಕೊಂಡಿದೆ.
ಡಿಕೆಶಿ ಟೀಕಿಸಿದ ರಮ್ಯಾ ವಿರುದ್ಧ ಟ್ರೋಲ್‌ಗೆ ಕಾಂಗ್ರೆಸ್‌ನಿಂದ ಕರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಾಜಿ ಸಂಸದೆ ರಮ್ಯಾ ಮಾಡಿರುವ ಟ್ವೀಟ್‌ಗೆ ಪ್ರತಿಯಾಗಿ ಅವರನ್ನು ಟ್ರೋಲ್ ಮಾಡಲು ಕೆಪಿಸಿಸಿ ಸಾಮಾಜಿಕ ಜಾಲತಾಣದ ಕಚೇರಿ ಕರೆ ನೀಡಿದ್ದು, ಸ್ವತಃ ರಮ್ಯಾ ಅವರೇ ಇದಕ್ಕೆ ಸಂಬಂಧಿಸಿದ ಸಂದೇಶಗಳ ಸ್ಕ್ರೀನ್‌ಶಾಟ್ ಪೋಸ್ಟ್ ಮಾಡಿ ಟಾಂಗ್ ನೀಡಿದ್ದಾರೆ. - ಇದೇ ವೇಳೆ ‘ನನ್ನನ್ನು ಟ್ರೋಲ್ ಮಾಡಲು ‘ಕಚೇರಿಯು’ ಕಾಂಗ್ರೆಸ್ ಹಿರಿಯ ನಾಯಕರು, ಕಾರ್ಯಕರ್ತರಿಗೆ ಈ ಸಂದೇಶಗಳನ್ನು ಕಳುಹಿಸಿದೆ.
ನನ್ನನ್ನು ಟ್ರೋಲ್ ಮಾಡಲು ನೀವು ತೊಂದರೆ ತೆಗೆದುಕೊಳ್ಳಬೇಡಿ. ನಾನೇ ಮಾಡುತ್ತೇನೆ’ ಎಂದು ಹೇಳಿ ಎಲ್ಲಾ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ತನ್ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿನ ಮಾಜಿ ಸಂಸದೆ ರಮ್ಯಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಚೇರಿ ಸಿಬ್ಬಂದಿ ನಡುವಿನ ಮುಸುಕಿನ ಗುದ್ದಾಟದ ರಾದ್ಧಾಂತ ಬಹಿರಂಗಗೊಂಡಿದೆ. ರಮ್ಯಾ ಅವರು ತಮ್ಮ ಟ್ವೀಟ್‌ನಲ್ಲಿ ‘ನೀವು ಅವರ (ರಮ್ಯಾ) ಯಾವುದಾದರೂ ಟ್ವೀಟ್ ಲಿಂಕ್‌ಗೆ ಇವುಗಳಲ್ಲಿ ಸೂಕ್ತವಾದ ಪ್ರತಿಕ್ರಿಯೆಯನ್ನು ಕಮೆಂಟ್ ಮಾಡಿ’ ಎಂಬ ಟಿಪ್ಪಣಿಯುಳ್ಳ ಸಂದೇಶಗಳ ಸರಮಾಲೆಯನ್ನೇ ಪೋಸ್ಟ್ ಮಾಡಿದ್ದಾರೆ.
ನನಗಿರೋ ಮಾಹಿತಿ ಪ್ರಕಾರ ಎಸ್‌ಐ ಹಗರಣದಲ್ಲಿ ಮಂತ್ರಿಗಳ ಕೈವಾಡವಿದೆ: ಡಿಕೆಶಿ ಆರೋಪ
ಇವುಗಳಲ್ಲಿ ಕೆಲವು ಹೀಗಿವೆ- ‘ಅವಕಾಶ ಕೊಟ್ಟನಾಯಕರಿಗೆ ಬೆಲೆ ಕೊಡಲಿಲ್ಲ, ಅವಕಾಶ ಕೊಟ್ಟಜನರಿಗೂ ನ್ಯಾಯ ಕೊಡಲಿಲ್ಲ. ಇದೀಗ ಪ್ರತ್ಯಕ್ಷವಾಗಲು ಕಾರಣವೇನು? ದಯವಿಟ್ಟು ನಾಡಿನ ಜನತೆ ಮತ್ತು ಪಕ್ಷದ ಕಾರ್ಯಕರ್ತರು ನಿಮ್ಮ ಉತ್ತರಕ್ಕೆ ಕಾಯುತ್ತಿದ್ದಾರೆ’, ‘ಒಬ್ಬ ನಾಯಕರನ್ನು ಮೆಚ್ಚಿಸಲು ಸತ್ಯವನ್ನೇ ತಿಳಿಯದೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಅದು ನಿಮ್ಮ ಘನತೆ ಏನು ಎಂದು ತೋರುತ್ತಿದೆ.’ ‘ಕೆಪಿಸಿಸಿ ಅಧ್ಯಕ್ಷರು ಯಾವ ಸಂದರ್ಭದಲ್ಲಿ ಏನು ಹೇಳಿದ್ದಾರೆ ಎಂದು ಮಾಧ್ಯಮಗಳನ್ನು ಒಮ್ಮೆ ನೋಡಿ ಪರಿಶೀಲಿಸಿಕೊಳ್ಳಿ.’ ‘ಅಂದು ಅಂಬರೀಷ್ ಅಂತ್ಯ ಸಂಸ್ಕಾರಕ್ಕೂ ಬಾರದ ನೀವು ಇಂದು ಒಬ್ಬ ಅಧ್ಯಕ್ಷರನ್ನು ಮಾಡುವ ನೈತಿಕತೆ ಉಳಿಸಿಕೊಂಡಿದ್ದೀರೆಯೇ?’ ಎಂಬಿತ್ಯಾದಿ ಸಂದೇಶಗಳನ್ನು ರಮ್ಯಾ ಅವರೇ ಶೇರ್ ಮಾಡಿದ್ದಾರೆ.